ಕೃಷಿ ಪ್ರಧಾನ ರಾಷ್ಟ್ರದಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡಿ: ಅನಿತಾ ಪೂವಯ್ಯ

0
148

ಮಡಿಕೇರಿ ಡಿ.23 :-ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತಪರ ಯೋಜನೆಗಳು ಮತ್ತು ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ವತಿಯಿಂದ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದು ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಕೃಷಿ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ಪ್ರಾಚೀನ ಇತಿಹಾಸ ಮತ್ತು ನಾಗರಿಕತೆಯ ಕಾಲದಿಂದಲೂ ಕೃಷಿ ಪ್ರಧಾನ ದೇಶವಾಗಿಯೇ ಅಭಿವೃದ್ದಿ ಕಾರ್ಯಗಳು ಸಾಗುತ್ತಿವೆ ಎಂದರು.
ಯಾಂತ್ರೀಕರಣ, ಡಿಜಿಟಲೀಕರಣ ಮುಂತಾದ ತಂತ್ರಜ್ಞಾನಗಳಿಂದ ಇಂದಿನ ಯುವ ಪೀಳಿಗೆ ಕೃಷಿಯನ್ನು ಮರೆಯುತ್ತಿದೆ. ಆದ್ದರಿಂದ ಶಾಲಾ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಅರಿವು ಕಾರ್ಯಗಾರಗಳು, ವಿಶೇಷ ತರಗತಿಗಳನ್ನು ನಿಯೋಜಿಸುವಂತೆ ಸಲಹೆ ಮಾಡಿದರು.
ಸರ್ಕಾರದಿಂದ ದೊರೆಯುವ ಯೋಜನೆಗಳು ಮತ್ತು ವಿವಿಧ ಕಾರ್ಯಕ್ರಮಗಳು ರೈತರಿಗೆ ನೇರವಾಗಿ ತಲುಪಬೇಕು. ಕೃಷಿ ಬೆಳೆಯುವ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಯೋಜನೆ ಮತ್ತು ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಕಾರ್ಯ ಸಂಬಂಧಪಟ್ಟ ಇಲಾಖೆಯ ಮತ್ತು ಅಧಿಕಾರಿಗಳಿಂದ ನಡೆಯಬೇಕಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ನಾಪಂಡ ರ್ಯಾಲಿ ಮಾದಯ್ಯ ಅವರು ಹೇಳಿದರು.
ಸರ್ಕಾರ ಮತ್ತು ಸರ್ಕಾರೇತರ ರೈತಪರ ಯೋಜನೆಗಳು ಕಟ್ಟ ಕಡೆಯ ರೈತನಿಗೂ ದೊರೆಯುವಂತಾಗಬೇಕು. ನಿರಂತರ ಬೆಲೆ ಕುಸಿತ, ಪ್ರಾಕೃತಿಕ ವಿಕೋಪ, ಮಳೆಹಾನಿ ಮತ್ತಿತರ ತೊಂದರೆಗಳಿಗೆ ಕೃಷಿಕರು ಸಿಲುಕುತ್ತಿದ್ದಾರೆ. ಕೃಷಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ಮತ್ತು ಸವಲತ್ತಿನ ಸಮರ್ಪಕ ಬಳಕೆಯೇ ಪರಿಹಾರವಾಗಿದೆ ಎಂದರು.
ಗ್ರಾ.ಪಂ.ಮಟ್ಟದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಸಂಬಂಧಪಟ್ಟ ಗ್ರಾ.ಪಂ ವ್ಯಾಪ್ತಿಯ ರೈತರು ಪಡೆದುಕೊಳ್ಳಬೇಕು. ವಾರ್ಷಿಕವಾಗಿ ಎರಡು ಬಾರಿ ಕೃಷಿ ಸಂಬಂಧಿಸಿದಂತೆ ಗ್ರಾಮಸಭೆ ಕಾರ್ಯಕ್ರಮಗಳು ನಡೆಯಲಿದ್ದು ಭಾಗವಹಿಸಿ ಅಗತ್ಯ ಮಾಹಿತಿ ಪಡೆಯುವಂತೆ ಅವರು ಕೋರಿದರು.
ಪ್ರಾಸ್ತವಿಕ ಭಾಷಣ ಮಾಡಿದ ಕೃಷಿ ತಾಂತ್ರಿಕ ಅಧಿಕಾರಿ ಎ.ಸಿ.ಗಿರೀಶ್ ಅವರು ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ಅವರ ಜನ್ಮದ ನೆನಪಿನಾರ್ಥ ಇಂದು ರಾಷ್ಟ್ರೀಯ ಕೃಷಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಚರಣ್ ಸಿಂಗ್ ಅವರು ರೈತಪರ ಹೋರಾಟ ಮಾಡಿದವರು, ರೈತರಿಗೆ ಕಾನೂನಾತ್ಮಕ ಸವಲತ್ತುಗಳು ದೊರೆಯುಲ್ಲಿ ಹೆಚ್ಚಿನ ಶ್ರಮ ವಹಿಸಿದ್ದವರು. ಜಮೀನ್ದಾರಿ ಪದ್ದತಿ ನಿವಾರಣೆ, ಭೂ ಸುಧಾರಣಾ ಕಾಯ್ದೆಗಳು, ಚಳುವಳಿಗಳು ಮುಂತಾದ ಹತ್ತು ಹಲವು ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಕಾರಣಿಕರ್ತರು ಎಂದು ಹೇಳಿದರು.
‘ರೈತರಿಲ್ಲದೇ ಕೃಷಿಯಿಲ್ಲ, ಕೃಷಿಯಿಲ್ಲದೇ ದೇಶವಿಲ್ಲ’ ಎಂಬ ಧ್ಯೇಯ ವಾಕ್ಯದ ಮೇಲೆ ಕರ್ತವ್ಯ ನಿರ್ವಹಿಸಿದ ವ್ಯೆಕ್ತಿಯ ನೆನಪಿನ ಅಂಗವಾಗಿ 2001 ರಂದು ಅವರ ಜನ್ಮ ದಿನಾಚರಣೆಯನ್ನು ರೈತ ದಿನಾಚರಣೆ ಎಂದು ಘೋಷಿಸಿ ಆಚರಿಸಲಾಗುತ್ತಿದೆ ಎಂದು ಸ್ಮರಿಸಿದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರೈತರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯಗಳು, ವಿಶೇಷ ಯೋಜನೆಗಳು ಮತ್ತು ರೈತ ಸಂಬಂಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಭತ್ತದ ಬೆಳೆಯ ಕ್ಷೇತ್ರೋತ್ಸವದಲ್ಲಿ ಡ್ರಂ ಸೀಡರ್‍ನಿಂದ ರೈತರು ಲಾಭದಾಯಕ ಕೃಷಿ ಹೇಗೆ ಮಡಬಹುದು ಎಂಬುದರ ಬಗ್ಗೆ ಕೃಷಿ ವಿಜ್ಞಾನಿ ಡಾ.ಬಸವಲಿಂಗಯ್ಯ ಅವರು ಮಾಹಿತಿ ನೀಡಿದರು.
ವಾಸ್ತವವಾಗಿ ರೈತನು ಭತ್ತ ಬೆಳೆಯಲು ಹಿಂಜರಿಯಲು ಮುಖ್ಯ ಕಾರಣ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕಾರ್ಮಿಕರ ವೇತನ, ಅಕಾಲಿಕ ಮಳೆ, ಕಾಡುಪ್ರಾಣಿ ಹಾವಳಿ, ಮೂಲಭೂತವಾಗಿ ಭತ್ತದ ಕೃಷಿಗೆ ಬೇಕಾಗಿರುವ ಇತರ ಪರಿಕರಗಳ ಬೆಲೆ ಹೆಚ್ಚಾಗಿರುವುದಾಗಿದೆ. ಆದರೆ ಡ್ರಂ ಸೀಡರ್ ವಿದ್ಯಮಾನದಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಫಸಲು ಮತ್ತು ಉತ್ಕøಷ್ಟ ಗುಣಮಟ್ಟದ ಧಾನ್ಯ ಬೆಳೆಯಬಹುದಾಗಿದೆ ಆದ್ದರಿಂದ ಇದರ ಸದುಪೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಸಮಗ್ರ ಕೃಷಿ ಪದ್ಧತಿ, ಉತ್ಕøಷ್ಟ ಮಟ್ಟದ ಭತ್ತದ ಇಳುವರಿ, ಬೆಳೆ ಬೆಳೆಯಲು ಬಳಸಬಹುದಾದ ತಂತ್ರಜ್ಞಾನ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಬ್ರಹ್ಮ ಕುಮಾರಿ ಸಮರ್ಪಿತ ಸಹೋದರಿ ಧನಲಕ್ಷೀ ಅವರು ರೈತರಿಗೆ ಮಾನಸಿಕ ಪ್ರಬುದ್ಧತೆ, ಶಾಂತಿ ಸಂದೇಶ, ರೈತರಿಗೆ ಆತ್ಮಗೌರವದ ಸಂದೇಶ ನೀಡಿದರು.
ಲತಾ ಕುಮಾರಿ ನಿರೂಪಿಸಿದರು, ಧೃತಿ ಪ್ರಾರ್ಥಿಸಿದರು, ಸಂತ ಮೈಕಲರ ಶಾಲೆಯ ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು, ತಾಂತ್ರಿಕ ಅಧಿಕಾರಿ ಎ.ಸಿ.ಗಿರೀಶ್ ಸ್ವಾಗತಿಸಿದರು, ಇಂದಿರಾ ವಂದಿಸಿದರು.

LEAVE A REPLY

Please enter your comment!
Please enter your name here