ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ವಿಚಾರ ಸಂಕಿರಣ, ನವಭಾರತ ನಿರ್ಮಾಣಕ್ಕೆ ನೂತನ ಶಿಕ್ಷಣ ಅವಶ್ಯಕ:ಡಾ.ಅಶ್ವಥ್ ನಾರಾಯಣ

0
86

ಕಲಬುರಗಿ.ಆ.24 -ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದಿಂದ ನವಭಾರತ ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗಲಿದೆ ಎಂದು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಹಾಗೂ ಸಮಕುಲಪತಿಗಳಾದ ಡಾ. ಸಿ.ಎನ್ ಅಶ್ವಥ್ ನಾರಾಯಣ ಅವರು ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಹೊರ ವಲಯದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಿಜಿಟಲ್ ಶಿಕ್ಷಣದ ಅವಶ್ಯಕತೆ ತುಂಬಾ ಇದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರ ವಿವಿಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ನೂತನ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸಿ ನಿಜವಾದ ಕಲ್ಯಾಣ ಮಾಡುವುದಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.

ಶಿಕ್ಷಣ ಪದ್ಧತಿಯಲ್ಲಿನ ನ್ಯೂನ್ಯತೆಗಳನ್ನು ತೆಗೆದು ಹಾಕಿ, ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಶಿಕ್ಷಣ ಒದಗಿಸುವುದೇ ನೂತನ ಶಿಕ್ಷಣ ನೀತಿಯ ಗುರಿಯಾಗಿದೆ. ಮಕ್ಕಳ ಕಲಿಕೆಯು 6 ವರ್ಷದಿಂದ ಪ್ರಾರಂಭವಾಗುವುದನ್ನು ಮುಂದೆ 3 ವರ್ಷದಿಂದ ಶಿಕ್ಷಣ ಆರಂಭಿಸಿ ಮಕ್ಕಳ ಜ್ಞಾನಾರ್ಜನೆಗೆ ಶಿಕ್ಷಣ ನೀತಿ ಹೆಚ್ಚಿನ ಒತ್ತು ನೀಡುತ್ತದೆ ಎಂದು ಅವರು ತಿಳಿಸಿದರು.

ನೂತನ ಶಿಕ್ಷಣ ನೀತಿಯು ಕಳೆದ ಐದೂವರೆ ವರ್ಷಗಳಿಂದ ನುರಿತ ಶಿಕ್ಷಣ ತಜ್ಞರ ಸತತ ಅಧ್ಯಯನ ಶ್ರಮದ ಪ್ರತಿಫಲವಾಗಿ ಜಾರಿಗೊಳ್ಳುತ್ತಿದ್ದು, ನೂತನ ಶಿಕ್ಷಣ ನೀತಿ -2020 ಅನ್ನು ಅನುμÁ್ಠನಕ್ಕೆ ತರುವಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಹೆಜ್ಜೆ ಇಟ್ಟಿದೆ. ಇದರಿಂದಾಗಿ ನವ ಭಾರತದಲ್ಲಿ ನವ ಕರ್ನಾಟಕ ನಿರ್ಮಾಣವಾಗುತ್ತದೆ. ಹಳೆಯ ವ್ಯವಸ್ಥೆಗಳನ್ನು ತೆಗೆದು ಹಾಕುವ ಮೂಲಕ ಶಿಕ್ಷಣ ಪದ್ದತಿಯಲ್ಲಿ ವೈಜ್ಞಾನಿಕ ಹಾಗೂ ಡಿಜಿಟಲೀಕರಣ ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮಡು ಅವರು ಮಾತನಾಡಿ, ಭಾರತದಲ್ಲಿ 1987 ರಿಂದ ಇಲ್ಲಿಯವರೆಗೂ ಹಳೆಯ ಶಿಕ್ಷಣ ನೀತಿಯ ಜಾರಿಯಲ್ಲಿತ್ತು, ಆದರೆ, 2020ನೇ ಸಾಲಿನಿಂದ ಪ್ರಧಾನಿಯವರ ದೂರದೃಷ್ಟಿಯಿಂದ ವಿದ್ಯಾರ್ಥಿಗಳ ಹಾಗೂ ದೇಶದ ಅಭಿವೃದ್ಧಿಗಾಗಿ ಹೊಸ ಶಿಕ್ಷಣ ನೀತಿ- 2020 ಮುನ್ನುಡಿಯಾಗಲಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ದಯಾನಂದ ಅಗಸರ್ ಅವರು ಮಾತನಾಡಿ, ವಿವಿಯ ಅಡಿಯಲ್ಲಿ 370 ಮಹಾವಿದ್ಯಾಲಯಗಳಲ್ಲಿ 73 ಸಾವಿರಕ್ಕೂ ಹೆಚ್ಚಿನ ವಿದ್ಯಾಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಬೀದರ್ ಜಿಲ್ಲೆಯಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ 700 ಜನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆಂದು ಹೇಳಿದರು.

ವಿವಿ ಕ್ಯಾಂಪಸ್ ನಲ್ಲಿ ಒಟ್ಟು 248 ಪ್ರಾಧ್ಯಾಪಕರ ಹುದ್ದೆ ಮಂಜೂರಾಗಿದ್ದು, ಅದರಲ್ಲಿ ಸದ್ಯ 60 ಪ್ರಾಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ, ಇನ್ನುಳಿದ ಖಾಲಿ ಇರುವ 180 ಪ್ರಾಧ್ಯಾಪಕರ ಹುದ್ದೆಗಳನ್ನು ಶೀಘ್ರವಾಗಿ ನೇಮಕಾತಿ ಮಾಡಿಕೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ ಅವರಿಗೆ ಮನವಿ ಮಾಡಿದರು.

ಬೀದರ್ ಜಿಲ್ಲೆಯ ಭಾಲ್ಕಿಯ ಹಿರೇಮಠ ಸಂಸ್ಥಾನದ ಮ.ಘ.ಚ. ಬಸವಲಿಂಗ ಪಟ್ಟದೇವರು ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಚಿವರು ರೂಸಾ ಅನುದಾನದಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಸಂಚಿಕೆಗಳನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ವೈ ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ,ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತನ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ, ಸಿಂಡಿಕೇಟ್ ಸದಸ್ಯ ಬಸವರಾಜ ಯಾದವಾಡ, ವಿದ್ಯಾವಿಷಯಕ ಪರಿಷತ್ ಸದಸ್ಯ ವಿಜಯಕುಮಾರ ಬಿ. ಮೆಹತಾ, ಮೌಲ್ಯಮಾಪನ ಕುಲಸಚಿವ ಸೋನಾರ ನಂದಪ್ಪ, ವಿತ್ತಾಧಿಕಾರಿ ಬಿ. ವಿಜಯಾ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಇದ್ದರು.

ಕುಲಸಚಿವ ಶರಣಬಸಪ್ಪ ಕೋಟೆಪ್ಪಗೊಳ್ ಸ್ವಾಗತಿಸಿದರು. ಡೀನ್ ಚಂದ್ರಕಾಂತ ಯಾತನೂರು ವಂದಿಸಿದರು. ವಿದ್ಯಾ ಮಂಡಲ ವಿಭಾಗದ ಅಧೀಕ್ಷಕ ಬಿ.ಎಂ ರುದ್ರವಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.

ಡಿಜಿಟಲ್ ಗ್ರಂಥಾಲಯಕ್ಕೆ ಶಂಕುಸ್ಥಾಪನೆ: ಇದೇ ವೇಳೆ ವಿವಿ ಆವರಣದಲ್ಲಿ ಗಣಕಧಾರಿತ ಶಿಕ್ಷಣ ಸಂಪನ್ಮೂಲ ಕೇಂದ್ರ ಡಿಜಿಟಲ್ ಗ್ರಂಥಾಲಯದ ನವೀಕರಣ ಹಾಗೂ ರೂಸಾ ಅನುದಾನದಡಿಯಲ್ಲಿ ನಿರ್ಮಿತವಾಗಿರುವ ಪರಿಸರ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನ ವಿಭಾಗದ ಲ್ಯಾಬೊರೇಟರಿ ಕಟ್ಟಡ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳ ಕಟ್ಟಡಗಳನ್ನು ಸಚಿವ ಅಶ್ವತ್ ನಾರಾಯಣ್ ಅವರು ಉದ್ಘಾಟಿಸಿದರು.

LEAVE A REPLY

Please enter your comment!
Please enter your name here