ಕರ್ನಾಟಕ ಯುವ ನೀತಿ ಮಾಹಿತಿ ಸಂಗ್ರಹಿಸುವ ಸಭೆ, ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಳಾಂತರಕ್ಕೆ ಜಿಲ್ಲಾ ಯುವ ಒಕ್ಕೂಟ ಮನವಿ

0
132

ಮಡಿಕೇರಿ ಫೆ.15 :-ಕರ್ನಾಟಕ ಯುವ ನೀತಿ 2021 ನ್ನು ರೂಪಿಸಲು ಜಿಲ್ಲಾ ಮಟ್ಟದಲ್ಲಿ ಕ್ರೀಡಾಪಟುಗಳ, ಯುವಕ ಸಂಘಗಳ, ಒಕ್ಕೂಟಗಳ, ವಿದ್ಯಾರ್ಥಿಗಳ ಹಾಗೂ ಜಿಲ್ಲೆಯ ಯುವಕರಿಂದ ಮಾಹಿತಿ ಸಂಗ್ರಹಿಸುವ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆರಂಭದಲ್ಲಿ ಮಾತನಾಡಿದ ಪ್ರಾಧ್ಯಾಪಕರಾದ ಕೆ.ಸಿ.ದಯಾನಂದ ಅವರು ಕರ್ನಾಟಕ ಯುವ ನೀತಿ ರೂಪಿಸುವಲ್ಲಿ ಆಯಾಯ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತಾಗಬೇಕು ಎಂದು ಸಲಹೆ ಮಾಡಿದರು.
ಯುವ ನೀತಿಯು ಯುವ ಜನತೆ ಮೇಲೆ ಪ್ರಭಾವ ಬೀರುವಂತಿರಬೇಕು. ಜಿಲ್ಲಾ ಮಟ್ಟದಲ್ಲಿ ಕಾಲೇಜು ಯುವ ಜನೋತ್ಸವ ನಡೆಸಬೇಕು. ‘ಯುವ ಕರ್ನಾಟಕ’ ಮಾಸ ಪತ್ರಿಕೆಯನ್ನು ಪ್ರತೀ ಕಾಲೇಜಿಗೆ ಕಳುಹಿಸಿಕೊಡುವಂತಾಗಬೇಕು. ಯುವ ಜನರಿಗೆ ಶಿಕ್ಷಣವಿದೆ ಆದರೆ ಉದ್ಯೋಗವಿಲ್ಲ. ಆದ್ದರಿಂದ ಸ್ವ ಉದ್ಯೋಗ ಕೈಗೊಳ್ಳಲು ಒತ್ತು ನೀಡಬೇಕಿದೆ ಎಂದರು.

ಗುರುದೇವ ಅವರು ಮಾತನಾಡಿ ಇಂದಿನ ಯುವ ಪೀಳಿಗೆ ಮೊಬೈಲ್‍ಗೆ ತುತ್ತಾಗುತ್ತಿದ್ದು, ಓದುವ ಮತ್ತು ಬರವಣಿಗೆ ಕೌಶಲ್ಯ ಕಡಿಮೆಯಾಗುತ್ತಿದೆ. ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಕ್ಷೀಣಿಸುತ್ತಿದೆ. ಹಾಗೆಯೇ ಮದ್ಯಪಾನ, ತಂಬಾಕಿಗೆ ತುತ್ತಾಗುವುದು ಹೆಚ್ಚಾಗುತ್ತಿದೆ. ಆದ್ದರಿಂದ ವಿದ್ಯೆಯ ಜೊತೆಗೆ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತರು ಹಾಗೂ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ.ಸುಕುಮಾರ್ ಅವರು ಮಾತನಾಡಿ ಯುವ ಸಂಘಗಳು ಹಾಗೂ ಮಂಡಳಿಗಳನ್ನು ಮತ್ತಷ್ಟು ಬಲಪಡಿಸುವಂತಾಗಬೇಕು. ಗ್ರಾಮೀಣ ಕ್ರೀಡಾ ಕೂಟಕ್ಕೆ ಹೆಚ್ಚಿನ ಒತ್ತು ನೀಡಬೇಕು. ಯುವಕ ಸಂಘ ಮತ್ತು ಮಂಡಳಿಗಳಿಗೆ ಸಹಾಯಧನ ಕಲ್ಪಿಸಬೇಕು. ಜೊತೆಗೆ ವೈಯಕ್ತಿಕ ಪ್ರಶಸ್ತಿ ಹಾಗೂ ಬಹುಮಾನ ನೀಡುವಂತಾಗಬೇಕು. ಗ್ರಾಮೀಣ ಯುವ ಸಂಘಗಳಿಗೆ ನಿವೇಶನ ಒದಗಿಸಬೇಕು. ಇರುವ ಸಂಘಗಳಿಗೆ ದಾಖಲೀಕರಣ ಮಾಡಿಕೊಳ್ಳಬೇಕು ಎಂದು ಅವರು ಗಮನಸೆಳೆದರು.
ಪ್ರತೀ ವರ್ಷ ಯುವಜನ ಮೇಳ ಆಯೋಜಿಸಬೇಕು. ಕ್ರೀಡಾ ವಿಶ್ವವಿದ್ಯಾನಿಲಯ ಆರಂಭಕ್ಕೆ ಶೀಘ್ರ ಚಾಲನೆ ನೀಡಬೇಕು. ನಗರದ ಜಿಲ್ಲಾ ಕೇಂದ್ರದ ‘ಯುವ ಭವನ’ದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಸ್ಥಳಾಂತರಿಸಿ ಯುವ ಭವನವನ್ನು ಜಿಲ್ಲಾ ಯುವ ಒಕ್ಕೂಟಕ್ಕೆ ಬಿಟ್ಟು ಕೊಡುವಂತಾಗಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಅವರು ಪ್ರತೀ ಸ್ಥಳೀಯ ಸಂಸ್ಥೆಗಳಲ್ಲಿ(ಗ್ರಾ.ಪಂ., ಪ.ಪಂ. ಪುರಸಭೆ, ನಗರಸಭೆ) ಶೇ.2 ರಿಂದ 3 ರಷ್ಟು ಅನುದಾನವನ್ನು ಕ್ರೀಡಾಕ್ಷೇತ್ರಕ್ಕೆ ಮೀಸಲಿಟ್ಟು ಅನುದಾನ ಬಳಸುವಂತಾಗಬೇಕು. ಕ್ರೀಡಾಕ್ಷೇತ್ರ ಉತ್ತೇಜನಕ್ಕೆ ಅವಕಾಶ ಮಾಡಬೇಕು ಎಂದು ಅವರು ಹೇಳಿದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಟಾಟು ಮೊಣ್ಣಪ್ಪ ಅವರು ಮಾತನಾಡಿ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಬೇಕು. ವಿಶ್ವದ ಜನಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಆದರೂ ಸಹ. ಒಲಂಪಿಕ್ಸ್
ಕ್ರೀಡೆಯಲ್ಲಿ ಸಾಧನೆ ಅಷ್ಟಾಗಿ ಇಲ್ಲ. ಆದ್ದರಿಂದ ಯುವಜನರಿಗೆ ಕ್ರೀಡೆಯಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅಶ್ವಿನಿ ನಾಚಪ್ಪ, ಅರುಣ್ ಮಾಚಯ್ಯ, ಹಾಗೆಯೇ ಯುವ ಸಂಘಗಳ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿರುವ ಗಿರೀಶ್ ತಾಳತ್ತಮನೆ ಮತ್ತಿತರರನ್ನು ಮುಂದಿನ ಸಭೆಗೆ ಆಹ್ವಾನಿಸಬೇಕು ಎಂದು ಟಾಟು ಮೊಣ್ಣಪ್ಪ ಅವರು ಸಲಹೆ ಮಾಡಿದರು.

ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್‍ಎಸ್‍ಎಸ್ ಅಧಿಕಾರಿ ಎಂ.ಎನ್.ಪ್ರಕಾಶ್ ಜಿಲ್ಲಾ ಒಳಂಗಣ ಕ್ರೀಡಾಂಗಣದಲ್ಲಿನ ಜಿಮ್‍ಗೆ ತಿಂಗಳಿಗೆ 500 ರೂ. ಶುಲ್ಕ ವಿಧಿಸುತ್ತಿದ್ದು, ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಬೇಕು ಎಂದು ಅವರು ಕೋರಿದರು.

ಕೂಡಿಗೆ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯರಾದ ದೇವಕುಮಾರ್ ಅವರು ಮಾತನಾಡಿ ಇಂದಿನ ಯುವ ಜನರಿಗೆ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ. ಆ ನಿಟ್ಟಿನಲ್ಲಿ ಯುವ ಶಕ್ತಿಯ ಮಹತ್ವವನ್ನು ತಿಳಿಸಬೇಕು. ಇಂದಿನ ಯುವ ಜನರು ಗ್ರಂಥಾಲಯ ಬದಲಾಗಿ ಮೊಬೈಲ್ ಬಳಸುವುದು ಹೆಚ್ಚಾಗಿದೆ. ಯುವಜನರು ವ್ಯಕ್ತಿತ್ವ ವಿಕಸನಕ್ಕೆ ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ತರಬೇತಿ ನೀಡುವಂತಾಗಬೇಕು ಎಂದರು.
ಪ್ರಾಧ್ಯಾಪಕರಾದ ಕಾವೇರಿ ಅವರು ಮಾತನಾಡಿ ಶಾಲಾ-ಕಾಲೇಜುಗಳಲ್ಲಿ ಇರುವ ಎನ್‍ಎಸ್‍ಎಸ್ ವಿಭಾಗಕ್ಕೆ ಹೆಚ್ಚಿನ ಅನುದಾನ ಒದಗಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಹರೀಶ್ ಅವರು ಮಾತನಾಡಿ ಸ್ಥಳೀಯವಾಗಿ ಕ್ರೀಡಾ ಸಾಮಗ್ರಿ ಖರೀದಿ ಮಾಡಲು ಅವಕಾಶ ಮಾಡಬೇಕು ಎಂದರು. ಯುವ ಒಕ್ಕೂಟದ ನವೀನ್ ದೇರಳ ಅವರು ಮಾತನಾಡಿದರು.

ಎಲ್ಲರ ಅಭಿಪ್ರಾಯ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕವಾಗಿ ಉದ್ಯೋಗ ಕಲ್ಪಿಸುವತ್ತ ಗಮನಹರಿಸಬೇಕಿದೆ. ಆ ದಿಸೆಯಲ್ಲಿ ಜೇನು ಸಾಕಾಣಿಕೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು, ಜೊತೆಗೆ ನರ್ಸಿಂಗ್ ಕಾಲೇಜು ಆಗಬೇಕಿದೆ ಎಂದು ಸಲಹೆ ಮಾಡಿದರು.

ಜಿಲ್ಲಾ ಯುವ ಒಕ್ಕೂಟದ ಖಜಾಂಜಿ ಕೆ.ಎಂ.ಮೋಹನ್, ಒಕ್ಕೂಟದ ಸದಸ್ಯರಾದ ಇಂದುಮತಿ ರವೀಂದ್ರ, ವಿರಾಜಪೇಟೆ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ಶೀಲ ಬೋಪಣ್ಣ, ಜಿಲ್ಲೆಯ ಯುವ ಸಂಘಗಳ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here