ಹೈನುಗಾರಿಕೆಗೆ ಉತ್ತೇಜನ ನೀಡಲು ಪ್ರತಿ ಕುಟುಂಬಕ್ಕೆ ಎರಡು ಹಸುಗಳನ್ನು ನೀಡುತ್ತೇನೆ;ಈ. ತುಕಾರಾಮ್

0
336

ಸಂಡೂರು:ಜೂನ್:21:-ಅಕ್ರಮ ಮದ್ಯ ಮಾರಾಟ ತಡೆಯಲು ಸೂಚನೆ, ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ, ಹೈನುಗಾರಿಕೆ ಉತ್ತೇಜಿಸಲು ಸಲಹೆ, ಸಾರಿಗೆ ವ್ಯವಸ್ಥೆ ಉತ್ತಮಗೊಳಿಸುವಂತೆ ಆದೇಶ, ಗುಣಮಟ್ಟದ ಶಿಕ್ಷಣ ನೀಡಲು ಸೂಚನೆ.
ಇವಿಷ್ಟು ಪಟ್ಟಣದ ಸ.ಬಾ.ಪ.ಪೂ.ಕಾಲೇಜ್ ಸಭಾಂಗಣದಲ್ಲಿ ಶಾಸಕರಾದ ಈ. ತುಕರಾಮ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಪ್ರಮುಖ ಅಂಶಗಳು.

ಶಾಸಕರು ಮಾತನಾಡಿ, ಪ್ರತಿ ಹಳ್ಳಿಯ ಸಣ್ಣ ಪುಟ್ಟ ಅಂಗಡಿಗಳಲ್ಲೂ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಟಾರ್ಗೆಟ್ ರೀಚ್ ಮಾಡುವ ಭರದಲ್ಲಿ ಹಳ್ಳಿಗಳಲ್ಲಿ ಅಕ್ರಮ ಮಧ್ಯ ಸಿಗುತ್ತಿದೆ. ಗುಡಿ ಗೋಪುರ ಕಟ್ಟಿಸುವ ನೆಪದಲ್ಲಿ ಹರಾಜು ಪಡೆದ ಕೆಲವರು ಅಕ್ರಮ ಮದ್ಯ ಮಾರಾಟದ ಕಿಂಗ್ ಪಿನ್ ಗಳಾಗುತ್ತಿದ್ದಾರೆ.ಅಂಥವರ ವಿರುದ್ಧ ಪ್ರಕರಣ ದಾಖಲಿಸಿರಿ. ಸಂಡೂರು ತಾಲೂಕಿನಿಂದ ಗಣಿಗಾರಿಕೆ ಮತ್ತು ಉದ್ಯಮಗಳಿಂದ ವಾರ್ಷಿಕ ಸಾವಿರಾರು ಕೋಟಿ ರೂ. ತೆರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಇಂಥ ಜಾಗದಲ್ಲಿ ಮಧ್ಯ ಮಾರಾಟದ ಟಾರ್ಗೆಟ್ ಬೇಕಿಲ್ಲ, ಈ ಬಗ್ಗೆ ಈ ಹಿಂದೆ ನಾನು ಸದನದಲ್ಲೂ ಧ್ವನಿ ಎತ್ತಿರುವೆ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಅಬಕಾರಿ ಇಲಾಖೆ ಅಧಿಕಾರಿ ಬಸವರಾಜರವರಿಗೆ ಸೂಚನೆ ನೀಡಿದರು.

ಹೈನುಗಾರಿಕೆಗೆ ಉತ್ತೇಜನ ನೀಡಿ:
ತಾಲ್ಲೂಕಿನಲ್ಲಿ 2.60 ಲಕ್ಷ ಜನ ಸಂಖ್ಯೆಯಿದೆ, ಕೇವಲ 31 ಸಾವಿರ ಹೇ. ಉಳುಮೆ ಭೂಮಿಯಿದೆ. ಸಣ್ಣ ಹಿಡುವಳಿದಾರರು ಹೆಚ್ಚಿದ್ದಾರೆ ಆದ್ದರಿಂದ ಸಾಂಪ್ರಾದಾಯಿಕ ಬೆಳೆಗಳಿಗಿಂತ ಮಿಶ್ರಬೆಳೆ, ಸಿರಿದಾನ್ಯ, ಹಣ್ಣು ತರಕಾರಿಗಳನ್ನು ಬೆಳೆಯಬೇಕು. ಚೋರನೂರು ಹೋಬಳಿಯಲ್ಲಿ ರೇಷ್ಮೆ ಬೆಳೆ ಬೆಳೆಯಲು, ಜತೆಗೆ ಪ್ರತಿ ಕುಟುಂಬಕ್ಕೆ ಎರಡು ಹಸುಗಳನ್ನು ಕೊಟ್ಟು ಹೈನುಗಾರಿಕೆಗೆ ಉತ್ತೇಜನ ನೀಡಬೇಕು, ರಾಘವಾಪುರ ತೋಟಗಾರಿಕೆ ಪಾರಂ ನಲ್ಲಿ ತರಬೇತಿ ಕೇಂದ್ರ ಆರಂಭಿಸಲು ಯೋಜಿಸಲಾಗಿದೆ. ಸಿದ್ದಾಪುರ ಪಾರಂ ಹದ್ಫು ಬಸ್ತ ಮಾಡಿಕೊಂಡು ಅಭಿವೃದ್ಧಿ ಮಾಡಬೇಕು. ತೋರಣಗಲ್ಲು ಪಾರಂ ಅಭಿವೃದ್ಧಿ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಎಡಿ ಹನುಮಪ್ಪ ನಾಯಕ,ಎಡಿಎ ಮಂಜುನಾಥ ರೆಡ್ಡಿಯವರಿಗೆ, ಕೆಎಂಎಫ್ ರೂಟ್ ಅಧಿಕಾರಿ ತಿಪ್ಪೇಸ್ವಾಮಿಗೆ ಹೇಳಿದರು.

ಸಂಜೆ 5 ರಿಂದ 7 ಗಂಟೆಯವರೆಗೆ ಸಂಡೂರಿನಿಂದ ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ ಮಾರ್ಗದಲ್ಲಿ ಬಸ್ ಗಳ ತೀವ್ರ ಕೊರತೆಯಿದೆ ಎಂದು ಡಿಪೋ ವ್ಯವಸ್ಥಾಪಕ ವೆಂಕಟೇಶ್ ಅವರನ್ನು ಪ್ರಶ್ನಿಸಿದರು.

ಶಾಸಕರ ಗಮನಕ್ಕೆ:
ಮಾಳಪುರದಲ್ಲಿ ಬಾಲಕಿಯರು ಪ್ರೌಢಶಾಲೆ, ಕಾಲೇಜಿಗೆ ತೆರಳುತ್ತಿದ್ದು ಅಲ್ಲಿಗೆ ಬಸ್ ಬರುತ್ತಿಲ್ಲ ಎಂದು ಗ್ರಾಮಸ್ಥರು ಸಭೆಯ ಮೂಲಕ ಶಾಸಕರ ಗಮನಕ್ಕೆ ತಂದರು. ಕೆಂಡಾ ಮಂಡಲರಾದ ಶಾಸಕರು ಮಹಿಳಾ ಶಿಕ್ಷಣಕ್ಕೆ ಒತ್ತುಕೊಡಬೇಕು ಎಂದು ಎಲ್ಲರೂ ಹೇಳುತ್ತೇವೆ. ಆದರೆ ಬಸ್ ಬರದೆ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗುವುದು ಹೇಗೆ ಕೂಡಲೆ ಬಸ್ ಬಿಡುವ ವ್ಯವಸ್ಥೆ ಮಾಡಿ, ಲಾಭ ನಷ್ಟದ ಲೆಕ್ಕಾಚಾರ ಬೇಡ ಎಂದು ಸೂಚನೆ ನೀಡಿದರು. ಬಿಇಓ ಡಾ.ಐ.ಆರ್.ಅಕ್ಕಿ ಮಾತನಾಡಿದರು.
ಆರ್ಕಿಟೆಕ್ಚರ್ ಸೂರಜ್ ಅವರು ತೋರಿಸಿದ ಶಿವಪುರ ಕೆರೆಯ ನಡುಗದ್ದೆ ಸೇರಿದಂತೆ ಹಲವು ಮಾದರಿ ಶಾಲೆಗಳ ಡಿಜೈನ್ ಗಳನ್ನು ಶಾಸಕರು ಪ್ರದರ್ಶಿಸಿದರು.

ಸರಕಾರಿ ಕೆಲಸಕ್ಕೆ ವಿನಾಕಾರಣ ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿರಿ ಎಂದು ತಾ.ಪಂ.ಇಓ ದಾರುಕೇಶ್, ಸೇರಿದಂತೆ ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಸಿಓ ಬಸವರಾಜ್ ನಿರ್ವಹಿಸಿದರು.

ಅಧಿಕಾರಿ ವರ್ಗಕ್ಕೆ ಎಚ್ಚರಿಕೆ

ನಾನು ಮಾರುವೇಷದಲ್ಲಿ ಹಳ್ಳಿಗಳನ್ನು ಸುತ್ತುವೆ, ಅಕ್ರಮ ಮದ್ಯ ಮಾರಾಟ ಕಂಡುಬಂದಲ್ಲಿ ಹಿರಿಯ ಅಧಿಕಾರಿಗಳಿಗೆ ತಿಳಿಸಿ ನಿಮ್ಮನ್ನು ಅಮಾನತು ಮಾಡಿಸಲು ನಾನು ಹಿಂಜರಿಯುವುದಿಲ್ಲ ಎಂದು ಶಾಸಕರು ಅಬಕಾರಿ ಅಧಿಕಾರಿ ಬಸವರಾಜ್ ಅವರಿಗೆ ಎಚ್ಚರಿಸಿದರು. ಈ ಹಿಂದೆ ಗ್ರಾಮ ವಾಸ್ತವ್ಯ ನಡೆದ ತಿಪ್ಪನಮರಡಿ,ಮುರಾರಿಪುರದಲ್ಲೂ ಸಾರಿಗೆ ಬಸ್ ವ್ಯವಸ್ಥೆ ತೊಂದರೆ ಬಗ್ಗೆ ಜನ ಆಗ್ರಹಿಸಿದ್ದರು, ಡಿಪೋ ವ್ಯವಸ್ಥಾಪಕ ವೆಂಕಟೇಶ ಮಾಡುವ ತಪ್ಪುಗಳ ಕಾರಣಕ್ಕೆ ನಾನು ಗ್ರಾಮ ವಾಸ್ತವಕ್ಕೆ ಹೋಗಲು ಯೋಚಿಸುವಂತಾಗಿದೆ. ಜವಾಬ್ದಾರಿಯಿಂದ ಕೆಲಸ ಮಾಡುವುದಾದರೆ ಸರಿ, ಇಲ್ಲವಾದಲ್ಲಿ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಕಿಡಿ ಕಾರಿದರು.

ಶಾಸಕರ ಸಭೆಯ ಹೈಲೆಟ್ಸ್:-
◆ಬಂಡ್ರಿ-ಕಾಲಿಂಗೇರಿ ಮಧ್ಯೆ ಶೀಘ್ರದಲ್ಲೇ ರೇಷ್ಮೆ ನೂಲು ಬಿಚ್ಚುವ ಕೇಂದ್ರಕ್ಕೆ ಚಾಲನೆ
◆ತಾಲೂಕಿನಲ್ಲಿರುವ 1102 ಜನ ಕುರಿ ಕಾಯುವವರಿಗೆ ಕುರಿಮಂದೆಯನ್ನು ತರುಬಲು ಡಿಎಂಎಫ್ ನಿಂದ ನೆಟ್ ಹಾಗೂ ರಾಡ್ ಸಲಕರಣೆಗಳನ್ನು ನೀಡುತ್ತೇನೆ.
◆ರೈತರು ಬೆಲೆ ಕೊಯ್ಲು ನಂತರ ಧಾನ್ಯಗಳನ್ನು ಡಾಂಬರ್ ರಸ್ತೆಗಳಿಗೆ ಹಾಕದಂತೆ, ಕಾಳನ್ನು ಬೇರ್ಪಡಿಸುವ ಕಾರ್ಖಾನೆಯನ್ನು ಸ್ಥಾಪಿಸಲು ಉದ್ದೇಶ
◆250 ರಿಂದ 300 ಬೆಡ್ ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಂಡೂರು -ಹೊಸಪೇಟೆ ಬೈಪಾಸ್ ರಸ್ತೆಯಲ್ಲಿ ಚಾಲನೆ.
◆ಚೋರನೂರು ರೈತ ಸಂಪರ್ಕ ಕೇಂದ್ರದ ಹೊಸ ಕಟ್ಟಡಕ್ಕೆ ಹಸಿರು ನಿಶಾನೆ.
◆ ತಾಲೂಕಿನ 26 ಗ್ರಾಪಂಗಳಲ್ಲಿ ಸರ್ಕಾರದ ಎಲ್ಲಾ ಇಲಾಖೆಯ ಮಾಹಿತಿಗಳು ಒಂದೇ ಕಡೆ ಪ್ರತಿನಿತ್ಯ ಪಂಚಾಯ್ತಿಗಳಲ್ಲಿ ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಗೆ ಸಿಗಲು ಎಲ್ಲಾ 26 ಗ್ರಾಪಂಗಳಿಗೆ ಟಿವಿಗಳನ್ನು ನೀಡುತ್ತೇನೆ.

LEAVE A REPLY

Please enter your comment!
Please enter your name here