ಔಷಧಿ ಸಸ್ಯಗಳ ಉತ್ಪಾದನೆಯಲ್ಲಿ ವಿಶ್ವಕ್ಕೆ ನಮ್ಮ ದೇಶ ಮಾದರಿ -ಪ್ರೊ.ದಯಾನಂದ ಅಗಸರ

0
106

ಕಲಬುರಗಿ.ಮಾ.3:ಕೋವಿಡ್ ನಿಯಂತ್ರಣಕ್ಕಾಗಿ ಸಾಕಷ್ಟು ಔಷಧಿ ಸಸ್ಯಗಳು ಹಾಗೂ ಔಷಧಿಗಳನ್ನು ಉತ್ಪಾದನೆ ಮಾಡುವಲ್ಲಿ ಹಾಗೂ ಅವುಗಳನ್ನು ರಫ್ತು ಮಾಡುವಲ್ಲಿ ಇಡೀ ವಿಶ್ವಕ್ಕೆ ನಮ್ಮ ರಾಷ್ಟ್ರ ಭಾರತ ಮಾದರಿಯಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ದಯಾನಂದ ಅಗಸರ ಅವರು ಗುಣಗಾನ ಮಾಡಿದರು.
ಗುರುವಾರದಂದು ಗುಲಬರ್ಗಾ ವಿಶ್ವವಿದ್ಯಾಲಯದ ಬೋಸ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಔಷಧಿ/ ಗಿಡಮೂಲಿಕಾ ಪ್ರಾಧಿಕಾರ ಬೆಂಗಳೂರು, ಸಸ್ಯಶಾಸ್ತ್ರ ವಿಭಾಗ, ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಅಂತರ ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ಎನ್.ಪಿ.ಎಂ.ಬಿ ಅನುದಾನ ಅಡಿಯಲ್ಲಿ ಕರ್ನಾಟಕ ರಾಜ್ಯ ಸಸ್ಯವಲಯದ ಪಾಲುದಾರರ ಚಟುವಟಿಕೆಗಳ ಅವಲೋಕನ, ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮತ್ತು ಸಮನ್ವಯತೆ ರೂಪಿಸಲು ಕಾರ್ಯಾಗಾರವನ್ನು ಸಸ್ಯಕ್ಕೆ ನೀರೆರೆಯುವದರ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಕೈಗಾರಿಕೆಗಳು ಔಷಧಿ ಸಸ್ಯಗಳ ಮೇಲೆ ಅವಲಂಬಿತವಾಗಿ ಔದ್ಯೋಗಿಕರಣವನ್ನು ಮಾಡುತ್ತಿವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ನಮ್ಮ ಸಸ್ಯ ಔಷಧಿಗಳ ಬಳಕೆಯ ಇತಿಹಾಸವನ್ನು ತೆಗೆದುಕೊಂಡಾಗ ವಿಶ್ವಕ್ಕೆ ಮಾದರಿಯಾಗಿ ನಿಲ್ಲುತ್ತವೆ. ನಮ್ಮಲಿರುವ ವಿವಿಧ ಔಷಧಿ ಸಸ್ಯಗಳ ಬಳಕೆ ಯಾವ ರೀತಿಯಲ್ಲಿ ಮಾಡಬಹುದು ಎಂಬ ಬಗ್ಗೆ ವಿಶ್ವವಿದ್ಯಾಲಯಾದ ಸಸ್ಯಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಜೀವರಸಾಯನಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ ಈ ನಾಲ್ಕು ವಿಭಾಗಗಳು ಸಾಕಷ್ಟು ಸಂಶೋಧನೆಗಳನ್ನು ನಡೆಸಲು ನೆರವಾಗಲಿವೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯದ ಔಷಧೀಯ ಸಸ್ಯಗಳ ಪ್ರಾಧಿಕಾರದ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುದರ್ಶನ ಜಿ.ಎ ಅಧ್ಯಕ್ಷತೆ ವಹಿಸಿ ಮಾತನಾಡಿ, ಔಷಧಿ ಸಸ್ಯಗಳು ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ, ಬೆಳಗಾರರು, ಸಂಶೋಧಕರು, ಸರ್ಕಾರೇತರ ಸಂಸ್ಥೆಗಳು, ಕೃಷಿ ಕೈಗಾರಿಕೆಗಳು ಈ ವಿಷಯದಲ್ಲಿ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿವೆ. ಸಸ್ಯವಲಯಗಳಲ್ಲಿ ಯಾವ ತರಹದ ಸಮಸ್ಯೆ ಇವೆ ಎಂಬುದನ್ನು ಸರ್ಕಾರದ ಗಮನಕ್ಕೆ ತರಲು ಕ್ರಿಯಾ ಯೋಜನೆ ಮಾಡಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಸ್ಯವಿಭಾಗ ಮುಖ್ಯಸ್ಥೆ ಡಾ.ಪ್ರತಿಮಾ ಮಠದ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಮತ್ತು ಔಷಧ ಸಸ್ಯ ಬೆಳೆಗಗಾರು, ಜಾಷಧಿ ಸಸ್ಯ ವಾಪಾರಿಗಳು, ಆಯುಷ್ ಇಲಾಖೆ, ಕೈಗಾರಿಕೆ ಇಲಾಖೆ, ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ, ರೈತರು, ಆರ್ಯವೇದಿಕ ಕಾಲೇಜು ವ್ಯಾಪಾರಿಗಳು, ಔಷಧ ಮಾರಾಟಗಾರರು, ಸಂಶೋಧನಾ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here