‘ರೇಡಿಯೋ ರೈತ ದಿನಾಚರಣೆ’ ಸಾಧಕ ಕೃಷಿಕರಿಗೆ ಸನ್ಮಾನ

0
173

ಮಡಿಕೇರಿ ಫೆ.15:-ನಗರದ ಆಕಾಶವಾಣಿ ಕೇಂದ್ರದಲ್ಲಿ ‘ರೇಡಿಯೋ ರೈತ ದಿನಾಚರಣೆ’ ಕಾರ್ಯಕ್ರಮವು ಪ್ರಗತಿಪರ ಕೃಷಿಕರಿಗೆ ಸನ್ಮಾನಿಸುವ ಮೂಲಕ ಮಂಗಳವಾರ ನಡೆಯಿತು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪ್ರಗತಿಪರ ರೈತರಾದ ಕಟ್ಟೆಮನೆ ಪ್ರೇಮ, ಸೂದನ ಲೋಕೇಶ್, ಎಚ್.ಪಿ.ಪ್ರದೀಪ, ಬಡುವಂಡ ಬೆಳ್ಯಪ್ಪ ಮುತ್ತಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ರೈತರು ತಾವು ಬೆಳೆದ ಉತ್ಪನ್ನಗಳನ್ನು ಸ್ವತ: ರೈತರೇ ಮಾರುವಂತಾಗಬೇಕು ಎಂದು ಸಲಹೆ ಮಾಡಿದರು.

ಇಂದಿನ ಶರವೇಗದ ಬದುಕಿನಲ್ಲಿ ಆಹಾರ ಹಾಗೂ ಜೀವನ ಪದ್ಧತಿಯಲ್ಲಿ ಬದಲಾವಣೆ ಕಾಣಬಹುದಾಗಿದೆ. ಇದರಿಂದ ದೇಹದ ಮೇಲೂ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸ್ಥಳೀಯವಾಗಿ ದೊರೆಯುವ ಆಹಾರವನ್ನು ಉಪಯೋಗಿಸಬೇಕು ಎಂದು ಅವರು ಸಲಹೆ ಮಾಡಿದರು.

ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ವಿಜಯ ಅಂಗಡಿ ಅವರು ಮಾತನಾಡಿ ಕೃಷಿ ಜೊತೆಗೆ ಬಾಂಧವ್ಯ ಇಟ್ಟುಕೊಂಡರೆ ಬದುಕು ಸಾರ್ಥಕ ಎಂಬುದನ್ನು ಯಾರೂ ಸಹ ಮರೆಯುವಂತಿಲ್ಲ ಎಂದು ಹೇಳಿದರು.

ಆಕಾಶವಾಣಿಯಲ್ಲಿ ಕೃಷಿ ಸಂಬಂಧ ಸಾಕಷ್ಟು ಕಾರ್ಯಕ್ರಮಗಳು ಜನಮನ್ನಣೆ ಗಳಿಸಿರುವುದು ವಿಶೇಷವಾಗಿದೆ. ಆಕಾಶವಾಣಿ ಕಾರ್ಯಕ್ರಮಗಳು ಕೃಷಿಕರು ಸೇರಿದಂತೆ ಹಲವರನ್ನು ಜ್ಞಾನವಂತರನ್ನಾಗಿ ಮಾಡಿದೆ. ಮಹಿಳಾವಾಣಿ, ಯುವವಾಣಿ, ಕೃಷಿರಂಗ, ಮಕ್ಕಳ, ಸಾಹಿತ್ಯ, ಸಂಗೀತ, ಶೈಕ್ಷಣಿಕ ಹೀಗೆ ಹಲವು ಕಾರ್ಯಕ್ರಮಗಳು ಪರಿಣಾಮಕಾರಿಯಾಗಿರುವುದು ವಿಶೇಷವಾಗಿದೆ. ಕೊಡಗು ಆಕಾಶವಾಣಿ ಕೇಂದ್ರವು ಸಹ ನಾಡಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಕುಗ್ರಾಮಗಳಿಗೂ ಕಾರ್ಯಕ್ರಮಗಳು ತಲುಪಿರುವುದು ವಿಶೇಷವಾಗಿದೆ ಎಂದು ವಿಜಯ ಅಂಗಡಿ ಅವರು ನುಡಿದರು.

ಆಕಾಶವಾಣಿಯು ಸಮಾಜಕ್ಕೆ ಒಳ್ಳೆಯ ಮಾಹಿತಿಯನ್ನು ನೀಡುವ ಮೂಲಕ ಜನಮನದಲ್ಲಿ ಇಂದಿಗೂ ಉಳಿದಿದೆ. ಆ ದಿಸೆಯಲ್ಲಿ ಪ್ರಧಾನಮಂತ್ರಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮ ವಿಶೇಷವಾಗಿದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನ ಎಂ.ಶೇಖ್ ಅವರು ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಪ್ರತಿಯೊಬ್ಬ ಕೃಷಿಕರು ‘ಎಫ್‍ಪಿಒ’ನಲ್ಲಿ ನೋಂದಣಿ ಮಾಡಿಕೊಳ್ಳುವುದು ಅಗತ್ಯ. ಜಿಲ್ಲೆಯಲ್ಲಿ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಕಾಫಿ ಬೆಳೆಗೆ ಸಹಾಯಧನ ದೊರೆಯಲಿದೆ. ಭತ್ತ ಬೆಳೆ ಸಂಬಂಧಿಸಿದಂತೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಪ್ರಗತಿಪರ ಕೃಷಿಕರಾದ ಕಟ್ಟೆಮನೆ ಪ್ರೇಮ ಅವರು ಮಾತನಾಡಿ ಕೃಷಿಯಲ್ಲಿ ತೊಡಗಿಸಿಕೊಂಡರೆ ಹೆಚ್ಚಿನ ಆದಾಯ ಗಳಿಸಬಹುದು. ಕೃಷಿಗೆ ರಾಷ್ಟ್ರದಲ್ಲಿ ಪ್ರಧಾನ ಸ್ಥಾನವಿದೆ ಎಂಬುದನ್ನು ಮರೆಯಬಾರದು ಎಂದರು. ಪ್ರದೀಪ್ ಕುಮಾರ್ ಅವರು ಮಾತನಾಡಿ ಮಿಶ್ರ ಬೇಸಾಯ ಮಾಡಿದರೆ ಒಂದಲ್ಲ ಒಂದು ಬೆಳೆ ಕೈಹಿಡಿಯುತ್ತದೆ ಎಂದರು.

ಆಕಾಶವಾಣಿ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಸ್ವಾಗತಿಸಿದರು. ಪ್ರಸಾರ ನಿರ್ವಾಹಕರಾದ ಶಾಂತ ಕುಮಾರ್ ವಂದಿಸಿದರು. ಮಂದ್ರೀರ ನಾಣಯ್ಯ, ತೇಜಸ್ ನಾಣಯ್ಯ, ಇತರರು ಇದ್ದರು. ಗಣೇಶ್ ಕೃಷಿ ಹಾಡು ಹಾಡಿದರು.

LEAVE A REPLY

Please enter your comment!
Please enter your name here