ಎಸಿಬಿ ವತಿಯಿಂದ ಭ್ರಷ್ಟಾಚಾರ ಜಾಗೃತಿ ಕಾರ್ಯಕ್ರಮ, ಸಾಕ್ಷರತೆ ಇದ್ದರೂ ಅರಿವಿನ ಕೊರತೆ;ಇದುವೇ ಭ್ರಷ್ಟಾಚಾರಕ್ಕೆ ಮಾರಕ:ಎಸಿಬಿ ಇನ್ಸ್‍ಪೆಕ್ಟರ್ ಪ್ರಭುಲಿಂಗಯ್ಯ ಹಿರೇಮಠ್

0
93

ಬಳ್ಳಾರಿ/ಹೊಸಪೇಟೆ, ಜ.18: ನಮ್ಮಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿದ್ದರೂ ಅರಿವಿನ ಕೊರತೆ ಇದ್ದು, ಇದು ಭ್ರಷ್ಟಾಚಾರ ವ್ಯವಸ್ಥೆಯ ನಿಗ್ರಹಕ್ಕೆ ಮಾರಕವಾಗಿದೆ ಎಂದು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಭುಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಎಸಿಬಿ ವತಿಯಿಂದ ಹೊಸಪೇಟೆ ನಗರದ ವಿಜಯನಗರ ಪಿಯು ವಿದ್ಯಾಲಯದಲ್ಲಿ ಸೋಮವಾರದಂದು ಆಯೋಜಿಸಿದ್ದ ಭ್ರಷ್ಟಾಚಾರ ನಿಗ್ರಹದಲ್ಲಿ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಕುರಿತಂತೆ ವಿಶೇಷ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
ಸರ್ಕಾರದ ಏನೇ ಯೋಜನೆ ಇರಲಿ ಯಾವುದೇ ಅಡೆತಡೆ ಇಲ್ಲದೇ ಫಲಾನುಭವಿಗಳಿಗೆ ನೇರವಾಗಿ ತಲುಪಬೇಕು. ಆದರೆ ಅದು ಕಟ್ಟಕಡೆಯ ಮನುಷ್ಯನಿಗೆ ತಲುಪುತ್ತಿಲ್ಲ;ಇದು ದುರ್ದೈವವಾಗಿದೆ ಎಂದರು.
ಪ್ರತಿ ವಿದ್ಯಾರ್ಥಿಗಳಿಗೆ ಅವರ ಮನೆಯ ಜವಾಬ್ದಾರಿ ಹೊರುವ ಸಂದರ್ಭದಲ್ಲಿ ಭ್ರಷ್ಟಾಚಾರದ ಅನುಭವ ಸಿಗುತ್ತದೆ. ಭ್ರಷ್ಟಾಚಾರವನ್ನು ನಿಗ್ರಹಿಸಲು ಸಾರ್ವಜನಿಕರಾಗಿ ತಾವು ಏನು ಮಾಡಬೇಕು ಎಂಬುದನ್ನು ಅರಿತುಕೊಳ್ಳಬೇಕು. ಜನರು ಕಟ್ಟುವ ತೆರಿಗೆಯಿಂದ ಸರ್ಕಾರ ಸೌಲಭ್ಯಗಳನ್ನು ನೀಡುತ್ತದೆ. ಸೌಲಭ್ಯ ಪಡೆಯುವುದು ನಿಮ್ಮ ಹಕ್ಕು, ಹಕ್ಕು ಪಡೆದುಕೊಳ್ಳುವವರು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು,
ವಿದ್ಯಾರ್ಥಿ ದೆಸೆಯಲ್ಲಿರುವ ನೀವುಗಳು ಭ್ರಷ್ಟಾಚಾರದ ನಿರ್ಮೂಲನೆಗೆ ಕೈಜೋಡಿಸಬೇಕು,
ಭ್ರಷ್ಟಾಚಾರ ನಿಗ್ರಹ ದಳವು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸ್ಥಾಪಿತವಾಗಿದೆ,
ಕೆಲವೊಮ್ಮೆ ಸಾರ್ವಜನಿಕರ ಅಜ್ಞಾನದ ಕೊರತೆಯಿಂದಲೂ ಭ್ರಷ್ಟಾಚಾರ ನಡೆಯುವ ಸಂಭವ ಇರುತ್ತದೆ. ಆದ್ದರಿಂದ ಎಲ್ಲರೂ ಸರ್ಕಾರದ ಯೋಜನೆಗಳ ನಿರ್ವಹಣೆಯ ಕಾರ್ಯವಿಧಾನದ ಅರಿವು ಇರಬೇಕು, ಸರ್ಕಾರದ ಮಾಹಿತಿ ಪಡೆಯಲು ಮಾಹಿತಿ ಹಕ್ಕು, ಸಕಾಲ ಎಂಬ ಯೋಜನೆಗಳನ್ನು ತಂದಿದೆ. ಇದರ ಕುರಿತಂತೆ ಇತರರಿಗೂ ಅರಿವು ಮೂಡಿಸಬೇಕು ಎಂದರು.
ಭ್ರಷ್ಟಾಚಾರ ಕುರಿತು ನೀಡುವ ದೂರಿನ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ದೂರನ್ನು ನೀಡಲು ಯಾರೂ ಹಿಂಜರಿಯಬಾರದು; ಅದರಲ್ಲೂ ವಿಶೇಷವಾಗಿ ಮಹಿಳೆಯರು ಧೈರ್ಯದಿಂದ ಮುಂಚೂಣಿಯಲ್ಲಿ ಬಂದು ಭ್ರಷ್ಟಾಚಾರದ ನಿರ್ಮೂಲನೆಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರಭಯ್ಯ ಮಾತನಾಡಿ
ಸದ್ಯ ದೇಶದಲ್ಲಿ ಹಂತಹಂತವಾಗಿ ಭ್ರಷ್ಟಾಚಾರ ಕಡಿಮೆಯಾಗುತ್ತಿದೆ, ಇದಕ್ಕೆ ಸಾರ್ವಜನಿಕರ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ ರಾಷ್ಟ್ರದ ಏಳಿಗೆಗೆ ತಮ್ಮದೆಯಾದ ಕೊಡುಗೆಯನ್ನು ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಸುಜಾತ ಬೆಳ್ಳಿಗುಂಡಿ ವಹಿಸಿದ್ದರು, ಈ ವೇಳೆ ಹೆಚ್.ಎಂ. ಪ್ರಭುಸ್ವಾಮಿ ಸೇರಿದಂತೆ ಭೋಧಕ ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಹೆಚ್.ಎಂ.ನಿರಂಜನ್ ನಿರೂಪಿಸಿದರು.

LEAVE A REPLY

Please enter your comment!
Please enter your name here