ಒದೆ ತಿನ್ನದ ಕಲೆ ದಕ್ಕಬೇಕೆಂದರೆ ಒದೆ ತಿಂದ ಅನುಭವವಿರಬೇಕು!

0
83

ಪತ್ರಿಕೋದ್ಯಮದಲ್ಲಿ ನಾವು ತಪ್ಪುಗಳನ್ನು ಮಾಡುತ್ತಲೇ ಸರಿ ದಾರಿ ಹುಡುಕಿಕೊಂಡವರು.ಹಾಗೆ ನೋಡಿದರೆ ಜೀವನದಲ್ಲೂ ಅಷ್ಟೇ.ಮಾಡಿದ ತಪ್ಪುಗಳೇ ಅನುಭವಗಳಾಗಿ ಬಿಡುತ್ತವೆ.ಮತ್ತೆ ಮತ್ತೆ ಅಂತಹ ತಪ್ಪುಗಳಾಗದಂತೆ ತಡೆಯುತ್ತವೆ.
ನೀವು ಲಾತಾ (ಒದೆ) ತಿನ್ನದಂತೆ ಬದುಕುವ ಕಲೆ ಕಲಿಯಬೇಕೆಂದರೆ ಮೊದಲು ದಂಡಿಯಾಗಿ ಲಾತಾ ತಿನ್ನಬೇಕು.ಹೀಗೆ ಬೀಳುವ ಲಾತಾ ನೀವು ಪದೇ ಪದೇ ತಪ್ಪುಗಳನ್ನು ಮಾಡದಂತೆ ತಡೆಯುತ್ತವೆ.ಹೀಗೆ ನಿಮ್ಮನ್ನು ತಪ್ಪು ಮಾಡದಂತೆ ತಡೆಹಿಡಿದು ನಿಲ್ಲಿಸುವುದೇ ಅನುಭವ.
ಈ ಲಾತಾ ಎಂಬ ಪದ ಚಿಕ್ಕವನಿದ್ದಾಗ ನನಗೆ ಬಹಳ ಆಕರ್ಷಣೀಯವಾಗಿತ್ತು.ಇದಕ್ಕೆ ಕಾರಣ,ಲಾತಾ ಎಂದರೆ ಏನು ಅಂತ ಗೊತ್ತಿರದಿದ್ದುದು.ಮತ್ತು ನನ್ನ ತಾಯಿ ಪ್ರಭಾವತಿ ಬಾಯಿ ಅವರ ಹಿರಿಯ ಸಹೋದರರಿಬ್ಬರು,ಚಿಕ್ಕ ಮಕ್ಕಳಿಗೆ ತಾವು ಕೊಡಿಸುವ ತಿಂಡಿಗೆ ಲಾತಾ ಅಂತ ಕರೆಯುತ್ತಿದ್ದುದು.
ನನ್ನ ದೊಡ್ಡ ಮಾವ ಡೋಯಿಜೋಡೆ ಬಸಪ್ಪ ಮಾಸ್ತರ್ ಹಾಗೂ ಎರಡನೇ ಮಾವ ಡೋಯಿಜೋಡೆ ರಾಮಪ್ಪ.ಈ ಪೈಕಿ ದೊಡ್ಡ ಮಾವ ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಿದ್ದರು.ಎರಡನೇ ಮಾವ ಹುಟ್ಟೂರಾದ ಸಾಸ್ನೇಹಳ್ಳಿಯಲ್ಲೇ (ಹೊನ್ನಾಳಿ ತಾಲ್ಲೂಕಿನಲ್ಲಿದೆ)ಇದ್ದರು.
ಬೇಸಿಗೆ ರಜೆ ಬಂತೆಂದರೆ ನಾನು,ಅಣ್ಣ ಮಹೇಂದ್ರ ಹಾಗೂ ತಮ್ಮ ಪಾಂಡುರಂಗ ಸಾಸ್ವೇಹಳ್ಳಿಗೆ ಹೋಗಿ ಎರಡನೇ ಮಾವ ರಾಮಪ್ಪನವರ ಮನೆಯಲ್ಲಿ ಟೆಂಟು ಹೊಡೆಯುತ್ತಿದ್ದೆವು.ಅಂತಹ ಸಂದರ್ಭಗಳಲ್ಲಿ ಕೆಲ ಬಾರಿ,ನಮ್ಮ ದೊಡ್ಡ ಮಾವ ಕೂಡಾ ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಹಳ್ಳಿಗೆ ಬಂದು ಬಿಡುತ್ತಿದ್ದರು.
ದೊಡ್ಡ ಮಾವನ ಹಿರಿಯ ಮಗ ಗೋಪಿ.ಎರಡನೆಯವನು ಸತೀಶ ಹಾಗೂ ಮೂರನೆಯವನು ಅರುಣ.ದೊಡ್ಡ ಮಗನ ಹೆಸರು ರಂಗಪ್ಪ ಡೋಯಿಜೋಡೆ ಅಂತ ಬಹಳ ಕಾಲ ನನಗೆ ಗೊತ್ತೇ ಇರಲಿಲ್ಲ.ಅವನನ್ನು ಗೋಪಿ,ಗೋಪಿ ಅಂತಲೇ ಕರೆದು ಅಭ್ಯಾಸವಾಗಿತ್ತು.ಚಿಕ್ಕವನು ಅರುಣ.ಬಹಳ ತುಂಟು ಸ್ವಭಾವದವನಾದ್ದರಿಂದ ಅವನನ್ನು ಎಲ್ಲರೂ ಪುಂಟು ಅಂತ ಕರೆಯುತ್ತಿದ್ದಿವಿ.
ಎರಡನೇ ಮಾವನ ಮಕ್ಕಳ ಪೈಕಿ ದೊಡ್ಡವನು ರಾಜಾ.ಯಥಾ ಪ್ರಕಾರ ಅವನ ಹೆಸರು ರಂಗರಾಜು ಅನ್ನುವುದು ನನ್ನ ಮಿದುಳಿನಲ್ಲಿ ಸೆಟ್ಲ್ ಆಗಿರಲಿಲ್ಲ.ಹೀಗಾಗಿ ಅವನನ್ನು ರಾಜಾ ಅಂತಲೇ ಕೂಗುತ್ತಿದ್ದೆವು.ಎರಡನೆಯವನು ಜ್ಞಾನೇಶ್ವರ.ಆತನನ್ನು ಗ್ಯಾನಿ ಎಂದು ಕರೆಯುತ್ತಿದ್ದೆವು.ಮೂರನೆಯವನು ಶಿವಶಂಕರ ಡೋಯಿಜೋಡೆ.ಆತನನ್ನು ಶಿವು ಎಂದೇ ಕರೆದು ಅಭ್ಯಾಸ.
ಇವರೆಲ್ಲ ವಯಸ್ಸಿನಲ್ಲಿ ನನಗಿಂತ ತುಂಬ ಚಿಕ್ಕವರು.ಈ ಪೈಕಿ ಯಾರೋ ಕಿರಿಕ್ಕು ಮಾಡಿ ಹೋ!ಎಂದು ಅಳತೊಡಗಿದರೆ ದೊಡ್ಡ ಮಾವ ಕರೆದು,ಏ,ವಿಠ್ಢೂ ಬಾರೋ ಇಲ್ಲಿ.ಪುಂಟೂನ ಕರಕೊಂಡು ಹೋಗಿ ಲಾತಾ ಕೊಡಿಸೋ ಎಂದೋ,ಬೇರೆ ಯಾರದಾದರೂ ಹೆಸರು ಹೇಳಿ ಲಾತಾ ಕೊಡಿಸು ಎಂದು ಹೇಳಿ ಹತ್ತು ಪೈಸೆ ಕೈಲಿಡುತ್ತಿದ್ದರು.
ಆಗ ಅವರು ಯಾರ ಹೆಸರು ಹೇಳಿದರೋ?ಅವರನ್ನು ಕರಕೊಂಡು ರಾಜಯ್ಯನ ಗೂಡಂಗಡಿಗೆ ಹೋಗಿ,ಲಾತಾ ಕೊಡಿ ಎಂದು ಕೇಳುತ್ತಿದ್ದೆ.ಅಂಗಡಿಯಲ್ಲಿದ್ದವರು ಒಂದು ಬಗೆಯ ಸಿಹಿ ತಿನಿಸನ್ನು ಗಾಜಿನ ಡಬ್ಬಿಯಿಂದ ತೆಗೆದುಕೊಡುತ್ತಿದ್ದರು.
ಹೀಗಾಗಿ ನಾನು,ಲಾತಾ ಎಂದರೆ ಸಿಹಿ ತಿಂಡಿ ಅಂದುಕೊಂಡು ಬಿಟ್ಟಿದ್ದೆ.ಮುಂದ್ಯಾವತ್ತೋ ಒಂದು ದಿನ ನಮ್ಮ ಚಿಕ್ಕತ್ತೆ ವನಜಾಕ್ಷಿ ಅವರ ದೊಡ್ಡ ಮಗ ವಿಠ್ಢಲನ ಬಳಿ ಲಾತಾ ಅನ್ನುವ ತಿಂಡಿಯ ವಿಷಯ ಹೇಳಿದಾಗ ಅವನು,ಅಯ್ಯೋ ನಿನ್ನಾ,ಲಾತಾ ಅಂದರೆ ಏನು ಗೊತ್ತೇನೋ?ತಿರುಗಿ ನಿಲ್ಲು.ಲಾತಾ ಅಂದರೆ ಏನು ಅಂತ ತೋರಿಸುತ್ತೇನೆ ಅಂದ.
ಅಯ್ಯೋ,ವಿಠ್ಢಣ್ಣಾ.ಲಾತಾ ಅಂದರೆ ನನಗೆ ಗೊತ್ತಿಲ್ಲವಾ?ಆದರೂ ನಿನ್ನ ಬಳಿ ಏನು ಲಾತಾ ಇದೆಯೋ?ನೋಡೇ ಬಿಡೋಣ ಎಂದು ಬೆನ್ನು ಕೊಟ್ಟು ನಿಂತೆ.ಆತ ಸೊಂಟ ಚದುರಿ ಹೋಗುವಂತೆ ಒದ್ದು,ಲಾತಾ ಅಂದರೆ ಇದು ಕಣೋ.ತಿಂಡಿಯಲ್ಲ ಎಂದ.
ಇದಾದ ನಂತರ ರಜೆ ಬಂದಾಗ ಸಾಸ್ವೇಹಳ್ಳಿಗೆ ಹೋದರೂ,ಮಕ್ಕಳನ್ನು ಕರೆದುಕೊಂಡು ಅಂಗಡಿಗೆ ಹೋಗುವ ಸಂದರ್ಭ ಬಂದರೂ ಅಪ್ಪಿ ತಪ್ಪಿಯೂ ಲಾತಾ ಕೊಡಿ ಎಂದು ಹೇಳುತ್ತಿರಲಿಲ್ಲ.ಬದಲಿಗೆ ಆ ತಿಂಡಿಯ ಹೆಸರು ಕೇಳಿ ತಿಳಿದುಕೊಂಡು,ಇಂತಹ ತಿಂಡಿಯನ್ನು ಕೊಡಿ ಎಂದು ಕೇಳುತ್ತಿದ್ದೆ.
ಪತ್ರಿಕೋದ್ಯಮಕ್ಕೆ ಬಂದ ಮೇಲೂ ಇಂತಹ ಲಾತಾಗಳನ್ನು ಬಹುತೇಕ ಮಂದಿ ತಿನ್ನಲೇಬೇಕು (ನೇರ ಒದೆ ಅಂತಲ್ಲ.ಮಾಡುವ ತಪ್ಪುಗಳೂ ಪರಿಣಾಮದಲ್ಲಿ ಒದೆ ಇದ್ದಂತೆ)ನಾನು ಮತ್ತು ಕೆ.ಎಂ.ಶಿವರಾಜು ತುಂಬ ನಿರ್ಬಿಡೆಯಾಗಿ ಇಂತಹ ತಪ್ಪುಗಳನ್ನು ಮಾಡುತ್ತಿದ್ದೆವು.ಲಾತಾ ತಿನ್ನುತ್ತಿದ್ದೆವು.ಹೀಗೆ ಲಾತಾ ತಿಂದ ಮೇಲೆ ಹೆಚ್ಚೆಚ್ಚು ಎಚ್ಚರ ವಹಿಸುತ್ತಿದ್ದೆವು.
ಒಂದು ಸಲ ಹೀಗೇ ಆಯಿತು.ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದರು.ಅದೇ ಕಾಲದಲ್ಲಿ ಹಿರಿಯ ನಾಯಕ ಬಂಗಾರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.ಆದರೆ ಅವರ ಮಗ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷದಲ್ಲೇ ಉಳಿದುಕೊಂಡಿದ್ದರು.ಇದು ಸ್ಥೂಲವಾಗಿ ಇದ್ದ ಅಂದಿನ ಸ್ಥಿತಿ.
ಸರಿ,ವಿಧಾನಸೌಧದ ಮೊದಲನೇ ಅಂತಸ್ತಿನಲ್ಲಿರುವ ತಮ್ಮ ಕಛೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಟಿ ಆರಂಭಿಸಿದರು.ತಾವು ಹೇಳಬೇಕಾದ್ದನ್ನು ಹೇಳಿ ಮುಗಿಸಿದರು.ಅವರು ಮಾತು ಮುಗಿಸುತ್ತಿದ್ದಂತೆಯೇ ಹಿರಿಯ ಪತ್ರಕರ್ತರಾದ ಸಾ.ಚ ಒಂದು ಪ್ರಶ್ನೆ ಕೇಳಿದರು.ಹಲವು ಸಲ ಅವರು ಪ್ರಶ್ನೆಗಳನ್ನು ಕೇಳುವಾಗ ಉಪಮೆಗಳನ್ನು ಬಳಸಿ ಕೇಳುವುದು ಅಭ್ಯಾಸ.
ಅದೇ ರೀತಿ ಅವರೊಂದು ಪ್ರಶ್ನೆ ಕೇಳಿದರು:ಇದೆಲ್ಲ ಸರಿ ಸಾರ್,ಈಗ ರಾಜನನ್ನು(ಬಂಗಾರಪ್ಪ)ಪಕ್ಷದಿಂದ ಉಚ್ಚಾಟಿಸಿದ್ದೀರಿ.ಯುವರಾಜ (ಕುಮಾರ್ ಬಂಗಾರಪ್ಪ) ನನ್ನು ಏನು ಮಾಡುತ್ತೀರಿ?
ಅವರು ಈ ಪ್ರಶ್ನೆ ಕೇಳುತ್ತಿದ್ದ ಸಮಯಕ್ಕೆ ಸರಿಯಾಗಿ ಶಿವರಾಜು ಒಳಗೆ ಬಂದ.ಅವನಿಗೆ ಪ್ರಶ್ನೆ ಸರಿಯಾಗಿ ಕೇಳಿಸಿತು.ರಾಜನನ್ನು ಉಚ್ಚಾಟಿಸಿದ್ದೀರಿ.ಯುವರಾಜನನ್ನು ಏನು ಮಾಡುತ್ತೀರಿ?
ಈ ಪ್ರಶ್ನೆಗೆ ಸಹಜವಾಗಿ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ:ಒಂದು ವೇಳೆ ಯುವರಾಜ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಅವರಿಗೆ ಷೋಕಾಸ್ ನೋಟಿಸ್ ಕೊಡುತ್ತೇವೆ ಎಂದರು.ಸರಿ,ಪತ್ರಿಕಾಗೋಷ್ಟಿ ಮುಗಿಯಿತು.ಯುವರಾಜ ಅಂದರೆ ಯಾರು?ಕರ್ನಾಟಕದಲ್ಲಿ ಯುವರಾಜ ಅಂದರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಿಟ್ಟು ಇನ್ಯಾರು ಫೇಮಸ್ ಇರಬಹುದು?
ಹಾಗಂದುಕೊಂಡಿದ್ದೇ ಶಿವರಾಜು ಹೋದ.ಯುವರಾಜ ಶ್ರೀಕಂಠದತ್ತ ಒಡೆಯರ್ ಗೆ ನೋಟೀಸ್ ಎಂದು ಸುದ್ದಿ ಬರೆದುಬಿಟ್ಟ.ಮರು ದಿನ ಅವನ ಪತ್ರಿಕೆಯವರು ಫೋನು ಮಾಡಿ:ಇಲ್ಲೆಲ್ಲ ಸಿಕ್ಕಾಪಟ್ಟೆ ರಿಯಾಕ್ಷನ್ನು ಬರುತ್ತಿದೆ.ಇದೇಕೆ ಹೀಗೆ?ಅಂತ ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ಶ್ರೀಮತಿ ಪ್ರಮೋದಾದೇವಿ ಅವರನ್ನು ಕೇಳಿ ಒಂದು ಸುದ್ದಿ ಮಾಡಿ ಎಂದರು.
ಇವನು ಹೇಗೋ ಮೇಡಂ ಪ್ರಮೋದಾದೇವಿ ಅವರ ನಂಬರು ಗಿಟ್ಟಿಸಿಕೊಂಡು ಅವರಿಗೆ ಒಂದು ಫೋನು ಹೊಡೆದೇ ಬಿಟ್ಟ.ಮೇಡಂ.ಖರ್ಗೆಯವರು ಈಗ ಒಡೆಯರ್ ಅವರಿಗೆ ನೋಟೀಸು ಕೊಡುತ್ತೇವೆ ಅಂದಿದ್ದಾರೆ.ನಿಮಗೆನನ್ನಿಸತ್ತೆ ಮೇಡಂ?ಅಂತ ಕೇಳಿದ.ಪಾಪ,ಶ್ರೀಮತಿ ಪ್ರಮೋದಾ ದೇವಿ ಅವರಿಗೆ ಇಡೀ ವಿಷಯದ ಬಗ್ಗೆ ಏನೂ ಗೊತ್ತಿರಲಿಲ್ಲ.ಹೀಗಾಗಿ ನೋಟೀಸಾ?ಖರ್ಗೆಯವರು ಕೊಡುತ್ತಾರಾ?ಯಾಕಂತೆ?ನನಗೆ ಏನೂ ಗೊತ್ತಿಲ್ಲವಲ್ಲ?ಎಂದರು.ಶಿವರಾಜು ಆ ಸುದ್ದಿಯನ್ನು ರೋಚಕವಾಗಿ ಬಣ್ಣಿಸಿ,
“ನಮಗೆ ನೋಟೀಸ್ ಕೊಡಲು ಖರ್ಗೆ ಯಾರು?ಪ್ರಮೋದಾದೇವಿ ಪ್ರಶ್ನೆ” ಅಂತ ಸುದ್ದಿ ಹೊಡೆದ.ಶುರುವಾಯಿತಲ್ಲ ನೋಟೀಸುಗಳು.ಒಡೆಯರ್ ಅವರಿಗಲ್ಲ!ಖರ್ಗೆಯವರಿಗೆ.ಪ್ರಕಟವಾಗಿದ್ದ ಸುದ್ದಿಯಿಂದ ಸಿಟ್ಟಿಗೆದ್ದಿದ್ದ ಒಡೆಯರ್,ನೇರವಾಗಿ ಖರ್ಗೆಯವರಿಗೇ ತಮ್ಮ ವಕೀಲರ ಮೂಲಕ ನೋಟೀಸ್ ಕೊಡಿಸಿದ್ದರು.
ಖರ್ಗೆಯವರಿಗೆ ಗಾಬರಿ.ಅರೇಸ್ಕೀ.ನಾನು ಒಡೆಯರ್ ಅವರಿಗೆ ನೋಟೀಸ್ ಕೊಡುತ್ತೇನೆ ಅಂತ ಹೇಳೇ ಇರಲಿಲ್ಲವಲ್ಲ?ಅಂತ.ಹೀಗಾಗಿ ತಕ್ಷಣವೇ ತಮ್ಮ ಬಳಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವಿಜೇಂದ್ರ ( ಪತ್ರಿಕೋದ್ಯಮದಲ್ಲಿ ಇವರೂ ನಮಗೆ ಹಿರಿಯಣ್ಣ ) ಅವರಿಗೆ ಹೇಳಿ,ಒಂದು ಸ್ಪಷ್ಟೀಕರಣ ಬರುವಂತೆ ಮಾಡ್ರೀ ಎಂದರು.
ಆ ಸಂದರ್ಭದಲ್ಲಿ ಬೆಲಗೂರು ಸಮೀವುಲ್ಲಾ ಮೈಸೂರಿನ ಮಹಾನಂದಿ ಪತ್ರಿಕೆಗೆ,ನಾನು ಆಂದೋಲನ ಪತ್ರಿಕೆಗೆ ಕೆಲಸ ಮಾಡುತ್ತಿದ್ದೆವು.ಹೀಗಾಗಿ ಶಿವರಾಜು,ಸಮೀವುಲ್ಲಾ ಹಾಗೂ ನನ್ನ ಮಧ್ಯೆ ಒಂದು ಅಲಿಖಿತ ಒಪ್ಪಂದವಾಗಿತ್ತು.ಅದೆಂದರೆ,ಒಬ್ಬರು ಮಾಡಿದ ಸುದ್ದಿಗೆ ಮತ್ತೊಬ್ಬರು ಸ್ಪಷ್ಟೀಕರಣ ಕೊಡಬಾರದು ಅಂತ.ನಾನು ಹಾಗೂ ಸಮೀವುಲ್ಲಾ ಅದೇನೋ ಗ್ಯಾಟ್ ಒಪ್ಪಂದ ಎನ್ನುವಂತೆ ತುಂಬ ನಿಷ್ಟೆಯಿಂದ ಅದನ್ನು ಪಾಲಿಸಿದೆವು.
ದಿನ ಬೆಳಗಾದರೆ ವಿಜೇಂದ್ರ ಅವರು ಬಂದು: ಯೋ,ಒಂದು ಸ್ಪಷ್ಟೀಕರಣ ಹಾಕ್ರಪ್ಪಾ,ಸುಮ್ನೆ ಹಲ್ವಾ ತಿನ್ನಿಸಬೇಡಿ.ಸಾಹೇಬರಿಗೆ ಮೇಲಿಂದ ಮೇಲೆ ನೋಟೀಸ್ ಬರ್ತಿದೆ.ಸಾಹೇಬರು ಒಡೆಯರ್ ಅವರಿಗೆ ನೋಟೀಸ್ ಕೊಡ್ತೀವಿ ಅಂತ ಹೇಳಿಲ್ಲ ಅಂತ ನೀವು ಮೂರು ಜನ ಒಂದು ಸ್ಪಷ್ಟೀಕರಣ ಹೊಡೆದರೆ ಸಾಕು.ನಮಗೆ ಬರುವ ನೋಟೀಸು ನಿಲ್ಲುತ್ತದೆ ಎನ್ನತೊಡಗಿದರು.ಆದರೆ ನಾವೂ ಮೂವರೂ ಜೈ ಅಲಕ್ ನಿರಂಜನ್ ಅಂದುಬಿಟ್ಟಿದ್ದೆವು.
ಕೊನೆಗೆ ಖರ್ಗೆಯವರೇ ನೇರವಾಗಿ ಒಡೆಯರ್ ಅವರ ಜತೆ ಮಾತನಾಡಿ ಸ್ಪಷ್ಟೀಕರಣ ಕೊಟ್ಟ ಮೇಲೆ ವಿವಾದ ತಣ್ಣಗಾಯಿತು.ಖರ್ಗೆಯವರಿಗೆ ನೋಟೀಸಿನ ಹೊಡೆತ ತಪ್ಪಿತು.ಈಗಲೂ ಆ ಘಟನೆಯನ್ನು ನೆನಪಿಸಿಕೊಂಡರೆ ನಾವು ಗೆಳೆಯರೆಲ್ಲರೂ ಬಿದ್ದು ಬಿದ್ದು ನಗುತ್ತೇವೆ.ಆ ದಿನಗಳು (ಪತ್ರಿಕೋದ್ಯಮಕ್ಕೆ ಬಂದ ಶುರುವಿನ ದಿನಗಳು) ಮತ್ತೆ ಬರುವುದಿಲ್ಲ ಕಣ್ರಪ್ಪಾ,ಆಗಲೇ ಚಂದಗಿತ್ತು.ಈಗ ವಯಸ್ಸಾಗಿರುವುದರಿಂದ ಅಂತಹ ಸುಖ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನಗುತ್ತಾ ಗೊಣಗುತ್ತೇವೆ.
ಯಾಕೆಂದರೆ ಗ್ರಹಿಕೆಯಲ್ಲಿ ತಪ್ಪಾಗಬಾರದು ಎಂಬ ಕಾರಣಕ್ಕಾಗಿ ಈಗ ಒಂದು ಸುದ್ದಿಯನ್ನೋ,ಸ್ಟೋರಿಯನ್ನೋ ಹಲವು ಮೂಲಗಳಿಂದ ಚೆಕ್ ಮಾಡಿಕೊಳ್ಳುವುದು ಅಭ್ಯಾಸ.ಅದು ಅನುಭವ (ಲಾತಾ) ಕಲಿಸಿದ ಅಭ್ಯಾಸ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಆರ್.ಟಿ.ವಿಠ್ಢಲಮೂರ್ತಿ

                                                                                          

LEAVE A REPLY

Please enter your comment!
Please enter your name here