ಆಹಾರ ಕಿಟ್ ದೇಣಿಗೆಗೆ ಸಿಇಓ ಮನವಿ

0
92

ಮಂಡ್ಯ. ಮೇ.17:-ಕೋವಿಡ್ ಸೋಂಕಿಗೆ ತುತ್ತಾಗಿ ಕಂಟೈನ್ಮೆಂಟ್ ವಲಯಗಳಲ್ಲಿದ್ದುಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗಾಗಿ ಉದಾರವಾಗಿ ಆಹಾರ ಕಿಟ್ ಗಳನ್ನು ದೇಣಿಗೆ ನೀಡುವಂತೆ ದಾನಿಗಳಲ್ಲಿ ಜಿಲ್ಲಾ ಪಂಚಾಯತ್ ಸಿಇಓ ದಿವ್ಯಾ ಪ್ರಭು ಜಿ.ಆರ್.ಜೆ. ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸೋಮವಾರ, ಮುಂಚೂಣಿಯಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳು, ಮನ್ ಮುಲ್ ಹಾಗೂ ಕೆಲ ಸರ್ಕಾರಿ ಇಲಾಖೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಪ್ರಸ್ತುತ ಜಿಲ್ಲೆಯಲ್ಲಿ 229ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಲಾಗಿದ್ದು, ಈ ವಲಯದಲ್ಲಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ಒದಗಿಸಬೇಕಿರುವುದರಿಂದ ದಾನ/ದೇಣಿಗೆ/ ನೆರವಿನ ರೂಪದಲ್ಲಿ ಆಹಾರ ಕಿಟ್ ಗಳನ್ನು ಒದಗಿಸಲು ಮುಂದಾಗುವಂತೆ ದಾನಿಗಳಲ್ಲಿ ಅವರು ಕೋರಿದರು.
ಕಳೆದ ವರ್ಷ ಕೋವಿಡ್ ಸಂಕಷ್ಠ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಮುಂದೆ ಬಂದು ಜನರ ನೆರವಿಗೆ ಧಾವಿಸಿದ್ದೀರಿ.ಈಗ ಪರಿಸ್ಥಿತಿ ಮೊದಲಿಗಿಂತ ಕಠಿಣವಾಗಿದೆ. ಹಾಗಾಗಿ, ಈಗಿನ ಸಂದರ್ಭದಲ್ಲೂ ಉದಾರವಾಗಿ ಸ್ಪಂದಿಸಿ, ನಮ್ಮೊಂದಿಗೆ ಕೈಜೋಡಿಸಿ. ಎಲ್ಲರೂ ಒಟ್ಟಾಗಿ ಸಮರ್ಪಕವಾಗಿ ಕೆಲಸ ನಿರ್ವಹಿಸುವ ಮೂಲಕ ಕೋವಿಡ್ ಅನ್ನು ಹಿಮ್ಮೆಟ್ಟಿಸೋಣ ಎಂದು ಸಿಇಓ ಹೇಳಿದರು.
ರೆಡ್ ಕ್ರಾಸ್, ಜೈನ್ಸ್ ಸಂಸ್ಥೆ, ಮನ್ ಮುಲ್, ಅಜೀಂ ಪ್ರೇಮ್ ಜೀ ಫೌಂಡೇಶನ್, ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ಜಿಲ್ಲಾ ಸಗಟು ಔಷಧಿ ವ್ಯಾಪಾರಿಗಳ ಸಂಘ, ವಿಕಸನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ತಮ್ಮ ಸಂಸ್ಥೆಗಳ ಮೂಲಕ ನೆರವಿನಹಸ್ತ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಅಬಕಾರಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಇಲಾಖೆ, ಔಷಧ ನಿಯಂತ್ರಣ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಅಧಿಕಾರಿಗಳು, ಉಪ ಕಾರ್ಯದರ್ಶಿ (ಅಭಿವೃದ್ಧಿ) ಜಿ. ಧನರಾಜು ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here