ಕ್ಷಯಮುಕ್ತ ಬಳ್ಳಾರಿ ಜಿಲ್ಲೆಗೆ ಪ್ರತಿಯೊಬ್ಬರೂ ಕೈಜೋಡಿಸಿ:ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ

0
110

ಬಳ್ಳಾರಿ,ಆ.23 : ಕ್ಷಯಮುಕ್ತ ಬಳ್ಳಾರಿ ಜಿಲ್ಲೆಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ಮನವಿ ಮಾಡಿದ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಕೈಗಾರಿಕೆಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿನ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಿ ಮತ್ತು ವಿಶೇಷವಾಗಿ ಕ್ಷಯರೋಗದ ಪರೀಕ್ಷೆ ಮಾಡಿಸುವಂತೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಕ್ಷಯರೋಗ ಟಾಸ್ಕ್‍ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೈಗಾರಿಕಾ ಪ್ರದೇಶಗಳು ಹೆಚ್ಚಾಗಿ ಇರುವ ಕಡೆ ಕ್ಷಯರೋಗ ಪ್ರಕರಣಗಳ ಸಂಖ್ಯೆ ಜಾಸ್ತಿ ದಾಖಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಕ್ಷಯರೋಗದ ಪರೀಕ್ಷೆಗೆ ಒಳಪಡಿಸಿ ಎಂದು ಹೇಳಿದ ಅವರು ಆರೋಗ್ಯ ಇಲಾಖೆಯ ಜೊತೆಗೆ ಇತರೆ ಇಲಾಖೆಗಳು ಕೈಜೋಡಿಸಿದರೆ ಕ್ಷಯಮುಕ್ತ ಜಿಲ್ಲೆಯನ್ನಾಗಿ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
ಹೆಚ್ಚಾಗಿ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಹೆಲ್ತ್ ಕ್ಯಾಂಪ್ ಮಾಡಿದರೆ, ಪ್ರಾಥಮಿಕ ಹಂತದಲ್ಲಿಯೇ ಕ್ಷಯರೋಗವನ್ನು ಗುರುತಿಸುವ ಕೆಲಸವಾಗುತ್ತದೆ. ಈ ಮೂಲಕ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು ಎಂದರು.
ಪೊಲೀಸ್, ಕಂದಾಯ ಇಲಾಖೆಯೊಳಗೊಂಡಂತೆ ಎಲ್ಲಾ ಸರ್ಕಾರಿ ಇಲಾಖೆಗಳ ಸಿಬ್ಬಂದಿಗೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿ ಮತ್ತು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ಮತ್ತು ಜಾಗೃತಿ ನೀಡಿ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಅವರು ಮಾತನಾಡಿ ಕ್ಷಯರೋಗದ ಹರಡುವಿಕೆ ಕಡಿಮೆ ಇದ್ದರೂ ಮರಣ ಪ್ರಮಾಣ ಜಾಸ್ತಿ ಇದೆ. ಹೀಗಾಗಿ ಮೊದಲಿಗೆ ರೋಗವನ್ನು ಗುರುತಿಸುವ ಕೆಲಸ ಮಾಡಿ, ರೋಗ ಲಕ್ಷಣಗಳು ಕಂಡು ಬಂದವರಿಗೆ ಸೂಕ್ತ ಔಷಧಿ ನೀಡುವ ಜೊತೆಗೆ ಆಸ್ಪತ್ರೆಗೆ ಕರೆತರುವ ಕಾರ್ಯವೂ ಕೂಡ ನಡೆಯಲಿ; ಕ್ಷಯರೋಗದ ಕುರಿತು ಗ್ರಾಮೀಣ ಭಾಗದಲ್ಲಿ ಅರಿವಿನ ಕೊರತೆಯಿದೆ. ಅವರಿಗೆ ಈ ಕುರಿತು ಮಾಹಿತಿ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು, ಸದಸ್ಯರು ಕಾರ್ಯ ಪ್ರವೃತ್ತರಾಗಿ ರೋಗದ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಿ ಎಂದರು.
ಕ್ಷಯರೋಗದ ಬಗ್ಗೆ ಜನರಲ್ಲಿರುವ ನಿರ್ಲಕ್ಷ್ಯ ದೂರ ಮಾಡಿ, ಮನೆ ಮನೆ ಭೇಟಿಯ ಸಮಯದಲ್ಲಿ ಲಕ್ಷಣಗಳು ಕಂಡು ಬಂದವರನ್ನು ಆಸ್ಪತ್ರೆಗೆ ಸೇರಿಸಿ, ಸಮುದಾಯದ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದು ಅವರು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಮಾತನಾಡಿ ಜನರ ಬಳಿಗೆ ತೆರಳಿ ರೋಗಗಳ ಬಗ್ಗೆ ಮಾಹಿತಿ ನೀಡಿ, ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನರನ್ನು ಅತಿಯಾಗಿ ಕಾಡುವ ರೋಗಗಳ ಬಗ್ಗೆ ಸಮುದಾಯದ ಮಟ್ಟದಲ್ಲಿ ಅರಿವು ಮೂಡಿಸಿ ಎಂದರು.
ಕ್ಷಯ ವಿಜಯ ತಂಡ ಕಾರ್ಯಕ್ಕೆ ಮೆಚ್ಚುಗೆ: ಹಗರಿಬೊಮ್ಮನಹಳ್ಳಿ ತಾಲೂಕಿಗೆ 223 ಪ್ರಕರಣಗಳನ್ನು ಗುರುತಿಸುವ ಗುರಿ ನೀಡಿದ್ದು, ಹೆಚ್.ಬಿ.ಹಳ್ಳಿ ತಂಡ 298 ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಇತರರಿಗೆ ಮಾದರಿಯಾಗಿದೆ. ಕ್ಷಯರೋಗ ತಡೆಗಟ್ಟುವಲ್ಲಿ, ಗುರಿತಿಸುವಿಕೆ, ಚಿಕಿತ್ಸೆ ನೀಡುವಿಕೆ ಮತ್ತು ರೋಗಿಯ ಫಾಲೋ ಅಪ್ ಮಾಡುವ ಕಾರ್ಯದಲ್ಲಿ ಹೆಚ್.ಬಿ.ಹಳ್ಳಿ ಕ್ಷಯ ವಿಜಯ ತಂಡದ ಕಾರ್ಯ ಇತರೆ ತಾಲೂಕುಗಳಿಗೆ ಮಾದರಿ ಎಂದು ಕ್ಷಯ ವಿಜಯ ತಂಡದ ಕಾರ್ಯಕ್ಕೆ ಎಡಿಸಿ ಮಂಜನಾಥ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಆರೋಗ್ಯ ನಂದನಾ ಕಾರ್ಯಕ್ರಮ: ಸಂಭಾವ್ಯ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಆರೋಗ್ಯ ನಂದನಾ ಕಾರ್ಯಕ್ರಮ ಜಾರಿಗೆ ತಂದಿದ್ದು, 0 ರಿಂದ 18 ವರ್ಷದ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುವ ಕಾರ್ಯ ಈಗಾಗಲೇ ಶುರು ಮಾಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು ಜಿಲ್ಲೆಯಾದ್ಯಂತ ಪ್ರತಿದಿನ 250ರಿಂದ 350 ಜನ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಬ್ಲೂಹೆಚ್‍ಒ ಕ್ಷಯರೋಗ ಕನ್ಸಲ್ಟೆಂಟ್ ಹಂಸವೇಣಿ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಕ್ಷಯರೋಗ ಆಸ್ಪತ್ರೆಯ ಅಧೀಕ್ಷಕರಾದ ಡಾ.ವಿಶ್ವನಾಥ, ಬಳ್ಳಾರಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here