ಕೆರೆ ಭರ್ತಿ ಸಂತಸಕ್ಕೆ ಕೂಡ್ಲಿಗಿ ಶಾಸಕರಿಗೆ ತೆರೆದ ಜೀಪಿನ ಮೆರವಣಿಗೆ ಅಗತ್ಯವಿತ್ತೇ? ಕೊರೊನಾ ಮಾರ್ಗಸೂಚಿ ಜಾರಿಯಲ್ಲಿದ್ರೂ ತಾಲೂಕಾಡಳಿತ ಸಮ್ಮತಿಸಿದ್ದಾದರೂ ಹೇಗೆ!

0
192

ಹುಳ್ಳಿಪ್ರಕಾಶ

ಕೂಡ್ಲಿಗಿ ತಾಲೂಕಿನ ಕೆರೆಗಳನ್ನು ತುಂಗಾಭದ್ರ ನದಿ ಯಿಂದ ಭರ್ತಿ ಮಾಡುವ ಯೋಜನೆಗೆ ಸರ್ಕಾರ ಮಂಆದತಿ ನೀಡಿದ್ದು ಇದು ತಾಲೂಕಿನಾದ್ಯಂತ ಸರ್ವಸಮ್ಮತ ಸಂತಸವನ್ನುಂಟು ಮಾಡಿದೆ. ಆದರೆ ಅಲ್ಲಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೊರೊನಾ ಕಠಿಣ ಮಾರ್ಗಸೂಚಿಗಳನ್ನು ಬದಿಗೆ ಸರಿಸಿ, ಲಾಕ್ಡೌನ್ ಲೆಕ್ಕಿಸದೇ ಆ ಕ್ಷೇತ್ರದ ಶಾಸಕರನ್ನು ಕೂಡ್ಲಿಗಿ ಪಟ್ಟಣದಲ್ಲಿ ಸಾರ್ವಜನಿಕವಾಗಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರವೀಗಾ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ. ಲಾಕ್ಡೌನ್ ಜಾರಿ ಇರುವಾಗ ತೆರೆದ ಜೀಪಿನಲ್ಲಿ ಅದ್ದೂರಿ ಮೆರವಣಿಗೆ ನಡೆದರೂ ಅಲ್ಲಿನ ತಾಲೂಕಾಡಳಿತ ಯಾಕೆ ಸುಮ್ಮನಿತ್ತು? ಎನ್ನುವ ಪ್ರಶ್ನೆಯೂ ನಾಡಿನ ಜನರ ನಡುವೆ ದೊಡ್ಡದಾಗಿ ಕಾಣಿಸಿದೆ ಕೂಡ.

ಬರಡು ನೆಲ ಕೂಡ್ಲಿಗಿ ತಾಲೂಕಿನಲ್ಲಿ ಯಾವುದೇ ರೀತಿಯ ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಭದ್ರಾ ಮೇಲ್ದಂಡೆ ಯಿಂದಾಗಲಿ ಇಲ್ಲವೆ ತುಂಗಾಭದ್ರ ನದಿ ಮೂಲಕವಾದರೂ ಇಲ್ಲಿನ ಕೆರೆಗಳನ್ನು ತುಂಬಿಸಬೇಕೆನ್ನುವ ಬೇಡಿಕೆಗೆ ಅಲ್ಲಿನ ಹುಣಸೆಮರಗಳಷ್ಟೇ ವಯಸ್ಸು.‌ ತಾಲೂಕಿಗರ ಶಾಶ್ವತ ನೀರಾವರಿ ಕಲ್ಪಿಸಿ ಎಂದು ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಕನ್ನಡಪರ, ದಲಿತಪರ, ರೈತಪರ ಸಂಘಟನೆಗಳು ಹಾಗೂ ಜನರು ನಿರಂತರ ಹೋರಾಟ ಮಾಡುತ್ತಲೆ ಬಂದಿದ್ದರು.

ಎಂದಿನಂತೆ ಈ ಹೋರಾಟದ ಕಡೆಗೆ ಬಹು ದಶಕಗಳಿಂದಲೂ ನಮ್ಮ ರಾಜ್ಯವನ್ನಾಳುತ್ತಾ ಬರುತ್ತೀರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಆಡಳಿತಗಾರರು ದಿವ್ಯ ಇಲ್ಲವೆ ಉದ್ದೇಶ ಪೂರ್ವಕ ನಿರ್ಲಕ್ಷ್ಯವನ್ನು ತೊರುತ್ತಲೆ ಬಂದ್ರು. ಇಲ್ಲಿಂದ ಆಯ್ಕೆಗೊಳ್ಳುತ್ತಿದ್ದ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ ಕೂಡ ಕುಂದಿತ್ತು. ಆದರೆ ಇದರಿಂದ ಶಾಶ್ವತ ನೀರಾವರಿ ಹೋರಾಟಗಾರರು ಮಾತ್ರ ನಿರಾಸೆಗೆ ಒಳಗಾಗಲಿಲ್ಲ.

ಬದಲಿಗೆ ಹೋರಾಟವನ್ನು ಜೀವಂತವಾಗಿಟ್ಟರು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಶಾಶ್ವತ ನೀರಾವರಿ ಬೇಡಿಕೆ ಮೊಳಗಿತ್ತು. ಕಾಂಗ್ರೆಸ್ ಪಕ್ಷ ಹಾಗೂ ಮೊಳಕಾಲ್ಮೂರು ನಿಂದ ವಲಸೆ ಬಂದಿರುವ ಎನ್.ವೈ.ಗೋಪಾಲಕೃಷ್ಣರನ್ನು ಆಯ್ಕೆ ಮಾಡಿದರೆ ಈ ಕ್ಷೇತ್ರದ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಬಿಜೆಪಿ ಮುಖಂಡ ಹಾಗೂ ಸಮಾಜ ಕಲ್ಯಾಣ ಸಚಿವರು ಆಗಿರುವ ಬಿ.ಶ್ರೀರಾಮುಲು ಕೂಡ್ಲಿಗಿ ಮತದಾರರಿಗೆ ಆಗ ಭರವಸೆ ಕೊಟ್ಟಿದ್ದರು. ಕೂಡ್ಲಿಗಿ ಮತದಾರ ಬಿಜೆಪಿ ಅಭ್ಯರ್ಥಿ ಆಗಿದ್ದ ಗೋಪಾಲಕೃಷ್ಣರನ್ನು ಆಯ್ಕೆ ಮಾಡಿದರು.

ಬಿಎಸ್. ಯಡಿಯೂರಪ್ಪ ನೆತೃತ್ವದ ರಾಜ್ಯ ಸರ್ಕಾರ ತುಂಗಾಭದ್ರ ನದಿ ಯಿಂದ ಬರಡು ನೆಲ ಕೂಡ್ಲಿಗಿ ತಾಲೂಕಿನ 74 ಕೆರೆಗಳನ್ನು ತುಂಬಿಸುವ ರೂ, 670 ಕೋಟಿರೂಪಾಯಿಗಳ ಯೋಜನೆಗೆ ಕಳೆದವಾರ ನಡೆದ ಸಚಿವ ಸಂಪುಟದಲ್ಲಿ ಮಂಜೂರಾತಿ ಕೊಡಲು ಒಪ್ಪಿಗೆ ನೀಡಿ ಹಲವು ದಶಕಗಳ ಬೇಡಿಕೆಗೆ ಸ್ಪಂದಿಸಿ, ಆ ಮೂಲಕ ಚುನಾವಣೆಯಲ್ಲಿ ಕ್ಷೇತ್ರದ ಮತದಾರರಿಗೆ ಶ್ರೀರಾಮುಲು ಕೊಟ್ಟ ಭರವಸೆಯನ್ನು ಕಾರ್ಯರೂಪಗೊಳಿಸಿತು. ರಾಜ್ಯ ಸರ್ಕಾರದ ನಿರ್ಧಾರ ಅಲ್ಲಿನ ಅನ್ನದಾತರಲ್ಲಿ, ಜನತೆಯ ಮನದಾಳದಲ್ಲಿ ಖುಷಿಯ ಸೆಲೆಯನ್ನು ಹುಟ್ಟಿಸಿದೆ.

ಕ್ಷೇತ್ರದ ಆಡಳಿತ ಪಕ್ಷಕ್ಕೆ ಸೇರಿರುವ ಶಾಸಕ ಎನ್. ವೈ. ಗೋಪಾಲಕೃಷ್ಣರನ್ನು ಸೋಮವಾರ ಕೂಡ್ಲಿಗಿ ಪಟ್ಟಣದ ಅರಾಧ್ಯದೇವ ಶ್ರೀ ಕೊತ್ತಲ ಅಂಜನೇಯ ದೇವಸ್ಥಾನ ದಿಂದ ಪ್ರವಾಸಿಮಂದಿರದ ತನಕವೂ ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ನೀರು ತರುವ ಅಧಿಕೃತ ಭರವಸೆಯನ್ನು ಹೊತ್ತು ತಂದ ಶಾಸಕರಿಗೆ ಆ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ತಮ್ಮ ಧನ್ಯತೆಯನ್ನು ಅರ್ಪಿಸಿ. ಸಂತಸ ಪಟ್ಟು ಸಂಭ್ರಮಿಸಿದರು.

ವಿಶೇಷ ಎಂದರೆ ಹಲವು ಕಾಂಗ್ರೆಸಿನ ಮುಖಂಡರು, ವಿವಿಧ ಸಂಘಸಂಸ್ಥೆಯವರು, ಪ್ರಗತಿಪರರು ಹಾಗೂ ಮಾಧ್ಯಮ ಎಂದು ಗುರುತಿಸಿಕೊಂಡವರು ಶಾಸಕರ ಜೀಪಿನ ಮೆರವಣಿಗೆಗೆ ನೈತಿಕವಾದ ಸಾಥ್ ಕೊಟ್ರು.
ಶಾಸಕರ ಮೆರವಣಿಗೆ ಎಂದ ಮೇಲೆ ಕೇಳಬೇಕೇ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿಯೇ ಬಂದಿದ್ದರು. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಕೇಳಲೇ ಬಾರದು. ಇದನ್ನು ಕೇಳಬೇಕಾದ ತಾಲೂಕಾಡಳಿತ ಕೂಡ ಮೆರವಣಿಗೆಯ ಪಥದೊಂದಿಗೆ ಸಾಗಿ ಬಂತ್ತು.

ಪ್ರಸ್ತುತ, ಬಹಿರಂಗವಾಗಿ ಸಭೆ,ಸಮಾರಂಭ, ಸಮಾವೇಶ, ರ್ಯಾಲಿ, ಮೆರವಣಿಗೆ ನಿಷೇಧಿಸಿ ರಾಜ್ಯ ಸರ್ಕಾರ ಕಟ್ಟುನಿಟ್ಡಿನ ಆದೇಶ ಹೊರಡಿಸಿದೆ. ಇದು ಗೊತ್ತಿದ್ದೂ ಬಹಿರಂಗವಾಗಿಯೇ ಶಾಸಕರನ್ನು ಹೊತ್ತ ತೆರೆದ ಜೀಪಿನ ಮೆರವಣಿಗೆ ಎಷ್ಟು ಸಮಂಜಸ, ಅಭಿನಂದನೆ ಸಲ್ಲಿಸಲು ಇಷ್ಟೊಂದು ಅವಸರವೇಕೆ? ಲಾಕ್ಡೌನ್ ಸಂಪೂರ್ಣ ತೆರೆದ ಬಳಿಕ ಭರ್ಜರಿ ಮೆರವಣಿಗೆ ಮಾಡಬಹುದೀತ್ತಲ್ಲ? ಹೀಗೆ ನಾನಾರೀತಿಯಲ್ಲಿಯೇ ನಾಡಿನ ಸಾರ್ವಜನಿಕರ ಮಧ್ಯೆ ಸಾಕಷ್ಟು ಪ್ರಶ್ನೆಗಳು, ಚರ್ಚೆಗಳು ಹುಟ್ಟಿಕೊಂಡಿವೆ.

ಇದನ್ನು ಪ್ರಶ್ನಿಸಬೇಕಿದ್ದು ಅಲ್ಲಿನ ಮಾಧ್ಯಮಗಳ ಜವಾಬ್ದಾರಿ ಆಗಿತ್ತು. ಆದರೆ ಹಲವು ಪ್ರತ್ರಕರ್ತರಿಗೆ ವೇದಿಕೆ ಏರಿ ಭಾಷಣ ಮಾಡುವ ಮಹಾದಾಸೆ ಆಗಿತ್ತು! ಒಂದು ವೇಳೆ ಸಂಘಟಕರು ಅವಕಾಶ ಕೊಟ್ರು, ನಿರೂಪಕರು ಎಲ್ಲಿ ತಮ್ಮ ಹೆಸರನ್ನು ಕರೆಯದಿದ್ರೇ! ಎನ್ನುವ ಧಾವಂತಕ್ಕೆ ಅವರು ಒಳಾಗಿದ್ರು. ಹೀಗಾಗಿ ಅವರಿಗೆ ತೆರೆದ ಜೀಪಿನ ಮೆರವಣಿಗೆ ನೆನಪಾಗಲೆ ಇಲ್ಲ.

ಸದ್ಯ ಇಡೀ ರಾಜ್ಯದ ತುಂಬಾ ಅತ್ಯಂತ ಕಟ್ಟುನಿಟ್ಟಿನ ಕೊರೊನಾ ಮಾರ್ಗಸೂಚಿಗಳು ಜಾರಿಯಲ್ಲಿವೆ. ಜನಸಾಮಾನ್ಯರಿಗಿಂತಲೂ ವ್ಯಾಪಾರ-ವಹೀವಾಟುದಾರರಿಗೆ ತೊಂದರೆ ಆಗಬಾರದು ಎನ್ನುವ ಮನಸ್ಥಿತಿ ಸರ್ಕಾರದ್ದು.ಈ ಕಾರಣಕ್ಕೇನೆ ಸಡಿಲಿಕೆಯ ಲಾಕ್ಡೌನ್ ಜಾರಿಗೆ ತಂದಿದೆ. ಇತ್ತ ಡೆಲ್ಟಾ ತಂದಿಟ್ಟಿರುವ ಭಯ, ಅತ್ತ ಕೊರೊನಾ ಮೂರನೇಯ ಆಲೆಯಾಗಿ ದಾಳಿಗೈಯಲು ಸರ್ವ ಸನ್ನದವಾಗುತ್ತಿದೆ. ಸರ್ಕಾರ ಹೇಳಿದಷ್ಟು ಕೊರೊನಾ ಇನ್ನೂ ಕಂಟ್ರೋಲ್ ಗೆ ಬಂದಿಲ್ಲ. ವಾಸ್ತವವಾಗಿ ಇಂತಹ ಅಪಾಯಕಾರಿ ಸನ್ನಿವೇಶವಿರುವಾಗ ಜನರಲ್ಲಿ ಕೊರೊನಾ ನಿಯಂತ್ರಣ ಕುರಿತಂತೆ ಜಾಗೃತಿ ಮೂಡಿಸುವ ರಾಯಭಾರಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಆಯಾ ಕ್ಷೇತ್ರದ ಶಾಸಕರದ್ದಾಗಿದೆ. ಜನಸೇರಿಸಿ ಮೆರವಣಿಗೆ ಮಾಡಿಸಿಕೊಳ್ಳೊದಲ್ಲ.

ಆದರೆ ಜವಾಬ್ದಾರಿ ಹೊತ್ತುಕೊಂಡವರೇನೆ ತೆರೆದ ಜೀಪಿನಲ್ಲಿ ಮೆರವಣಿಗೆ ಹೊರಟರೆಂದರೆ ಇದರಿಂದ ಸಾರ್ವಜನಿಕವಾಗಿ ವ್ಯಕ್ತವಾಗುವ ಸಂದೇಶವಾದರೂ ಏನು? ಎನ್ನುವ ಪ್ರಶ್ನೆ ಸಹಜ. ಏಕೆಂದರೆ, ಕ್ಷೇತ್ರದ ದೊರೆನೇ ಮೆರವಣಿ ಹೊಂಟ ಎಂದ ಮೇಲೆ ಅಲ್ಲಿನ ಜನ ಸಾಮಾನ್ಯರು ಕೊರೊನಾ ಮಾರ್ಗಸೂಚಿಯನ್ನು ಗಂಭೀರವಾಗಿ ಪಾಲಿಸ ಬಲ್ಲರೇ? ಇನ್ನೂ ಅವರಲ್ಲಿ ಜಾಗೃತಿ ದೂರದ ಮಾತಾಯಿತು ಎನ್ನುವ ರೀತಿಯಲ್ಲಿ ಮಾತುಗಳು, ಚರ್ಚೆಗಳು ನಾಡಿನ ಸಾರ್ವಜನಿಕರ ಮಧ್ಯೆ ಜೋರಾಗಿವೆ.

ಸರಿ, ಕೊರೊನಾ ಸಂದರ್ಭದಲ್ಲಿ ಈ ತರಹದ ಬಹಿರಂಗ ಮೆರವಣಿಗೆ ಸೂಕ್ತವಲ್ಲ ಎಂದು ಶಾಸಕರಿಗೆ ಮತ್ತು ಮೆರವಣಿಗೆ ಆಯೋಜಿಸಿದವರಿಗೆ ತಿಳಿ ಹೇಳಿ, ಕೊರೊನಾ ಮಾರ್ಗಸೂಚಿಯನ್ನು ಉಲಂಘಿಸದ್ದಂತೆ ಎಚ್ಚರಿಸ ಬೇಕಾದವರು ಮುಖ್ಯವಾಗಿ ಮಾಧ್ಯಮದವರು ಹಾಗೂ ತಾಲೂಕಾಡಳಿತ.

ಆದರೆ, ರಾಜ್ಯವನ್ನಾಳುತ್ತೀರುವ ಆಡಳಿತ ಪಕ್ಷದ ಶಾಸಕರೇ ಮೆರವಣಿಗೆ ಏರಿದ್ದರೆಂದ ಮೇಲೆ ಅದನ್ನು ಪ್ರಶ್ನೆಸುವುದಿರಲಿ, ಸಣ್ಣಗೆ ಆಕ್ಷೇಪಿಸುವಷ್ಟು ಧೈರ್ಯಶಾಲಿತನ ತೊರುವುದನ್ನು ತಾಲೂಕಾಡಳಿತ ದಿಂದ ನಿರೀಕ್ಷಿಸಲಾಗದು. ಏಕೆಂದರೆ, ಆಡಳಿತ ಸರ್ಕಾರದ ಶಾಸಕರ ಶಿಫಾರಸ್ಸಿನ ಮೇರೆಗೇನೆ ಬಹುತೇಕರು ಕೂಡ್ಲಿಗಿ ತಾಲೂಕಾಡಳಿತದ ಆಯಕಟ್ಟಿನ ಜಾಗದಲ್ಲಿ ಬಂದು ಕುಳಿತಿರುವುದು. ಅವರು ಎದುರುತ್ತರಿಸರೆಂದು ನಿರೀಕ್ಷಿಸಲಾದೀತೆ?

ಶಾಸಕರ ಜೊತೆಗೆ ಗುರುತಿಸಿಕೊಳ್ಳಲು ಪತ್ರಕರ್ತರಲ್ಲಿ ಹಲವರು ಪೈಪೋಟಿಗೆ ಬಿದ್ದಿರುವಾಗ ಕೊರೊನಾ ಸಮಯದಲ್ಲಿ ತೆರೆದ ಜೀಪಿನ ಮೆರವಣಿಗೆ ಜನಸಮುದಾಯದಲ್ಲಿ ಕೊರೊನಾ ಮಾರ್ಗಸೂಚಿ ಬಗ್ಗೆ ವ್ಯತ್ತಿರಿಕ್ತ ಸಂದೇಶ ಸಾರುತ್ತೇಂದು ವರದಿಯನ್ನು ಅಂತಹವರಿಂದ ನಿರೀಕ್ಷಿಸಲಾದೀತೇ.

ಈ ಎಲ್ಲದರ ನಡುವೆ ಬರದ ನೆಲದ ಕೆರೆಗಳನ್ನು ತುಂಬಿಸುವ ಯೋಜನೆ ಅಭಿವೃದ್ಧಿದಾಯಕ. ನಾನಾ ಕಾರಣಗಳಿಂದಾಗಿ ಅದು ಒಲಿದಿದೆ ಎನ್ನುವುದು ಲಾಕ್ಡೌನ್ ಸಂಕಷ್ಟಗಳ ನಡುವೆ ಖುಷಿ ಕೊಡುವ ವಿಚಾರ ಯೋಜನೆ ಜಾರಿಗಾಗಿ ಸಾಕಷ್ಟು ಅಯಾಮದಲ್ಲಿ ಕೂಡ್ಲಿಗಿ ಜನರು, ಸಂಘಟನೆಯವರು, ರಾಜಕೀಯ ಪಕ್ಷಗಳು ಹೋರಾಟ ಮಾಡುತ್ತಾ ಸರ್ಕಾರದ ಮೇಲೆ ಒತ್ತಡ ಹೇರುತ್ತಲೆ ಬರುತ್ತಿದ್ದವು.
ಗೋಪಾಲಕೃಷ್ಣ ಶಾಸಕರಾಗುವ ಹಿಂದಿನ ತನಕ ಈ ಕ್ಷೇತ್ರವನ್ನು ಆಳಿರುವ ಶಾಸಕರುಗಳು ಸಹ ಜನರ ಬೇಡಿಕೆಗೆ ಧ್ವನಿಯಾಗಿ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡಿದ್ದರು. ಈ ಎಲ್ಲರ ಪ್ರಯತ್ನದ ಫಲ ಮತ್ತು ಪರಿಶ್ರಮ ಇವತ್ತು ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ತ್ವರಿತವಾಗಿ ಕಾಮಗಾರಿ ಆರಂಭವಾಗಲಿ ಎನ್ನುವುದು ಕೂಡ್ಲಿಗಿ ತಾಲೂಕಿನ ಸಮಸ್ತ ಜನತೆಯ ಆಶಯ.

ಹುಳ್ಳಿಪ್ರಕಾಶ
ಸಂಪಾದಕರು
ಬಳ್ಳಾರಿ ಸುನಾಮಿಪತ್ರಿಕೆ

LEAVE A REPLY

Please enter your comment!
Please enter your name here