25ನೇ ಕಿತ್ತೂರು ಉತ್ಸವ: ಪೂರ್ವಭಾವಿ ಸಭೆ, ಅ.23ರಿಂದ ಎರಡು ದಿನಗಳ ಕಿತ್ತೂರು ಉತ್ಸವ ಆಚರಣೆ: ಉಸ್ತುವಾರಿ ಸಚಿವ ಗೋವಿಂದ ಕಾರಜೋಳ

0
82

ಬೆಳಗಾವಿ, ಅ.6 : ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಹಾಗೂ ಸ್ವಾಭಿಮಾನದ ಸಂಕೇತವಾಗಿರುವ ಚೆನ್ನಮ್ಮನ ಕಿತ್ತೂರು ಉತ್ಸವವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಮೂರು ದಿನಗಳ ಬದಲಾಗಿ ಅ.23 ರಿಂದ ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರು ಪ್ರಕಟಿಸಿದರು.
ಚೆನ್ನಮ್ಮನ ಕಿತ್ತೂರಿನಲ್ಲಿ ಬುಧವಾರ (ಅ.6) ನಡೆದ ಕಿತ್ತೂರು ಉತ್ಸವ-2021 ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕ್ಟೋಬರ್ 23 ಹಾಗೂ 24 ರಂದು ಎರಡು ದಿನಗಳ ಉತ್ಸವ ಹಮ್ಮಿಕೊಂಡು ಕಿತ್ತೂರಿನ ಗತವೈಭವ ಅನಾವರಣಗೊಳಿಸುವಂತೆ ಅರ್ಥಪೂರ್ಣವಾಗಿ ಉತ್ಸವ ಆಚರಿಸಲಾಗುವುದು. ಕೋವಿಡ್ ಭೀತಿ ಇನ್ನೂ ಇದೆ. ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಉತ್ಸವ ಆಚರಿಸಬೇಕಿದೆ.
ಕಿತ್ತೂರು ಇತಿಹಾಸದ ಸ್ಮರಣೆ ಜತೆಗೆ ಮಕ್ಕಳಿಗೆ ಇತಿಹಾಸದ ಬಗ್ಗೆ ತಿಳಿಸಿಕೊಟ್ಟು ಸ್ವಾಭಿಮಾನ ಜಾಗೃತಿಗೊಳಿಸುವ ರೀತಿಯಲ್ಲಿ ಉತ್ಸವ ಹಮ್ಮಿಕೊಳ್ಳಲಾಗುವುದು.
ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಮೂಲಕ ಅವರಿಂದಲೇ ಉತ್ಸವ ಉದ್ಘಾಟನೆಗೆ ಪ್ರಯತ್ನಿಸಲಾಗುವುದು.
25ನೇ ಕಿತ್ತೂರು ಉತ್ಸವವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಕಲಾವಿದರನ್ನು ಆಹ್ವಾನಿಸಬೇಕು; ತಜ್ಞರಿಂದ ಪ್ರಧಾನ ವೇದಿಕೆಯಲ್ಲಿ ಕಿತ್ತೂರು ಇತಿಹಾಸ ಕುರಿತು ಉಪನ್ಯಾಸ ಏರ್ಪಡಿಸುವಂತೆ ತಿಳಿಸಿದರು.
ಅಕ್ಟೋಬರ್ 23 ಹಾಗೂ 24 ರಂದು ಎರಡು ದಿನಗಳ ಉತ್ಸವವನ್ನು ಆಚರಿಸಲಾಗುವುದು. ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಆಧರಿಸಿ ಅರ್ಥಪೂರ್ಣ ಉತ್ಸವ ಆಚರಿಸಲಾಗುವುದು.
ಅತಿಥಿಗಳು, ಕಲಾವಿದರ ಆಹ್ವಾನ ಸೇರಿದಂತೆ ಪ್ರತಿಯೊಂದು ತೀರ್ಮಾನವನ್ನು ಸಂಬಂಧಿಸಿದ ಸಮಿತಿಗಳು ನಿರ್ಧರಿಸಲಿವೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಶ್ರಮದಾನದ ಮೂಲಕ ಕೋಟೆ ಆವರಣ ಸ್ವಚ್ಛಗೊಳಿಸಲು ಕರೆ:

ನಮ್ಮೂರಿನ ಕೋಟೆ ಸ್ವಚ್ಛಗೊಳಿಸಲು ಸರಕಾರದ ಕಡೆ ನೋಡುವ ಬದಲು ಇಡೀ ಊರಿನ ಜನರು ಸೇರಿ ಶ್ರಮದಾನದ ಮೂಲಕ ಸ್ವಚ್ಛತೆಗೊಳಿಸಬೇಕು.ಶ್ರಮದಾನ ಹಮ್ಮಿಕೊಂಡರೆ ನಾನೂ ಬರುತ್ತೇನೆ. ಎಲ್ಲರೂ ಸೇರಿ ಕೋಟೆ ಆವರಣ ಸ್ವಚ್ಛಗೊಳಿಸೋಣ ಎಂದು ಸಚಿವ ಕಾರಜೋಳ ಕರೆ ನೀಡಿದರು.
25 ನೇ ಉತ್ಸವವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಬೇಕು ಎಂಬುದು ತಮ್ಮ ಆಶಯ ಕೂಡ ಆಗಿದೆ. ಆದರೆ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉತ್ಸವ ಆಚರಿಸಬೇಕಿದೆ ಎಂದರು.
ಇತಿಹಾಸವನ್ನು ಓದಿದ ಪ್ರತಿಯೊಬ್ಬರಿಗೂ ಕಿತ್ತೂರು ಚೆನ್ನಮ್ಮನ ಇತಿಹಾಸ ಗೊತ್ತಿದೆ. ರಾಜ್ಯದಲ್ಲಿ ಉತ್ಸವ ಆರಂಭಿಸಿದವರು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರು.
ಯುವ ಜನಾಂಗದಲ್ಲಿ ಓದುವ ಹವ್ಯಾಸ ಕುಂಠಿತಗೊಂಡಿದ್ದರಿಂದ ಅವರಿಗೆ ನಾಡಿನ ಇತಿಹಾಸ ತಿಳಿಸುವುದರ ಜತೆಗೆ ಗತವೈಭವ ಅನಾವರಣಗೊಳಿಸಲು ಉತ್ಸವಗಳನ್ನು ಆರಂಭಿಸಲಾಯಿತು. ಇದಲ್ಲದೆ ಜನಪದ ಕಲೆಗಳನ್ನು ಉಳಿಸಿ ಬೆಳೆಸಿ ನಾಡಿನ ಸಂಸ್ಕೃತಿ ರಕ್ಷಿಸಲು ಚಾಲುಕ್ಯ, ನವರಸಪುರ, ಹಂಪಿ ಮತ್ತಿತರ ಉತ್ಸವಗಳನ್ನು ಆರಂಭಿಸಿದರು ಎಂದು ಸ್ಮರಿಸಿದರು.
ಚೆನ್ನಮ್ಮನ ಕುತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ಮಾತನಾಡಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ ಅನುದಾನವನ್ನು ಸರಕಾರ ನೀಡಿದೆ. ಚೆನ್ನಮ್ಮ ಅರಮನೆ ನವೀಕರಣ, ಕಲಾಭವನ ಸೇರಿದಂತೆ ವಿವಿಧ ಕಾಮಗಾರಿಗಳ ಮೂಲಕ ಅನುದಾನ ಸದ್ಬಳಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಚೆನ್ನಮ್ಮನ ಕೋಟೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸಲು ಅವಕಾಶವಿಲ್ಲ. ಆದ್ದರಿಂದ ನೂರು ಮೀಟರ್ ಹೊರಗಡೆ ವಿವಿಧ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ.
ಕೋಟೆಯ ಪ್ರತಿರೂಪವನ್ನು ನಿರ್ಮಿಸಲು ಉದ್ಧೇಶಿಸಲಾಗಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಿರುವ ಹತ್ತು ಕೋಟಿ ಅನುದಾನ ಬಳಕೆಗೆ ಯೋಜನೆ ರೂಪಿಸಲಾಗುತ್ತಿದೆ.
ಎರಡು ವರ್ಷಗಳಿಂದ ಅದ್ದೂರಿ ಉತ್ಸವ ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಸರಕಾರದ ಮಾರ್ಗಸೂಚಿ ಪಾಲನೆಯೊಂದಿಗೆ ಈ ಬಾರಿ ಅರ್ಥಪೂರ್ಣವಾಗಿ ‌ಉತ್ಸವ ಆಚರಿಸಲಾಗುವುದು.
ಕಳೆದ ಬಾರಿ ಒಂದು ಕೋಟಿ ರೂಪಾಯಿ ಅನುದಾನ ಸರಕಾರ ನೀಡಿದೆ. ಈ ಬಾರಿ 25 ನೇ ಉತ್ಸವ ಆಗಿರುವುದರಿಂದ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೆ ಸಚಿವರು ಪ್ರಯತ್ನಿಸಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡ್ರ ಮನವಿ ಮಾಡಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲೆಯಲ್ಲಿ ಶೇ.81 ರಷ್ಟು ಲಸಿಕಾಕರಣವಾಗಿದೆ. ಸೋಂಕು ಪ್ರಮಾಣ ಸದ್ಯಕ್ಕೆ ಶೇ. 0.27 ರಷ್ಟಿದೆ. ಆದಾಗ್ಯೂ ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ.
ಈ ಬಾರಿ 25 ನೇ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯನ್ನು ಅರಿತುಕೊಂಡು ಉತ್ಸವವನ್ನು ಆಚರಿಸಬೇಕಿದೆ ಎಂದು ಹೇಳಿದರು.

ಮೂರನೇ ದಿನ ಉಪನ್ಯಾಸ ಏರ್ಪಡಿಸಲು ಸ್ವಾಮೀಜಿ ಸಲಹೆ:

ಸಭೆಯ ಸಾನಿಧ್ಯ ವಹಿಸಿದ್ದ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಮಾತನಾಡಿ, ಸ್ವಾಭಿಮಾನ ಹಾಗೂ ಪರಂಪರೆಯ ಸಂಕೇತವಾಗಿರುವ ಕಿತ್ತೂರು ಉತ್ಸವವನ್ನು ಎರಡು ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ.
25 ನೇ ಉತ್ಸವ ಆಗಿರುವುದರಿಂದ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಎರಡು ದಿನಗಳ ಉತ್ಸವ ಆಚರಿಸೋಣ.ಎರಡು ದಿನಗಳ ಉತ್ಸವದ ಬಳಿಕ ಮೂರನೇ ದಿನ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಬೆಳ್ಳಿ ಹಬ್ಬ ಆಗಿರುವುದರಿಂದ ಕೇಂದ್ರ ಸರಕಾರದ ಸಚಿವರನ್ನು ಆಹ್ವಾನಿಸುವ ಮೂಲಕ ಮೆರಗು ತರಬೇಕಿದೆ ಎಂದು ಹೇಳಿದರು.

ಕೋಟೆ ಅಭಿವೃದ್ಧಿ, ಶಾಶ್ವತ ಕೆಲಸಕ್ಕೆ ಸಾರ್ವಜನಿಕರ ಆಗ್ರಹ:

ಕೋವಿಡ್ ಪ್ರಮಾಣ ಕಡಿಮೆಯಾಗಿರುವುದರಿಂದ ಮೂರು‌ ದಿನಗಳ ಕಾಲ ಉತ್ಸವ ಆಚರಿಸಬೇಕು.
25 ನೇ ಉತ್ಸವ ಆಗಿರುವುದರಿಂದ ವಿಜೃಂಭಣೆಯಿಂದ ಆಚರಿಸಬೇಕು ಎಂದು ಬಸವರಾಜ ಒತ್ತಾಯಿಸಿದರು.
ಉತ್ಸವದ ಅಂಗವಾಗಿ ಪ್ರತಿವರ್ಷ ಒಂದು ಶಾಶ್ವತ ಕೆಲಸವಾಗಬೇಕು ಹಾಗೂ ಕೋಟೆಯ 100 ಮೀ. ವ್ಯಾಪ್ತಿಯ ಜಾಗೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಸುವುದು ಸಾಧ್ಯವಾಗುತ್ತಿಲ್ಲ; ಆದ್ದರಿಂದ ಖಾಸಗಿ ಜಮೀನನನ್ನು ಪ್ರಾಧಿಕಾರದ ವತಿಯಿಂದ ಖರೀದಿಸಬೇಕು ಎಂದು ಆಗ್ರಹಿಸಿದರು.
ಕಿತ್ತೂರು ಚೆನ್ನಮ್ಮ ಮೂರು ದಿನಕ್ಕೆ ಸೀಮಿತಗೊಳಿಸದೇ ಕೋಟೆಯನ್ನು ಅಭಿವೃದ್ಧಿಪಡಿಸಿ ಪ್ರತಿದಿನ ಪ್ರವಾಸಿಗರು ಬಂದು ನೋಡಲು ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಕೆಲವರು ಸಲಹೆ ನೀಡಿದರು.
ಉತ್ಸವದಲ್ಲಿ ಮಹಿಳೆಯರಿಗೆ ಹಾಗೂ ಮಹಿಳಾ ಕಲಾವಿದರಿಗೆ ವಿಶೇಷ ಅವಕಾಶ ಕಲ್ಪಿಸಬೇಕು.
ಕೋವಿಡ್ ಇರುವುದರಿಂದ ಅದ್ಧೂರಿ ಅಲ್ಲದಿದ್ದರೂ ಅರ್ಥಪೂರ್ಣವಾಗಿ ಆಚರಿಸಬೇಕು. ಇದರೊಂದಿಗೆ ಕ್ರಿಯಾತ್ಮಕ ಹಾಗೂ ಶಾಶ್ವತ ಕೆಲಸಗಳನ್ನು ಮಾಡಬೇಕು.
ಕಿತ್ತೂರು ಚೆನ್ನಮ್ಮ ಜನ್ಮದಿನವನ್ನು ಖಚಿತಪಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಬೇಕು.
ಚೆನ್ನಮ್ಮ ನವೆಂಬರ್ 14 ರಂದು ಜನಿಸಿರುವ ಕುರಿತು ಕೆಲವು ದಾಖಲೆಗಳಿವೆ. ಈ ಬಗ್ಗೆ ಅಧ್ಯಯನ ನಡೆಸಿ ಖಚಿತಪಡಿಸಬೇಕಿದೆ ಎಂದು ಸಾಹಿತಿ ಯ.ರು.ಪಾಟೀಲ ಒತ್ತಾಯಿಸಿದರು.
ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ವೀರಜ್ಯೋತಿ ಸಂಚರಿಸಿದರೆ ಚೆನ್ನಮ್ಮನ ಉತ್ಸವದ ಬಗ್ಗೆ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಸ್ವಾಗತಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಡಾ.ರುದ್ರೇಶ್ ಘಾಳಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ‌‌.ಎಸ್.ವಿ.ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.
ಚೆನ್ನಮ್ಮನ ಕಿತ್ತೂರಿನ ವಿವಿಧ ಸಂಘ-ಸಂಸ್ಥಯ ಪದಾಧಿಕಾರಿಗಳು, ಗಣ್ಯರು ಸೇರಿದಂತೆ ನೂರಾರು ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here