ವಿಜಯನಗರ ಜಿಲ್ಲಾ ಉತ್ಸವಕ್ಕೆ ಭರದ ಸಿದ್ಧತೆ,ಬೃಹತ್ ವೇದಿಕೆ ನಿರ್ಮಾಣ, ಸಾಮಾಜಿಕ ಜಾಲತಾಣ ಮೂಲಕವೂ ನೇರಪ್ರಸಾರ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ ಅ.2ರಂದು:ಖ್ಯಾತ ಕಲಾವಿದರ ಸಮಾಗಮ

0
161

ವಿಜಯನಗರಹೊಸಪೇಟೆ,ಸೆ.30: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ವಿಜಯನಗರ ಜಿಲ್ಲೆಯ ಅಧಿಕೃತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ವಿಜಯನಗರ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ ಇದೇ ಅ.2 ಮತ್ತು 3ರಂದು ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣ ರೀತಿಯಲ್ಲಿ ನಡೆಯಲಿದೆ. ಜಿಲ್ಲೆಯನ್ನು ನಾಡಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅ.2ರಂದು ಸಂಜೆ 6ಕ್ಕೆ ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ 464 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮತ್ತು ಶಂಕುಸ್ಥಾಪನೆ ನೇರವೇರುವುದರ ಮೂಲಕ ಜಿಲ್ಲೆಯ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯಲಾಗುತ್ತಿದೆ. ಇದಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಸಿದ್ದತೆಗಳು ಭರದಿಂದ ಸಾಗಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.
ವಿಜಯನಗರ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನೆಗೆ ಸಂಬಂಧಿಸಿದಂತೆ ನಗರದ ಖಾಸಗಿ ಹೋಟಲ್ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಮತ್ತು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್ ಅವರು ಇದುವರೆಗಿನ ಸಿದ್ಧತೆಗಳು, ಕಾರ್ಯಕ್ರಮದ ರೂಪುರೇಷೆ,ಆಗಮಿಸುವ ಕಲಾವಿದರು ಸೇರಿದಂತೆ ಇನ್ನೀತರ ಮಾಹಿತಿಗಳನ್ನು ನೀಡಿದರು.
ಸಚಿವ ಆನಂದಸಿಂಗ್ ಅವರು ಮಾತನಾಡಿ ವಿಜಯನಗರ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅ.2 ರಂದು ಸಂಜೆ 6ಕ್ಕೆ ಉದ್ಘಾಟಿಸಲಿದ್ದಾರೆ. ವಿಜಯನಗರ ಜಿಲ್ಲೆ ರಚನೆ ಮತ್ತು ಘೋಷಣೆಗೆ ಕಾರಣೀಕರ್ತರಾದ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆನಂದಸಿಂಗ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯನಗರ ಜಿಲ್ಲೆಯ ಹೋರಾಟಕ್ಕೆ ಕೈಜೋಡಿಸಿದ ಮಠಾಧೀಶರು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವಿವಿಧ ಇಲಾಖೆಗಳ ಸಚಿವರು, ಸಂಸದರು ಮತ್ತು ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಜನ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದರು.
ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮವನ್ನು ಅತ್ಯಂತ ಸ್ಮರಣೀಯವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ವೈಭೋವಪೇರಿತವಾಗಿ ಮತ್ತು ಅಷ್ಟೇ ಅರ್ಥಪೂರ್ಣವಾಗಿ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ವಿಜಯನಗರ ಜಿಲ್ಲೆಯ ಉದ್ಘಾಟನೆಯ ಜೊತೆಗೆ ವಿಶ್ವಪಾರಂಪರಿಕ ತಾಣವಾಗಿರುವ ಹಂಪಿಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚಾರ ಸಿಗುವುದಕ್ಕೊಸ್ಕರ ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಜ್ಯದ ಇತರೆಡೆ ಇರುವ ಪ್ರವಾಸಿ ಸ್ಥಳಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚುರಪಡಿಸುವ ಉದ್ದೇಶದ ಹೊಂದಲಾಗಿದೆ. ಕೊರೊನಾದಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಕಲಾವಿದರು ಮತ್ತು ತಂತ್ರಜ್ಞರಿಗೆ ಹಾಗೂ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವವರಿಗೆ ಈ ಕಾರ್ಯಕ್ರಮದ ಮೂಲಕ ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸುವುದಕ್ಕೆ ಉತ್ತೇಜನ ಮಾಡಿಕೊಡಲಾಗುತ್ತಿದೆ ಎಂದು ಸಚಿವ ಆನಂದಸಿಂಗ್ ಅವರು ವಿವರಿಸಿದರು.
ಉದ್ಘಾಟನೆಗೂ ಮುನ್ನ ಬೆಳಗ್ಗೆ ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜ್ಯೋತಿಗಳನ್ನು ಹೊತ್ತುತರಲಾಗುತ್ತಿದ್ದು, ನಗರದ ಧ್ವಜದ ಕಟ್ಟೆ ಮುಂಭಾಗ(ಶಾನ್‍ಬೋಗ ವೃತ್ತ)ದಲ್ಲಿ ನಿರ್ಮಿಸಲಾಗಿರುವ ಕುಂಡದಲ್ಲಿ ಜ್ಯೋತಿ ಪ್ರಜ್ವಲಿಸಲಾಗುತ್ತದೆ ಎಂದರು.
*ವಿಜಯನಗರ ವೈಭವದಲ್ಲಿ 80 ಕಲಾತಂಡಗಳು ಭಾಗಿ;ನಾಡಿನ ವೈವಿಧ್ಯಮಯ ಕಲೆ ಅನಾವರಣ: ಅ.2ರಂದು ಸಂಜೆ 4ಕ್ಕೆ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ವಿಜಯನಗರ ವೈಭವ ಮೆರವಣಿಗೆ ನಡೆಯಲಿದ್ದು, ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಲಿದೆ. ಸ್ಥಳೀಯ ಕಲಾವಿದರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ 80 ಕಲಾತಂಡಗಳ ಕಲಾವಿದರು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಸಚಿವ ಆನಂದಸಿಂಗ್ ಅವರು ವಿವರಿಸಿದರು.
ಪೂಜಾಕುಣಿತ, ಪಟಕುಣಿತ, ಗೊಂಬೆಕುಣಿತ, ಚಿಟ್ಟೆ ಮೇಳ, ಚಂಡಿವಾದ್ಯ, ಮಹಿಳಾ ಕಾಳಿ ಕುಣಿತ, ಮಹಿಳಾ ವೀರಗಾಸೆ, ನಗಾರಿ ವಾದ್ಯ, ಕಂಸಾಳೆ, ಜಗ್ಗಲಗಿ ಕುಣಿತ, ಡೊಳ್ಳು ಕುಣಿತ, ಕರಡಿ ಮಜಲು, ಹುಲಿವೇಷ, ಝಾಂಜ್ ಮೇಳ, ನವಿಲು ಕುಣಿತ, ತಾಷರಂಡೋಲ್, ಹಲಗೆ ವಾದನ, ವೀರಗಾಸೆ, ನಾದಸ್ವರ ವಾದನ, ಕಹಳೆ ವಾದನ, ಹಗಲುವೇಷಗಾರಿಕೆ, ಬೇಡರ ವೇಷ, ಉರುಮೆ ವಾದ್ಯ, ಕೋಲಾಟ, ಗೊರವರಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ ಎಂದರು.
ಈ ಕಲಾತಂಡಗಳ ಜೊತೆಗೆ ಆಳ್ವಾಸ್ ಸಂಸ್ಥೆಯ 25 ಜನಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಿದ್ದಾರೆ. ಈ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಸಿಂಗರಿಸಿದ ನಾಡದೇವತೆ ಭುವನೇಶ್ವರಿ ಮೂರ್ತಿಯ ಹಾಗೂ ಇನ್ನೊಂದು ತೆರೆದ ವಾಹನದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣದೇವರಾಯ ಮತ್ತು ಅವರ ದರ್ಬಾರ್(ಆಸ್ಥಾನ ಕವಿಗಳು),ವಿದ್ಯಾರಣ್ಯ ಶ್ರೀಗಳು ಹಾಗೂ ಇನ್ನೀತರ ಪ್ರಮುಖರ ವೇಷಧಾರಿಗಳಿರಲಿದ್ದಾರೆ ಎಂದರು.
*ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದಿಂದ ಭವ್ಯ ಸ್ವಾಗತ: ಅ.2ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೇದಿಕೆಗೆ ಆಗಮಿಸಲಿದ್ದಾರೆ. ಹಕ್ಕ-ಬುಕ್ಕರ ಮಹಾದ್ವಾರದ ಮೂಲಕ ಆಗಮಿಸುವ ಮಾನ್ಯ ಮುಖ್ಯಮಂತ್ರಿಗಳು ಮತ್ತು ನಿಕಟಪೂರ್ವ ಮುಖ್ಯಮಂತ್ರಿಗಳಿಗೆ ಭವ್ಯವಾದ ಸ್ವಾಗತವನ್ನು ಜಿಲ್ಲಾಡಳಿತದಿಂದ ಕೋರಲಾಗುತ್ತದೆ ಎಂದು ಸಚಿವ ಆನಂದಸಿಂಗ್ ಅವರು ವಿವರಿಸಿದರು.
ಅ.2ರಂದು ಗಾಂಧಿ ಜಯಂತಿ ಮತ್ತು ಲಾಲ್‍ಬಹುದ್ದೂರ್ ಶಾಸ್ತ್ರೀ ಜಯಂತಿ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ದಿಂ.ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಭಾವಚಿತ್ರಗಳಿಗೆ ಇದೇ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತದೆ. ಸರ್ವಧರ್ಮಿಯ ಪ್ರಾರ್ಥನೆಯನ್ನು ಇದೇ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದರು.
ವೇದಿಕೆ ಕಾರ್ಯಕ್ರಮದಲ್ಲಿ ನೂತನ ವಿಜಯನಗರ ಜಿಲ್ಲೆಯಲ್ಲಿ ಕಚೇರಿಗಳ ಸ್ಥಾಪನೆ ಕುರಿತು ಕೆಲ ಸರಕಾರಿ ಆದೇಶಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ. ಸರಕಾರಿ ಆದೇಶಗಳು ಬಿಡುಗಡೆ ಮಾಡುವ ಮೂಲಕ ವಿಜಯನಗರ ಜಿಲ್ಲೆಯ ಆಡಳಿತಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ವೇದಿಕೆ ಪಕ್ಕದಲ್ಲಿ 30 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಸರಕಾರದ ವಿವಿಧ ಇಲಾಖೆಗಳು ಹಾಗೂ ಸ್ವ-ಸಹಾಯ ಸಂಘ ಸಂಸ್ಥೆಗಳ ಬಳ್ಳಾರಿ ಜಿನ್ಸ್,ಇಲಕಲ್ ಸೀರೆಗಳು, ಚನ್ನಪಟ್ಟಣದ ಗೊಂಬೆಗಳು, ಕೈಮಗ್ಗಗಳಿಂದ ತಯಾರಿಸಿದ ವಸ್ತ್ರಗಳು ಹಾಗೂ ಇನ್ನೀತರ ಮಳಿಗೆಗಳಿರಲಿವೆ ಎಂದರು.
ಪ್ರಧಾನ ವೇದಿಕೆಗೆ ವಿದ್ಯಾರಣ್ಯರ ಹೆಸರಿಡಲಾಗಿದ್ದು, 180*70 ಅಡಿ ಬ್ಯಾಕ್‍ಡ್ರಾಪ್‍ಇದೆ. ಮಳೆ,ಗಾಳಿ ಮತ್ತು ಬೆಂಕಿ ತಗುಲಿದರೂ ಏನು ಆಗದ ಜರ್ಮನ್ ತಂತ್ರಜ್ಞಾನ ಹೊಂದಿರುವ ಮೇಲು ಹೊದಿಕೆಯನ್ನು ಹಾಕಲಾಗುತ್ತಿದೆ. ವೇದಿಕೆ ಹಿಂಭಾಗ ವಿರೂಪಾಕ್ಷ ಗೋಪುರ, ಕಲ್ಲಿನರಥ ಮತ್ತು ಉಗ್ರನರಸಿಂಹ ವಿನ್ಯಾಸ ಸಿದ್ದಪಡಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ
ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅ.2ರಂದು ಸಂಜೆ ಉದ್ಘಾಟಿಸುವುದರ ಜೊತೆಗೆ ಇದೇ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಚಿವ ಆನಂದಸಿಂಗ್ ಅವರು ವಿವರಿಸಿದರು.
ಹೊಸಪೇಟೆ ನಗರದ ಹಂಪಿ ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗೆ ( ಬೈಪಾಸ್ ) ಚತುಷ್ಪಥರಸ್ತೆ ನಿರ್ಮಾಣ 11 ಕೋಟಿ ರೂ., ಹೊಸಪೇಟೆ ನಗರದಲ್ಲಿ 60 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ 11 ಕೋಟಿ ರೂ., ಹೊಸಪೇಟೆಯ ಜೋಳದರಾಶಿ ಗುಡ್ಡದ ಅಭಿವೃದ್ಧಿ ಕಾಮಗಾರಿ 10 ಕೋಟಿ ರೂ., ಹೊಸಪೇಟೆ ತಾಲೂಕು ಹಂಪಿಯಿಂದ ವಯಾ ಕಮಲಾಪುರ ಪಾಪಿನಾಯಕನಹಳ್ಳಿ ವರೆಗೆ ರಸ್ತೆ ಅಭಿವೃದ್ಧಿ 10ಕೋಟಿ ರೂ., ಹೊಸಪೇಟೆ ನಗರದಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆ 09 ಕೋಟಿ ರೂ., ಹೊಸಪೇಟೆ ತಾಲೂಕು ವೆಂಕಟಾಪುರದಿಂದ ಪಂಪಾ ವಿದ್ಯಾಪೀಠ ವಿಜಯನಗರ ಕ್ಷೇತ್ರದ ಕೊನೆಯ ಭಾಗದವರೆಗೆ ರಸ್ತೆ ಅಭಿವೃದ್ಧಿ 8.25 ಕೋಟಿ ರೂ. ಕಾಮಗಾರಿಗಳು ಸೇರಿದಂತೆ 24 ಕಾಮಗಾರಿಗಳು ರೂ. 99.66 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಸದರಿ ಕಾಮಗಾರಿಗಳನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರು ಉದ್ಘಾಟಿಸಲಿದ್ದಾರೆ.
ಹೊಸಪೇಟೆ ನಗರದ ಹೊಸಪೇಟೆ- ಬಳ್ಳಾರಿ ರಸ್ತೆ ಎಚ್‍ಎಲ್‍ಸಿ ಕಾಲುವೆಯಿಂದ ಇಂಗಳಗಿ ಕ್ರಾಸ್‍ವರೆಗೆ ರಸ್ತೆ ಅಭಿವೃದ್ಧಿ 30ಕೋಟಿ ರೂ. ವೆಚ್ಚದಲ್ಲಿ, ಹಂಪಿ ರಸ್ತೆಯ ಅನಂತಶಯನ ಗುಡಿಯಿಂದ ಕಮಲಾಪುರದವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿ 30ಕೋಟಿ ರೂ.ವೆಚ್ಚದಲ್ಲಿ, ಹೊಸಪೇಟೆ ನಗರದಲ್ಲಿ 250 ಹಾಸಿಗೆ ಆಸ್ಪತ್ರೆ ನಿರ್ಮಾಣ 105ಕೋಟಿ ರೂ. ವೆಚ್ಚದಲ್ಲಿ, ಹೊಸಪೇಟೆ ನಗರದ ಅನಂತಶಯನ ಗುಡಿ ರೈಲ್ವೆ ಗೇಟ್‍ಗೆ ಮೇಲು ಸೇತುವ ನಿರ್ಮಾಣ 26 ಕೋಟಿ ರೂ.ವೆಚ್ಚದಲ್ಲಿ, ಹೊಸಪೇಟೆ ನಗರದಲ್ಲಿ ಬಾಲಕಿಯರ ಶಾಲೆ, ಬಾಲಕಿಯರ ಪದವಿ ಪೂರ್ವ ಕಾಲೇಜ್ ಮತ್ತು ಮುನ್ಸಿಪಲ್ ಬಾಲಕಿಯರ ಶಾಲೆ ಕಟ್ಟಡ 24 ಕೋಟಿ ರೂ. ಸೇರಿದಂತೆ ರೂ.364.22 ಕೋಟಿ ವೆಚ್ಚದ ಒಟ್ಟು 55 ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಖ್ಯಾತ ಕಲಾವಿದರ ಸಮಾಗಮ
ಅ.2 ಮತ್ತು ಅ.3ರಂದು ಎರಡು ದಿನಗಳ ಕಾಲ ನಡೆಯಲಿರುವ ವಿಜಯನಗರ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರು ಸಮಾಗಮಗೊಳ್ಳಲಿದ್ದು, ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.
ಅ.2 ರಂದು ಖ್ಯಾತ ಡ್ರಮ್ಮರ್ ಶಿವಮಣಿ, ರಾಜೇಶ ವೈದ್ಯ ಮತ್ತು ಪ್ರವೀಣಗೋಡ್ಖಿಂಡಿ ಅವರು ರಾತ್ರಿ 10ಕ್ಕೆ ವಾದ್ಯ ಸಂಗೀತ ರಸದೌತಣವನ್ನು ಸಂಗೀತ ಪ್ರೇಮಿಗಳಿಗೆ ಉಣಬಡಿಸಲಿದ್ದಾರೆ.
ಸೋಜುಗದ ಸೂಜಿಮಲ್ಲಿಗೆ ಖ್ಯಾತಿಯ ಅನನ್ಯಭಟ್ ಅವರು ಲಘುಶಾಸ್ತ್ರೀಯ ಮತ್ತು ಭಕ್ತಿ ಸಂಗೀತವನ್ನು ಪ್ರಸ್ತುತ ಪಡಿಸಲಿದ್ದಾರೆ. ಕಲಾವಿದರಾದ ಕಲಾವತಿದ ಯಾನಂದಅವರಿಂದ ಲಘುಶಾಸ್ತ್ರೀಯ ಮತ್ತು ಚಲನ ಚಿತ್ರಗೀತೆಗಳು, ಶಹನಾಜ್‍ಅಖ್ತರ್‍ಅವರುದೇಶಭಕ್ತಿ ಆಶುಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ನಿರುಪಮ ಮತ್ತು ರಾಜೇಂದ್ರ ಅವರ ಅಭಿನವ ಡಾನ್ಸ್ ಕಂಪೆನಿ ವತಿಯಿಂದ ವಿಜಯನಗರ ವೈಭವ-ನೃತ್ಯರೂಪಕ ಪ್ರಸ್ತುತ ಪಡಿಸಲಾಗುತ್ತದೆ. ಎಂ.ಡಿ.ಪಲ್ಲವಿ ಅವರು ದೇಶಭಕ್ತಿ ಗೀತೆಗಳು ಮತ್ತು ಭಾವಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸವಿತಾ ಅವರು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಅ.3ರಂದು ಕನ್ನೇ ಅದಿರಿಂದಿ (ಕಣ್ಣು ಹೊಡಿಯಾಕ) ಹಾಡು ಖ್ಯಾತಿಯ ಗಾಯಕಿ ಮಾಂಗ್ಲಿ ಅವರು ಜಾನಪದ ಮತ್ತು ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಖ್ಯಾತ ಗಾಯಕರಾದ ಅನುರಾಧಾ ಭಟ್, ಶಮಿತಾ ಮಲ್ನಾಡ್ ಅವರು ಚಲನಚಿತ್ರ ಗೀತೆಗಳನ್ನು ತಮ್ಮ ಕಂಠದಿಂದ ಪ್ರಸ್ತುತ ಪಡಿಸುವ ಮೂಲಕ ಮೋಡಿ ಮಾಡಲಿದ್ದಾರೆ.
ಖ್ಯಾತ ಗಾಯಕರಾದ ವಿಜಯಪ್ರಕಾಶ್ ಮತ್ತು ಅವರ ತಂಡವು ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಲಕ್ಷ್ಮೀದುಬೆ ಮತ್ತು ತಂಡದವರು ದೇಶಭಕ್ತಿ ಮತ್ತು ಆಶು ಗೀತೆಗನ್ನಾಡಲಿದ್ದಾರೆ. ಮಂಜುಳಾ ಪರಮೇಶ ಮತ್ತು ತಂಡದವರು ನೃತ್ಯರೂಪಕ ಪ್ರಸ್ತುತ ಪಡಿಸಲಿದ್ದಾರೆ.
ಸಂಜೆ 4:30 ರಿಂದಲೇ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸ್ಥಳೀಯ ಕಲಾವಿದರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಸ್ಥಳೀಯ ಗಾಯಕಿ ಸರಿಗಮಪ ಸೂಪರ್ ಸಿಂಗರ್ ರನ್ನರ್‍ಅಪ್ ಮೀರಾ ಹಾಗೂ ಇನ್ನೋರ್ವ ಗಾಯಕಿ ಭೂಮಿಕಾ ಅವರು ಭಾಗವಹಿಸಲಿದ್ದಾರೆ ಎಂದು ಸಚಿವ ಸಿಂಗ್ ಅವರು ವಿವರಿಸಿದರು.
ಹಬ್ಬದ ರೀತಿಯಲ್ಲಿ ವಿಜಯನಗರ ಉತ್ಸವ ಆಚರಿಸಿ
ವಿಜಯನಗರ ಉತ್ಸವವನ್ನು ಜಿಲ್ಲೆಯ ಜನರು ಮನೆಯ ಹಬ್ಬದಂತೆ ಆಚರಿಸಬೇಕು. ವಿಜಯನಗರ ಜಿಲ್ಲೆಯ ಉದ್ಘಾಟನಾ ದಿನವಾದ ಅ.2ರಂದು ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಯ ಎದುರುಗಡೆ ರಂಗೋಲಿ ಹಾಕಬೇಕು ಮತ್ತು ಸಿಹಿ-ತಿಂಡಿಗಳನ್ನು ಮಾಡಬೇಕು ಎಂದು ಸಾರ್ವಜನಿಕರಲ್ಲಿ ಸಚಿವ ಆನಂದಸಿಂಗ್ ಅವರು ಮನವಿ ಮಾಡಿದ್ದಾರೆ.
ಹೊಸಪೇಟೆ ನಗರ ಸಭೆಯಿಂದ ಇಡೀ ನಗರವನ್ನು ವಿದ್ಯುತ್ ದೀಪಾಲಂಕರಗಳಿಂದ ಅಲಂಕರಿಸಲಾಗುತ್ತದೆ ಮತ್ತು ಉದ್ಯಮಿಗಳು ತಮ್ಮ ವಾಣಿಜ್ಯ ಮಳಿಗೆಗಳನ್ನು ಅ.2 ಮತ್ತು 3ರಂದು ದೀಪಾಲಂಕಾರ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮವನ್ನು ನಗರದ ಮೂರು ಕಡೆ ಬೃಹತ್ ಎಲ್‍ಇಡಿ ಪರದೆ ಮೂಲಕ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ವಿಶಾಲ ಮೈದಾನದಲ್ಲಿ ಹಾಕಲಾಗಿರುವ ಎಲ್‍ಇಡಿ ಪರದೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತಿದೆ ಮತ್ತು ಇದರ ಜೊತೆಗೆ ವಿಜಯನಗರ ಉತ್ಸವದ ಕಾರ್ಯಕ್ರಮವನ್ನು ಯೂಟ್ಯೂಬ್ ಲಿಂಕ್ ಮತ್ತು ಫೇಸ್‍ಬುಕ್ ಲಿಂಕ್ ಮೂಲಕವೂ ಪ್ರಸಾರ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಕೇವಲ ಹೊಸಪೇಟೆ ತಾಲೂಕಿಗೆ ಸೀಮಿತವಾಗದೇ ಎಲ್ಲ ತಾಲೂಕುಗಳಲ್ಲಿ ಪ್ರಸಾರವಾಗಬೇಕು ಎಂಬ ಸದುದ್ದೇಶದಿಂದ ಎಲ್ಲ ತಾಲೂಕುಗಳ ವಿಶಾಲ ಮೈದಾನದಲ್ಲಿ ಎಲ್‍ಇಡಿ ಪರದೆ ಮೂಲಕ ಕಾರ್ಯಕ್ರಮ ಭಿತ್ತರಿಸಲಾಗುತ್ತಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರು ಹೊರಗಡೆ ಬರದೇ ಮನೆಯಲ್ಲಿಯೇ ಕುಳಿತುಕೊಂಡು ಯೂಟ್ಯೂಬ್ ಮತ್ತು ಫೇಸ್‍ಬುಕ್ ಲಿಂಕ್ ಮೂಲಕ ನೋಡುವಂತೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಮತ್ತು ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮುಂಚೆ ಆಗಮಿಸಿಕೊಂಡು ಸಾಮಾಜಿಕ ಅಂತರ ಪಾಲಿಸಿಕೊಂಡು ಕುಳಿತುಕೊಳ್ಳಬೇಕು ಎಂದರು.
ಅ.3 ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರಾದ ರಾಜೀವ್‍ಚಂದ್ರಶೇಖರ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ನಾಡಿನ ವಿವಿಧ ಮಠಾಧೀಶರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅ.3ರಂದು ಸಂಜೆ ಎತ್ತಿನಗಾಡಿ ಜಾಥಾಗೆ ಕಾಳಮ್ಮ ದೇವಸ್ಥಾನ ಬಳಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಚಾಲನೆ ನೀಡಲಿದ್ದಾರೆ. ಆರೋಗ್ಯಪೂರ್ಣ ಹಾಗೂ ಅತ್ಯುತ್ತಮವಾಗಿ ಸಿಂಗರಿಸಿದ ಎತ್ತುಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ಸಚಿವ ಆನಂದಸಿಂಗ್ ಅವರು ವಿವರಿಸಿದರು.
*ವಿಜಯನಗರ ಉತ್ಸವಕ್ಕೆ ರೂ.4ಕೋಟಿ ಅನುದಾನ ಬಿಡುಗಡೆ: ವಿಜಯನಗರ ಉತ್ಸವಕ್ಕೆ 4 ಕೋಟಿ ರೂ.ಅನುದಾನವನ್ನು ಸರಕಾರ(ಪ್ರವಾಸೋದ್ಯಮ ಇಲಾಖೆ) ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿಯೇ ವೇದಿಕೆ ನಿರ್ಮಾಣ,ಕಲಾವಿದರ ಸಂಭಾವನೆ,ವಾಸ್ತವ್ಯ,ಸಾರಿಗೆ ವೆಚ್ಚ ಸೇರಿದಂತೆ ಎಲ್ಲ ರೀತಿಯ ವೆಚ್ಚಗಳನ್ನು ಭರಿಸಲಾಗುತ್ತಿದೆ. ಸರಕಾರದಿಂದ ಬಿಡುಗಡೆ ಮಾಡಲಾಗಿರುವ ಅನುದಾನ ಮತ್ತು ವೆಚ್ಚವನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುತ್ತಿದ್ದು,ನಂತರ ಆಡಿಟ್ ಮಾಡಿಸಲಾಗುವುದು ಎಂದು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್ ಅವರು ಹೇಳಿದರು.
ಪ್ರಧಾನ ವೇದಿಕೆ ಮುಂಭಾಗ ಕಾರ್ಯಕ್ರಮ ವೀಕ್ಷಿಸಲು 2 ಸಾವಿರ ಆಸನಗಳ ಸಾಮಥ್ರ್ಯ ಮಾಡಲಾಗಿದೆ.ವಿಐಪಿ ಮತ್ತು ವಿವಿಐಪಿಗಳಿಗೆ ಪಾಸ್ ವಿತರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಎಂದು ಹೇಳಿದ ಅವರು ಈ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದರು.
ಈ ಜಿಲ್ಲೆಗೆ ಪ್ರವಾಸೋದ್ಯಮವೇ ಬೆನ್ನುಲುಭಾಗಬೇಕು ಮುಂದಿನ ದಿನಗಳಲ್ಲಿ ಎಂಬ ದೃಷ್ಟಿಯಿಂದ ಈ ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಆನಂದಸಿಂಗ್ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ತಹಸೀಲ್ದಾರ್ ವಿಶ್ವನಾಥ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here