ಕುಡಿಯುವ ನೀರು ಘಟಕಗಳ ದುರಸ್ತಿ ತ್ವರಿತವಾಗಿ ಕೈಗೊಳ್ಳಬೇಕು
-ಸಚಿವ ಹಾಲಪ್ಪ ಆಚಾರ್

0
106

ಧಾರವಾಡ:ಏ.08: ಶುದ್ಧ ಕುಡಿಯುವ ನೀರು ಘಟಕಗಳು ಸೇರಿದಂತೆ ನೀರುಪೂರೈಕೆಯ ಜಲಮೂಲಗಳಲ್ಲಿ ಸಮಸ್ಯೆ ಕಂಡು ಬಂದ ಕೂಡಲೇ ಗರಿಷ್ಠ ಎಂಟು ದಿನಗಳೊಳಗೆ ಪರಿಹಾರ ಒದಗಿಸಿ ಜನರಿಗೆ ನೀರು ಪೂರೈಸಬೇಕು ಎಂದು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ನಡೆದ 2021-22 ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ನಾಲ್ಕನೇ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಲಜೀವನ ಮಿಷನ್, ಜಲಧಾರೆ ಸೇರಿದಂತೆ ಮನೆ ಮನೆಗೆ ಕುಡಿಯುವ ನೀರು ಪೂರೈಕೆ ನಳಗಳ ಸಂಪರ್ಕ ಕಲ್ಪಿಸುವ ಯೋಜನೆ ಅನುμÁ್ಠನ ಚುರುಕುಗೊಳ್ಳಬೇಕು, ಜಿಪಂ ಸಿಇಓ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಖುದ್ದು ಜವಾಬ್ದಾರಿ ನಿರ್ವಹಣೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸುವ ಶುದ್ಧ ಕುಡಿಯುವ ನೀರು ಘಟಕಗಳು ದುರಸ್ತಿ ಅಗತ್ಯ ಕಂಡು ಬಂದ ಕೂಡಲೇ ಗರಿಷ್ಠ ಎಂಟು ದಿನಗಳ ಅವಧಿಯಲ್ಲಿ ಸಮಸ್ಯೆ ಪರಿಹರಿಸಬೇಕು. ಸ್ಥಳೀಯ ಗ್ರಾಮ ಪಂಚಾಯತಿಗಳೂ ಕೂಡ ಇದಕ್ಕಾಗಿ ಹಣಕಾಸು ಮೀಸಲಿಟ್ಟು, ಬಳಕೆ ಮಾಡಬೇಕು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆಗಳನ್ನು 10 ಟನ್ ಭಾರದ ವಾಹನಗಳ ಸಂಚಾರ ಸಾಮಥ್ರ್ಯಕ್ಕೆ ಅನುಗುಣವಾಗಿ ನಿರ್ಮಿಸಿರುತ್ತಾರೆ. ಅದಕ್ಕಿಂತಲೂ ಭಾರವಾದ ವಾಹನಗಳ ಸಂಚಾರದಿಂದ ರಸ್ತೆಗಳು ಕಡಿಮೆ ಅವಧಿಯಲ್ಲಿ ಹಾಳಾಗುವುದನ್ನು ತಡೆಯಲು, ಅಲ್ಲಿ ಸಂಚರಿಸುವ ವಾಹನಗಳ ಸಮೀಕ್ಷೆ ಮಾಡಿ ವರದಿ ಸಲ್ಲಿಸಿದರೆ, ರಸ್ತೆ ನಿರ್ಮಾಣದ ಮಾನದಂಡಗಳನ್ನು ಪರಿಷ್ಕರಿಸಲು ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದರು.

ಜಿಲ್ಲೆಯ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಾಗದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವೈದ್ಯರನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ಮುಂಬರುವ ಮುಂಗಾರು ಹಂಗಾಮಿಗೆ ಸಾಕಷ್ಟು ಪ್ರಮಾಣದಲ್ಲಿ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಖಾಸಗಿ ವಹಿವಾಟುಗಳಿಗಿಂತ ಸಹಕಾರ ರಂಗದ ಮಾರಾಟಗಾರರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮಂಜೂರಾತಿ ದೊರೆತ ಕಾಮಗಾರಿಗಳಿಗೆ, ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಿರಂತರವಾಗಿ ಆಡಳಿತಾತ್ಮಕವಾಗಿ ಪ್ರಯತ್ನಿಸಬೇಕು. ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಅವುಗಳ ದುರಸ್ತಿಗೆ ಸಮಗ್ರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ, ಜನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಲು ಸೂಚಿಸಿದರು.

ಧಾರವಾಡ ನಗರವು ವಿದ್ಯಾಕೇಂದ್ರವಾಗಿರುವುದರಿಂದ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇಲ್ಲಿಗೆ ಬರುವುದು ಸಾಮಾನ್ಯ, ಈ ಕಾರಣಕ್ಕಾಗಿ ಶಿಕ್ಷಣದ ಹಬ್ ಅಭಿವೃದ್ಧಿ ಪಡಿಸಲು ಧಾರವಾಡದಲ್ಲಿ ಸಾವಿರ ವಿದ್ಯಾರ್ಥಿಗಳ ಸಾಮಥ್ರ್ಯದ ದೀನ್ ದಯಾಳ ಸೌಹಾರ್ದ ವಿದ್ಯಾರ್ಥಿ ನಿಲಯ ಸ್ಥಾಪನೆಯನ್ನು ಮುಖ್ಯಮಂತ್ರಿಯವರು ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಕಾರ್ಯಪ್ರವೃತ್ತರಾಗಿ ಶೀಘ್ರ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲು ನಿರ್ದೇಶನ ನೀಡಿದರು.

ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ, ಜಿಲ್ಲೆಯ ಹಲವೆಡೆ ಗ್ರಾಮೀಣ ಭಾಗಗಳಲ್ಲಿ ರೈತರು ಸಹಕಾರ ಸೊಸೈಟಿಗಳ ಮೂಲಕ ಹಲವಾರು ದಶಕಗಳಿಂದಲೂ ಕೃಷಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ, ಭೂ ಒಡೆತನ ಸೊಸೈಟಿಯ ಹೆಸರಿನಲ್ಲಿ ಇರುತ್ತದೆ. ಉಳುಮೆ ಮಾಡುತ್ತಿರುವ ರೈತರಿಗೆ ಭೂ ಸುಧಾರಣೆ ಕಾಯ್ದೆಯಡಿ ಜಮೀನು ಹಸ್ತಾಂತರ ಮಾಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳು ಸೂಕ್ತ ಪ್ರಸ್ತಾವನೆ ಕಳಿಸಲಿ, ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಮುಂಬರುವ ಮುಂಗಾರು ಹಂಗಾಮಿನ ವೇಳೆಗೆ ಇಲ್ಲಿನ ಹವಾಗುಣ, ಭೂಮಿಗೆ ಹೊಂದುವ ಹಾಗೂ ರೈತರ ಬೇಡಿಕೆ ಆಧರಿಸಿ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು ಎಂದರು.

ಹುಬ್ಬಳ್ಳಿ-ಧಾರವಾಡ (ಪೂರ್ವ) ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಸರ್ಕಾರದ ವಿವಿಧ ಸ್ವಯಂ ಉದ್ಯೋಗ, ಸಹಾಯಧನ ಯೋಜನೆಗಳಡಿ ಸೌಲಭ್ಯಗಳು ಮಂಜೂರಾದ ಫಲಾನುಭವಿಗಳಿಗೆ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುವ ಅನೇಕ ಪ್ರಕರಣಗಳು ಜಿಲ್ಲೆಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿವೆ. ಲೀಡ್ ಬ್ಯಾಂಕ್ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಫಲಾನುಭವಿಗಳಿಗೆ ಆರ್ಥಿಕ ನೆರವು, ಸಾಲ ಮಂಜೂರಾತಿಗೆ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ವತಿಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಹಾಗೂ ಚರಂಡಿಗಳು ಅವೈಜ್ಞಾನಿಕವಾಗಿವೆ. 28 ಕೋಟಿ ರೂ.ವೆಚ್ಚದ ಈ ಕಾಮಗಾರಿಯನ್ನು ಸಂಪೂರ್ಣ ಪುನರ್ ಪರಿಶೀಲಿಸಬೇಕು ಎಂದರು.

ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಬೇಸಿಗೆಯಲ್ಲಿ ಕುಂದಗೋಳ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗುವ ಸಾಧ್ಯತೆಗಳಿವೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗವು ಪರಿಹಾರ ಒದಗಿಸಲು ಈಗಲೇ ಕಾರ್ಯೋನ್ಮುಖವಾಗಬೇಕು. ಕುಂದಗೋಳ-ಲಕ್ಷ್ಮೇಶ್ವರ ರಸ್ತೆಯ ಶಿರೂರ ರೇಲ್ವೇ ಮೇಲ್ಸೇತುವೆ ದುರಸ್ತಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಮಾತನಾಡಿ, ಪಿಎಂಇಜಿಪಿ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಜಿಲ್ಲೆಯ ಬ್ಯಾಂಕುಗಳು ರಾಜ್ಯದಲ್ಲಿಯೇ ಗರಿಷ್ಠ ಸಾಲ ಮಂಜೂರು ಮಾಡಿ, ಹಣ ಬಿಡುಗಡೆ ಮಾಡಿವೆ. 1 ಲಕ್ಷ 55 ಸಾವಿರ ಹೆಕ್ಟೇರ್ ಬೆಳೆ ಹಾನಿಯನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಎಲ್ಲರಿಗೂ ಪರಿಹಾರ ಬಿಡುಗಡೆಯಾಗಿದೆ ಎಂದರು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಪೆÇಲೀಸ್ ಉಪ ಆಯುಕ್ತ ಸಾಹಿಲ್ ಬಾಗ್ಲಾ, ಜಿಪಂ ಉಪಕಾರ್ಯದರ್ಶಿ ರೇಖಾ ಡೊಳ್ಳಿನವರ, ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ, ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ಜಿಲ್ಲಾ ಕೆಡಿಪಿ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here