ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದ, ಸುಧೀಂದ್ರ ಹಾಲ್ದೊಡ್ಡೇರಿ ರವರಿಗೆ ನಮನ

0
135

ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದ ಹಾಲದೊಡ್ಡೇರಿ ಸುಧೀಂದ್ರ ಇಂದು ನಮ್ಮನ್ನು ಅಗಲಿದ್ದಾರೆ. ಇಂದಿನ ಮಾಧ್ಯಮದ ಓದುಗರಿಗೆ ಮತ್ತು ವೀಕ್ಷಕರಿಗೆ ಭಾರತೀಯ ವಿಜ್ಞಾನದ ಸಾಧನೆ ಮತ್ತು ಪ್ರಯೋಗಗಳನ್ನು ಪರಿಚಯಿಸಲು ಸುಧೀಂದ್ರ ವಹಿಸುತ್ತಿದ್ದ ಆಸಕ್ತಿ, ಶ್ರದ್ಧೆ ಮತ್ತು ಅಧ್ಯಯನ ಅಸಾಧಾರಣವಾಗಿತ್ತು.

ಸುಧೀಂದ್ರ ಹಾಲ್ದೊಡ್ಡೇರಿ 1961ರ ಡಿಸೆಂಬರ್ 3ರಂದು ಜನಿಸಿದರು. ಕನ್ನಡ ಪತ್ರಕರ್ತ ದಿವಂಗತ ನಾಗೇಶರಾಯರು ಇವರ ತಂದೆ. ಸುಧೀಂದ್ರ ಹಾಲ್ದೊಡ್ಡೇರಿ ತಂದೆಯವರು ಮನೆಗೆ ತರಿಸುತ್ತಿದ್ದ ದೇಶ-ವಿದೇಶಗಳ ಪತ್ರಿಕೆಗಳನ್ನು ಓದುತ್ತಾ ಬೆಳೆದರು. ಅವುಗಳಲ್ಲಿರುವ ವಿಜ್ಞಾನ ಲೇಖನಗಳು ಇವರನ್ನು ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸಿದವು. ತಂದೆಯವರ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಕನ್ನಡದಲ್ಲಿ ಬರೆಯಲಾರಂಭಿಸಿದರು.

ವಿಜಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಡಾ||ಬಿ.ಜಿ.ಎಲ್. ಸ್ವಾಮಿ ಅವರ “ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ” ಎನ್ನುವ ಪುಸ್ತಕ ಇವರಲ್ಲಿ ಜೀವವಿಜ್ಞಾನದ ಕಡೆಗೂ ಆಸಕ್ತಿಯನ್ನು ಚಿಗುರಿಸಿತು. ಅತ್ಯಂತ ಸರಳವಾಗಿ, ಹೃದ್ಯವಾಗಿ, ನವಿರಾದ ತಿಳಿ ಹಾಸ್ಯದೊಂದಿಗಿನ ಬಿ.ಜಿ. ಎಲ್. ಸ್ವಾಮಿ ಅವರ ಶೈಲಿ ಸುಧೀಂದ್ರ ಹಾಲ್ದೊಡ್ಡೇರಿ ಅವರಲ್ಲಿ ಅಪಾರವಾದ ಆಸಕ್ತಿಯನ್ನು ಬೆಳೆಸಿತು. ಸುಧೀಂದ್ರ ಹಾಲ್ದೊಡ್ಡೇರಿ ಅವರು ನಾಡಿನ ಮಹತ್ವದ ವಿಜ್ಞಾನದ ಸಾಧಕರಾಗಿದ್ದರೂ ಅವರ ಬರಹಗಳಲ್ಲಿ ಇದ್ದ ಕನ್ನಡ ಪ್ರೀತಿ ಅಪಾರವಾದದ್ದು. ಅವರ ಬರಹದಲ್ಲೊಂದು ಸಹಜ ಲವಲವಿಕೆ ಇತ್ತು. ಅವರ ಬ್ಲಾಗಿನಲ್ಲಿ ತಮ್ಮ ಹೆಸರಿನ ಹಾಲ್ದೊಡ್ಡೇರಿ ಅನ್ನು ‘ಹಾಲ್ ದೊಡ್ ಡೈರಿ’ ಎಂದು ಬರೆದುಕೊಳ್ಳುವುದರಿಂದ ತೊಡಗಿ ಅವರ ಎಲ್ಲ ಬರಹಗಳಲ್ಲಿ ಒಂದು ಸಹಜ ಲವಲವಿಕೆ ಮತ್ತು ವಿನೋದಪ್ರಿಯತೆ ಇತ್ತು.‍

ಸುಧೀಂದ್ರ ಹಾಲ್ದೊಡ್ಡೇರಿ ಬೆಂಗಳೂರಿನ ಯು.ವಿ.ಸಿ.ಇ ಯಿಂದ ಬಿ.ಇ. ಹಾಗೂ ಮದ್ರಾಸಿನ ಐಐಟಿ ಇಂದ ಎಂ.ಟೆಕ್ ಪದವೀಧರರು. ಅವರು ಐಐಎಸ್‍ಸಿ, ಡಿಆರ್‍ ಡಿಓ, ಎಚ್ಎಎಲ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಐಚ್ಛಿಕ ನಿವೃತ್ತಿ ಪಡೆದು ಕೆಲವು ವರ್ಷಗಳಿಂದ ಪ್ರಾಧ್ಯಾಪಕರಾಗಿದ್ದರು.

“ಆಕಾಶದಲ್ಲಿ ತೇಜಸ್ ವಿಮಾನ ಹಾರಾಡುತ್ತಿರುವುದನ್ನು ನೋಡಿದಾಗ ದೇಶದ ರಕ್ಷಣೆಗೆ ನಾನು ಪುಟ್ಟ ಕೊಡುಗೆ ನೀಡಿದೆ ಎನ್ನುವ ಭಾವನೆ ನನ್ನಲ್ಲಿ ಹೆಮ್ಮೆಯನ್ನು ಉಂಟುಮಾಡಿ ನನ್ನನ್ನು ಪುಳಕಿತನನ್ನಾಗಿಸುತ್ತದೆ. ಇಲ್ಲಿ ಕೆಲಸಮಾಡುತ್ತಿದ್ದಾಗ ಎ.ಪಿ.ಜೆ ಅಬ್ದುಲ್ ಕಲಾಮರು ನನಗೆ ಮಾರ್ಗದರ್ಶಕರಾಗಿದ್ದರು. ಅವರೊಂದಿಗೆ ಕೆಲಸ ಮಾಡಿದ ಸಂತೃಪ್ತಿ ನನಗಿದೆ” ಎಂದು ಒಮ್ಮೆ ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದ್ದು ನೆನಪಾಗುತ್ತಿದೆ. ಸುಧೀಂದ್ರ ಹಾಲ್ದೊಡ್ಡೇರಿ ಬೆಂಗಳೂರಿನ ವೈಮಾಂತರಿಕ್ಷ ಕಂಪನಿಯ ತಾಂತ್ರಿಕ ಸಲಹೆಗಾರರಾಗಿದ್ದರು. ಹಲವು ವರ್ಷಗಳ ಕಾಲದಿಂದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧನೆ ಮಾಡಿದ್ದರು.

ಸುಧೀಂದ್ರ ಹಾಲ್ದೊಡ್ಡೇರಿ ಕಸ್ತೂರಿ ಮಾಸಪತ್ರಿಕೆಯಲ್ಲಿ ‘ನವನವೋನ್ಮೇಷ’ ಶೀರ್ಷಿಕೆಯ ಹಾಗೂ ಸಂಯುಕ್ತ ಕರ್ನಾಟಕದಲ್ಲಿ ‘ಸೈನ್ಸ್ ಕ್ಲಾಸ್’ ಮತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ನೆಟ್ ನೋಟ’ ಮುಂತಾದವುಗಳ ಪ್ರಸಿದ್ಧ ಅಂಕಣಕಾರರಾಗಿದ್ದರು. ಕನ್ನಡ ಪ್ರಭದಲ್ಲೂ ಅವರ‍ ಅಂಕಣ ಬರುತ್ತಿತ್ತು. ಎಲ್ಲ ನಿಯತಕಾಲಿಕಗಳಲ್ಲಿ ಅವರ ಸುಲಲಿತ ವಿಜ್ಞಾನ ಬರಹಗಳು ನಿರಂತರವಾಗಿ ನಲಿದಿದ್ದವು. ಅವರು ಉತ್ತಮ ಬ್ಲಾಗಿಗರೂ ಆಗಿದ್ದರು. ಅವರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರೂ ಆಗಿದ್ದರು.

ಸುಧೀಂದ್ರ ಹಾಲ್ದೊಡ್ಡೇರಿ ಅವರ ಕೃತಿಗಳಲ್ಲಿ ಸದ್ದು! ಸಂಶೋಧನೆ ನಡೆಯುತ್ತಿದೆ, ಬಾಹ್ಯಾಕಾಶವೆಂಬ ಬೆರಗಿನಂಗಳ, ಬೆರಗಿನ ಬೆಳಕಿಂಡಿ (ಲೇಖನಗಳ ಸಂಗ್ರಹ ಕೃತಿ), ವಿಜ್ಞಾನ ಮತ್ತು ಪತ್ರಿಕೋದ್ಯಮ ಮುಂತಾದವು ಸೇರಿವೆ.

ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ರಾಷ್ಟ್ರೀಯ ವಿಜ್ಞಾನ ದಿನ (2002) ಪದಕ, ಉತ್ತಮ ತಂತ್ರಜ್ಞಾನ ಕಾರ್ಯಪಡೆ (2004 ಹಾಗೂ 2005) ಪ್ರಶಸ್ತಿ, ಕರ್ನಾಟಕ ಸರ್ಕಾರದ ವಿಜನ್ ಗ್ರೂಪ್ ಆನ್ ಸೈನ್ಸ್ ಆಂಡ್ ಟೆಕ್ನಾಲಜಿಯಿಂದ (2010) ಶ್ರೇಷ್ಠ ವಿಜ್ಞಾನ ಸಂವಹನಕಾರ ಪುರಸ್ಕಾರ, ಕನ್ನಡ ವಿಜ್ಞಾನ ಪರಿಷತ್ತಿನಿಂದ (2007) ರಜತೋತ್ಸವ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.

ಇಂತಹ ವಿಜ್ಞಾನಿ, ಕನ್ನಡದ ಮಹತ್ವದ ಪ್ರತಿಭೆ ಇನ್ನೂ 60 ತಲುಪುವ ಮೊದಲೇ ನಿಧನರಾಗಿದ್ದು ದೊಡ್ಡ ನಷ್ಟ. ಏನು ಮಾಡುವುದು ನಮಗೆ ನೆನಪೊಂದೇ ಅಮರ.

LEAVE A REPLY

Please enter your comment!
Please enter your name here