ಎನ್‌ಇಪಿ-೨೦೨೦ಯ ದಿಡೀರ್ ಏರಿಕೆ ವಿರುದ್ಧ ಬೃಹತ್ ಪ್ರತಿಭಟನೆ.

0
78

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಅನ್ನು ಅಪ್ರಜಾತಾಂತ್ರಿಕ ಹಾಗೂ ತರಾತುರಿಯ ಹೇರಿಕೆಯನ್ನು ವಿರೋಧಿಸಿ ನಗರದಲ್ಲಿ ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತ.

ಈ ಪ್ರತಿಭಟನೆಯನ್ನು ಉದ್ದೇಶಿಸಿ AIDSOನ ಜಿಲ್ಲಾ ಅಧ್ಯಕ್ಷರಾದ ಗುರಳ್ಳಿರಾಜ ರವರು ಮಾತಾನಾಡುತ್ತಾ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯದಲ್ಲಿ ಎನ್‌ಇಪಿ-೨೦೨೦ ಅನ್ನು ಅನುಸ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಈ ನೀತಿಯ ಪ್ರಸ್ತಾವನೆ ಆದಾಗಿನಿಂದಲೂ, ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗು ಪೋಷಕರು ವ್ಯಾಪಕ ವಿರೋಧವನ್ನು ವ್ಯಕ್ತಪಡಿಸಿದ್ದು ಸಹ ತಮ್ಮ ಗಮನದಲ್ಲಿ ಇದೆ. ಎನ್‌ಇಪಿ-೨೦೨೦ರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತರಲು ಪ್ರಸ್ತಾಪಿಸಿದ್ದ ಹಲವು ಬದಲಾವಣೆಗಳು ಅಥವಾ ಸೇರ್ಪಡೆಗಳ ಕುರಿತು ಹಲವಾರು ಅಂಶಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಮತ್ತು ಭಿನ್ನಾಭಿಪ್ರಾಯಗಳಿಗೆ ಗ್ರಾಸವಾಗಿತ್ತು. ಆದರೆ, ಇವೆಲ್ಲದರ ನಡುವೆಯೂ ರಾಜ್ಯ ಸರ್ಕಾರ ಅತ್ಯಂತ ತರಾತುರಿಯಲ್ಲಿ, ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿ ಎನ್‌ಇಪಿ-೨೦೨೦ರ ಭಾಗವಾಗಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಅನುಷ್ಠಾನಕ್ಕೆ ತಂದಿದೆ. ಆ ಮೂಲಕ ರಾಜ್ಯದ ಶಿಕ್ಷಕ ವರ್ಗ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರವಾಗಿದೆ. ಕಾರಣ, ಈಗಾಗಲೇ ಪ್ರಥಮ ಡಿಗ್ರಿ ತರಗತಿಗಳು ಆರಂಭವಾಗಿದ್ದು, ಎನ್‌ಇಪಿ-೨೦೨೦ ಆಧಾರಿತ ಪಠ್ಯಕ್ರಮ ತಯಾರಾಗಿಲ್ಲ. ಅಂದರೆ, ಶಿಕ್ಷಕರಿಗಾಲಿ ವಿದ್ಯಾರ್ಥಿಗಳಿಗಾಗಲಿ ಪಠ್ಯಪುಸ್ತಕ ಲಭ್ಯವಿಲ್ಲ. ನೂತನ ಶಿಕ್ಷಣ ನೀತಿಯಡಿ ಪಾಠ ಮಾಡುವ ಶಿಕ್ಷಕರಿಗೆ ತರಬೇತಿ ಸಹ ದೊರೆತಿಲ್ಲ. ಈ ರೀತಿಯ ಪೂರ್ವ ತಯಾರಿಗಳಿಲ್ಲದೆ, ಏಕಾಏಕಿ ಹೇರಲ್ಪಟ್ಟಿರುವ ನೂತನ ಶಿಕ್ಷಣ ನೀತಿಯಿಂದಾಗಿ ಒಂದೆಡೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾದರೆ, ಇನ್ನೊಂದೆಡೆ ಇದು ಶಿಕ್ಷಣದ ಗುಣಮಟ್ಟಕ್ಕೆ ಮಾರಕವಾಗುತ್ತದೆ ಎಂಬ ಆತಂಕ ರಾಜ್ಯದ ಶಿಕ್ಷಕರು, ಶಿಕ್ಷಣ ಪ್ರೇಮಿ ಜನತೆ ಹಾಗು ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಇದರೊಂದಿಗೆ, ಈ ನೀತಿಯಲ್ಲಿ ಪ್ರಸ್ತಾಪವಾಗಿರುವ ಹಲವು ಅಂಶಗಳು ನೇರವಾಗಿ ಶಿಕ್ಷಣದ ಖಾಸಗೀಕರಣ, ಕೇಂದ್ರೀಕರಣ ಹಾಗು ಕೋಮುವಾದಿಕರಣಕ್ಕೆ ಕಾರಣವಾಗುತ್ತದೆ ಎಂಬುದರ ಕುರಿತು ಅಭಿಪ್ರಾಯಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮಾನ್ಯ ರಾಜ್ಯ ಸರ್ಕಾರ ಜನತೆಯ, ಶಿಕ್ಷಕರ, ವಿದ್ಯಾರ್ಥಿಗಳು ಮತ್ತು ಸಂಘಟನೆಗಳ ಎಲ್ಲ ಅಭಿಪ್ರಾಯಗಳನ್ನು ಪ್ರಜಾತಾಂತ್ರಿಕವಾಗಿ, ಕೂಲಂಕುಷವಾಗಿ ಗಮನಿಸಿ, ಗಣನೆಗೆ ತೆಗೆದುಕೊಂಡು ನೂತನ ಶೈಕ್ಷಣಿಕ ನೀತಿಯ ಬಗ್ಗೆ ವಿಮರ್ಶೆ ಮಾಡಬೇಕು ಎಂದು ಅಪೇಕ್ಷಿಸುತ್ತೇವೆ. ಅಲ್ಲಿಯವರೆಗೂ, ಈಗ ಅನುಷ್ಠಾನಕ್ಕೆ ತಂದಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ವಿದ್ಯಾರ್ಥಿಗಳು, ಶಿಕ್ಷಕರ ಭವಿಷ್ಯ ಹಾಗು ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಸದುದ್ದೇಶದಿಂದ ಸರ್ಕಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ AIDSOನ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರಾದ ಕೆ.ಈರಣ್ಣ ರವರು ಪ್ರಸ್ತಾವಿಕವಾಗಿ ಮಾತಾನಾಡುತ್ತಾ ಈ ವರ್ಷದ ವಿದ್ಯಾರ್ಥಿ ಬಸ್ ಪಾಸ್ ಅನ್ನು ಉಚಿತವಾಗಿ ನೀಡಬೇಕು ಎಂಬುದು ಸರ್ಕಾರಕ್ಕೆ ರಾಜ್ಯದ ವಿದ್ಯಾರ್ಥಿಗಳ ಒಕ್ಕೊರಲಿನ ಮನವಿಯಾಗಿದೆ. ಕೋವಿಡ್ ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್ ಸಂದರ್ಭಗಳಲ್ಲಿ ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿವೆ. ಸಂಪೂರ್ಣ ವೆಚ್ಚ ಭರಿಸಿ ಪಡೆದಿದ್ದ, ಕಳೆದ ಶೈಕ್ಷಣಿಕ ವರ್ಷದ ಬಸ್‌ಪಾಸ್ ಲಾಕ್‌ಡೌನ್ ಹಾಗು ಆನ್‌ಲೈನ್ ತರಗತಿಗಳ ಹಿನ್ನೆಲೆಯಲ್ಲಿ ಬಹುಪಾಲು ಬಳಕೆಯೇ ಆಗಿಲ್ಲ. ಪುನಃ ಈ ವರ್ಷವೂ ವಿದ್ಯಾರ್ಥಿಗಳು ವಿದ್ಯಾರ್ಥಿ ಪಾಸ್ ಅನ್ನು ವೆಚ್ಚ ಭರಿಸಿ ಪಡೆಯಬೇಕು ಎನ್ನುವುದು ಅತ್ಯಂತ ಕಷ್ಟಕರ. ಆರ್ಥಿಕ ಹೊರೆ, ಸಂಕಷ್ಟದ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದು ಕೆಲಸಕ್ಕೆ ಹೋಗುವ ಪರಿಸ್ಥಿತಿ ಬಂದಿದೆ. ಈಗ ಶಾಲಾ-ಕಾಲೇಜು ಶುಲ್ಕದ ಜೊತೆಗೆ, ಬಸ್‌ಪಾಸ್ ವೆಚ್ಚ ಭರಿಸುವುದು ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ರಾಜ್ಯ ಸರ್ಕಾರ ಉಚಿತ ಬಸ್‌ಪಾಸ್ ಒದಗಿಸುವ ನಿರ್ಧಾರ ಮಾಡಿದರೆ, ಅದರಿಂದ ಬಹುದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರೆಸಲು ಸಹಕಾರಿಯಾಗುತ್ತದೆ. ಹಾಗಾಗಿ, ಈ ವರ್ಷದ ವಿದ್ಯಾರ್ಥಿ ಪಾಸ್‌ನ ವೆಚ್ಚವನ್ನು ಪೋಷಕರು, ವಿದ್ಯಾರ್ಥಿಗಳ ಮೇಲೆ ಹೊರಿಸದೆ ಸರ್ಕಾರ ಅದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಬೇಕು. ಇಂತಹ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಪರವಾದ ನಿರ್ಧಾರವನ್ನು ರಾಜ್ಯ ಸರ್ಕಾರವು ಕೈಗೊಳ್ಳುತ್ತದೆ ಎಂಬ ಭರಸೆಯನ್ನು ರಾಜ್ಯದ ವಿದ್ಯಾರ್ಥಿಗಳು ಇರಿಸಿದ್ದೇವೆ ಎಂದು ಹೇಳಿದರು.

ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರಾದ ಶಾಂತಿ ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರುಗಳಾದ ಮಂಜುನಾಥ, ನಿಂಗರಾಜ, ಅನುಪಮ, ಸಿದ್ದು, ನಿಹಾರಿಕ ಹಾಗೂ ಜಿಲ್ಲಾ ಸಮಿತಿ ಸದಸ್ಯರುಗಳಾದ ಉಮದೇವಿ, ನಾಗರತ್ನ, ಲಕ್ಷ್ಮಿ ಮೋಹನ್ ಮತ್ತು ವಿದ್ಯಾರ್ಥಿಗಳಾದ ಸುನೀಲ್, ತಿಪ್ಪೇರುದ್ರ, ಶಿವ, ಮಂಜು ಮುಂತಾದವರು ಭಾಗವಹಿಸಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here