ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆ ಕಾಯ್ದೆ ಬಗ್ಗೆ ಅರಿವು ಕಾರ್ಯಗಾರ

0
179

ಮಡಿಕೇರಿ ಅ.07:-ಕಾನೂನು ಕೇವಲ ಪುಸ್ತಕದಲ್ಲಿ ಸೀಮಿತವಾಗಿರದೆ ಎಲ್ಲರೂ ಅರ್ಥೈಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಎನ್.ಸುಬ್ರಹ್ಮಣ್ಯ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ‘’ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013’’ ಕುರಿತು ಅರಿವು ಕಾರ್ಯಗಾರವು ಗುರುವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ದೇಶದಲ್ಲಿ ಹಲವಾರು ಕಾನೂನುಗಳಿವೆ ಅದನ್ನು ತಿಳಿದವರು ತಿಳಿಯದವರಿಗೆ ಹೇಳಿ ಜಾಗೃತಿ ಮೂಡಿಸಬೇಕು. ಬಸವಣ್ಣನವರ ಆದರ್ಶಗಳನ್ನು ತತ್ವಗಳನ್ನು ಪಾಲಿಸುವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಅವರು ಹೇಳಿದರು.
ಮಹಿಳೆಯನ್ನು ಪೂಜಿಸಲ್ಪಡುತ್ತಿದ್ದ ಕಾಲವನ್ನು ಪ್ರಸ್ತುತ ಸಮಾಜವೂ ನೆನೆಸಿಕೊಳ್ಳಬೇಕು. ದೇಶದಲ್ಲಿ ಎಷ್ಟೋ ನದಿಗಳಿಗೂ ಸಹ ಹೆಣ್ಣಿನ ಹೆಸರನ್ನೆ ಇಡಲಾಗಿದೆ. ಇದು ಹೆಣ್ಣಿಗೆ ಸಲ್ಲುತ್ತಿರುವ ಪ್ರಾಮುಖ್ಯತೆ ಸೂಚಿಸುತ್ತದೆ ಎಂದರು.
ವಕೀಲರಾದ ಮೀನಾ ಕುಮಾರಿ ಅವರು ಮಾತನಾಡಿ, ಕಾನೂನು ಎಂಬುದು ನಿಂತ ನೀರಲ್ಲ, ಹರಿಯುವ ನೀರು. ಪುರುಷರು ಮಹಿಳೆಯನ್ನು ಗೌರವದಿಂದ ಕಾಣಬೇಕು ಎಂದರು.
ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಕಿರಿಕಿರಿ ಉಂಟಾದಲ್ಲಿ, 10 ಕ್ಕಿಂತ ಹೆಚ್ಚು ಮಹಿಳಾ ನೌಕರರು ಕೆಲಸ ನಿರ್ವಹಿಸುವ ಕಚೇರಿಯಲ್ಲಿ ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಲಾಗುವುದು. ಹಾಗೂ 10 ಕ್ಕಿಂತ ಕಡಿಮೆ ಮಹಿಳಾ ನೌಕರರಿದ್ದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸ್ಥಳೀಯ ದೂರು ಸಮಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸಮಿತಿ ರಚನೆಗೆ ಎನ್‍ಜಿಒ ಸಹಾಯವನ್ನು ಪಡೆದುಕೊಳ್ಳಲಾಗುತ್ತದೆ. ನ್ಯಾಯಾಲಯದಂತೆ ಪ್ರಕರಣದ ತೀರ್ಪು ನಡೆಯುತ್ತದೆ ಎಂದರು.
ದೌರ್ಜನ್ಯವಾದ ಮಹಿಳೆಗೆ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಕಷ್ಟವಾದಲ್ಲಿ, ವರ್ಗಾವಣೆಯನ್ನು ಪಡೆಯಬಹುದು ಅಥವಾ ದೌರ್ಜನ್ಯ ನಡೆಸಿದ ಪುರುಷನ ಅನುಚಿತ ವರ್ತನೆಯ ಸಾಬೀತಿನ ಮೇರೆಗೆ ಅವರನ್ನು ವರ್ಗಾಯಿಸಬಹುದು ಎಂದು ಹೇಳಿದರು.
ಕಿರುಕುಳದಿಂದ ಮಹಿಳೆಯೂ ಕೆಲಸ ಬಿಟ್ಟರೆ ಅಥವಾ ಆತ್ಮಹತ್ಯೆಗೆ ಶರಣಾದಲ್ಲಿ, ಅವರ ಕುಟುಂಭಸ್ತರು ಸಮಿತಿಯಲ್ಲಿ ದೂರು ಸಲ್ಲಿಸಿ ನ್ಯಾಯ ಒದಗಿಸಿಕೊಳ್ಳಬಹುದು. ದೂರು ನೀಡಲು ಹಿಂಜರಿಯಬಾರದು. ಹೆದರಿದಷ್ಟು ದೌರ್ಜನ್ಯ ಹೆಚ್ಚುತ್ತವೆ. ಪ್ರತಿ ಹೆಣ್ಣು ಮಗಳಿಗೂ ಸಮಾನತೆಯಿಂದ ಕೆಲಸ ಮಾಡುವ ಹಕ್ಕಿದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ಮಾತನಾಡಿ, ಕೆಲಸಕ್ಕೆ ಹೋಗುವ ಮಹಿಳೆಯೂ ಧೈರ್ಯದಿಂದ ಕೆಲಸ ಮಾಡುವಂತಾಗಬೇಕು ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣವಾಗಬೇಕು ಎಂದರು.
ಮಾನಸಿಕ ಅಥವಾ ಲೈಂಗಿಕ ತೊಂದರೆಗೊಳಗಾದ ಮಹಿಳೆಯೂ ಸ್ಥಳೀಯ ದೂರು ನಿವಾರಣಾ ಸಮಿತಿಗೆ ಹಿಂಜರಿಯದೆ ದೂರು ನೀಡುವಂತಾಗಬೇಕು. ಅವರಿಗೆ ಭಾವನಾತ್ಮಕ ಬೆಂಬಲವನ್ನು ಕೊಟ್ಟು ಧೈರ್ಯ ತುಂಬಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮುತ್ತಣ್ಣ ಅವರು ಮಾತನಾಡಿ, ಸಮಿತಿಗಳು ಹೆಸರಿಗೆ ಮಾತ್ರ ರಚನೆ ಆಗದೇ ಕಾರ್ಯ ನಿರ್ವಹಿಸುವಂತಾಗಬೇಕು ಎಂದರು.
ಸಮಿತಿಯನ್ನು ಸದುಪಯೋಗಿಸಿಕೊಳ್ಳಬೇಕು ಹಾಗೂ ಅದರ ಅರಿವನ್ನು ಮೂಡಿಸುವ ಸಲುವಾಗಿ ಕಾರ್ಯಗಾರವನ್ನು ನಡೆಸಲಾಗುವುದು ಎಂದು ಹೇಳಿದರು.
ಚಂದ್ರಿಕಾ ಪ್ರಾರ್ಥಿಸಿದರು, ಸತ್ಯಭಾಮ ನಿರೂಪಿಸಿದರು, ಪ್ರಭಾವತಿ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಮಹಿಳಾ ಅಭಿವೃದ್ಧಿ ಅಧಿಕಾರಿ ವಿಮಲ ಹಾಗೂ ಹಲವು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here