ದೆಹಲಿಗೆ ಯಡಿಯೂರಪ್ಪ ನವರು 6 ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಏನಿದೆ ಅದರಲ್ಲಿ ಅವರನ್ನೇ ಕೇಳಿ :ಎಚ್. ಡಿ.ಕೆ

0
172

ಸಿಎಂ ಬಿ.ಎಸ್​ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ದೆಹಲಿ ಪ್ರವಾಸ ಕೈಗೊಂಡಿರುವ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ. ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿಎಂ ನಿನ್ನೆ ದೆಹಲಿಗೆ ಹೋಗುವಾಗ ಹೈ ಕಮಾಂಡ್​​ಗೆ ಕೊಡೋಕೆ ಆರು ಬ್ಯಾಗ್ ಗಳನ್ನು ಜೊತೆಯಲ್ಲಿ ತಗೊಂಡು ಹೋಗಿದ್ದಾರೆ . ಉಡುಗೊರೆ ತಗೊಂಡು ಹೋಗಿದ್ದಾರಾ ಅಥವಾ ಬೇರೆ ಏನು ತಗೊಂಡು ಹೋಗಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದು ಎಚ್​ಡಿಕೆ ಕೇಳಿದ್ದಾರೆ.

ಪ್ರಧಾನಿಗಳನ್ನು ಭೇಟಿ ಮಾಡೋಕೆ ಸಿಎಂ ಒಬ್ಬರೇ ಹೋಗಿದ್ರಾ.. ? ಅಥವಾ ಬ್ಯಾಗ್ ಗಳನ್ನು ತಗೊಂಡು ಹೋಗಿ ಭೇಟಿ ಮಾಡಿದ್ರಾ..? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮುಂದುವರೆದು ಅವರು, ರಾಜ್ಯದಲ್ಲಿ ಕನ್ನಡಿಗರಿಂದ ಆಡಳಿತ ನಡೆಯಬೇಕೇ ಹೊರತು, ದೆಹಲಿ ಬಿಜೆಪಿ ಹೈಕಮಾಂಡ್​​ನಿಂದ ಅಲ್ಲ. ನಿನ್ನೆ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ. ಸ್ಪೆಷಲ್ ಫ್ಲೈಟ್ ನಲ್ಲಿ ಹೋಗುವಾಗ ಆರು ಬ್ಯಾಗ್ ಗಳನ್ನು ತಗೊಂಡು ಹೋಗಿದ್ದಾರೆ. ಆ ಬ್ಯಾಗ್ ಗಳಲ್ಲಿ ಕರ್ನಾಟಕದ ವಿಷಯಗಳ ಬಗ್ಗೆ ತುಂಬಿದ್ರಾ..? ಅಥವಾ ಬೇರೆ ಏನಾದರೂ ತುಂಬಿಕೊಂಡು ಹೋದ್ರಾ ಎಂಬುದನ್ನು ಹೇಳಬೇಕು ಎಂದರು.

ನಿನ್ನೆ ಮುಖ್ಯಮಂತ್ರಿ ಗಳು ಪ್ರಧಾನಿಗಳನ್ನು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಅವರನ್ನು ಗೌರವಿಸಿ, ರಾಜ್ಯದ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತೆ ಅಂತಾ ನೋಡೋಣ‌ ಎಂದು ಹೇಳಿದರು.

ಅಕ್ರಮ ಗಣಿಗಾರಿಕೆ ವಿರುದ್ದ ರಾಜ್ಯಪಾಲರಿಗೆ ಸಂಸದೆ ಸುಮಲತಾ ದೂರು ನೀಡಿರುವ ವಿಚಾರವಾಗಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವರ ಬಗ್ಗೆ ಚರ್ಚೆ ಮಾಡೋಲ್ಲ. ಆದರೆ ರಾಜ್ಯದಲ್ಲಿ ಎಲ್ಲಾ ಕಡೆಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ನಿಲ್ಲಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಸರ್ಕಾರದಲ್ಲಿರುವ ಯಾವುದೇ ನಾಯಕ ಈ ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡಲಿ. ಅದಕ್ಕೆ ನಾನು ಹಾಗೂ ನನ್ನ ಪಕ್ಷದಿಂದ ಬೆಂಬಲ ಕೊಡಲು ಸಿದ್ದನಿದ್ದೇನೆ ಎಂದರು. 

ಜೆಡಿಎಸ್​ ಸಭೆ:

ಕಳೆದ ಎರಡು ದಿನಗಳಿಂದ ಸಭೆ ನಡೆಯುತ್ತಿದೆ. ನಿನ್ನೆಯೂ ಕೊಪ್ಪಳ ಜಿಲ್ಲೆಯ ಕಾರ್ಯಕರ್ತರ ಜೊತೆ ಸಭೆ ಮಾಡಿದ್ವಿ. ಕೊಪ್ಪಳದಲ್ಲಿ ಆಕ್ಟಿವಿಟಿ ಕಡಿಮೆ ಇದೆ. ಆದರೆ ನಿನ್ನೆ ನಾನು ಗಮನಿಸಿದೆ. ಯುವಕರು, ವಕೀಲ ವೃತ್ತಿ ಮಾಡುತ್ತಿರುವವರು ಹೆಚ್ಚಾಗಿ ಬರುತ್ತಿದ್ದಾರೆ. ಉತ್ತಮ ರೀತಿಯ ಬೆಳವಣಿಗೆ ಕಾಣುತ್ತಿದ್ದೇನೆ. ಹೊರ ನೋಟಕ್ಕೆ ಬಿಜೆಪಿಯವರು ಜೆಡಿಎಸ್ ಮುಗಿದೇ ಹೋಯ್ತು ಅಂತಾರೆ. ಮೈತ್ರಿ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಉಪ ಚುನಾಚಣೆ ಫಲಿತಾಂಶ ಇಟ್ಟುಕೊಂಡು ಈ ರೀತಿ ಮಾತನಾಡುತ್ತಿದ್ದಾರೆ. ಆದರೆ ನಿಷ್ಠಾವಂತ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇಂದು ಕೂಡ ಸಭೆ ಮುಂದುವರೆದಿದೆ ಇಂದು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹು-ದಾ, ಉತ್ತರ ಕನ್ನಡ ಜಿಲ್ಲೆಗಳ ಸಭೆ ಕರೆದಿದ್ದೇನೆ.  ಆಯಾಯ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಗಮನ ಸೆಳೆಯಿತ್ತಿದ್ದಾರೆ. ಆರಂಭಿಕ ಹಂತದಲ್ಲಿ ಜಿ.ಪಂ. ಹಾಗೂ ತಾಲೂಕು ಪಂ. ಚುನಾವಣೆ ಎದುರಿಸಬೇಕಾಗಿದೆ. ಇದೊಂದು ರೀತಿ ಸೆಮಿ ಫೈನಲ್ ಇದ್ದ ಹಾಗೆ. ಇದರಲ್ಲಿ ಹೆಚ್ಚಿನ ರೀತಿ ಹೋರಾಟ ಮಾಡಬೇಕಿದೆ. ಈ ಹುಮ್ಮಸ್ಸು ಕಾರ್ಯಕರ್ತರಲ್ಲೇ ಇದೆ. ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ ಎಂದರು.

ವಿಸಿಟಿಂಗ್ ಪದಾಧಿಕಾರಿಗಳು ಬೇಡ. ಜನರ ಮಧ್ಯ ಹೋಗಿ ಸಮಸ್ಯೆ ಆಲಿಸಬೇಕಾಗಿದೆ. ಈಗಾಗಲೇ ಐದು ಕಾರ್ಯಕ್ರಮಗಳ ಬಗ್ಗೆ ನನ್ನದೇ ಆದ ವಿಜನ್ ಇಟ್ಟುಕೊಂಡಿದ್ದೇನೆ. ಅವೆಲ್ಲವನ್ನ ಅವರಿಗೆ ತಿಳಿಸಿದ್ದೇನೆ. ಆಂದೋಲನದ ರೀತಿ ಮನೆ ಮನೆಗೆ ತಲುಪಬೇಕಾಗಿದೆ. ಬಿಬಿಎಂಪಿ ಚುನಾವಣೆ ಕೂಡ ನಮಗೆ ಮುಖ್ಯವಾಗಿದೆ. ಹೆಚ್ಚಿನ ರೀತಿಯಲ್ಲಿ ಪ್ರಾದೇಶಿಕ ನೆಲಗಟ್ಟು ಇಟ್ಟುಕೊಂಡು ಹೋಗಬೇಕಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here