ವಿಜಯನಗರದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ, ನಾಡು-ನುಡಿ ರಕ್ಷಣೆಯೊಂದಿಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪಣ: ಸಚಿವ ಆನಂದಸಿಂಗ್

0
120

ವಿಜಯನಗರ:,ನ.01:ವಿಜಯನಗರ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಸೋಮವಾರ ಆಚರಿಸಲಾಯಿತು.
ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಧ್ವಜಾರೋಹಣ ನೆರವೇರಿಸಿ, ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿ, ನಾಡದೇವತೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕರ್ನಾಟಕ ರಾಜ್ಯೋತ್ಸವ ಸಂದೇಶ ನೀಡಿದರು.
ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಭವ್ಯ ಪರಂಪರೆ ಹಾಗೂ ಅಗಾಧ ಆಲೋಚನೆಗಳು ಈ ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ನಾಡು ನುಡಿಯ ರಕ್ಷಣೆಯೊಂದಿಗೆ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮಲ್ಲರ ಮೇಲಿದೆ ಎಂದು ಸಚಿವ ಆನಂದಸಿಂಗ್ ಅವರು ಹೇಳಿದರು.
ಅಲ್ಲದೆ ಆದುನಿಕ ತಂತ್ರಜ್ಞಾನ ಇಂದು ಎಲ್ಲಾ ರಂಗಗಳನ್ನು ಪ್ರವೇಶಿಸಿದೆ, ಅದರ ಮಹಾನ್ ಶಕ್ತಿಯನ್ನು ನಾಡಿನ ಯುವ ಜನಾಂಗಕ್ಕೆ ಮುಟ್ಟಿಸಿ ಸಮಗ್ರ ಅಭಿವೃದ್ಧಿಗೆ ಪಣ ತೋಡುವ ಮೂಲಕ ನಮ್ಮ ಹಿರಿಯರ ಸಂಕಲ್ಪವನ್ನು ಸಾಕಾರಗೊಳಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯ ಆಗಿದೆ.ಎರಡು ಸಾವಿರ ವರ್ಷದ ಇತಿಹಾಸ ಇರುವ ಈ ನಮ್ಮ ಹೆಮ್ಮೆಯ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ದೊರೆತಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ನಮ್ಮ ನಾಡು ನುಡಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಅವರು ಹೇಳಿದರು.
ಕಾವೇರಿಯಿಂದ ಗೋದಾವರಿಯ ವರೆಗೆ ಹಬ್ಬಿದ ಈ ಪ್ರದೇಶದ ಸಂಸ್ಕೃತಿ ಭಾರತದ ಅತೀ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದು. ಜಗತ್ತಿನ ಇತರೆ ಭಾಷೆಗಳು ಅಂಬೆಗಾಲಿನಿಂದ ನಡೆಯುವ ಸಂಧರ್ಭದಲ್ಲಿ ಕನ್ನಡ ಭಾಷೆಯಲ್ಲಿ ಮಹಾ ಕಾವ್ಯಗಳು ರಚನೆಗೊಂಡಿರುವ ಕಥೆ ಬಲು ರೋಚಕವಾಗಿದೆ. ಈ ನಾಡನ್ನು ಶಾತವಾಹನರಿಂದ ಆರಂಭಗೊಂಡು ವಿವಿಧ ರಾಜ ಮಹಾರಾಜರು ಆಳಿದ್ದಾರೆ ಜೊತೆಗೆ ಈ ನಾಡನ್ನು ಭದ್ರಪಡಿಸುವ ಮೂಲಕ ಶ್ರೀಮಂತ ಸಂಸ್ಕೃತಿಯನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸುರ್ವಣ ಯುಗವನ್ನು ಸೃಷ್ಠಿಮಾಡಿ ಈ ನಾಡಿನ ಕಲೆ, ಭಾಷೆ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಎಂದೂ ಮರೆಯದ'' ವಿಜಯನಗರ ಸಾಮ್ರಾಜ್ಯ ನಮ್ಮದು; ಆ ಹೆಸರಿನಲ್ಲಿಯೇ ನೂತನ ಜಿಲ್ಲೆ ಉದಯಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಸಚಿವರು ಹೇಳಿದರು. ಕರ್ನಾಟಕವೆಂಬುದು ಕೇವಲ ಒಂದು ಭೂಪ್ರದೇಶಕಷ್ಟೇ ಸೀಮಿತವಾಗಿಲ್ಲ, ಕರ್ನಾಟಕವೆಂದರೇಒಂದು ಸಂಸ್ಕೃತಿ”, ಒಂದು ಜನ ಸಮುದಾಯ'', ಇದೊಂದು ಭವ್ಯ ಪರಂಪರೆಯನ್ನು ಪ್ರತಿನಿಧಿಸುವ ಪ್ರಾಚೀನ ಸುಧೀರ್ಘ ಇತಿಹಾಸವಾಗಿದೆ. ಕನ್ನಡನಾಡು ವಿವಿಧ ಮತ, ಪಂಥ, ಧರ್ಮಗಳ ಸಂಗಮವಾಗಿದೆ, ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಸಾಮರಸ್ಯವೇ ಈ ನಾಡಿನ ಜೀವಾಳವಾಗಿರುವ ಪುರಾವೆಗಳು ಈ ನಾಡಿನ ಇತಿಹಾಸದೂದ್ದಕ್ಕೂ ಸಾಕಷ್ಟು ಸಿಗುತ್ತವೆ. ಸರ್ವಧರ್ಮ ಸಹಿಷ್ಣುತೆ, ಸತ್ಯಾರಾಧನೆ, ಧರ್ಮನೀತಿ, ಸಮಭಾಳ್ವೆ, ಸೌರ್ಹಾದತೆ ಹಾಗೂ ಭಾವಕೈತೆಯ ದಿವ್ಯ ಸ್ವರ್ಗ ಈ ನಾಡು. ಈ ನಾಡಿನಲ್ಲಿ ಸಾಹಿತಿಗಳು, ಕವಿಗಳು, ಶಿಲ್ಪಿಗಳು, ಕಲಾವಿದರು, ಸಂಶೋಧಕರು ಹಾಗೂ ಇತಿಹಾಸಕಾರರು ತಮ್ಮದೇ ಶೈಲಿಯಲ್ಲಿ ಸಾಧನೆ ಮಾಡಿ ಕರ್ನಾಟಕ ಮಾತೆ ಭುವನೇಶ್ವರಿಯ ಕೀರ್ತಿ ಕಳಸಕ್ಕೆ ಗರಿಗಳಾಗಿದ್ದಾರೆ. ಇದಕ್ಕೆ ಮುಕುಟ ಪ್ರಾಯವೆಂಬುವಂತೆ ದೇಶದಲ್ಲಿಯೇ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಈ ನಮ್ಮ ಕನ್ನಡಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ವಿವರಿಸಿದರು. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನಾಡುವ ಈ ಪ್ರದೇಶವು ಭಾರತದ ಇತರೆ ಪ್ರದೇಶಗಳಂತೆಯೇ ಪರಕೀಯರ ಆಕ್ರಮಣಕ್ಕೆ ಒಳಗಾಗಿ ಸ್ವತಂತ್ರ್ಯವನ್ನು ಕಳೆದುಕೊಂಡಿತು. ಮುಂದೆ ಅನೇಕ ಮಹನೀಯರ ಹೋರಾಟದ ಫಲದಿಂದ ಭಾರತ ಸ್ವತಂತ್ರಗೊಂಡಿತು. ಆದರೆ, ಕನ್ನಡ ಭಾಷೆಯನ್ನಾಡುವ ಈ ಪ್ರದೇಶ ಬೇರೆ ಬೇರೆ ಆಡಳಿತ ವಿಭಾಗಗಳಲ್ಲಿ ಹಂಚಿಹೋಗಿ, ಕನ್ನಡಭಾಷೆಯನ್ನಾಡುವ ಜನರು ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದರು. ಮತ್ತೆ ಈ ನಾಡಿನ ಜನರನ್ನು ಒಂದುಗೂಡಿಸುವುದಕ್ಕೆ ಹೋರಾಟವೇ ನಡೆದು ಅದು ಕರ್ನಾಟಕದ ಏಕೀಕರಣ ಚಳುವಳಿಯಾಗಿದ್ದು ಈಗ ಇತಿಹಾಸ ಎಂದು ಅವರು ಹೇಳಿದರು. ಪೊಟ್ಟಿ ಶ್ರೀರಾಮುಲು ಅವರನ್ನು ಒಳಗೊಂಡಂತೆ ನಡೆದ ಹೋರಾಟದ ಫಲವಾಗಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಚಾಲನೆ ದೊರೆಯಿತು. ವಿವಿಧ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನಾಡುವ ಜನರನ್ನು ಒಳಗೊಂಡಂತೆ ಪ್ರತ್ಯೇಕ ಪ್ರಾಂತ ರಚನೆಗೆ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಆಲೂರು ವೆಂಕಟರಾಯರು, ಡೆಪ್ಯೂಟಿ ಚೆನ್ನಬಸಪ್ಪನವರು, ಕರ್ನಾಟಕ ವಿದ್ಯಾವರ್ದಕ ಸಂಘ ಹಾಗೂ ವಾಗ್ಭೂಷಣ ಪತ್ರಿಕೆ ಮುಂತಾದ ಹತ್ತು ಹಲವರ ಹೋರಾಟದ ಫಲವಾಗಿ 1953ರಲ್ಲಿ ಫಜಲ್ ಅಲಿ ಸಮಿತಿ ರಚನೆಯಾಯಿತು. 1955 ರಲ್ಲಿ ಈ ಸಮಿತಿ ವರದಿ ಸಲ್ಲಿಸಿದ ಬಳಿಕ, 1956ರ ನವ್ಹೆಂಬರ್ 01 ರಂದು ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷೆಯನ್ನಾಡುವ ಜನರ ರಾಜ್ಯ ಉದಯವಾಯಿತು. ಈ ಸುದಿನವನ್ನೇ ನಾವಿಂದು ಪ್ರತೀ ವರ್ಷ ಕರ್ನಾಟಕ ರಾಜ್ಯೋತ್ಸವವೆಂದು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಅವರು ವಿವರಿಸಿದರು. *ಹೋರಾಟಗಾರರನ್ನು ಸ್ಮರಿಸಿದ ಸಚಿವ ಸಿಂಗ್: ಒಂದು ನೂರು ವರ್ಷದ ನಿರಂತರ ಹೋರಾಟದ ಫಲಸ್ವರೂಪವಾಗಿ 1956ರ ನವೆಂಬರ್ 1 ರಂದು ಏಕೀಕೃತ ರಾಜ್ಯ ಉದಯಗೊಳ್ಳಲು ಹೋರಾಡಿದ ಮಹನೀಯರನ್ನು ಸಚಿವ ಆನಂದಸಿಂಗ್ ಅವರು ಸ್ಮರಿಸಿದರು. ಆಚಾರ್ಯ ಬಿ.ಎಂ.ಶ್ರೀಕಂಠಯ್ಯ, ಕುವೆಂಪು, ಅ.ನ.ಕೃಷ್ಣರಾಯರು, ಆಲೂರು ವೆಂಕಟರಾಯರು, ಗಂಗಾಧರ ದೇಶಪಾಂಡೆ, ಡೆಪ್ಯೂಟಿ ಚೆನ್ನಬಸಪ್ಪ, ಮಂಗಳವೆಡಿ ಶ್ರೀನಿವಾಸರಾಯರು, ಎಸ್.ನಿಜಲಿಂಗಪ್ಪ, ಹುಲ್ಲೂರು ಶ್ರೀನಿವಾಸ ಜ್ಯೋಯಿಸ್, ಕೆಂಗಲ್ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗರ್, ಹಾರನಹಳ್ಳಿ ರಾಮಸ್ವಾಮಿ, ಕಡಿದಾಳು ಮಂಜಪ್ಪ, ಪಾಟೀಲ್ ಪುಟ್ಟಪ್ಪ ಮುಂತಾದ ಅನೇಕ ಸಾಹಿತಿಗಳು, ಹೋರಾಟಗಾರರನ್ನು ಹಾಗೂ ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬರ ಹುತಾತ್ಮ ಕಥೆಯನ್ನು ಈ ದಿನ ಸ್ಮರಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು. 1956ರಲ್ಲಿ ಕನ್ನಡ ಭಾಷಾವಾರು ಪ್ರಾಂತವೇನೋ ರಚನೆಯಾಯಿತು, ಆದರೆ ಈ ನಾಡಿಗೆ ಕರ್ನಾಟಕವೆಂದು ನಾಮಕರಣ ಮಾಡಲು ಮತ್ತೊಂದು ಸುತ್ತಿನ ಹೋರಾಟ ನಡೆದು ಡಿ.ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಅಂದರೆ 1973ರ ನವೆಂಬರ್ 01 ರಂದು ಕನ್ನಡವನ್ನಾಡುವ ಮೈಸೂರು ರಾಜ್ಯಕರ್ನಾಟಕ” ರಾಜ್ಯವಾಗಿ ಹೊರಹೊಮ್ಮುವ ಮೂಲಕ ನಾಡಿನ ಬಹುಪಾಲು ಸಾಹಿತಿಗಳ, ಸಂಶೋಧಕರ, ಇತಿಹಾಸಕಾರರ ಹಾಗೂ ಹೋರಾಟಗಾರರ ಕನಸು ನನಸಾಯಿತು ಎಂದರು.
*ಲಕ್ಷಲಕ್ಷ ಕಂಠಗಳಲ್ಲಿ ಕನ್ನಡಗೀತಗಾಯನ;91695 ಜನರು ಭಾಗಿ:ಪ್ರಸಕ್ತ ಸಾಲಿನಲ್ಲಿ 66 ನೇ ಕರ್ನಾಟಕ ರಾಜ್ಯೋತ್ಸವವನ್ನು ವಿಭಿನ್ನವಾಗಿ ಹಾಗೂ ವೈಶಿಷ್ಟ ಪೂರ್ಣವಾಗಿ ಆಚರಿಸುವ ಹಿನ್ನಲೆಯಲ್ಲಿ ನಮ್ಮ ಸರ್ಕಾರ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ರಾಜ್ಯೋತ್ಸವ ಆಚರಣೆಗೆ ಮೆರಗನ್ನು ಉಂಟುಮಾಡಿದೆ ಎಂದು ಸಚಿವ ಆನಂದಸಿಂಗ್ ಅವರು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಅ.24ರಿಂದ ಅ.31ರವರೆಗೆ “ಕನ್ನಡಕ್ಕಾಗಿ ನಾವು” ಅಭಿಯಾನವನ್ನು ಹಮ್ಮಿಕೊಂಡು ಕನ್ನಡ ನಾಡು ನುಡಿ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅ.28ರಂದು ಹಮ್ಮಿಕೊಂಡಿದ್ದ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯ 91695 ಜನರು ಭಾಗವಹಿಸಿರುವುದು ರಾಜ್ಯದ ಗಮನವನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ಪೂರ್ತಿ ವೇದಿಕೆ ಮತ್ತು ವಿಕಾಸ ಯುವಕ ಮಂಡಳಿ ಸದಸ್ಯರು ಹಂಪಿಯಿಂದ ತಂದ ಕನ್ನಡ ಜ್ಯೋತಿಯನ್ನು ಸಚಿವರು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು, ಕೋವಿಡ್ ಲಸಿಕಾಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಅಶೋಕ ಜೀರೆ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್,ಜಿಪಂ ಸಿಇಒ ಭೋಯರ್ ಹರ್ಷಲ್ ನಾರಾಯಣರಾವ್, ಎಸ್ಪಿ ಡಾ.ಅರುಣ ಎಸ್.ಕೆ,ಸಹಾಯಕ ಆಯುಕ್ತ ಸಿದ್ದರಾಮೇಶ್ವರ,ತಹಸೀಲ್ದಾರ್ ವಿಶ್ವನಾಥ,ತಾಪಂ ಇಒ ವಿಶ್ವನಾಥ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು

LEAVE A REPLY

Please enter your comment!
Please enter your name here