ಉಚಿತವಾಗಿ ರೈತರಿಗೆ ಕಂದಾಯ ದಾಖಲೆಗಳು ತಲುಪಿಸುವ ಸರಕಾರದ ವಿನೂತನ ಕಾರ್ಯಕ್ರಮ, ಮಾ.12ರಂದು ಜಿಲ್ಲೆಯಾದ್ಯಂತ ಕಂದಾಯ ದಾಖಲೆ ಮನೆಬಾಗಿಲಿಗೆ: ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ

0
125

ಬಳ್ಳಾರಿ,ಮಾ.11: “ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಮಹತ್ವದ ಯೋಜನೆಯಾಗಿದೆ. ಈ ಯೋಜನೆಗೆ ಮಾ.12ರಂದು ಬೆಳಗ್ಗೆ 11ಕ್ಕೆ ಅಂದ್ರಾಳ್ ಬಳಿ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಚಾಲನೆ ನೀಡಲಿದ್ದಾರೆ. ಅದೇ ರೀತಿ ತಾಲೂಕುಗಳಲ್ಲಿ ಶಾಸಕರು ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ರೈತರ ಮನೆಬಾಗಿಲಿಗೆ ಕಂದಾಯ ದಾಖಲೆಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೈತರಿಗೆ ತಮ್ಮ ಕಂದಾಯ ದಾಖಲೆಗಳನ್ನು ಹೊಂದುವುದು ಅವರ ಹಕ್ಕಾಗಿದ್ದು, ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಈ ದಾಖಲೆಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ಇಂತಹ ದಾಖಲೆಗಳಿಗೆ ಗ್ರಾಮೀಣ ಭಾಗದ ರೈತರ ದಿನನಿತ್ಯ ದಾಖಲೆಗಳಿಗಾಗಿ ಕಛೇರಿಗಳಿಗೆ ಅಲೆದಾಡುವುದು ತುಂಬಾ ದುಸ್ತರವಾಗಿರುವುದರಿಂದ, ರೈತರುಗಳಿಗೆ ಅವರ ಮನೆಬಾಗಿಲಿಗೆ ಅವರ ಕಂದಾಯ ದಾಖಲೆಗಳನ್ನು ತಲುಪಿಸುವುದರಿಂದ ಈ ರೀತಿಯ ಅಲೆದಾಟ ತಪ್ಪಿಸಿದಂತಾಗುತ್ತದೆ ಎಂಬ ಸದುದ್ದೇಶದಿಂದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಇಂತಹ ಮಹತ್ತರ ಯೋಜನೆಯನ್ನು ಜಾರಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲಾ ರೈತರಿಗೆ ಅವರ ಜಮೀನಿಗೆ ಸಂಬಂಧಿಸಿದ ಪಹಣಿ ಪತ್ರಿಕೆ ಹಾಗೂ ನಕಾಶೆ, ಇದರೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸಲು ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 1,95,670 ಪಹಣಿ ಮತ್ತು 96,172 ನಕ್ಷೆಗಳು ಮತ್ತು 1,98,144 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಸೇರಿದಂತೆ ಒಟ್ಟು 4,89,986 ದಾಖಲೆಗಳು ಮುದ್ರಣಗೊಂಡು ಆಯಾ ತಾಲ್ಲೂಕು ಕಛೇರಿಗಳಿಗೆ ಪೂರೈಕೆ ಮಾಡಲಾಗಿದೆ. ಅದರಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಸರ್ಕಾರದ ನಿರ್ದೇಶನದಂತೆ ನಿಗದಿಪಡಿಸಿದ ಲಕೋಟೆಗಳಲ್ಲಿ ಸರ್ಕಾರದ ಸಾಧನಗಳ ಮಾಹಿತಿಯುಳ್ಳ ಕಿರುಹೊತ್ತಿಗೆಯೊಂದಿಗೆ, ಈ ದಾಖಲೆಗಳನ್ನು ಇಟ್ಟು, ರೈತರ ಮನ ಬಾಗಿಲಿಗೆ ತಲುಪಿಸಲಿದ್ದಾರೆ ಎಂದು ಅವರು ವಿವರಿಸಿದರು.
ಮಾ.12ರಂದು ಬೆಳಗ್ಗೆ 11ಕ್ಕೆ ನಗರ ಹೊರವಲಯದ ಅಂದ್ರಾಳ್ ಬಳಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದು,ಬಳ್ಳಾರಿ ಗ್ರಾಮೀಣ ಕ್ಷೇತ್ರದ ಎತ್ತಿನಬೂದಿಹಾಳ್‍ದಲ್ಲಿ ಸ್ಥಳೀಯ ಶಾಸಕರು ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಸರ್ಕಾರದ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಕಾರ್ಯಕ್ರಮದಿಂದ ರೈತರಿಗೆ ಒಂದು ಬಾರಿ ಉಚಿತವಾಗಿ ಕಂದಾಯ ದಾಖಲೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದರಿಂದ ಕಛೇರಿಗೆ ಅಲೆದಾಡುವುದು ತಪ್ಪಿಸಿದಂತಾಗುತ್ತದೆ. ಅಲ್ಲದೆ ಸದರಿ ಕಾರ್ಯಕ್ರಮದಿಂದ ರೈತರಿಗೆ ತಮ್ಮ ಜಮೀನಿನ ಪೂರ್ಣ ಮಾಹಿತಿ ಸ್ಥಳದಲ್ಲೇ ಲಭಿಸಿದಂತಾಗುತ್ತದೆ. ಉಚಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಿಂದಾಗಿ ಅವರ ಹಾಗೂ ಅವರ ಮಕ್ಕಳಿಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಹಕಾರಿಯಾಗಿರುತ್ತದೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ದಾಖಲೆಗಳಿಂದ ಈ ಎಲ್ಲ ಮಾಹಿತಿ ಪಡೆದುಕೊಂಡು ರೈತರಿಗೆ ಗ್ರಾಮಗಳಲ್ಲಿ ಗ್ರಾಮಲೆಕ್ಕಿಗ ಮತ್ತು ಸಹಾಯಕರ ಮೂಲಕ ವಿತರಿಸಲು ಉದ್ದೇಶಿಸಲಾಗಿದೆ. ಈ ಎಲ್ಲ ದಾಖಲೆಗಳನ್ನು ಎರಡ್ಮೂರು ದಿನಗಳಲ್ಲಿ ರೈತರ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ವಿವರಿಸಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಕಂದಾಯ ದಾಖಲೆಗಳು ಪಡೆಯದವರು ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ವಾರದೊಳಗೆ ಉಚಿತವಾಗಿ ಪಡೆದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here