ಹಾಯ್, ಹಲೋ ಎಂದು ಮಾತುಕತೆ ಆರಂಭಿಸುವ ಬದಲು ಸ್ವಚ್ಛ ಭಾರತ ಎಂದು ಶುರು ಮಾಡಿ: ಸಚಿವ ನಾರಾಯಣಗೌಡ ಕರೆ

0
57

ವಿಜಯನಗರ(ಹೊಸಪೇಟೆ),ಅ.28 : ಹಾಯ್, ಹಲೋ ಎಂದು ಮಾತುಕತೆ ಆರಂಭಿಸುವ ಬದಲು ಸ್ವಚ್ಛ ಭಾರತ ಎಂದು ಶುರು ಮಾಡಿ ಎಂದು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಗೆ ರೇಷ್ಮೆ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಕರೆ ನೀಡಿದರು.
ಸ್ವಾತಂತ್ರ್ಯೋತ್ಸವದ ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಂಪಿ ಪ್ರಾಧಿಕಾರ, ಎ.ಎಸ್.ಐ, ಕೆ.ಎಸ್.ಪಿ.ಸಿ.ಬಿ, ಡಿ.ವೈ.ಎಫ್.ಎಸ್ ಮತ್ತು ಎನ್‍ಎಸ್‍ಎಸ್ ಘಟಕಗಳ ಸಹಯೋಗದೊಂದಿಗೆ ಕ್ಲೀನ್ ಇಂಡಿಯಾ ಅಭಿಯಾನ ನಡೆಯುತ್ತಿದ್ದು, ವಿಶ್ವಪ್ರಸಿದ್ದ ಹಂಪಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ ಹಾಗೂ ಸ್ವಚ್ಛ ಹಂಪಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಂಪಿ ವಿಶ್ವಪ್ರಸಿದ್ಧ ಸ್ಥಳ. ಇಲ್ಲಿಗೆ ದೇಶವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ದೇಶಕ್ಕೆ ಹೆಸರು ತರಬೇಕು. 100 ಜನರಿಂದ ಸಾವಿರ ಜನ, ಸಾವಿರ ಜನರಿಂದ ಹತ್ತು ಸಾವಿರ ಜನರು ಹೀಗೆ ಎಲ್ಲರೂ ಕೈಗೂಡಿಸುವುದರಿಂದ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿ ಆಗಲಿದೆ. ನಮ್ಮ ಕಸವನ್ನು ನಾವೇ ಸಂಗ್ರಹಿಸಬೇಕು. ಆದರೆ ನಮ್ಮಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಎಲ್ಲೆಂದರಲ್ಲಿ ಒಂದು ಟಿಶ್ಯೂ ಪೇಪರ್ ಕೂಡ ಹಾಕುವಂತಿಲ್ಲ. ಒಂದು ವೇಳೆ ಯಾರಾದ್ರೂ ಕಸ ಹಾಕಿದ್ರೇ ಅವರಿಗೆ ದಂಡ ವಿದಿಸುತ್ತಾರೆ, ಜೈಲಿಗೆ ಹಾಕುತ್ತಾರೆ. ಆದರೆ ನಮ್ಮದು ಪ್ರಜಾಪ್ರಭುತ್ವ ದೇಶ. ನಮ್ಮಲ್ಲಿ ಆ ಮಟ್ಟಕ್ಕೆ ಹೋಗುವುದು ಬೇಡ, ನಮ್ಮ ಕೆಲಸವನ್ನು ನಾವೇ ಮಾಡಬೇಕು ಎಂದು ಸಚಿವ ನಾರಾಯಣಗೌಡ ಅವರು ಕರೆ ನೀಡಿದರು.
ಹಿಂದೆ ನಮ್ಮ ಊರುಗಳಲ್ಲಿ ಪ್ರತಿ ಸೋಮವಾರದಂದು ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಎಲ್ಲರೂ ಮನೆ ಅಥವಾ ಊರುಗಳನ್ನು ಸ್ವಚ್ವತೆಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ವಿ. ಸ್ವಯಂ ಪ್ರೇರಿತವಾಗಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು, ಶಿಕ್ಷಣದ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ಶಾಲೆ ಕಾಲೇಜುಗಳು ಸೇರಿದಂತೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ನಮ್ಮ ದೇಶ ಎಂದು ಕಾಳಜಿ ಬರಬೇಕು. ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರು ಸುಧಾರಣೆ ಮಾಡಿಕೊಂಡರೇ ಸ್ವಚ್ಛ ಭಾರತ ಯಶಸ್ವಿ ಆಗಲಿದೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.
ಸಿಗರೇಟ್ ಪ್ಯಾಕ್ ಮೇಲೆ ಹಾಕುವಂತೆ ಪ್ಲಾಸ್ಟಿಕ್ ಬಾಟಲ್‍ಗಳ ಮೇಲೂ, ಜಾಗೃತಿ ಸಂದೇಶವನ್ನು ಹಾಕಿದ್ದಲ್ಲಿ ಅನೂಕಲವಾಗಲಿದೆ ಎಂದು ಸಚಿವ ನಾರಾಯಣಗೌಡ ಅವರು ತಿಳಿಸಿದರು.
ದೇಶದ 744 ಜಿಲ್ಲೆಗಳಲ್ಲಿ ಅಕ್ಟೋಬರ್ 1 ರಿಂದ 31 ರವರೆಗೆ ಕ್ಲೀನ್ ಇಂಡಿಯಾ ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಅವಧಿಯಲ್ಲಿ 75 ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದೆ. ಕರ್ನಾಟಕದಲ್ಲಿ ಐದೂವರೆ ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದ್ದು, ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ಸಿಕ್ಕಿರುವುದಕ್ಕೆ ಸಚಿವ ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದರು.
ಶನಿವಾರ ಹಾಗೂ ಭಾನುವಾರದಂದು ಸಾವಿರಾರು ಪ್ರವಾಸಿಗರು ಹಂಪಿಗೆ ಬರುತ್ತಾರೆ. ಹಾಗಾಗಿ, ಪ್ರತಿ ಶುಕ್ರವಾರ ಹಂಪಿಯಲ್ಲಿ ವಿಶೇಷವಾಗಿ ಸ್ವಚ್ಛತಾ ಅಭಿಯಾನ ಕೈಗೊಳ್ಳುತ್ತೇವೆ ಎಂದು ಉಪ ವಿಭಾಗಧಿಕಾರಿ ಸಿದ್ದರಾಮೇಶ್ವರ ಅವರು ಸಚಿವ ನಾರಾಯಣಗೌಡ ಅವರಿಗೆ ತಿಳಿಸಿದರು.
ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ ಸ್ವಚ್ಛ ಭಾತರದ ಪ್ರತಿಜ್ಞೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಯುವ ನೆಹರು ಯುವ ಕೇಂದ್ರದ ಹಾಗೂ ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ವೈದ್ಯ, ಜಿ.ಪಂ ಸಿಇಒ ಹರ್ಷಲ್ ಬೊಯೇಲ್ ನಾರಾಯಣಾವ್, ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್, ಹಂಪಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷೆ, ತಹಶೀಲ್ದಾರ್ ವಿಶ್ವನಾಥ್, ಹಿಂದುಸ್ಥಾನ್ ಕೊಕೊ ಕೋಲಾ ಮತ್ತು ಕಂಪನಿಯ ಘಟಕ ವ್ಯವಸ್ಥಾಪಕ ವಿನೋದ ಜಕಾತಿ, ಪುರತತ್ವ ಇಲಾಖೆಯ ಜಂಟಿ ನಿರ್ದೇಶಕ ಪ್ರಹ್ಲಾದ್, ಭಾರತೀಯ ಪುರತತ್ವ ಇಲಾಖೆಯ ಹುಚ್ಚೇಕರ್ ದೇಸಾಯಿ, ಕೆ.ಎಸ್.ಪಿ.ಸಿ.ಪಿ. ಇಲಾಖೆಯ ಉಮಾಶಂಕರ್, ಪ್ರವಾಸೋದ್ಯಮದ ಡಿಡಿ ತಿಪ್ಪೇಸ್ವಾಮಿ, ಜೆ.ಎಸ್.ಡಬ್ಲ್ಯೂ ಸಿ.ಎಸ್.ಆರ್. ಹೆಡ್ ಪೌಂಡೇಷನ್ ವಿನೋದ್ ಪುರೋಹಿತ್, ವಿದ್ಯಾರ್ಥಿಗಳು, ಯುವಕರು, ಸ್ವಯಂ ಸೇವಕರು ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here