ಸುಳ್ಳುಜಾತಿ ಪ್ರಮಾಣ ಪತ್ರ ಬಾಧಿತರು ದೂರು ನೀಡಿದರೆ ತ್ವರಿತ ಕ್ರಮ -ಜಿಲ್ಲಾಧಿಕಾರಿ ನಿತೇಶ ಪಾಟೀಲ

0
164

ಧಾರವಾಡ.ಜು.26: ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರಿರುವ ಸಮುದಾಯಗಳ ವ್ಯಕ್ತಿಗಳು ಖೊಟ್ಟಿ ದಾಖಲೆಗಳನ್ನು ನೀಡಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದರೆ ಅಂತಹ ಪ್ರಕರಣಗಳಲ್ಲಿ ಬಾಧಿತರಾದವರು ದೂರು ನೀಡಿದರೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ತಿದ್ದುಪಡಿ ಅಧಿನಿಯಮ 1990

ಕಲಂ 4 (ಎಫ್) ಅಡಿ ಪುನರ್ ಪರಿಶೀಲನೆ ಮಾಡಿ ಕಾನೂನು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು 2021 ನೇ ಸಾಲಿನ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 2ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರವಾಡ ಹಾಗೂ ಕಲಘಟಗಿ ತಾಲೂಕುಗಳಲ್ಲಿ ವಿತರಣೆಯಾದ 6 ಬೇಡರ ಜಂಗಮ ಜಾತಿ ಪ್ರಮಾಣಪತ್ರಗಳು ಖೊಟ್ಟಿಯಾಗಿವೆ ಎಂಬ ಆರೋಪಗಳನ್ನು ಆಧರಿಸಿ ಉಪವಿಭಾಗಾಧಿಕಾರಿಗಳ ಹಂತದಲ್ಲಿ ವಿಚಾರಣೆ ನಡೆದಿದೆ. ಈ ಮೇಲ್ಮನವಿ ಪ್ರಕರಣಗಳಲ್ಲಿ ಒಬ್ಬರು ಉಚ್ಛನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಅಥವಾ ಬಾಧಿತರು ಈ ಸುಳ್ಳು ಜಾತಿ ಪ್ರಮಾಣ ಪತ್ರಗಳ ಕುರಿತು ಲಿಖಿತ ದೂರು ಸಲ್ಲಿಸಬಹುದು ಎಂದರು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ವಿಲೇವಾರಿಯಾದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ತ್ವರಿತ ಪರಿಹಾರ ವಿತರಿಸಬೇಕು. ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್ಕಾರದ ಅನುದಾನ ಪಡೆದು ಕಾರ್ಯನಿರ್ವಹಿಸುತ್ತಿರುವುದರಿಂದ ಅಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ರೋಸ್ಟರ್ ಪಾಲಿಸಲಾಗುವುದು ಎಂದು ಸಂಸ್ಥೆಯು ಲಿಖಿತವಾಗಿ ತಿಳಿಸಿದೆ.

ಧಾರವಾಡ ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಟೆನೆಂಟ್ ಕೋ ಅಪರೇಟಿವ್ ಸೋಸೈಟಿಯು 1200 ಎಕರೆ ಜಮೀನು ಹೊಂದಿದೆ. ಇದರಲ್ಲಿ 57 ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರು ಸ್ಥಳೀಯವಾಗಿ ಸಾಗುವಳಿ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ. ಈ ಎಲ್ಲ 57 ಜನರ ಹೆಸರು, ಜಾತಿ ಹಾಗೂ ಹೊಂದಿರುವ ಭೂಮಿಯ ಕ್ಷೇತ್ರದ ವಿವರಗಳನ್ನು ಸಂಗ್ರಹಿಸಬೇಕು ಎಂದು ಸೂಚಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೇ ವಿಳಂಬ ನೀತಿ ಅನುಸರಿಸದೇ ಬಂಧಿಸಬೇಕು. ನ್ಯಾಯಾಂಗ ಇಲಾಖೆಯ ಸರ್ಕಾರಿ ಅಭಿಯೋಜಕರು ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಕಾನೂನು ಮಾರ್ಗದರ್ಶನ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯ ಒದಗಿಸಬೇಕು. ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯ ಅನೇಕ ಪೊಲೀಸ್ ಠಾಣೆಗಳಲ್ಲಿ ಕೆಳಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳು ಬಹುವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ. ಅವರ ಕರ್ತವ್ಯ ನಿರ್ವಹಣೆಯ ವ್ಯಾಪ್ತಿಯನ್ನು ಬದಲಾಯಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸೂಚಿಸಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಅಶೋಕ ದೊಡ್ಡಮನಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ನಿರಂತರವಾಗಿ ಸಾಗಿದೆ. ಎಸ್‍ಸಿ ಹಾಗೂ ಎಸ್‍ಟಿ ಕಾಲೋನಿಗಳ ಬಡಜನರು ಈ ದುಶ್ಚಟಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅಕ್ರಮ ಮದ್ಯಮಾರಾಟ ನಿಯಂತ್ರಿಸಬೇಕು ಎಂದರು.

ಡಾ: ಸುಭಾಷ ನಾಟೀಕಾರ ಮಾತನಾಡಿ, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯವು ಬೆಳಗಾವಿಯಲ್ಲಿದೆ. ಜಿಲ್ಲೆಯ ಹಾಗೂ ಸುತ್ತಲಿನ ಜಿಲ್ಲೆಗಳ ಜನರಿಗೆ ಅಲ್ಲಿಗೆ ತೆರಳಿ ದೂರು ದಾಖಲಿಸಲು ಅನಾನುಕೂಲವಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿರ್ದೇಶನಾಲಯದ ಶಾಖೆಯೊಂದನ್ನು ತೆರೆಯಬೇಕು ಎಂದರು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಬಿ. ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಮಂಜುನಾಥ ಡೊಳ್ಳಿನ, ಇಂದುಮತಿ ಶಿರಗಾಂವಕರ, ಸಿದ್ಧಲಿಂಗಪ್ಪ ಕರೆಮ್ಮನವರ, ಅರ್ಜುನ ವಡ್ಡರ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here