ರೈತ ಕೃಷಿ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಂಡೂರು ತಾಲೂಕು ರೈತರ ಸಮ್ಮೇಳನ

0
135

ಸಂಡೂರು:ಮಾ:04:-ಸಂಡೂರು ತಾಲೂಕಿನ ಕೃಷ್ಣ ನಗರದಲ್ಲಿ ರೈತರ ತಾಲೂಕು ಸಮ್ಮೇಳನವನ್ನು ಅಖಿಲ ಭಾರತ ರೈತ-ಕೃಷಿಕಾರ್ಮಿಕರ ಸಂಘಟನೆ AIKKS (RKS)ವತಿ ಯಿಂದ ಹಮ್ಮಿಕೊಳ್ಳಲಾಗಿತ್ತು. ಸಂಡೂರು ತಾಲೂಕಿನ ರೈತರ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲಾಯಿತು..

ಈ ಸಂದರ್ಭದಲ್ಲಿ ಸಂಡೂರು ತಾಲೂಕು ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸಮ್ಮೇಳವನ್ನುದ್ದೇಶಿಸಿ ಎಐಯುಟಿಯುಸಿ ಜಿಲ್ಲಾ ಮುಖಂಡರಾದ ಡಾ|| ಪ್ರಮೋದ್ ಮಾತನಾಡುತ್ತಾ- ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ರೈತನ ಬದುಕು ಸುಧಾರಣೆಯಾಗಲಿಲ್ಲ. ಬದಲಾಗಿ ವರ್ಷಗಳೆದಂತೆ ಅಧೋಗತಿಗೆ ಹೋಗುತ್ತಲಿದೆ. ಇಂದು ದೇಶದಾದ್ಯಂತ ರೈತಾಪಿ ವರ್ಗ ಸಾಲದ ಸುಳಿಯಲ್ಲಿ ಸಿಕ್ಕು ತಮ್ಮ ಹೊಲಗದ್ದೆಗಳನ್ನು ಮಾರಿ ಜೀವನ ಮಾಡುವ ಪರಿಸ್ಥಿತಿ ಬಂದಿದೆ. ಈಗಾಗಲೆ ಕೋಟ್ಯಾಂತರ ರೈತರು ನಿರ್ಗತಿಕರಾಗಿ ಪಟ್ಟಣಗಳಿಗೆ ವಲಸೆ ಹೋಗಿ ಕೂಲಿ ಮಾಡಿ ಬದುಕುತ್ತಿದ್ದಾರೆ. ಲಕ್ಷಾಂತರ ರೈತರು ಬದುಕಿನಲ್ಲಿ ಭರವಸೆ ಕಳೆದುಕೊಂಡು ದಾರಿ ತೋಚದೆ ಆತ್ಮಹತ್ಯೆಗೆ ಮೊರೆಹೋಗಿದ್ದಾರೆ. ಎಲ್ಲಾ ಅಗತ್ಯವಸ್ತುಗಳ ಬೆಲೆಗಳು ಅತ್ಯಂತ ದುಭಾರಿಯಾಗಿ ಜೀವನ ವೆಚ್ಚವೂ ಅಧಿಕವಾಗಿ, ರೈತರು ಸದಾ ಅಭದ್ರತೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಲವೆಡೆ ಅತಿಯಾದ ಮಳೆಯಿಂದ ಇನ್ನೂ ಕೆಲವೆಡೆ ಮಳೆಯಿಲ್ಲದೇ ರೈತರು ಬೆಳೆದ ಫಲ ಹಾಳಾಗಿ, ರೈತರ ಬದುಕು ದಿವಾಳಿಯಾಗಿದೆ.
ರೈತನ ಈ ದುಸ್ಥಿತಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಳೆದ ಏಳು ದಶಕಗಳಿಂದ ನಮ್ಮನ್ನಾಳಿದ ರಾಜಕೀಯ ಪಕ್ಷಗಳ ರೈತ ವಿರೋಧಿ – ಕಾರ್ಪೊರೇಟ್ ಪರ ಆರ್ಥಿಕ ನೀತಿಗಳು, ಆದ್ದರಿಂದಲೇ ಒಂದು ಕಡೆ ರೈತರ ಬದುಕು ದಿವಾಳಿಯತ್ತ ಸಾಗುತ್ತಿದ್ದರೆ ಇನ್ನೊಂದೆಡೆ ಈ ದೇಶದ ದೊಡ್ಡ-ದೊಡ್ಡ ಉದ್ಯಮಿಗಳ ಗಣ -ಮಾಲೀಕರ ಲಾಭಗಳು ನೂರಾರು ಪಟ್ಟು ಹೆಚ್ಚಿ ಪ್ರಪಂಚದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ದಾಖಲಾಗುತ್ತಿದ್ದಾರೆ. ನಮ್ಮನ್ನಾಳುತ್ತಿರುವ ಎಲ್ಲಾ ಸಂಸದೀಯ ಪಕ್ಷಗಳು, ಒಂದೆಡೆ ರೈತನು ಬಳಸುವ ಬೀಜ, ಗೊಬ್ಬರ, ಕೀಟನಾಶಕಗಳ ಮೇಲೆ ದುಬಾರಿ ತೆರಿಗೆ ಹಾಕುತ್ತಾ ಬಂದಿವೆ. ಇನ್ನೊಂದೆಡೆ ಶ್ರೀಮಂತ ಉದ್ಯಮಿಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ತೆರಿಗೆ ವಿನಾಯತಿಯನ್ನು ನೀಡುತ್ತಾ ಬಂದಿವೆ. ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುತ್ತಾ ಬಂದಿವೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿಗಳಾದ ಈ.ಹನುಮಂತಪ್ಪ ಮಾತನಾಡಿ- ಈ ಪಕ್ಷಗಳು ಐದು ವರ್ಷಕ್ಕೊಮ್ಮೆ ನಮ್ಮ ಬಳಿ ಬಂದು ಸುಳ್ಳು ಆಶ್ವಾಸನೆಗಳನ್ನು ನೀಡಿ, ಹಣ ಕೊಟ್ಟು ಓಟು ಹಾಕಿಸಿಕೊಂಡು ಮೋಸ ಮಾಡಿ ಅಧಿಕಾರದ ಗದ್ದುಗೆಯನ್ನು ಏರುತ್ತಾರೆ. ನಂತರ ಜನರವಿರೋಧಿ-ಕೃಷಿವಿರೋಧಿ ನೀತಿಗಳನ್ನು ಎಗ್ಗುಸಿಗ್ಗಿಲ್ಲದೆ ಜಾರಿಗೊಳಿಸುತ್ತಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರದ, ಅತ್ಯಂತ ಅಪಾಯಕಾರಿ ರೈತ-ವಿರೋಧಿ, ಕೃಷಿ ಕಾಯ್ದೆಗಳ ಹಾಗೂ ವಿದ್ಯುಚ್ಛಕ್ತಿ ಕಾಯ್ದೆ ವಿರುದ್ಧ 15 ತಿಂಗಳುಗಳ ಕಾಲ ಧೀರೋದ್ದಾತ್ತ ಹೋರಾಟ ನಡೆಸಿ, ಕೊನೆಗೂ ಅತ್ಯಂತ ಮೊಂಡುತನದ ಹಾಗೂ ಜನಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲದ ಕೇಂದ್ರ ಸರ್ಕಾರದ ಎಲ್ಲಾ ಪಿತೂರಿಗಳನ್ನು ಸೋಲಿಸಿ ಜಯಭೇರಿ ಗಳಿಸಿ, ಇತಿಹಾಸ ದಾಖಲಿಸಿದ ಸಂಗತಿಯು, ನಮ್ಮ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಲು ಹೋರಾಟವೊಂದೇ ಮಾರ್ಗವೆನ್ನುವುದನ್ನು ಸಾಭೀತುಪಡಿಸಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜಿಲ್ಲಾ ಮುಖಂಡರಾದ ಗೋವಿಂದ್ ಮಾತನಾಡಿ- ರೈತ ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿ, ನಮ್ಮ ಮುಂದಿನ ಹೋರಾಟಗಳ ರೂಪು ರೇಷೆಗಳನ್ನು ನಿರ್ಧರಿಸಲು, ಈ ಸಮ್ಮೇಳನವು ಸಂಡೂರು ತಾಲೂಕಿನ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಲು ರೈತರಿಗೆ ಸ್ಪೂರ್ತಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಬಸವರಾಜ, ಹುಚ್ಚಪ್ಪ, ತಿಮ್ಮಪ್ಪ, ಈರಣ್ಣ, ಶಫಿ, ಮಾಬೂಸಾಬ್ ಇನ್ನಿತರರು ಭಾಗವಹಿಸಿದ್ದರು.

ಬೇಡಿಕೆಗಳು

  • ಈರುಳ್ಳಿ, ಮೆಕ್ಕೇಜೋಳ, ಮೆಣಸಿನಕಾಯಿ ಇನ್ನಿತರ ಬೆಳೆಗಳಿಗೆ ಬೆಂಬಲಬೆಲೆ ನೀಡಿ.
  • ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟ ನೀಡಿ.
  • ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಕೆಯನ್ನು ಕೈಬಿಡಬೇಕು..
  • ನರೇಗಾ ಯೋಜನೆಯಡಿ ರೈತ-ಕೃಷಿಕಾರ್ಮಿಕರಿಗೆ ವರ್ಷ ಪೂರ್ತಿ ಕೆಲಸ ಕೊಡಿ. ಹಾಗೂ ದಿನಕ್ಕೆ 600 ರೂ ಕೂಲಿ ನೀಡಬೇಕು
  • ರೈತರ ಸಾಲ ಮನ್ನಾ ಮಾಡಿ.

LEAVE A REPLY

Please enter your comment!
Please enter your name here