ಹೊಸಪೇಟೆ ನಗರಸಭೆಯಲ್ಲಿ 14 ಮತ್ತು 15 ನೇ ಹಣಕಾಸು ಅನುದಾನದಿಂದ ವಿವಿಧ ಅಭಿವೃದ್ಧಿ ಕಾಮಗಾರಿ

0
221

ಹೊಸಪೇಟೆ(ವಿಜಯನಗರ)ಏ.19: ಎಸ್.ಎಫ್.ಸಿ ಯೋಜನೆಯಡಿ ರೂ.3.43 ಕೋಟಿ, 14ನೇ ಹಣಕಾಸಿನಿಂದ ರೂ.3 ಕೋಟಿ ಹಾಗೂ 15ನೇ ಹಣಕಾಸಿನಿಂದ ರೂ.10 ಕೋಟಿ ವೆಚ್ಚದಲ್ಲಿ ಹೊಸಪೇಟೆ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಗರಸಭೆಯ ಅಧ್ಯಕ್ಷೆ ಸುಂಕಮ್ಮ ಹೇಳಿದರು.
ಹೊಸಪೇಟೆಯ ನಗರಸಭೆಯ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಗರಸಭೆಯ ಉಪಾಧ್ಯಕ್ಷ ಬಿ.ಎಲ್.ಆನಂದ ಅವರು ಮಾತನಾಡಿ 2008 ರಿಂದ 2021ರವರೆಗೆ ಎಸ್.ಎಫ್.ಸಿ ಯೋಜನೆಯಡಿ ರೂ.3.43 ಕೋಟಿ ಹಾಗೂ 14ನೇ ಹಣಕಾಸು ಯೋಜನೆಯಲ್ಲಿ ರೂ.3 ಕೋಟಿ ಸೇರಿದಂತೆ ಒಟ್ಟು ರೂ.6.43ಕೋಟಿ ಉಳಿತಾಯ ಮೊತ್ತವಿದ್ದು, ಸದರಿ ಮೊತ್ತದಲ್ಲಿ ನಗರದ ವಿವಿಧ ವಾರ್ಡ್‍ಗಳಲ್ಲಿ ರಸ್ತೆ, ಚರಂಡಿ ಹಾಗೂ ಬಿದಿ ದೀಪಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
2022-23ನೇ ಸಾಲಿಗೆ 15ನೇ ಹಣಕಾಸು ಯೋಜನೆಯಡಿ ರೂ.15ಕೋಟಿ ಹಂಚಿಕೆಯಾಗಿದ್ದು, ರಸ್ತೆ, ಚರಂಡಿ, ಉದ್ಯಾನವನಗಳ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯ, ಸ್ಮಶಾನಗಳ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
2022-23ನೇ ಸಾಲಿನಲ್ಲಿ ನಗರೋತ್ಥಾನ ಯೋಜನೆಯಡಿ ರೂ.34 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ.8.19 ಕೋಟಿ, ಓ.ಬಿ.ಸಿ ವರ್ಗದವರಿಗೆ ರೂ.2.46 ಕೋಟಿ, ಅಂಗವಿಕಲರಿಗೆ ರೂ.1.70 ಕೋಟಿ, ನಗರದ ಅನಂತಶಯನ ಗುಡಿ ಹತ್ತಿರವಿರುವ ರೈಲ್ವೆ ಲೈನ್ ಮೇಲೆ ಮೇಲು ಸೇತುವೆ ನಿರ್ಮಾಣಕ್ಕೆ ರೂ.10ಕೋಟಿ, ನಗರದ ಮುಖ್ಯ ರಸ್ತೆಗಳಲ್ಲಿ ಬಿದಿ ದೀಪ ಅಳವಡಿಸಲು ರೂ.5ಕೋಟಿ ಮತ್ತು ಇನ್ನೂಳಿ 6.65ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಹೊಸಪೇಟೆಯ 35 ವಾರ್ಡ್‍ಗಳಲ್ಲಿ ಕಸದ ವಾಹನ ಸಂಚರಿಸುತ್ತಿದ್ದು, ತಮ್ಮ ಮನೆಯ ಕಸವನ್ನು ಹಸಿಕಸ, ಒಣಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಂಗಡಿಸಿ ನಗರಸಭೆಯ ವಾಹನದ ಮುಖಾಂತರ ಸಂಗ್ರಹಿಸಿ ಕಾರಿಗನೂರು ಡಂಪ್ ಯಾರ್ಡ್‍ನಲ್ಲಿ ಕಸ ವಿಲೇವಾರಿ ಮಾಡಲಾಗುವುದು ಎಂದರು.
ಹೊಸಪೇಟೆ ನಗರ ವ್ಯಾಪ್ತಿಯಲ್ಲಿ 6 ರಿಂದ 8 ಸಾವಿರ ಉದ್ದಿಮೆಗಳು ಇದ್ದು, ಅದರಲ್ಲಿ ಕೇವಲ 2ಸಾವಿರ ಉದ್ದಿಮೆಗಳಿಗೆ ಮಾತ್ರ ಪರವಾನಿಗೆ ಪಡೆದಿರುತ್ತಾರೆ. ಇನ್ನೂಳಿದ ಉದ್ದಿಮೆದಾರರು ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಪರವಾನಿಗೆ ಪಡೆದರೇ ರಿಯಾಯಿತಿ ನೀಡಲಾಗುತ್ತದೆ. ನಂತರ ತಡವಾಗಿ ಉದ್ದಿಮೆಗೆ ಪರವಾನಿಗೆ ಪಡೆಯುವವರಿಗೆ ದಂಡ ವಿಧಿಸಲಾಗುತ್ತದೆ. ಪರವಾನಿಗೆ ಉದ್ದಿಮೆ ಪರವಾನಿಗೆ ಪಡೆಯಲು ಉದ್ದಿಮೆದಾರರು ಆಸ್ತಿ ತೆರಿಗೆ ಪಾವತಿಸಿದ ರಶೀದಿ, ಬಾಡಿಗೆ ಕರಾರು ಪತ್ರ, ಐ.ಡಿ. ಕಾರ್ಡ್/ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ನಗರ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳಲ್ಲಿ ಪಾವತಿಸಿದರೆ ಶೇ.5 ರಿಯಾಯಿತಿ ನೀಡಲಾಗುತ್ತಿದ್ದು, ಮೇ, ಜೂನ್, ಮತ್ತು ಜುಲೈ ತಿಂಗಳುಗಳಲ್ಲಿ ದಂಡ ರಹಿತವಗಿ ತೆರಿಗೆ ಪಾವತಿಸಬಹುದಾಗಿದ್ದು, ನಂತರ ತೆರಿಗೆ ಪಾವತಿಸಿದವರಿಗೆ ಪ್ರತಿ ತಿಂಗಳ ತೆರಿಗೆಯಲ್ಲಿ ಶೇ.2 ಹಾಗೂ ವಾರ್ಷಿಕ ಶೇ.24 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಅದ್ದರಿಂದ ಸಾರ್ವಜನಿಕರು ಏಪ್ರಿಲ್ ತಿಂಗಳ ಶೇ.5ರ ರಿಯಾಯಿತಿಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನೀರಿನ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಿ ನಳದ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಸಕಾಲ ಯೋಜನೆಯಡಿಯಲ್ಲಿ ನಮೂನೆ-3, ನವೀಕರಣ ಹಾಗೂ ಹಕ್ಕುಬದಲಾವಣೆಗೆ ಸಂಬಂಧಿಸಿದಂತೆ ಅಗತ್ಯ ದಾಖಲಗಳೊಂದಿಗೆ ಸಲ್ಲಿಸಿದಲ್ಲಿ ನಿಗಧಿತ ಸಮಯದಲ್ಲಿ ವಿಲೇಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
10 ಲಕ್ಷದ ಅನುದಾನದಲ್ಲಿ ಕೈಲಾಸರಥವನ್ನು ಖರೀದಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು. ಇದರಲ್ಲಿ ಮರಣ ನೋಂದಣಿ ಪ್ರಮಾಣ ಪತ್ರ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ರೂ.50 ಲಕ್ಷದ ಅನುದಾನದಲ್ಲಿ ವಾಲ್ಮಿಕಿ ಸರ್ಕಲ್, ಸಾಯಿಬಾಬಾ ಸರ್ಕಲ್ ಹಾಗೂ ಸೊಗಿ ಮಾರ್ಕೆಟ್ ಸರ್ಕಲ್‍ಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಮನ್ಸೂರ್ ಅಲಿ, ಯೋಜನಾ ನಿರ್ದೇಶಕ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷರು ತಾರಿಹಳ್ಳಿ ಜಂಬುನಾಥ ಹಾಗೂ ನಗರಸಭೆಯ ಸದಸ್ಯರು ಇದ್ದರು.

LEAVE A REPLY

Please enter your comment!
Please enter your name here