ಧಾರವಾಡ ಜಿಲ್ಲೆಯಲ್ಲಿ ಓರ್ವ ಮಹಿಳೆಗೆ ಓಮಿಕ್ರಾನ್ ಸೋಂಕು ದೃಢ ; ಈಗ ಸಂಪೂರ್ಣ ಗುಣಮುಖ: ಲಸಿಕಾಕರಣದಲ್ಲಿ ಶೇ.98 ರಷ್ಟು ಸಾಧನೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ

0
91

ಧಾರವಾಡ:ಡಿ.20: ರಾಜ್ಯದಲ್ಲಿ ಇಂದು ಕೋವಿಡ್-19 ರ ಒಮಿಕ್ರಾನ್ ರೂಪಾಂತರದ ಐದು ಹೊಸ ಪ್ರಕರಣಗಳು ದೃಢಪಟ್ಟಿದ್ದು ಇದರಲ್ಲಿ ಧಾರವಾಡ ಜಿಲ್ಲೆಯ 54 ವರ್ಷದ ಮಹಿಳೆಯಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಆದರೆ ಅಗತ್ಯ ಚಿಕಿತ್ಸೆ, ಔಷಧಿ ಪಡೆದುಕೊಂಡು ಈಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಇಂದು ಬೆಳಿಗ್ಗೆ ಅವರು ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ, ಈ ಮಾಹಿತಿ ನೀಡಿದರು. 

ಸೋಂಕಿತ ಮಹಿಳೆಯು ಕಳೆದ ಡಿ.4 ರಂದು ಜ್ವರ ಲಕ್ಷಣ ಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಡಿಸೆಂಬರ್ 5ಕ್ಕೆ ಪಾಸಿಟಿವ್ ವರದಿ ಬಂದಿತ್ತು. ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಂತರ ಅವರ ಗಂಟಲು ದ್ರವವನ್ನು ಜಿನೋಮ ಸ್ವಿಕೆನ್ಸ್‍ಗೆ ಕಳುಹಿಸಲಾಗಿತ್ತು. ಈಗ ಅದು ಪಾಸಿಟಿವ್ ವರದಿ ಬಂದಿದೆ. ಆದರೆ ನಿಯಮಾನುಸಾರ ಎಲ್ಲ ಮುಂಜಾಗೃತೆ ವಹಿಸಿ ಸೋಂಕಿತ ಮಹಿಳೆಗೆ ಅಗತ್ಯ ಚಿಕಿತ್ಸೆ, ಔಷಧಿ ಮತ್ತು ಆರೋಗ್ಯ ಸಲಹೆ ನೀಡಿರುವುದರಿಂದ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದರು ಜಿಲ್ಲಾಧಿಕಾರಿ ತಿಳಿಸಿದರು.

ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಪಾಸಿಟಿವ್ ಬಂದಿದ್ದ ಮಹಿಳೆಗೆ ಕಳೆದ 2 ದಿನಗಳಲ್ಲಿ 2 ಬಾರಿ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದು ಮತ್ತು ಇಂದು ಬೆಳಿಗ್ಗೆ ಒಂದು ನೆಗೆಟಿವ್ ವರದಿ ಬಂದಿವೆ.  ಯಾವುದೇ ಆತಂಕಪಡುವ ಅಗತ್ಯವಿಲ್ಲ. ಮತ್ತು ಸೊಂಕಿತರ ಪ್ರಥಮ ಸಂಪರ್ಕದ 4 ಜನ ಹಾಗೂ ದ್ವಿತೀಯ ಸಂಪರ್ಕದ 133 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಎಲ್ಲರದ್ದು ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸೋಂಕಿತ ಮಹಿಳೆಯ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಅಗತ್ಯ ಮುಂಜಾಗೃತೆ ವಹಿಸಿ ಕ್ರಮ ಕೈಗೊಳ್ಳಲಾಗಿದೆ. ಮತ್ತು ಕಚೇರಿಗೆ ರಜೆ ನೀಡಲಾಗಿದೆ. ಸೋಂಕಿತ ಮಹಿಳೆಯು ಕೋವಿಡ್ ಮಾರ್ಗಸೂಚಿಗಳ ಪ್ರಕಾರ 10 ಮತ್ತು 7 ಸೇರಿ ಒಟ್ಟು 17 ದಿನ ಹೋಮ್ ಐಸೋಲೇಷನ್ ಆಗಿದ್ದು, ಇನ್ನು ಒಂದು ವಾರ ಹೋಂ ಐಸೋಲೇಷನ್‍ದಲ್ಲಿ ಇರುವಂತೆ ಸಲಹೆ ನೀಡಲಾಗಿದೆ. ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖವಾಗಿರುವುದರಿಂದ ಸಾರ್ವಜನಿಕರು ಯಾವುದೇ ಭಯ, ಆತಂಕಗಳಿಗೆ ಒಳಗಾಗದೆ ಕೋವಿಡ್ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಶೇ.98 ರಷ್ಟು ಲಸಿಕಾಕರಣ : ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣಕ್ಕೆ 14 ಲಕ್ಷ 44 ಸಾವಿರ ಗುರಿ ಹೊಂದಲಾಗಿತ್ತು. ಅದರಲ್ಲಿ ಈವರೆಗೆ (ಡಿ.19) ಮೊದಲ ಡೋಸ್‍ನ್ನು 14,15,052 ಜನರಿಗೆ ನೀಡಲಾಗಿದ್ದು, ಶೇ.98 ರಷ್ಟು ಸಾಧನೆಯಾಗಿದೆ. ಮತ್ತು 2ನೇ ಡೋಸ್‍ನ್ನು 10,23,851 ಜನರಿಗೆ ನೀಡಲಾಗಿದ್ದು, ಶೇ.70.90 ರಷ್ಟು ಗುರಿ ಸಾಧಿಸಲಾಗಿದೆ. ಹಾಗೂ ಜಿಲ್ಲೆಯಲ್ಲಿ 59,000 ಕೋವಿಶೀಲ್ಡ್ ಲಸಿಕೆ ಮತ್ತು 9,780 ಕೋವ್ಯಾಕ್ಸಿನ್ ಲಸಿಕೆ ಸೇರಿ ಒಟ್ಟು 68,780 ಡೋಸ್ ಲಸಿಕೆ ದಾಸ್ತಾನು ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪಾಸಿಟಿವಿಟಿ ದರ : ನವೆಂಬರ್ 23 ರ ಎಸ್‍ಡಿಎಂ ಕ್ಲಸ್ಟರ್‍ಕ್ಕಿಂತ ಪೂರ್ವದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ 0.0 ಆಗಿತ್ತು. ನಂತರದಲ್ಲಿ ದಿನಕ್ಕೆ ಎರಡ್ಮೂರು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈಗ 0.12 ಕೋವಿಡ್ ಪಾಸಿಟಿವಿಟಿ ದರ ಜಿಲ್ಲೆಯಲ್ಲಿದೆ ಎಂದರು.

ಕೋವಿಡ್ ಟೆಸ್ಟಿಂಗ್ : ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ನಿರಂತರವಾಗಿ ಮುಂದುವರಿಸಲಾಗಿದೆ. ಅಂದಾಜು ಪ್ರತಿದಿನ 3 ರಿಂದ 4 ಸಾವಿರ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಡಿಸೆಂಬರ್ 19 ರವರೆಗೆ 29 ಕೋವಿಡ್ ಪಾಸಿಟಿವ್ ಪ್ರಕರಣಗಳು ಸಕ್ರಿಯವಾಗಿದ್ದು, ಅಗತ್ಯ ಚಿಕಿತ್ಸೆ ಪಡೆದು ಪ್ರತಿದಿನ ಗುಣಮುಖರಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕೋವಿಡ್ ನಿಯಮ ಉಲ್ಲಂಘನೆ; ದಂಡ: ಜಿಲ್ಲೆಯಲ್ಲಿ ಆರಂಭದಿಂದಲೂ ಕೋವಿಡ್ ಮಾರ್ಗಸೂಚಿಯಲ್ಲಿರುವ ಸುರಕ್ಷತಾ ನಿಯಮಗಳನ್ನು ಪಾಲಿಸದ ಸಾರ್ವಜನಿಕರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಧಾರವಾಡ ಗ್ರಾಮೀಣ ಭಾಗದಲ್ಲಿ ಪೊಲೀಸ್ ಇಲಾಖೆಯಿಂದ ಸಾಮಾಜಿಕ ಅಂತರ ಪಾಲನೆ ಮಾಡದ ಹಾಗೂ ಮಾಸ್ಕ್ ಧರಿಸದ ಪ್ರಕರಣಗಳಲ್ಲಿ 3,09,87,950 ಹಾಗೂ ಮಹಾನಗರ ವ್ಯಾಪ್ತಿಯಲ್ಲಿ ಪೊಲೀಸ್ ಕಮೀಷನ್‍ರೇಟ್‍ದಿಂದ 1,45,67,700 ಮತ್ತು ಮಹಾನಗರ ಪಾಲಿಕೆಯಿಂದ 6,07,56,900, ನಗರ ಸ್ಥಳೀಯ ಸಂಸ್ಥೆಗಳಿಂದ 3,78,650 ಮತ್ತು ಗ್ರಾಮ ಪಂಚಾಯತ್‍ಗಳಿಂದ ದಂಡ ವಿಧಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸಾಮಾಜಿಕ ಅಂತರ ಕಾಪಾಡದ 55,266 ಪ್ರಕರಣಗಳನ್ನು ದಾಖಲಿಸಿ 1,11,13,650 ರೂ.ಗಳು ಹಾಗೂ ಮಾಸ್ಕ್ ಧರಿಸದ 81,201 ಪ್ರಕರಣಗಳನ್ನು ದಾಖಲಿಸಿ 1,45,82,650 ದಂಡ ವಿಧಿಸಲಾಗಿದ್ದು, ಒಟ್ಟು 2,56,96,300 ದಂಡ ಸಂಗ್ರಹವಾಗಿದೆ ಎಂದು ಹೇಳಿದರು.

ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರು ಲಸಿಕೆ ಪಡೆಯಬೇಕು. ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ ಸ್ಯಾನಿಟೈಸರ್ ಬಳಸಬೇಕು. ಮತ್ತು ಸಾಮಾಜಿಕ ಅಂತರ ಕಾಪಾಡಬೇಕು. ಅಂದಾಗ ಮಾತ್ರ ಕೋವಿಡ್‍ನಿಂದ ಸ್ವಯಂ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಈ ಕುರಿತು ನಿರಂತರವಾಗಿ ಜಿಲ್ಲೆಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here