ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಆರೋಗ್ಯ ಕಾಳಜಿಗಾಗಿ ನಾವು ಸ್ವಾರ್ಥಿಗಳಾಗೋಣ : ಪೂಜಾರ ವೀರಮಲ್ಲಪ್ಪ.

0
122

ದಾವಣಗೆರೆ ಅ.01:ಹಿರಿಯ ನಾಗರೀಕರು ಕುಟುಂಬದಲ್ಲಿ ಕಲಹಗಳ ಬಗ್ಗೆ ಗಮನ ಕೊಡದೆ ನಿಮ್ಮ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯನ್ನು ನೀವೇ ಕಾಪಾಡಿಕೊಳ್ಳಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಗಾಗಿ ನೀವು ಸ್ಪಾರ್ಥಿಗಳಾಗಬೇಕು. ನಮ್ಮ ಸಲುವಾಗಿ ನಾವು ಬದುಕುವುದನ್ನು ರೂಢಿಸಿಕೊಳ್ಳುತ್ತೇವೆ ಎಂಬ ಪ್ರತಿಜ್ಞೆ ಮಾಡಬೇಕು. ಆಗ ಮಾತ್ರ ನಾವು ಸಂತೋಷವಾಗಿರಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಹಿರಿಯ ನಾಗರಿಕರ ಸಂಘ ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳು ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳ ಮಠದಲ್ಲಿ ಜರುಗಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರ ಕಾರ್ಯಕ್ರಮಕ್ಕೆ ಹಿರಿಯರೇ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿರುವುದು ಸ್ಪರ್ಧಾತ್ಮಕ ಮನೋಭಾವ ಹಾಗೂ ಹಿರಿಯ ನಾಗರಿಕರಲ್ಲಿ ಸ್ಪೂರ್ತಿ ಕಡಿಮೆಯಾಗಿಲ್ಲ ಎಂಬುದನ್ನು ತೋರಿಸುತ್ತದೆ. ಹಿರಿಯ ನಾಗರಿಕರಲ್ಲಿ ಇನ್ನೂ ಸ್ಪೂರ್ತಿ ಇದೆ, ಚಟುವಟಿಕೆಗಳಲ್ಲಿ ಭಾಗವಹಿಸಿತಿದ್ದೀರಿ, ಇಂದಿನ ದಿನಮಾನಗಳಲ್ಲಿ ಹಿರಿಯ ನಾಗರಿಕರನ್ನು ಸಮಾಜ ಹೇಗೆ ನೊಡುತ್ತಲಿದೆ ಹೇಗೆ ಗೌರವಿಸುತ್ತಿದೆ ಎಂಬುದನ್ನು ಕಂಡಾಗ ನೋವುಂಟಾಗುತ್ತದೆ. ನೀವು ನಿಮ್ಮ ಉಳಿದ ದಿನಗಳನ್ನು ಉತ್ತಮವಾಗಿ, ಹೇಗೆ ಕಳೆಯಬೇಕು ಎಂಬುದನ್ನು ನಿರ್ಧರಿಸಿ ಎಂದು ಕಿವಿಮಾತು ಹೇಳಿದರು.
60 ವರ್ಷ ಮೇಲ್ಪಟ್ಟ ನಾಗರಿಕರ ಸೇವೆಗಾಗಿ ಸರ್ಕಾರವು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೂಲಕ ವಿವಿಧ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಹಿರಿಯ ನಾಗರಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇವೆಗಳ ಉಪಯೋಗವನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ಅಧಿಕಾರಿಗಳ ಮೂಲಕ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು. ಹಿರಿಯ ನಾಗರಿಕರ ಬೇಡಿಕೆಗಳನ್ನು ಸಚಿವರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ ಮಾತನಾಡಿ, ಇಂದು ಯುವ ಪೀಳಿಗೆ ಹಿರಿಯ ನಾಗರಿಕರಿಗೆ ಉತ್ತಮ ಗೌರವ ನೀಡುತ್ತಿಲ್ಲ. ವಿದ್ಯಾವಂತರೇ ತಂದೆ ತಾಯಿಗಳನ್ನು ಅನಾಥಾಶ್ರಮ ಸೇರಿಸುತಿದ್ದಾರೆ. ಯುವಜನತೆ ನಾವು ಸಹ ಮುಂದೆ ಹಿರಿಯ ನಾಗರಿಕರಾಗುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಹಿರಿಯರು ಒಳ್ಳೆಯ ನಾಲ್ಕು ಮಾತುಗಳನ್ನು ನಿರೀಕ್ಷಿಸುತ್ತಾರೆ, ಯುವ ಜನತೆ ಆಧುನೀಕತೆಯ ಗೀಳಿಗೆ ಬೀಳದೆ ಹಿರಿಯರನ್ನು ಗೌರವಿಸಬೇಕು. ಹೆಚ್ಚಿನ ಹಿರಿಯ ನಾಗರಿಕರಿಗೆ ತಮಗಿರುವ ಹಕ್ಕುಗಳ ಬಗ್ಗೆ ತಿಳಿದಿರುವುದಿಲ್ಲ ಅಂತಹವರಿಗೆ ಆಪ್ತ ಸಮಾಲೋಚನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಮಕ್ಕಳು ಮತ್ತು ಸೊಸೆಯಂದಿರಿಗೆ ಮಕ್ಕಳಾಗಿ, ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಸಂತೋಷದಿಂದ ಸಮಯ ಕಳೆಯಬೇಕು. ಇಂದಿನ ಆಧುನಿಕ ಯುವಕ ಯುವತಿಯರು ಅವಿಭಕ್ತ ಕುಟುಂಬವನ್ನು ಇಷ್ಟಪಡುವುದಿಲ್ಲ. ಮಕ್ಕಳು ನಾವು ಹೇಳಿದಂತೆ ಕೇಳಬೇಕು ಎಂಬ ಭಾವನೆಯನ್ನು ಬಿಟ್ಟು ಹೊಂದಿಕೊಂಡು ಬಾಳುವುದನ್ನು ರೂಢಿಸಿಕೊಳ್ಳಬೇಕು, ಆಗ ಮಾತ್ರ ಮನೆಯಲ್ಲಿ ಮಕ್ಕಳೊಂದಿಗೆ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.
ಜಿಲ್ಲಾ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಎಸ್. ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು 14 ನೇ ವಿಶ್ವ ಹಿರಿಯ ನಾಗರಿಕ ದಿನಾಚರಣೆಯನ್ನು ಸರ್ಕಾರದ ಸಹಯೋಗದೊಂದಿಗೆ ಆಚರಿಸುತ್ತಿದ್ದೇವೆ. ಈವರೆಗೆ ನಮ್ಮ ಸಂಘದಲ್ಲಿ 1684 ಅಜೀವ ಸದಸ್ಯತ್ವ ನೋಂದಣಿಯಾಗಿದ್ದು, ಸರ್ಕಾರ ಇತ್ತೀಚಿಗೆ ಆನ್‍ಲೈನ್ ಮುಖಾಂತರ ಗುರುತಿನ ಚೀಟಿ ತಯಾರಿಸಿ ವಿತರಿಸುತ್ತಿದೆ. ಹಲವಾರು ತೊಡಕುಗಳಿಂದಾಗಿ ಹಿರಿಯ ನಾಗರಿಕರಿಗೆ ಅನೇಕ ಸಂದರ್ಭಗಳಲ್ಲಿ ತೊಂದರೆಯಾಗುತ್ತಿರುವುದು ಸಂಘದ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಸಂಬಂಧಿಸಿದ ಇಲಾಖೆಯವರು ಮುತುವರ್ಜಿ ವಹಿಸಿ, ತಾಂತ್ರಿಕ ತೊಂದರೆಗಳನ್ನು ಸರಿಪಡಿಸುವ ಮೂಲಕ ಹಿರಿಯರಿಗೆ ಗುರುತಿನ ಚೀಟಿ ಸರಾಗವಾಗಿ ಲಭ್ಯವಾಗುವಂತೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಹಿರಿಯ ನಾಗರಿಕರ ಸಂಘದ ನಿವೇಶನ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಬೇಕು. ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಹಿರಿಯ ನಾಗರಿಕರಿಗೆ ನೀಡುತ್ತಿರುವ ಶೇ.25 ರ ರಿಯಾಯಿತಿಯನ್ನು ಶೇ.50 ಕ್ಕೆ ಹೆಚ್ಚಿಸುವುದರ ಜೊತೆಗೆ ರಿಯಾಯಿತಿಯನ್ನು ಐರಾವತ ಮುಂತಾದ ಹವಾನಿಯಂತ್ರಿತ ಬಸ್ ಹಾಗೂ ಜಿಲ್ಲೆಯ ಪ್ರಮುಖ ಸಾರಿಗೆ ವ್ಯವಸ್ಥೆಯಾದ ಖಾಸಗಿ ಬಸ್‍ಗಳಲ್ಲಿಯೂ ವಿಸ್ತರಿಸಬೇಕು. ಬಸ್ ನಿಲ್ದಾಣಗಳಲ್ಲಿ, ಆಸ್ಪತ್ರೆ, ಬ್ಯಾಂಕ್, ರೈಲ್ವೆ ನಿಲ್ದಾಣ ಮತ್ತು ಇತರೆ ಜನದಟ್ಟಣೆ ಇರುವ ಸಾರ್ವಜನಿಕ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕೌಂಟರ್ ತೆರೆಯಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಎಸ್.ಟಿ. ಕುಸುಮಶ್ರೇಷ್ಠಿ ಮಾತನಾಡಿ, ಯಾವುದೇ ಮನೆಯಲ್ಲಿ ಹಿರಿಯರು ಇಲ್ಲದೆ ಅದು ಮನೆ ಎನಿಸುವುದಿಲ್ಲ, ಕಿರಿಯರಿಗೆ ಜೀವನಕ್ಕೆ ಹಿರಿಯರ ಮಾರ್ಗದರ್ಶನ ಅತ್ಯವಶ್ಯಕ. ಹಳೆಬೇರು ಹೊಸಚಿಗುರು ಎಂಬಂತೆ ಮನೆಯಲ್ಲಿ ಹಿರಿಯರ ಜೀವನದ ಅನುಭವಗಳು, ಏಳು-ಬೀಳುಗಳು ಮಾರ್ಗದರ್ಶನಗಳು ಕಿರಿಯರ ಜೀವನಕ್ಕೆ ಸ್ಫೂರ್ತಿಯಾಗುತ್ತದೆ. ಮನೆಯಲ್ಲಿ ಹಿರಿಯರನ್ನು ಕೀಳಾಗಿ ಕಾಣದೆ ಅವರನ್ನು ಮಕ್ಕಳಂತೆ ಪ್ರೀತಿಯಿಂದ ಆರೈಕೆ ಮಾಡಿ, ಅವರು ಜೀವನದಲ್ಲಿ ಸಂತೋಷವಾಗಿರಲು ಮನೆಯ ಕಿರಿಯರು ಸಹಕರಿಸಿದರೆ ಯಾವ ವೃದ್ಧಾಶ್ರಮದ ಅವಶ್ಯಕತೆ ಇರುವುದಿಲ್ಲ ಎಂದರು.
ದಿನಾಚರಣೆ ಅಂಗವಾಗಿ ಕಳೆದ ಸೆ.26 ರಂದು ಆಯೋಜಿಸಲಾಗಿದ್ದ ಹಿರಿಯ ನಾಗರೀಕರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ನಿವೃತ್ತ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್.ಶಶಿಧರ್, ಹಿರಿಯ ನಾಗರಿಕರಿಗೆ 100 ಗಿಡಗಳನ್ನು ಹಂಚಿದ ಪರಿಸರಪ್ರೇಮಿ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಬಿ ಸೋಮಶೇಖರ ಗೌಡ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆಯ ಅಧಿಕಾರಿ ಡಾ.ಕೆ.ಕೆ.ಪ್ರಕಾಶ್ ಹಾಗೂ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here