ಶ್ರದ್ಧಾಭಕ್ತಿಯಿಂದ ಜರುಗಿದ ಕಾವೇರಿ ಸಂಕ್ರಮಣ ಪವಿತ್ರ ತೀರ್ಥೊದ್ಭವ

0
139

ಮಡಿಕೇರಿ ಅ.17:-ನಾಡಿನ ಜೀವನದಿ ‘ಕಾವೇರಿ’ ಉಗಮ ಸ್ಥಾನ ತಲಕಾವೇರಿಯಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವು ಭಾನುವಾರ 1.11 ಗಂಟೆಗೆ ಸಂಭವಿಸಿತು. ಕಾವೇರಿ ತಾಯಿ ತೀರ್ಥ ರೂಪಿಣಿಯಾಗಿ ಭಕ್ತರಿಗೆ ಒಳಿದಳು. ತಲಕಾವೇರಿಗೆ ಆಗಮಿಸಿದ್ದ ಭಕ್ತರು ಜೈಜೈ ಮಾತಾ ಕಾವೇರಿ ಮಾತಾ ಎಂಬ ಘೋಷಣೆ ಮೊಳಗಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ನಾರಾಯಣ ಗೌಡ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಸಂಸದರಾದ ಪ್ರತಾಪ್ ಸಿಂಹ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಭಾಗಮಂಡಲ ಗ್ರಾ.ಪಂ ಉಪಾಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ ಹೊಳ್ಳ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ತಹಶೀಲ್ದಾರ್ ಮಹೇಶ್, ಭಗಂಡೇಶ್ವರ–ತಲಕಾವೇರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ, ತಕ್ಕ ಮುಖ್ಯಸ್ಥರಾದ ಕೊಡಿ ಮೋಟಯ್ಯ ಇತರರು ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡರು.
ಬಳಿಕ ಮಾತನಾಡಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣ ಗೌಡ ಅವರು, ಇದೇ ಮೊದಲ ಬಾರಿಗೆ ತಲಕಾವೇರಿ ತುಲಾ ಸಂಕ್ರಮಣಕ್ಕೆ ಆಗಮಿಸಿ ಪವಿತ್ರ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲಾಯಿತು. ನಾಡಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರು ಒದಗಿಸುವ ತಾಯಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಕಾಣುವುದು ವಿಶೇಷವಾಗಿದೆ ಎಂದರು.
ತಾಯಿ ಕಾವೇರಿ ಮಾತೆಯ ತೀರ್ಥವನ್ನು ಮಂಡ್ಯ ಜಿಲ್ಲೆಗೆ ತೆಗೆದುಕೊಂಡು ಹೋಗಿ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ನಾಡಿನ ಜನತೆಗೆ ಒಳ್ಳೆಯ ಮಳೆ, ಬೆಳೆಯಾಗಿ ಸಮೃದ್ಧಿ ತರುವಂತಾಗಲಿ ಎಂದು ತಾಯಿ ಕಾವೇರಿ ಮಾತೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಸಚಿವರಾದ ನಾರಾಯಣ ಗೌಡ ಅವರು ನುಡಿದರು.
ಕೊಡಗು ಮತ್ತು ಮಂಡ್ಯ ಜಿಲ್ಲೆ ಸೇರಿದಂತೆ ನಾಡಿನ ದಕ್ಷಿಣ ಭಾರದತ ಎಲ್ಲರೂ ಕಾವೇರಿ ಮಾತೆಯನ್ನು ಸದಾ ಸ್ಮರಿಸುತ್ತಾರೆ ಎಂದು ಸಚಿವರು ನುಡಿದರು.
ತಲಕಾವೇರಿ ತುಲಾ ಸಂಕ್ರಮಣ ಸಂಬಂಧ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಉತ್ತಮ ವ್ಯವಸ್ಥೆ ಮಾಡಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ರಾಜ್ಯದ ದಕ್ಷಿಣ ಭಾಗ ಮತ್ತು ತಮಿಳುನಾಡಿಗೆ ಕುಡಿಯಲು ನೀರು ಮತ್ತು ಕೃಷಿಗೆ ನೀರು ಒದಗಿಸಿ, ಇಡೀ ನಾಡಿನ ಹಾಗೂ ದಕ್ಷಿಣ ಭಾರತದ ಅನ್ನದಾತಳು ಕಾವೇರಿ ಮಾತೆ ಎಂದು ಅವರು ಸ್ಮರಿಸಿದರು. ತುಲಾ ಸಂಕ್ರಮಣ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ, ಸಮೃದ್ಧಿ ತರುವಂತಾಗಲಿ ಎಂದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ನಿಗದಿತ ಸಮಯಕ್ಕೆ ತೀರ್ಥೋದ್ಭವವಾಗಿ ಭಕ್ತಾಧಿಗಳು ಕಾವೇರಿ ತಾಯಿ ತೀರ್ಥ ರೂಪಿಣಿಯಾಗಿ ಕಣ್ತುಂಬಿಕೊಂಡಿದ್ದಾರೆ ಎಂದರು.
ಈ ಬಾರಿ ಕೋವಿಡ್ 19 ಕಡಿಮೆಯಾಗಿರುವುದರಿಂದ ಭಕ್ತಾಧಿಗಳ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು. ಭಕ್ತಾಧಿಗಳು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಶ್ರದ್ಧಾ ಭಕ್ತಿಯಿಂದ ತೀರ್ಥೋದ್ಭವ ಜರುಗಿರುವುದು ವಿಶೇಷವಾಗಿದೆ ಎಂದರು.
ನಾಡಿನಲ್ಲಿ ಸುಖ, ಶಾಂತಿ ನೆಮ್ಮದಿ ದೊರಕುವಂತಾಗಲಿ, ಕೊವೀಡ್-19 ಮಹಾಮಾರಿ ಸಂಪೂರ್ಣವಾಗಿ ತೊಲಗಿ, ನಾಡಿಗೆ ಸುಭೀಕ್ಷೆ ತರುವಂತಾಗಲಿ ಎಂದರು.
ಸಂಸದರರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಭಾನುವಾರ ಮಧ್ಯಾಹ್ನ 1.11 ಗಂಟೆಗೆ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಕಣ್ತುಂಬಿಕೊಂಡಿದ್ದಾರೆ ಎಂದರು.
ಪ್ರಧಾನ ಅರ್ಚಕರಾದ ಗುರುರಾಜ್ ಆಚಾರ್ಯ, ಪ್ರಶಾಂತ್ ಆಚಾರ್ಯ ಮತ್ತು ಶಂಕರಾಚಾರ್ಯ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.
ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‍ನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು, ಮೂವರು ಡಿವೈಎಸ್ಪಿಗಳು, 7 ಮಂದಿ ಇನ್ಸ್‍ಪೆಕ್ಟರ್ 12 ಮಂದಿ ಪಿಎಸ್‍ಐ, 450 ಮಂದಿ ಪೊಲೀಸ್ ಮತ್ತು ಹೋಂ ಗಾರ್ಡ್‍ಗಳನ್ನು ನಿಯೋಜಿಸಲಾಗಿತ್ತು.
ಕೊಡವ ಮಕ್ಕಡ ಕೂಟ, ಬೆಂಗಳೂರು ಯೂತ್ ಕೌನ್ಸಿಲ್, ಅಖಿಲ ಕೊಡವ ಸಮಾಜ, ಅಖಿಲ ಕೊಡವ ಸಮಾಜ ಯೂತ್ ಕೌನ್ಸಿಲ್, ಯೂಕೋ ಸಂಘಟಣೆ ಸೇರಿದಂತೆ ಕೊಡವ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಭಗಂಡೇಶ್ವರ ದೇವಾಲಯದಿಂದ ನಡಿಗೆಯ ಮೂಲಕ ತಲಕಾವೇರಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತ್ರಿವೇಣಿ ಸಂಗಮದಲ್ಲಿ ಭಕ್ತಾಧಿಗಳು ಪವಿತ್ರ ಸ್ನಾನ ಮಾಡಿ ಪೂಜಾ ಕಾರ್ಯ ಕೈಗೊಂಡದ್ದು ಕಂಡುಬಂದಿತು.
ಕೊಡಗು ಏಕೀಕರಣ ರಂಗ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ಅನ್ನ ಸಂತರ್ಪಣ’ ಕಾರ್ಯವು ವ್ಯವಸ್ಥಿತವಾಗಿ ನಡೆಯಿತು.

LEAVE A REPLY

Please enter your comment!
Please enter your name here