ಸಾಂಕ್ರಾಮಿಕ ರೋಗಗಳ ನಿಯಂತ್ರಣ 15 ದಿನಕ್ಕೊಮ್ಮೆ ವರದಿ ನೀಡಿ: ಜಿಲ್ಲಾಧಿಕಾರಿ

0
94

ಮಡಿಕೇರಿ :-ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯ, ಮೆದುಳು ಜ್ವರ ಮತ್ತು ಇತರೆ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಬಗ್ಗೆ ಸಂಬಂಧಿಸಿದ ಇಲಾಖೆಗಳು ಪ್ರತೀ 15 ದಿನಕ್ಕೊಮ್ಮೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗದಂತೆ ಗಮನಹರಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಮೀನುಗಾರಿಕೆ, ಕೈಗಾರಿಕೆ, ನೀರಾವರಿ ಹಾಗೆಯೇ ಕಂದಾಯ ಹೀಗೆ ಹಲವು ಇಲಾಖೆಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಮಳೆಗಾಲ ಸಂದರ್ಭದಲ್ಲಿ ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಗ್ಯೂ ಚಿಕುಂಗುನ್ಯ, ಮೆದುಳು ಜ್ವರ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಬಗ್ಗೆ ಜಾಗೃತಿ ವಹಿಸಬೇಕಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಮಾಹಿತಿ ನೀಡಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಗಮನಹರಿಸಬೇಕು. ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಪಾತ್ರ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.
ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಸಮುದಾಯ ಆರೋಗ್ಯ ಅಧಿಕಾರಿ ಡಾ.ಮಹೇಶ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್, ತಾ.ಪಂ.ಇಒ ಶೇಖರ್, ನಗರಸಭೆ ಎಇಇ ರಾಜೇಂದ್ರ ಕುಮಾರ್, ಪರಿಸರ ಇಲಾಖೆ ಅಧಿಕಾರಿ ಗಣೇಶನ್ ಇತರರು ಇದ್ದರು.
ವಿವಿಧ ಇಲಾಖೆಗಳು ಕೈಗೊಳ್ಳಬೇಕಿರುವ ಕ್ರಮಗಳ ವಿವರ ಇಂತಿದೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್/ ಸಾರ್ವಜನಿಕ ಆರೋಗ್ಯ ಎಂಜಿನಿಯರ್ ಇಲಾಖೆ, ಗುಂಡಿಗಳು ಹಾಗೂ ತಗ್ಗುಗಳನ್ನು ಮುಚ್ಚಿಸುವುದರ ಮೂಲಕ ನೀರು ಸಂಗ್ರಹವಾಗದಂತೆ ತಡೆಗಟ್ಟುವುದು. ಸಾರ್ವಜನಿಕ ನಲ್ಲಿಗಳು ಹಾಗೂ ಕೊಳವೆ ಬಾವಿಗಳಿಂದ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತವಾದ ವ್ಯವಸ್ಥೆ ಮಾಡುವುದರ ಜೊತೆಗೆ ಈಗಾಗಲೇ ಇರುವ ಚರಂಡಿಗಳಲ್ಲಿ ಹುದುಗಿರುವ ಹೂಳನ್ನು ಎತ್ತಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ನಿಯಮಿತ ಹಾಗೂ ಸಮರ್ಪಕ ನೀರು ಸರಬರಾಜು. ನೀರು ಸರಬರಾಜಾಗುವ ನಲ್ಲಿ ಪೈಪುಗಳು ಸೋರದಂತೆ ತಡೆಗಟ್ಟುವುದು. ಕೊಳವೆ ಬಾವಿಗಳು ಹಾಗೂ ನಲ್ಲಿ ಪೈಪುಗಳು ಒಳಚರಂಡಿಯಿರುವ ಜಾಗದಿಂದ ದೂರದಲ್ಲಿರುವಂತೆ ನಿರ್ಮಿಸುವುದು. ಮೇಲ್ಛಾವಣಿಯ ತೊಟ್ಟಿಗಳು ಹಾಗೂ ನೀರು ಸರಬರಾಜು ಮಾಡುವ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚಬೇಕು. ಆರೋಗ್ಯ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದು ಗ್ರಾಮದ ನೈರ್ಮಲ್ಯತೆ ಹಾಗೂ ಗ್ರಾಮದಲ್ಲಿರಬಹುದಾದ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿ ಹಾಗೂ ಹತೋಟಿಯ ಬಗ್ಗೆ ಚರ್ಚಿಸುವುದು. ಗ್ರಾ.ಪಂ.ಗಳು ಸೊಳ್ಳೆ ಉತ್ಪತ್ತಿ ತಾಣಗಳ ನಿವಾರಣೆ ಹಾಗೂ ಗ್ರಾಮ ನೈರ್ಮಲ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು. ನೀರು ಸರಬರಾಜು ಮಾಡುವ ಮೊದಲು ಸೂಕ್ತವಾದ ಪ್ರಮಾಣದಲ್ಲಿ ಕ್ಲೋರಿನ್ ಹಾಕಬೇಕು.
ನಗರಾಭಿವೃದ್ದಿ ಇಲಾಖೆ: ಸೊಳ್ಳೆ ಉತ್ಪತ್ತಿ ನಿಯಂತ್ರಣಗೊಳಿಸುವ ಸಲುವಾಗಿ ನಗರ ಪಾಲಿಕೆಗಳಲ್ಲಿ ಈಗಾಗಲೇ ರೂಡಿಯಲ್ಲಿರುವ ನಾಗರಿಕ ಹಾಗೂ ಕಟ್ಟಡ ಬೈಲಾಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಹಾಗೂ ಇತರೆ/ ನಗರ ಪಟ್ಟಣ ಪ್ರದೇಶಗಳಲ್ಲಿ ಈ ಬೈಲಾಗಳನ್ನು ರೂಪಿಸಿ ಜಾರಿಗೊಳಿಸುವುದು. ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳವುದು. ಸೊಳ್ಳೆರಹಿತ ಓವರ್ ಹೆಡ್‍ಟ್ಯಾಂಕ್ ಹಾಗೂ ಅಂಡರ್‍ಗ್ರೌಂಡ್ ಟ್ಯಾಂಕ್‍ಗಳನ್ನು ನಿರ್ಮಿಸುವುದು ಅಗತ್ಯವಾದ ನಿಯಾಮವಳಿಗಳನ್ನು ಜಾರಿಗೊಳಿಸುವುದು ಮತ್ತು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಸುವುದು.
ವಾರಕ್ಕೊಮ್ಮೆ ಸೊಳ್ಳೆನಾಶಕ ದ್ರಾವಣವನ್ನು ಸೊಳ್ಳೆ ಉತ್ಪತ್ತಿ ತಾಣಗಳಲ್ಲಿ ಸಿಂಪಡಿಸುವುದು. ನೀರು ಸರಬರಾಜು ಮಾಡುವ ಮೊದಲು ಸೂಕ್ತವಾದ ಪ್ರಮಾಣದಲ್ಲಿ ಕ್ಲೋರಿನ್ ಹಾಕುವುದು. ರಸ್ತೆ ಬದಿಯಲ್ಲಿ ತೆರೆದ ವಾತಾವರಣದಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟವನ್ನು ನಿಷೇಧಿಸುವುದು ಮತ್ತು ಹೋಟೆಲುಗಳಲ್ಲಿ ಸ್ವಚ್ಫತೆ, ನೈರ್ಮಲ್ಯತೆ ಕಾಪಾಡುವಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದು. ನಗರದ ವಿವಿಧ ಕೇಂದ್ರಗಳಿಂದ ನೀರನ್ನು ಸಂಗ್ರಹಿಸಿ ಅವುಗಳನ್ನು ಕಾಲಕಾಲಕ್ಕೆ ತಪಾಸಣೆಗೆ ಕಳುಹಿಸುವುದು. ನೀರು ಸರಬರಾಜು ಪೈಪುಗಳನ್ನು ಆಗಿಂದಾಗ್ಗೆ ಪರೀಕ್ಷಿಸುವುದರ ಮೂಲಕ ಸೋರಿಕೆಯನ್ನು ತಡೆಗಟ್ಟುವುದು.
ಶಿಕ್ಷಣ ಇಲಾಖೆ: ಸೊಳ್ಳೆಗಳಿಂದ ಹರಡುವ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ಮತ್ತು ಅವುಗಳ ನಿಯಂತ್ರಣದ ಬಗ್ಗೆ ಪಠ್ಯ ಕ್ರಮದಲ್ಲಿ ಅಳವಡಿಸುವುದು. ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವುದು. ಈ ರೋಗಗಳ ಮಾಹಿತಿ ಪುಸ್ತಕಗಳು ಶಾಲಾ ವಾಚನಾಲಯದಲ್ಲಿ ಲಭ್ಯವಿರುವ ವ್ಯವಸ್ಥೆ ಮಾಡುವುದು.
ಶಾಲಾ ಆವರಣವನ್ನು ಸೊಳ್ಳೆ ಉತ್ಪತ್ತಿ ಮುಕ್ತವಾಗಿಡುವುದೇ ಅಲ್ಲದೆ ಸ್ವಚ್ಫತೆ ಹಾಗೂ ನೈರ್ಮಲ್ಯತೆಯನ್ನು ಕಾಪಾಡುವುದು. ಶಾಲೆಯಲ್ಲಿ ಯಾವುದೇ ಜ್ವರ ಪ್ರಕರಣವಿದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತಿಳಿಸುವುದು ಹಾಗೂ ಸಾಮೂಹಿಕ ಜ್ವರ ಪ್ರಕರಣಗಳು ಕಂಡು ಬಂದಲ್ಲಿ ತಪ್ಪದೇ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸುವುದು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ: ಅಂಗನವಾಡಿ ಕಾರ್ಯಕರ್ತರುಗಳ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲು ಸಹಾಯ ಮಾಡುವುದು. ವೈಯುಕ್ತಿಕ ರಕ್ಷಣೆ ಮತ್ತು ಪರಿಸರ ನೈರ್ಮಲ್ಯದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು. ಅಂಗನವಾಡಿ ಆವರಣವನ್ನು ಸೊಳ್ಳೆ ಉತ್ಪತ್ತಿ ಮುಕ್ತವಾಗಿಡುವುದೇ ಅಲ್ಲದೇ ಸ್ವಚ್ಫತೆ ಹಾಗೂ ನೈರ್ಮಲ್ಯತೆಯನ್ನು ಕಾಪಾಡುವುದು.
ಸಮಾಜ ಕಲ್ಯಾಣ ಇಲಾಖೆ: ಸೊಳ್ಳೆಗಳಿಂದ ಹರಡುವ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಕಾರ್ಯಗಾರದಲ್ಲಿ, ಸರ್ಕಾರೇತರ ಸಂಘ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಧಾರ್ಮಿಕ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ದಿ, ಸಂಘಗಳು, ಭಾಗವಹಿಸುವಂತೆ ನೋಡಿಕೊಳ್ಳುವುದು ಹಾಗೂ ಈ ಸಂಸ್ಥೆಗಳ ಮೂಲಕ ಜನರಲ್ಲಿ ಈ ರೋಗಗಳು ಬಾರದಂತೆ ತಡೆಗಟ್ಟಲು ಅವಶ್ಯಕ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.
ವಸತಿ ನಿಲಯಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಲ್ಲಿ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು. ಎಲ್ಲಾ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸುವುದು ಮತ್ತು ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆಗಳನ್ನು ಒದಗಿಸುವುದು. ಹಾಸ್ಟೆಲ್ ಆವರಣದಲ್ಲಿ ಪರಿಸರ ನೈರ್ಮಲ್ಯ ಕಾಪಾಡುವುದು.
ಮೀನುಗಾರಿಕೆ ಇಲಾಖೆ:-ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗ್ಯಾಂಬೂಸಿಯ ಇವುಗಳನ್ನು ಬೆಳೆಸಿ ರಾಜ್ಯಾದ್ಯಂತ ಲಭ್ಯವಾಗುವಂತೆ ನೋಡಿಕೊಳ್ಳುವುದು ಹಾಗೂ ಆರೋಗ್ಯ ಇಲಾಖೆಗೆ ಅಗತ್ಯ ಬಿದ್ದಾಗ ಮೀನುಗಳನ್ನು ಸೂಕ್ತ ಸಮಯದಲ್ಲಿ ಉಚಿತವಾಗಿ ಒದಗಿಸುವುದು ಮತ್ತು ಇದರ ಅಭಿವೃದ್ದಿಗೆ ಸಲಹೆ ಸೂಚನೆಗಳನ್ನು ನೀಡುವುದು. ಶಾಶ್ವತ ನೀರಿನ ತಾಣಗಳ (ಕೆರೆ, ಕಟ್ಟೆ, ಕೊಳ, ಬಾವಿ, ಜರಿ) ಜಿಲ್ಲಾವಾರು ಜಿಐಎಸ್ ನಕ್ಷೆಗಳನ್ನು ತಯಾರಿಸುವುದು ಹಾಗೂ ಮಾಹಿತಿಯನ್ನು ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳುವುದು.
ಕೈಗಾರಿಕಾ ಇಲಾಖೆ: ಕೈಗಾರಿಕಾ ವಲಯಗಳಿಗೆ ವಲಸೆ ಬರುವ ಕಾರ್ಮಿಕರ ಬಗ್ಗೆ ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುವುದರ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಕಾಪಾಡುವುದು. ಕಾರ್ಮಿಕರು ವಾಸಿಸುವ ಕಾಲೋನಿಗಳಲ್ಲಿ ಸರಿಯಾದ ಒಳಚರಂಡಿಗಳನ್ನು ರೂಪಿಸುವುದು ಹಾಗೂ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸುವುದು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆಪರದೆ ಹಾಗೂ ರೆಫೆಲೆಂಟ್‍ಗಳ ಉಪಯೋಗ, ಕಿಟಕಿಗಳಿಗೆ ಜಾಲರಿ ಹಾಕುವುದು ಮತ್ತಿತರ ಬಗ್ಗೆ ಪ್ರೋತ್ಸಾಹಿಸುವುದರಿಂದ ಮಾನವ ಹಾಗೂ ಸೊಳ್ಳೆಗಳ ನಡುವಿನ ಸಂಪರ್ಕವನ್ನು ತಡೆಗಟ್ಟಬಹುದು. ಇಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಕಾರ್ಮಿಕರು ಆರೋಗ್ಯದಿಂದಿದ್ದು ಕೈಗಾರಿಕಾಭಿವೃದ್ದಿಗೆ ಪೂರಕವಾಗುತ್ತದೆ. ಕಾರ್ಮಿಕರಿಗೆ ಪ್ರತೇಕ್ಯವಾದ ಆರೋಗ್ಯ ಚೀಟಿಯನ್ನು ಒದಗಿಸುವುದರ ಮೂಲಕ ರೋಗವಾಹಕ ರೋಗಗಳ ತಪಾಸಣೆಗೆ ಆರೋಗ್ಯ ಇಲಾಖೆ ಜೊತೆ ಕೈಜೋಡಿಸುವುದು. ಹೊಸ ಕಾರ್ಮಿಕರು ಬಂದಾಗ ಆರೋಗ್ಯ ಇಲಾಖೆಗೆ ತಿಳಿಸುವುದು.
ನೀರಾವರಿ ಇಲಾಖೆ: ನೀರಾವರಿ ಯೋಜನೆಗಳಡಿಯಲ್ಲಿ ಕೆಲಸಕ್ಕಾಗಿ ಬರುವಕಾರ್ಮಿಕರು ಹಾಗೂ ಅವರ ಚಲನವಲನದ ಬಗ್ಗೆ ಮುಂಚಿತವಾಗಿ ಆರೋಗ್ಯ ಇಲಾಖೆಗೆ ತಿಳಿಸುವುದು. ಸೂಕ್ತ ತಾಂತ್ರಿಕ ವಿಧಾನಗಳನ್ನು ಅನುಸರಿಸುವುದರ ಮೂಲಕ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿಯಂತ್ರಣದಲ್ಲಿಡುವುದು, ಉದಾಹರಣೆಗೆ ಕಾಲುವೆಗಳ ಸೋರಿಕೆಯನ್ನು ನಿಯಂತ್ರಿಸುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಹತೋಟಿಯಲ್ಲಿಡಬಹುದು.
ಕಂದಾಯ ಇಲಾಖೆ: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳ ಸಭೆ ನಡೆಸಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನವನ್ನು ಪರಿಶೀಲಿಸುವುದು. ಜಿಲ್ಲಾಧಿಕಾರಿ ಅವರ ಮೂಲಕ ಎಲ್ಲಾ ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಸರಬರಾಜು, ಇಲಿಗಳ ನಿಯಂತ್ರಣ ಹಾಗೂ ಪರಿಸರ ನೈರ್ಮಲ್ಯ ಕಾಪಾಡುವಿಕೆ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು. ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡುವುದು ಅತ್ಯಗತ್ಯವಾಗಿದೆ.

LEAVE A REPLY

Please enter your comment!
Please enter your name here