ಗ್ರಾ.ಪಂ.ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಪಿಡಿಒ ಗಳಿಗೆ ಒಂದು ದಿನ ತರಬೇತಿ ಕಾರ್ಯಗಾರ, ನರೇಗಾ ಯೋಜನೆ ಗ್ರಾಮೀಣ ಯುವಕರಿಗೆ ಸ್ವಾಭಿಮಾನ ಕಲಿಸಿಕೊಟ್ಟಿದೆ : ಸಚಿವ ಕೆ.ಎಸ್. ಈಶ್ವರಪ್ಪ

0
265

ದಾವಣಗೆರೆ , ಜುಲೈ23:ಕೋವಿಡ್ ಸಂಕಷ್ಟ ಕಾಲದಲ್ಲಿ ನಗರಗಳಿಂದ ಗ್ರಾಮಗಳಿಗೆ ಮರಳಿದ ಅನೇಕ ಯುವಕರಿಗೆ ಗ್ರಾಮೀಣ ಉದ್ಯೋಗಖಾತ್ರಿ ನರೇಗಾ ಯೋಜನೆ ಸ್ಥಳೀಯವಾಗಿ ಕೆಲಸ ನೀಡುವ ಮೂಲಕ ಆರ್ಥಿಕ ನೆರವು ನೀಡುವುದರ ಜೊತೆಗೆ ಸ್ವಾಭಿಮಾನದ ಬದುಕನ್ನೂ ಸಹ ಕಲಿಸಿಕೊಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.

75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಹಾಗೂ ಜಿಲ್ಲಾ ಪಂಚಾಯತಿ ಇವರುಗಳ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಭಿವೃದ್ಧಿ ವಿಷಯಗಳ ಕುರಿತು ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ ಒಂದು ದಿನದ ಕಾರ್ಯಗಾರದ ಸಮಾರೋಪ ಭಾಷಣ ಮಾಡಿದರು.

ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ನಗರಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಅನೇಕ ಇಂಜಿನಿಯರ್‍ಗಳು, ಪದವೀಧರರು ಗ್ರಾಮಗಳಿಗೆ ಮರಳಿದ್ದು, ಇಂತಹ ಅನೇಕರು ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿರುವ ನಿದರ್ಶನ ನಮ್ಮ ಮುಂದೆ ಇದೆ. ಕಳೆದ ವರ್ಷ ನರೇಗಾದಡಿ ರಾಜ್ಯಕ್ಕೆ 13 ಕೋಟಿ ಮಾನವದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಆದರೆ ಕಳೆದ ಡಿಸೆಂಬರ್ ನಲ್ಲಿಯೇ ಗುರಿ ಮೀರಿ ಸಾಧನೆ ಮಾಡಲಾಯಿತು. ಹೀಗಾಗಿ ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ಶಹಬ್ಬಾಸ್‍ಗಿರಿ ನೀಡಿ, ಇನ್ನೂ 2 ಕೋಟಿ ಹೆಚ್ಚುವರಿ ಮಾನವದಿನಗಳ ಸೃಜನೆಗೆ ಅವಕಾಶ ನೀಡಿ, 800 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿತ್ತು. ಹೀಗಾಗಿ ನರೇಗಾ ಯೋಜನೆ ಗ್ರಾಮೀಣರಿಗೆ ಆರ್ಥಿಕ ಸಬಲತೆ ನೀಡುವುದರ ಜೊತೆಗೆ ಸ್ವಾಭಿಮಾನದ ಬದುಕನ್ನೂ ನೀಡಿದೆ. ಈ ಯೋಜನೆಯಡಿ ಶಾಲಾ ಕಾಂಪೌಂಡ್, ತೋಟಗಾರಿಕೆ ವಿಸ್ತರಣೆ, ಕೃಷಿ ಜಮೀನುಗಳಲ್ಲಿ ಕೆಲಸ, ಕೆರೆ, ಕಲ್ಯಾಣಿ, ಮುಂತಾದ ಜಲರಕ್ಷಣೆ ಪ್ರದೇಶಗಳ ಹೂಳೆತ್ತಿ ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಅವಕಾಶಕೊಟ್ಟಿದೆ. ಗ್ರಾಮ ಪಂಚಾಯತಿಗಳ ನೇತೃತ್ವ ವಹಿಸಿರುವ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಸರ್ಕಾರದ ಯೋಜನೆಗಳ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಗ್ರಾಮಗಳಲ್ಲಿ ಯಾವುದೇ ಕುಟುಂಬ ಶೌಚಾಲಯ ರಹಿತವಾಗಿರಬಾರದು. ಯಾರೂ ಕೂಡ ರಸ್ತೆಗಳ ಬದಿಯಲ್ಲಿ ಶೌಚಕ್ಕೆ ಹೋಗುವ ಪರಿಸ್ಥಿತಿ ಇರಬಾರದು. ಪ್ರತಿಯೊಂದು ಗ್ರಾ.ಪಂ. ಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಘಟಕ ಆಗಬೇಕು. ಸ್ವಸಹಾಯ ಸಂಘದ ಒಕ್ಕೂಟದವರಿಗೆ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ನೀಡಲು ಈಗಾಗಲೆ ಸೂಚನೆ ನೀಡಲಾಗಿದೆ. ಜಿಲ್ಲೆಯ 195 ಗ್ರಾ.ಪಂ. ಗಳ ಪೈಕಿ ಕೇವಲ 13 ಗ್ರಾ.ಪಂ. ಗಳಲ್ಲಿ ಮಾತ್ರ ಘನತ್ಯಾಜ್ಯ ವಿಲೇವಾರಿ ಘಟಕಗಳು ಆಗಿದ್ದು, ಒಂದು ವರ್ಷದ ಒಳಗಾಗಿ ಜಿಲ್ಲೆಯ ಎಲ್ಲ ಗ್ರಾ.ಪಂ. ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭವಾಗಬೇಕು ಎಂದು ಸಚಿವರು ಹೇಳಿದರು.

ಮುಂದಿನ 05 ವರ್ಷಗಳ ಅವಧಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕಾರ್ಯಗಳ ಬಗ್ಗೆ ಗುರಿ ನಿಗದಿಪಡಿಸಿಕೊಂಡು, ಪ್ರತಿ ವರ್ಷ ಅದನ್ನು ಸಾಧಿಸುವ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಿಸಬೇಕು. ಜನರ ಏಳಿಗೆಗೆ ಶ್ರಮಪಟ್ಟ ಬಗ್ಗೆ ಆತ್ಮತೃಪ್ತಿಯಾಗುವಂತೆ ಕೆಲಸ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು. ಜಲ ಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮಗಳ ಮನೆ ಮನೆಗೆ ನಳ ಸಂಪರ್ಕದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳಿಗೆ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಮಟ್ಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಯೋಜಿಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದ್ಯಸರಿಗೆ ತರಬೇತಿಯನ್ನು ತಾಲ್ಲೂಕು ಮಟ್ಟದಲ್ಲಿ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾ.ಪಂ. ಗಳಿಗೆ ಕೆರೆಗಳ ಉಸ್ತುವಾರಿ :
ಈ ಮೊದಲು ಗ್ರಾಮಗಳ ವ್ಯಾಪ್ತಿಯಲ್ಲಿನ ಕೆರೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತಿದ್ದವು. ಇದೀಗ ಕೆರೆಗಳ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ಆಯಾ ಗ್ರಾಮ ಪಂಚಾಯತ್‍ಗಳಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಗ್ರಾಮೀಣ ಕೆರೆಗಳ ಅಭಿವೃದ್ಧಿಯನ್ನು ಆಯಾ ಗ್ರಾ.ಪಂ. ಗಳೇ ನಿರ್ವಹಿಸಬೇಕು. ಕೆರೆಗಳ ಒತ್ತುವಾರಿ ಇದ್ದಲ್ಲಿ, ಡಿಸಿ ಮತ್ತು ಸಿಇಒ ಗಳÀ ಗಮನಕ್ಕೆ ತಂದು, ನಿಯಮಾನುಸಾರವಾಗಿ ಒತ್ತುವರಿ ತೆರವುಗೊಳಿಸುವುದು ಸೇರಿದಂತೆ ಕೆರೆಗಳ ಸಮಗ್ರ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಗ್ರಾಮ ಪಂಚಾಯತ್‍ಗಳು ಸಹಕಾರ ನೀಡಬೇಕು ಎಂದು ಸಚಿವರು ಹೇಳಿದರು.

ಗ್ರಾಪಂ ಗಳಲ್ಲಿ ಪಕ್ಷ ರಾಜಕೀಯ ಬೇಡ :
ಗ್ರಾಮ ಪಂಚಾಯತ್ ಚುನಾವಣೆಯನ್ನು ಪಕ್ಷ ರಹಿತವಾಗಿ ನಡೆಸುತ್ತೇವೆ. ಹೀಗಾಗಿ ಕೈಮುಗಿದು ಬೇಡಿಕೊಳ್ಳುತ್ತೇನೆ ಗ್ರಾಮ ಪಂಚಾಯತ್ ಮಟ್ಟದ ಚುನಾಯಿತ ಸದಸ್ಯರುಗಳು ಯಾವುದೇ ಕಾರಣಕ್ಕೂ ಪಕ್ಷ ರಾಜಕೀಯ ಮಾಡಬೇಡಿ, ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಬೇಕು. ರಾಜಕೀಯ ಏನಿದ್ದರೂ ಲೋಕಸಭೆ, ವಿಧಾನಸಭೆ ಚುನಾವಣೆಗೆ ಮಾತ್ರ ಇರಲಿ. ಎಲ್ಲ ಗ್ರಾಮ ಪಂಚಾಯತ್ ಕಚೇರಿಗಳಿಗೂ ಸೋಲಾರ್ ಲೈಟಿಂಗ್ ವ್ಯವಸ್ಥೆ ಕಲ್ಪಿಸಲು ಆದೇಶ ಹೊರಡಿಸಲಾಗಿದ್ದು, ಜಿಲ್ಲೆಯಲ್ಲಿ ಕೇವಲ 25 ಗ್ರಾ.ಪಂ. ಗಳಿಗೆ ಮಾತ್ರ ಅಳವಡಿಸಲಾಗಿದೆ. ಮುಂದಿನ 6 ತಿಂಗಳ ಒಳಗಾಗಿ ಎಲ್ಲ ಗ್ರಾಮ ಪಂಚಾಯತಿ ಕಚೇರಿಗಳಿಗೂ ಸೋಲಾರ್ ಲೈಟಿಂಗ್ ಅಳವಡಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗುರಿಗಳನ್ನು ಹೊಂದಿರಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಆದ್ಯತೆ, ಜಾಬ್‍ಕಾರ್ಡ್ ವಿತರಣೆ, ಪಿಂಚಣಿ ಸೌಲಭ್ಯ, ಎಬಿಎಆರ್‍ಕೆ ಆರೋಗ್ಯ ಕಾರ್ಡ್, ಲೈಬ್ರರಿ ಮತ್ತು ಓದುವ ಬೆಳಕು ಕಾರ್ಯಕ್ರಮ, ಡಿಜಿಟಲ್ ಲೈಬ್ರರಿ, ಘನತ್ಯಾಜ್ಯ ವಿಲೇವಾರಿ ಸಂಸ್ಕರಣೆ, ಸೋಲಾರ್ ಪ್ರಾಜೆಕ್ಟ್ ಈ ಗುರಿಗಳನ್ನು ಅಭಿವೃದ್ಧಿ ಪಡಿಸಲು ಆದ್ಯತೆ ನೀಡುವಂತೆ ಸಲಹೆ ನೀಡಿದರು. ಅಲ್ಲದೆ ಎಲ್ಲ ಗ್ರಾಮಗಳಲ್ಲೂ ಕೋವಿಡ್‍ನ ಮೂರನೆ ಅಲೆ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

ಸಮಾರಂಭದಲ್ಲಿ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಅಬ್ದುಲ್ ನಜೀರ್‍ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆಯ ಗಾಯತ್ರಿ, ಪರಿಸರವಾದಿ ಶಿವಾನಂದ ಕಳವೆ, ಜಯರಾಂ, ಜಿ.ಪಂ ಸಿಇಒ ಡಾ. ವಿಜಯಮಹಾಂತೇಶ್ ದಾನಮ್ಮನವರ್ ಉಪಸ್ಥಿತರಿದ್ದರು.

ನರೇಗಾ ಯೋಜನೆ ಅನುಷ್ಠಾನದಲ್ಲಿ 2019-20 ಹಾಗೂ 2020-21 ನೇ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ವಿವಿಧ ಅಧಿಕಾರಿಗಳು ಹಾಗೂ ಪಿಡಿಒ ಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here