ಕೋವಿಡ್ ಆದೇಶಗಳ ಅನುಷ್ಠಾನ ಕುರಿತು ಸಭೆ ಕೋವಿಡ್ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ:ಡಿಸಿ ಮಾಲಪಾಟಿ

0
108

ಬಳ್ಳಾರಿ,ಏ.21: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಆದೇಶಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಮೂಲಕ ತಹಸೀಲ್ದಾರರು,ಪೋಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಅವರು ಸೂಚನೆಗಳನ್ನು ನೀಡಿದರು.
ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕಫ್ರ್ಯೂ ವಿಧಿಸಿ ಸರಕಾರ ಆದೇಶ ಹೊರಡಿಸಿದ್ದು ಇಂದಿನಿಂದ ಆರಂಭವಾಗಿ ಮೇ 04ರವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ವಾರಂತ್ಯದಲ್ಲಿ ಶನಿವಾರ ಮತ್ತು ಭಾನುವಾರದಂದು ಇಡೀ ದಿನ ಕಫ್ರ್ಯೂ ವಿಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು,ಅದರಂತೆ ಈ ಸಂದರ್ಭದಲ್ಲಿ ಯಾವ್ಯಾವ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆಯೋ ಅವುಗಳನ್ನು ಮಾತ್ರ ಷರತ್ತುಬದ್ಧ ಅನುಮತಿಯೊಂದಿಗೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಸೂಚನೆ ನೀಡಿದ ಡಿಸಿ ಮಾಲಪಾಟಿ ಅವರು ನೈಟ್ ಕಫ್ರ್ಯೂ ಸಂದರ್ಭದಲ್ಲಿ ರಾತ್ರಿ 8ಕ್ಕೆ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಮತ್ತು ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲ ಅನಗತ್ಯ ಸಂಚಾರ ವ್ಯವಸ್ಥೆ ಬಂದ್ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಬಹಳಷ್ಟು ಕೈಗಾರಿಕೆಗಳು ಮತ್ತು ಕಾರಖಾನೆಗಳಿದ್ದು,ಇವುಗಳಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಕಡ್ಡಾಯವಾಗಿ ರಾತ್ರಿಪಾಳಿಗಾಗಿ ಕಾರಖಾನೆ ನೀಡಿರುವ ಆದೇಶಪ್ರತಿ ಮತ್ತು ಗುರುತಿನ ಚೀಟಿ ಕಡ್ಡಾಯವಾಗಿಟ್ಟುಕೊಂಡು ತೆರಳಬೇಕು;ಅವುಗಳನ್ನು ನೋಡಿಕೊಂಡು ಅವರನ್ನು ಕಾರಖಾನೆಗೆ ತೆರಳಲು ತಹಸೀಲ್ದಾರರು ಮತ್ತು ಪೊಲೀಸರು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರು.
ಹೋಟಲ್, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಕೇವಲ ಪಾರ್ಸ್‍ಲ್‍ಗೆ ಮಾತ್ರ ಅವಕಾಶವಿದ್ದು,ಕುಳಿತುಕೊಂಡು ಸೇವಿಸಲು ಅವಕಾಶವಿರುವುದಿಲ್ಲ;ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸೂಚಿಸಿದ ಡಿಸಿ ಮಾಲಪಾಟಿ ಅವರು ಕಟ್ಟಡ ಕಾರ್ಮಿಕ ಚಟುವಟಿಕೆಗಳಿಗೆ ವಿಕೆಂಡ್ ಕಫ್ರ್ಯೂ ಅವಧಿಯಲ್ಲಿ ಹೊರತುಪಡಿಸಿ ಉಳಿದ ಸಮಯದಲ್ಲಿ ಕೆಲಸ ನಿರ್ವಹಿಸಲು ಸಮಸ್ಯೆ ಇರುವುದಿಲ್ಲ ಎಂದರು.
*ಮದುವೆ 50 ಜನರಿಗೆ ಮಾತ್ರ ಅವಕಾಶ: ಕಲ್ಯಾಣ ಮಂಟಪಗಳ ಬಂದ್ ಮಾಡಿ: ಜಿಲ್ಲೆಯಲ್ಲಿರುವ ಎಲ್ಲ ಕಲ್ಯಾಣಮಂಟಪಗಳನ್ನು ಇಂದೇ ಬಂದ್ ಮಾಡಿ; ಕಲ್ಯಾಣ ಮಂಟಪಗಳ ಮಾಲೀಕರು ತಮ್ಮ ಹತ್ತಿರ ಬಂದ ಸಂದರ್ಭದಲ್ಲಿ ಇದುವರೆಗೆ ಮುಂಗಡ ಮದುವೆ ಬುಕ್ ಆಗಿರುವ ಮಾಹಿತಿಗಳನ್ನು ಪಡೆದುಕೊಂಡು ಅವುಗಳಿಗೆ ಪ್ರತಿ ಮದುವೆಗೆ 50 ಜನರು ಮೀರದಂತೆ ಭಾಗವಹಿಸಲು ಸೂಚಿಸಿ ಷರತ್ತುಬದ್ಧ ಅನುಮತಿ ಮತ್ತು ಪಾಸ್‍ಗಳನ್ನು ವಿತರಿಸಿ ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ಸೂಚನೆ ನೀಡಿದರು.
ಕಲ್ಯಾಣಮಂಟಪಗಳ ಮಾಲೀಕರ ಸಭೆ ಕರೆದು ಷರತ್ತುಗಳು ಮತ್ತು ಆದೇಶಗಳನ್ನು ಅವರಿಗೆ ತಿಳಿಸಿ;ಹೆಚ್ಚಿನ ಜನರು ಸೇರುವ ಮೂಲಕ ಉಲ್ಲಂಘಿಸಿದಲ್ಲಿ ಕ್ರಮಕೈಗೊಳ್ಳುವುದರ ಜೊತೆಗೆ ಕಲ್ಯಾಣಮಂಟಪಗಳನ್ನು ಬಂದ್ ಮಾಡುತ್ತೇವೆ ಮತ್ತು ಮುಂದಿನ ಮದುವೆ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿ ಎಂದರು.
ಹಳ್ಳಿಗಳಲ್ಲಿ ಟೆಂಟ್ ಹಾಕಿಕೊಂಡು ಮದುವೆ ಮಾಡಲಾಗುತ್ತದೆ;ಇವುಗಳ ಮಾಹಿತಿಯನ್ನು ಮುಂಚಿತವಾಗಿಯೇ ಗ್ರಾಮೀಣ ಮಟ್ಟದ ಅಧಿಕಾರಿಗಳಿಂದ ಪಡೆದುಕೊಂಡು ಅನುಮತಿ ಪಡೆದು ನಿಯಮಾನುಸಾರ ನಡೆಸಲು ತಿಳಿಸಿ ಎಂದು ಹೇಳಿದ ಡಿಸಿ ಅವರು ವಿಕೆಂಡ್ ಕಫ್ರ್ಯೂ ಅವಧಿಯಲ್ಲಿಯೂ ಅಂದರೇ ಶನಿವಾರ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಯಾಕ್ಸಿನೇಶನ್ ಮಾಡಿ(ನಗರ ಪ್ರದೇಶ ಹೊರತುಪಡಿಸಿ) ಎಂದರು.
*ತೆರೆದ ಜಾಗದಲ್ಲಿ ಒಪನ್ ಮಾರುಕಟ್ಟೆ: ಕಳೆದ ಬಾರಿಯಂತೆ ಈ ಬಾರಿಯೂ ಮಾರುಕಟ್ಟೆಗಳಲ್ಲಿ ಜನಸಂದಣಿಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ತೆರೆದ ಜಾಗಗಳಲ್ಲಿ ಒಪನ್ ಮಾರುಕಟ್ಟೆಗಳನ್ನು ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ಡಿಸಿ ಮಾಲಪಾಟಿ ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ, ಬಳ್ಳಾರಿಯು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿರಾಜ್ಯವಾಗಿರುವುದರಿಂದ ಸಿರಗುಪ್ಪ ಮತ್ತು ಬಳ್ಳಾರಿ ತಾಲೂಕಿನ ಗಡಿ ಪ್ರದೇಶಗಳ ಬಳಿ ಈಗಾಗಲೇ ಚೆಕ್‍ಪೋಸ್ಟ್ ಆರಂಭಿಸಲಾಗಿದೆ. ಅಗತ್ಯ ಸೇವೆ ಸಂಚಾರ ಹೊರತುಪಡಿಸಿ ಅನಗತ್ಯ ಓಡಾಟಕ್ಕೆ ಬಂದವರನ್ನು ನಿಯಂತ್ರಿಸುವ ಕೆಲಸವಾಗಬೇಕು; ಯಾವುದೇ ರೀತಿಯ ದೂರಿಗೆ ಅಸ್ಪದ ನೀಡಬೇಡಿ ಎಂದು ಸೂಚನೆ ನೀಡಿದರು.
ಸರಕಾರಿ ಸಿಬ್ಬಂದಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗಳನ್ನು ಕೋವಿಡ್ ಕರ್ತವ್ಯಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು,ಯಾರು ಕೂಡ ಈ ಕರ್ತವ್ಯಕ್ಕೆ ಬರುವುದಕ್ಕೆ ನಿರಾಕರಿಸುವಂತಿಲ್ಲ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯಾಚರಣೆ ಮುಂದುವರಿಸಿ ಎಂದು ಸೂಚನೆ ನೀಡಿದ ಎಸ್ಪಿ ಸೈದುಲು ಅಡಾವತ್ ಅವರು ಸರಕಾರ ಹೊರಡಿಸಿರುವ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂದಿನಿಂದಲೇ ಆರಂಭವಾಗಲಿ ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here