ಕಡಿಮೆ ಬೆಲೆಗೆ ಭತ್ತ ಮಾರಿ ರೈತರು ನಷ್ಟ ಅನುಭವಿಸಬೇಡಿ– ಡಿಸಿ

0
52

ದಾವಣಗೆರೆ,ನ.25 : ಸರ್ಕಾರ ಭತ್ತಕ್ಕೆ ಬೆಂಬಲಬಲೆ ನೀಡಿ ಕೊಂಡುಕೊಳ್ಳಲು ಖರೀದಿ ಕೇಂದ್ರ ತೆರೆದಿದ್ದು, ರೈತರು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಭತ್ತ ಮಾರಿ ಕೈ ಸುಟ್ಟುಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಗುರುವಾರ ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭತ್ತದ ಬೆಂಬಲ ಬೆಲೆ ಹಾಗೂ ಭತ್ತ ಖರೀದಿ ಕೇಂದ್ರ ತೆರೆಯುವ ಬಗೆಗಿನ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2021-22ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆಗೆ ಭತ್ತ ಖರೀದಿಸಲು ನಿರ್ಧರಿಸಿದ್ದು, ಅದರಂತೆ ಸಾಮಾನ್ಯ ಭತ್ತಕ್ಕೆ 1940 ರೂ., ಹಾಗೂ ಗ್ರೇಡ್-ಎ ಭತ್ತಕ್ಕೆ 1960 ರೂ., ಬೆಂಬಲ ಬೆಲೆ ಘೋಷಿಸಿದೆ ಎಂದರು.
ರಾಜ್ಯದ ರೈತರಿಂದ 3.35 ಲಕ್ಷ ಮೆ.ಟನ್ ಭತ್ತವನ್ನು ಖರೀದಿಸುತ್ತಿದ್ದು, ಜಿಲ್ಲೆಯ ದಾವಣಗೆರೆ, ಹರಿಹರ, ಹೊನ್ನಾಳಿ ಹಾಗೂ ಚನ್ನಗಿರಿ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ರೈತರು ಭತ್ತವನ್ನು ಈ ಖರೀದಿ ಕೇಂದ್ರಗಳಲ್ಲಿ ಕನಿಷ್ಟ ಬೆಂಬಲ ಬೆಲೆಗೆ ಮಾರಬಹುದಾಗಿದೆ. ಎಫ್.ಎ.ಕ್ಯೂ ಗುಣಮಟ್ಟದ ಭತ್ತವನ್ನು ಮಾರಲು ಇಚ್ಚಿಸುವ ರೈತರು ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿನ ಕೆ.ಎಫ್.ಸಿ.ಸಿ (ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ) ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹಾಗೂ ಭತ್ತ ಖರೀದಿಸಲು ಅಕ್ಕಿ ಗಿರಣಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿಮಾಡಿಕೊಳ್ಳಬೇಕು ಎಂದರು.
ಯಾವುದೇ ಕಾರಣಕ್ಕೂ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳು ಕಂಡು ಬಂದರೆ ಅಥವಾ ರೈತರ ಹೆಸರಲ್ಲಿ ಭತ್ತ ಮಾರಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ, ಎ.ಪಿ.ಎಂ.ಸಿ ಕಾರ್ಯದರ್ಶಿ ಪ್ರಭು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here