ಯುದ್ಧಗಳು..!!!

0
275

ಮೊದಲು ಕೊನೆಯದಲ್ಲ ಈ ಯುದ್ಧ
ಬಾಯಾರಿದ ಆಯುಧಗಳ ರಕ್ತಾಭಿಷೇಕಕಾಗಿ,ರಕ್ಕಸ ಮನದ ವಿನೋದಕ್ಕಾಗಿ ನಾಯಕರ ಅಹಂ ತೃಪ್ತಿಗಾಗಿ ಘೋಷಣೆಯಾದ ಯುದ್ಧಗಳಿವು

ಅನಾದಿಯ ಬೇಟೆಗಾರ ಜಾಗೃತಗೊಂಡು
ಭೀತಿ ಸಾಮೂಹಿಕಗೊಳಿಸಿ
ತಾವು ತಾವೇ ಎಳೆದುಕೊಂಡ ರೇಖೆಗಳಿಗಾಗಿ ಗಡಿಗಳಿಗಾಗಿ
ಮತ ಧರ್ಮ ಮೈಬಣ್ಣದ ಶ್ರೇಷ್ಟತೆಯ ವ್ಯಸನಕ್ಕಾಗಿ ಘೋಷಣೆಯಾದ ಯುಧ್ಧಗಳಿವು

ಋತುಮಾನಗಳ ಎದೆ ಕಂಪಿಸುವಂತೆ ಭೋರ್ಗರೆವ ಕ್ಷಿಪಣಿಗಳು ಮದ್ದು ಗುಂಡುಗಳು ನೆಲದ ಗರ್ಭ ಸುಟ್ಟಿರಲು ಬೀಜ ಮೊಳೆಯಬಲ್ಲುದೆ? ಚರಿತ್ರೆಯನು ರಕ್ತದಿಂದಲೆ ಮುಂದುವರೆಸಲು ಘೋಷಣೆಯಾದ ಯುದ್ಧಗಳಿವು

ಯಾರು ಗೆದ್ದರು ಸೋತರು ಗಾಯಗೊಂಡದ್ದು ಮನುಕುಲ ವಿನಾಶವಾದದ್ದು ಪವಿತ್ರ ಧರೆ ಕುರುಕ್ಷೇತ್ರದ ಶೌರ್ಯ ಪ್ರತಾಪಗಳು, ಧರ್ಮಯುದ್ಧಗಳು
ಲೋಕಕೆ ಕ್ಷಮೆ ಬೋಧಿಸಿದ ನಾಡಿನ ವಿಶ್ವ ಸಮರಗಳ ನೆನಪಿಸಲು ಘೋಷಣೆಯಾದ ಯುದ್ಧಗಳಿವು

ಶಸ್ತ್ರಾಸ್ತ್ರಗಳ ಸಾಣೆಹಿಡಿದು ಹುತಾತ್ಮರನು ಹೊಗಳಿ ಸಜ್ಜಾಗಿಸಿದಿರಿ ಆತ್ಮಾಹುತಿಗೆ, ಯುದ್ಧಗಳೇನೋ ನಡೆದೇ ಹೋದವು ಆಮೇಲೆ ಉಳಿದದ್ದೇನು ಲೆಕ್ಕ ಕೊಟ್ಟಿದ್ದೀರಾ ಚರಿತ್ರೆಗೆ, ಮನುಷ್ಯತ್ವ ಅಳಿಸಲೆಂದೆ ಘೋಷಣೆಯಾದ ಯುಧ್ಧಗಳಿವು

ಜ್ಯೋತಿ ಬಿ ದೇವಣಗಾವ್.

LEAVE A REPLY

Please enter your comment!
Please enter your name here