ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ವಿಚಾರ ಸಂಕಿರಣ ಹಾಗೂ ಎನ್‍ಇಪಿ 2020ರ ಅನ್ವಯ ಪೂರಕ ಯೋಜನೆಗಳ ಉದ್ಘಾಟನೆ, ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಬೇಕಾದರೇ ಗುಣಮಟ್ಟಕ್ಕೆ ಆದ್ಯತೆ ನೀಡಿ: ಸಚಿವ ಅಶ್ವತ್‍ನಾರಾಯಣ

0
100

ಬಳ್ಳಾರಿ,ಅ.28 : ಇಡೀ ವಿಶ್ವದ ಜತೆ ನಾವು ಸ್ಪರ್ಧೆ ಮಾಡುತ್ತಿದ್ದು, ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಬೇಕಾದರೇ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವ ಕೆಲಸವಾಗಬೇಕು ಮತ್ತು ಪ್ರತಿನಿತ್ಯ ಗುಣಮಟ್ಟ ಉನ್ನತೀಕರಿಸಲು ಪ್ರಯತ್ನಿಸಬೇಕು;ಅಂದಾಗ ಮಾತ್ರ ಉಳಿಯಲು ಸಾಧ್ಯ ಎಂದು ಉನ್ನತ ಶಿಕ್ಷಣ,ಕೌಶಲ್ಯಾಭಿವೃದ್ಧಿ ಇಲಾಖೆ, ಉದ್ಯಮಶೀಲತೆ ಮತ್ತು ಜೀವನೋಪಾಯ,ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವ ಡಾ.ಅಶ್ವತ್ ನಾರಾಯಣ ಅವರು ಹೇಳಿದರು.
ನಗರದ ಹೊರವಲಯದ ಬಿಐಟಿಎಂ ಕಾಲೇಜು ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನ ಶೈಕ್ಷಣಿಕ ಭಾಗಿದಾರರ ಸಮಗ್ರ ಬದಲಾವಣೆ ಕುರಿತ ವಿಚಾರ ಸಂಕಿರಣ ಹಾಗೂ ಎನ್‍ಇಪಿ 2020ರ ಅನ್ವಯ ಪೂರಕ ಯೋಜನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟ,ದಕ್ಷತೆ ಸಂಸ್ಕøತಿಯನ್ನು ಪ್ರೋತ್ಸಾಹಿಸುವ ಮತ್ಯು ಗೌರವಿಸುವ ಕೆಲಸ ಮಾಡಬೇಕು ಮತ್ತು ಈಗ ತರಲಾಗುತ್ತಿರುವ ಸುಧಾರಣೆಗಳು ನಮಗೆ ಪರಿಹಾರ ಅಂತ ತಿಳಿದುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದ ಸಚಿವ ಅಶ್ವತ್‍ನಾರಾಯಣ ಅವರು ವಿದ್ಯಾರ್ಥಿಕೇಂದ್ರೀತ ಮತ್ತು ವಿದ್ಯಾರ್ಥಿಸ್ನೇಹಿಯಾಗಿ ಹಾಗೂ ಏನು ನೀಡಿದ್ರೇ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆಯೇ ಎಂಬುದನ್ನು ಅರಿತು ಗುಣಮಟ್ಟದ ಶಿಕ್ಷಣ ನೀಡುವ ಕೆಲಸಬಾಗಬೇಕು.ಅದಕ್ಕೆಲ್ಲ ಪರಿಹಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ ಎಂದರು.
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಮ್ಮ ಸರಕಾರ ನಾನಾ ಒಡಂಬಡಿಕೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಸರಕಾರಿ ಶಾಲೆಗಳಲ್ಲಿ ಡಿಜಿಟಲ್ ಲರ್ನಿಂಗ್,ಸ್ಮಾರ್ಟ್ ಕ್ಲಾಸ್, ಪ್ರತಿ ಮಕ್ಕಳಿಗೆ ಡಿವೈಸ್ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
34 ವರ್ಷಗಳ ನಂತರ 3ನೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. ನಮ್ಮೆಲ್ಲರ ಶ್ರೇಯಸ್ಸು ಮತ್ತು ಏಳ್ಗೆಗಾಗಿ ಹಾಗೂ ಯುವಜನರಿಗೆ ಪೂರಕವಾಗಿರುವಂತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇಡೀ ದೇಶದಲ್ಲಿಯೇ ಪ್ರಥಮವಾಗಿ ಅನುಷ್ಠಾನ ಮಾಡಿದ ರಾಜ್ಯ ನಮ್ಮ ಕರ್ನಾಟಕವಾಗಿದೆ ಎಂದು ಹೇಳಿದ ಅವರು ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಸರಕಾರ ಕ್ರಮವಹಿಸಿದೆ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಅರ್ಥಿಕವಾಗಿ,ಸಾಮಾಜಿಕವಾಗಿ ಮತ್ತು ಹಿಂದುಳಿದವರಿಗೆ ನ್ಯಾಯ ಸಿಗಲಿದೆ.ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಲಿದೆ ಎಂದು ಹೇಳಿದ ಅವರು ಎನ್‍ಇಪಿ ಜಾರಿಯಿಂದಾಗಿ ಸ್ವಾಮಿವಿವೇಕಾನಂದ ಅವರು ಹೇಳಿದಂತೆ ಭಾರತ 21ನೇ ಶತಮಾನದಲ್ಲಿ ವಿಶ್ವಗುರು ಮತ್ತು ವಿಶ್ವಕ್ಕೆ ನಾಯಕನಾಗಲಿದೆ ಎಂದರು.
*ಶಾಲೆಗಳಲ್ಲಿ ಕಲಿಕಾಮಟ್ಟ ಬಯಸಿದ ಮಟ್ಟದಲ್ಲಿಲ್ಲ: ಈಗ ಶಾಲೆಗಳಲ್ಲಿ ಕಲಿಕಾ ಮಟ್ಟವು ನಾವು ಬಯಸಿದ ಮಟ್ಟದಲ್ಲಿಲ್ಲ.ಅಕ್ಷರ ಮತ್ತು ಗಣಿತ ಜ್ಞಾನವು ಬಯಸಿದ ಮಟ್ಟದಲ್ಲಿ ಸಿಗತಾ ಇಲ್ಲ;ಇದೆಲ್ಲವನ್ನು ಎನ್‍ಇಪಿ ಸರಿಪಡಿಸಲಿದ್ದು,ಉತ್ತಮ ಶಿಕ್ಷಣದ ಜ್ಞಾನ 3ನೇ ತರಗತಿಗೆ ಬರುವಷ್ಟರಲ್ಲಿ ವಿದ್ಯಾರ್ಥಿಗಳು ಕಲಿಯುವಂತಾಗಬೇಕು;ಈ ನಿಟ್ಟಿನಲ್ಲಿ ಎನ್‍ಇಪಿ ಕ್ರಮವಹಿಸಲಿದೆ ಎಂದರು.
ಕಾಲೇಜಿಗೆ ಸೀಮಿತಾದ ಶಿಕ್ಷಣ ನೀಡುವ ಬದಲು,ದೈಹಿಕ,ಕೌಶಲ್ಯಯುತ, ಸಾಮಾಜಿಕ ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕ್ರಮವಹಿಸಲಿದೆ ಎಂದು ಅವರು ಹೇಳಿದರು.
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ನವಭಾರತ ನಿರ್ಮಾಣ ಮಾಡಬೇಕು ಎಂಬ ಸದುದ್ದೇಶವನ್ನಿಟ್ಟುಕೊಂಡು ಹೊಸರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ.ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ 21ನೇ ಶತಮಾನ ಭಾರತದ ಶತಮಾನವಾಗಲಿದೆ ಎಂದರು.
ಜಗತ್ತಿನಲ್ಲಿ ಭಾರತದ ತಂತ್ರಜ್ಞಾನ,ವಿಜ್ಞಾನ,ಸೇವಾ ವಲಯ,ಕೃಷಿ ಸೇರಿದಂತೆ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ಆಗ್ತಾ ಇರುವುದನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ಭಾರತದತ್ತ ನೋಡುತ್ತಿದೆ ಎಂದರು.
ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಎನ್‍ಇಪಿ ಅಳವಡಿಸಿಕೊಂಡ ಮೊದಲ ರಾಜ್ಯ ನಮ್ಮ ಕರ್ನಾಟಕ;ಇದಕ್ಕೆ ಕಾರಣೀಕರ್ತರು ಸಚಿವ ಡಾ.ಅಶ್ವತ್ ನಾರಾಯಣ ಅವರು; ರಾಜ್ಯದಲ್ಲಿ ಶಿಕ್ಷಣವ್ಯವಸ್ಥೆ ಸುಧಾರಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎಂದರು.
ಮ್ಯಾನೇಜ್‍ಮೆಂಟ್ ಕೋಟಾದಲ್ಲಿ ಬರತಾ ಇರುವ ಮಕ್ಕಳಿಗೆ ಶಿಷ್ಯವೇತನ ನೀಡುವ ಕೆಲಸ ನಮ್ಮ ಸರಕಾರ ಮಾಡಲಿದೆ ಎಂದರು.
ಉದ್ಯಮಗಳ ಸಹಕಾರದೊಂದಿಗೆ ಎನ್‍ಇಪ 2020ರ ಅನ್ವಯ ಸಿದ್ದಪಡಿಸಿದ ಸ್ನಾತಕೋತ್ತರ ಅಧ್ಯಯನಗಳ ಪಠ್ಯಕ್ರಮಗಳನ್ನು ಸಚಿವರಿಬ್ಬರು ಅನಾವರಣಗೊಳಿಸಿದರು.
ಆತ್ಮನಿರ್ಭರ್ ಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳಲ್ಲಿ ಖಾದಿ ದಿವಸ್ ಆಚರಣೆಗೆ ಸಚಿವ ಡಾ.ಅಶ್ವತ್ ನಾರಾಯಣ ಅವರು ಸಾಂಕೇತಿಕವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಸೋಮಶೇಖರರೆಡ್ಡಿ,ಕೆ.ಸಿ.ಕೊಂಡಯ್ಯ,ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ,ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿದ್ದು.ಪಿ.ಆಲಗೂರ, ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ,ಟಿಇಎಚ್‍ಆರ್‍ಡಿ ಟ್ರಸ್ಟ್ ಅಧ್ಯಕ್ಷರು ಡಾ.ಎಸ್.ಜೆ.ವೆಂಕಟ ಮಹಿಪಾಲ್,ಬಿಐಟಿಎಂ ಉಪನಿರ್ದೇಶಕ ಡಾ.ಪೃಥ್ವಿರಾಜ್ ಭೂಪಾಲ್, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ್, ಪ್ರೊ.ಶಶಿಕಾಂತ ಉಡಿಕೇರಿ,ಡಾ.ಕೆ.ಸಿ.ಪ್ರಶಾಂತ,ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿ ಪ್ರಶಾಂತ,ಬಿಐಟಿಎಂ ನಿರ್ದೇಶಕರು ಹಾಗೂ ಭಾರತೀಯ ಶಿಕ್ಷಣ ಮಂಡಲದ ಅದ್ಯಕ್ಷ ಡಾ.ಯಶವಂತ ಭೂಪಾಲ್, ಮಾಜಿ ಸಂಸದೆ ಜೆ.ಶಾಂತಾ ಮತ್ತಿತರರು ಇದ್ದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ,ಬಿಐಟಿಎಂ ಹಾಗೂ ಭಾರತೀಯ ಶಿಕ್ಷಣ ಮಂಡಲ ಉತ್ತರ ಪ್ರಾಂತ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

LEAVE A REPLY

Please enter your comment!
Please enter your name here