ಮನಕ್ಕೆ ಇಳಿಯುವ ಶಿಕ್ಷಕನ ಮಾತುಗಳು

0
145

ಕೃತಿ : ಶಿಕ್ಷಕನ ಮನದಾಳದಿಂದ
ಲೇಖಕರು : ಡಿ. ಎನ್. ಅಕ್ಕಿ.
ಫೋನ್ ಸಂಖ್ಯೆ : 94485 77898

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗೋಗಿ ಗ್ರಾಮ ಸೂಫಿ ಪರಂಪರೆಯ ನೆಲ. ಬಿಜಾಪುರದ ಆದಿಲ್ ಶಾಯಿ ಮನೆತನದ ಗುರುವಾಗಿದ್ದ ಹಜರತ್ ಚಂದಾ ಹುಸೇನಿ ಸೂಫಿ ಸಂತ ಈ ನೆಲದಲ್ಲಿ ಸಂಚರಿಸಿ ಧರ್ಮ ಸಮನ್ವಯತೆ ಭಾವೈಕ್ಯತೆ ಮೂಡಿಸಿದರು. ಇಂತಹ ನೆಲದ ಸಾಮರಸ್ಯದ ಸುಮವಾಗಿ ಅರಳಿದ ಚಿತ್ರಕಲಾ ಶಿಕ್ಷಕ ದೇವಿಂದ್ರಪ್ಪ. ನಾಭಿರಾಜ ಅಕ್ಕಿ. 1948 ರಲ್ಲಿ ಹೈದರಾಬಾದ್ ನಿಜಾಮನ ಆಡಳಿತಕಾಲ ಮತ್ತು ರಜಾಕಾರರ ಕ್ರೂರ ದಬ್ಬಾಳಿಕೆಯ ಕಾಲದಲ್ಲಿ ಜನಿಸಿದರು. ಇವರ ಬಾಲ್ಯವನ್ನು ನೋಡುವುದಾದರೆ ಡಿ.ಎನ್.ಅಕ್ಕಿ ಅರ್ಧದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು ನಂತರ ಇವರ ಚಿತ್ರಕಲಾ ನೈಪುಣ್ಯತೆಯನ್ನು ಕಂಡ ಗ್ರಾಮದ ಶಾಲಾ ಶಿಕ್ಷಕರು ವಿಧ್ಯಾಭ್ಯಾಸ ಮುಂದುವರೆಸಲು ಸಲಹೆ ನೀಡುವರು ಮುಂದೆ ಹತ್ತನೆ ತರಗತಿಯ ವಿದ್ಯಾಭ್ಯಾಸದ ನಂತರ ಇವರು ಚಿತ್ರಕಲೆಯಲ್ಲಿ ಡಿಪ್ಲೋಮೋ ಮತ್ತು ಆರ್ಟಮಾಸ್ಟರ್ ಪದವಿ ಪಡೆದು ಸರ್ಕಾರದಿಂದ ಚಿತ್ರಕಲಾ ಶಿಕ್ಷಕರಾಗಿ ನೇಮಕಗೊಂಡು ವೃತ್ತಿ ಜೀವನವನ್ನು ಆರಂಭಿಸಿದರು.

ಚಿತ್ರಕಲಾ ಶಿಕ್ಷಕ ವೃತ್ತಿಯೊಂದಿಗೆ ಸ್ಥಳ ಮಾಹಿತಿ ಮತ್ತು ಪ್ರಾಕೃತ ಐತಿಹ್ಯಗಳ ಸಂಶೋದನೆಯ ಇತಿಹಾಸಕಾರರಾಗಿ, ಕವಿಗಳಾಗಿ,ಸ್ಮರಣ ಸಂಚಿಕೆಗಳಿಗೆ ಅಪರೂಪದ ಮಾಹಿತಿ ನೀಡುವ ಲೇಖನಗಳನ್ನು ನೀಡುವ ಅಂಕಣ ಬರಹಗಾರರಾಗಿ, ಜಾನಪದ ಸಂಗ್ರಹಕಾರರಾಗಿ, ನಾಟಕ ರಚನಾಕಾರರಾಗಿ ಹೀಗೆ ಹಲವಾರು ದಾರಿಗಳಲ್ಲಿ ಇವರ ಹೆಜ್ಜೆ ಗುರುತುಗಳಿವೆ.
ತಮ್ಮ ವೃತ್ತಿ ಮತ್ತು ಪ್ರವೃತ್ತಿಯೊಂದಿಗೆ ಕ್ರೀಯಾಶೀಲತೆಯಿಂದ ತೊಡಗಿಸಿಕೊಂಡು ಅನೇಕ ಮೌಲ್ಯಿಕ ಕೃತಿಗಳನ್ನು ಕನ್ನಡ ಭಾಷಾ ಲೋಕಕ್ಕೆ ತಮ್ಮ ಕಾಣಿಕೆ ಸಮರ್ಪಿಸಿರುವರು. ‘ಶಹಾಪುರ ತಾಲ್ಲೂಕು ದರ್ಶನ’ ಮುಂಬೆಳಗು, ಸಗರನಾಡು ಸಿರಿ , ಹಡದವ್ವ ಹಾಡ್ಯಾಳ , ವರ್ಧಮಾನ ಮಹಾವೀರ , ಜೈನ ವಿಗ್ರಹಗಳು, ಜೈನ ಜನಪದ ಹಾಡುಗಳು, ಬಾನರಂಗ(ರೇಡಿಯೋನಾಟಕಗಳು), ಎಮ್.ಟಿ. ಭೋಪಲೆ (ಜೀವನ ಚರಿತ್ರೆ), ಸನ್ನತಿ ಚಂದ್ರಲಾಂಬಾ, ಮಯಾಮದ್ದಲೆ , ಯಕ್ಷಪ್ರಶ್ನೆ , ಶಿಕ್ಷಕನ ಮನದಾಳದಿಂದ , ಜೀನದನಿ ,ಗುಲಬರ್ಗಾ ಜಿಲ್ಲೆಯ ಜೈನ ಪರಂಪರೆ , ಹಕ್ಕುಲತೆನಿ , ಗಂಧೋದಕಗಳಂತಹ ಮೌಲಿಕ ಕೃತಿಗಳನ್ನು ಕಾಣಬಹುದು.

1997 ರಲ್ಲಿ ಕೇಂದ್ರ ಸರ್ಕಾರ ಆದರ್ಶ ಶಿಕ್ಷಕ ಗೌರವ ಪುರಸ್ಕಾರ ನೀಡಿ ಗೌರವಿಸಿದೆ.ಜೈನ ಪ್ರಶಸ್ತಿ, ಸಗರನಾಡು ಸೇವಾರತ್ನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರ ಸಾಧಕ ಜೀವನಕ್ಕೆ ಸಂದ ಗೌರವಗಳಾಗಿವೆ.

ನಮ್ಮ ಸಾಂಸ್ಕೃತಿಕ ಹಿರಿಮೆಯ ಎತ್ತರವನ್ನು ನಾಡಿಗೆಲ್ಲ ತೋರುವ, ಜಾಹೀರಾತು ರಹಿತ “ಮಾರ್ಗದರ್ಶಿ” ಕಲ್ಯಾಣ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಮಾಸಿಕ ಪತ್ರಿಕೆಯಾಗಿದ್ದು ಈ ಪತ್ರಿಕೆಗೆ ಶ್ರೀಯುತ ಡಿ. ಎನ್. ಅಕ್ಕಿ. ಅವರು ಬರೆದ ಅಂಕಣ ಬರಹಗಳನ್ನ ಒಟ್ಟುಗೂಡಿಸಿ “ಶಿಕ್ಷಕನ ಮನದಾಳದಿಂದ” ಎನ್ನುವ ಪುಸ್ತಕವನ್ನು ಪ್ರಕಟಿಸಲಾಗಿದೆ.ಒಟ್ಟು ಹತ್ತೊಂಬತ್ತು ಲೇಖನಗಳನ್ನು ಒಳಗೊಂಡ ಈ ಕೃತಿಯನ್ನು ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕೋಲ್ಕತ್ತಾದ ರಾಜಾರಾಮ್ ಮೋಹನ್ ರಾಯ್ ಸಂಸ್ಥೆ, ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಗಳು ಖರೀದಿಸಿ ಕೃತಿಯ ಮೌಲ್ಯವನ್ನು ಹೆಚ್ಚಿಸಿ, ಕೃತಿಕಾರನ ವಿಚಾರಗಳನ್ನು ಎಲ್ಲೆಡೆಗೂ ವಿಸ್ತರಿಸಲು ಕಾರಣವಾಗಿವೆ.

ವೃತ್ತಿ ಜೀವನದ ಬದುಕಿನಲ್ಲಿ ಸುತ್ತಲಿನ ಆಗು ಹೋಗುಗಳಿಗೆ ಮನುಜ ಪ್ರೇಮ, ಆದರ್ಶ, ನಿಷ್ಟೆಗಳಿಂದ ವರ್ತಿಸಿದ, ಬೋಧಿಸಿದ ಅಂತೆಯೇ ಬದುಕಿದ ಸರಳ ಜೀವಿ ಶ್ರೀಯುತ ಅಕ್ಕಿಯವರು. ಡೆಕ್ಕನ್ ಹೆರಾಲ್ಡ್ ಕಲಬುರ್ಗಿಯ ಪ್ರಧಾನ ಸಂಪಾದಕರು ಈ ಕೃತಿಗೆ ಮುನ್ನುಡಿ ಬರೆದಿದ್ದು ಅವರ ಅಭಿಪ್ರಾಯದಂತೆ ಈ ಕೃತಿಯಲ್ಲಿನ ವಿಚಾರಗಳು ಆತ್ಮ ಚರಿತ್ರೆಯ ಭಾಗದಂತೆ ಕಂಡರೂ ಅದರ ವಿಸ್ತಾರತೆ, ಕಾಣಿಸುವ ದೂರ ನೋಟ ಓದುಗರ ಗ್ರಹಿಕೆಯನ್ನು, ವಿಚಾರ ಪರಿಧಿಯನ್ನು ಸ್ವಗತದ ನೆಲೆಯಿಂದ ಸಾರ್ವತ್ರಿಕವಾಗಿ ವಿಶ್ಲೇಷಿಸಿಕೊಳ್ಳುವಂತೆ ಮಾಡುವಲ್ಲಿ ಯಶ ಕಂಡಿವೆ.

ನೆಲದ ಋಣ ತಲೆಬರಹದ ಲೇಖನದ ಭಾಗದಲ್ಲಿ ತಮ್ಮ ಬಾಲ್ಯದ ಜೀವನ ಮತ್ತು ಶಿಕ್ಷಕ ಜೀವನದ ಆರಂಭಿಕ ಕಾಲಘಟ್ಟದ ಪರಿಚಯ ಮಾಡಿಕೊಡುತ್ತಾರೆ. ಹೈದರಾಬಾದ್ ಕರ್ನಾಟಕ ಎಂದರೆ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಕಳಚಲು ಸಂಕಲ್ಪಿಸಿಯೇ ನಾನು ಈ ಭಾಗದ ಪೂರ್ವ ಚರಿತ್ರೆಯನ್ನು ಶೋಧಿಸುವಿಕೆಯಲ್ಲಿ ಕಾರ್ಯ ನಿರತನಾದೆ ಎನ್ನುತ್ತಾ ತಾವು ವಾಸಿಸುವ ಊರಿನ ಸುತ್ತ ಮುತ್ತಲಿನ ಎಲ್ಲ ಹಳ್ಳಿಗಳನ್ನು ಖುದ್ದಾಗಿ ಭೇಟಿ ಮಾಡಿ ಅಲ್ಲಿನ ಸಾಂಸ್ಕೃತಿಕ ಕುರುಹುಗಳಾದ, ಸ್ಮಾರಕಗಳನ್ನು, ತಮ್ಮ ಪತಿಯೊಂದಿಗೆ ಚಿತೆ ಏರಿದ ಮಾಹಾಸತಿಯರ ಕುರುಹುಗಳಾಗಿ ಇರುವ ಮಾಸ್ತಿಕಲ್ಲುಗಳ. ದೇವಸ್ಥಾನಗಳು, ಬೌದ್ಧ ಮಂದಿರಗಳು ಮಸೀದಿಗಳು ಇಗರ್ಜಿಗಳು, ಜೈನ ಬಸದಿಗಳನ್ನು ಪರಿಶೀಲಿಸಿ ಅವುಗಳ ಇಂದಿನ ಸ್ಥಿತಿಗತಿಗಳು ಅವುಗಳ ಮೂಲ ಸ್ಥಾನಗಳು, ಪಲ್ಲಟಗಳು ಎಲ್ಲವನ್ನೂ ದಾಖಲಿಸುವ ಕಾರ್ಯದಲ್ಲಿ ತೊಡಗಿದರು. ಇವುಗಳನ್ನು ಕಾಗದದಲ್ಲಿ ನಮುದಿಸಿದರೆ ಮುಗಿಯಿತೇ ? ಅಥವಾ ಅವುಗಳನ್ನು ಅಚ್ಚಾಕಿಸಿ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ, ಸೆಮಿನಾರ್ ಗಳು ಭಾಷಣಗಳು ಪಠ್ಯ ಪುಸ್ತಕದ ಓದಿಗೆ ಈಡು ಮಾಡಿದರೆ ಸಾಲದು ಅವುಗಳ ಸುತ್ತ ಒಡನಾಡುವ ಅವುಗಳ ಕುರಿತು ಮಾಹಿತಿಜ್ಞಾನವಿರದ ಜನಸಾಮಾನ್ಯರಲ್ಲಿ ಅವುಗಳನ್ನು ಹಾಳುಗೆಡುವದಂತೆ ಮಾಸ್ತಿಕಲ್ಲುಗಳು ಮತ್ತು ದೇವರ ವಿಗ್ರಹಗಳ ಮೇಲೆ ಎಣ್ಣೆ ತುಪ್ಪ ಅಥವಾ ಇನ್ನಿತರ ಪೂಜಾ ದ್ರವ್ಯಗಳನ್ನು ಬೇರೆ ವಸ್ತುಗಳನ್ನು ಸುರಿದು ವಿರೂಪ ಗೊಳಿಸದಂತೆ , ಒಕ್ಕಲುತನದಲ್ಲಿ ಬಳಸುವ ಕೊಡಲಿ ಕುಡುಗೋಲುಗಳನ್ನು ಹರಿತಗೊಳಿಸಲು ಅವುಗಳ ಮೇಲೆ ಮಸೆದು ಹಾಳು ಮಾಡದಂತೆ ಜಾಗೃತಿ ಮೂಡಿಸುವುದು, ಅಲ್ಲದೆ ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿ ರಕ್ಷಿಸಬೇಕಾದದ್ದು ಅತಿ ಅವಶ್ಯ ಎನ್ನುವ ಅವರ ಅಭಿಪ್ರಾಯ ಒಪ್ಪಲೇಬೇಕು. ಪರಧರ್ಮ ಮತ್ತು ಪರಕೀಯರ ಆಕ್ರಮಣಕ್ಕಿಂತಲೂ ಯಂತ್ರ ಸಂಸ್ಕೃತಿ ಮತ್ತು ಯಾಂತ್ರಿಕ ಬದುಕು ನಮ್ಮ ಸಾಂಸ್ಕೃತಿಕ ಕಲಾ ಬದುಕಿಗೆ ದೊಡ್ಡ ಪೆಟ್ಟನ್ನು ಕೊಟ್ಟಿದೆ ಇದರ ಫಲವಾಗಿ ನಮ್ಮ ನೆಲದ ಜನಪದ ಹಾಡುಗಳು ಆಟಗಳು ಕುಣಿತಗಳು ಆಚರಣೆಗಳ ಕಣ್ಮರೆಯ ಬಗ್ಗೆ ನೀಡುವ ಎಚ್ಚರಿಕೆಯನ್ನು ಗಮನಿಸಲೇಬೇಕು. ಹೆಸರು ಮತ್ತು ಹುದ್ದೆಗಳಿಗೆ ಅಪಾರ ಸಮಯ ಮತ್ತು ಶಕ್ತಿ ವ್ಯಯಿಸದೆ ಸಾಮಾಜಿಕ ಜೀವನಕ್ಕೆ ಕೊಡುಗೆಯನ್ನು ಕೊಟ್ಟು ಹೋಗುವ ಉನ್ನತ ಆದರ್ಶವನ್ನು ಕಗ್ಗದ ಸಾಲುಗಳನ್ನು ಉಲ್ಲೇಖಿಸಿ ತಿಳಿಸುವ ಪ್ರಯತ್ನವಿದೆಯಿಲ್ಲಿ.

‘ ಹದಭರಿತ ಹಳ್ಳೀ ಬದುಕು ‘ ಲೇಖನದಲ್ಲಿ ಈ ಮೊದಲು ಹಳ್ಳಿಯ ಪರಿಸರದಲ್ಲಿ ಕಂಡುಬರುತ್ತಿದ್ದ ಸಂಘಜೀವನ ಸಾಮರಸ್ಯದ ಒಡನಾಟ ಪರಸ್ಪರರಲ್ಲಿ ಇದ್ದ ಸಮಭಾವ ಸಹಕಾರದ ಸಹಜ ಜೀವನ ಪದ್ಧತಿಯನ್ನು ನೆನೆಯುತ್ತಾ ತಮ್ಮ ಬಾಲ್ಯದ ಗುರುಗಳನ್ನು ಅವರ ಸಹಜ ಶುದ್ಧ ಜೀವನ ಶೈಲಿ ಮತ್ತು ಉನ್ನತ ವಿಚಾರಗಳ ಭೋದನೆ ಹೇಗೆ ತನ್ನ ಮೇಲೆ ಪ್ರಭಾವ ಬೀರಿದವು ಎಂದು ನಿವೇದಿಸುತ್ತಲೆ. ನಿತ್ಯ ಅಧ್ಯಯನ ಪ್ರವೃತ್ತಿ ತೊರೆದ ಶಿಕ್ಷಕರ, ಸಂಬಳಕ್ಕಾಗಿ ನಾಮಕಾವಾಸ್ತೆ ಬೋಧಿಸುವ ಬಹುಸಂಖ್ಯೆಯ ಶಿಕ್ಷಕರ ಬೇಜವಾಬ್ದಾರಿ ನಡೆಯನ್ನು ಖಂಡಿಸಿ ಶಾಲಾ ಶಿಕ್ಷಕ ನಡೆದು ಬರುತ್ತಿದ್ದರೆ ಕೈಯೆತ್ತಿ ನಮಸ್ಕರಿಸುವ ಹಳ್ಳಿಗರಿಂದ ‘ ಏ… ಮಾಸ್ತರ ಇಲ್ಲಿ ಬಾ’ ಎಂದು ಕರೆಸಿಕೊಳ್ಳುವ ಮಟ್ಟಕ್ಕೆ ತಮ್ಮ ವರ್ತನೆಗಳಿಂದ ವೃತ್ತಿ ಘನತೆಗೆ ಚ್ಯುತಿತಂದುಕೊಂಡ ಇಂದಿನ ಬಹುತೇಕ ಬೇಜವಾಬ್ದಾರಿ ಶಿಕ್ಷಕರ ಮನಸ್ಥಿತಿಯನ್ನು ಅಲ್ಲಗಳೆದು, ನಾಡಿನ ನಾಳೆಯ ನಾಗರಿಕರ ನಿರ್ಮಾಣಕಾರ್ಯದಲ್ಲಿ ಅಸಡ್ಡೆ ಸಲ್ಲದು ಶಿಕ್ಷಕ ತನ್ನ ನಡತೆಯಿಂದ ಪರೋಪಕಾರ ದಿಂದ ಸದಾ ಅಧ್ಯಯನ ಪ್ರವೃತ್ತಿಯಿಂದ ಗುರು ಸ್ಥಾನಕ್ಕೆ ನಿಷ್ಟನಾಗಿ ಬದುಕಬೇಕು ಎನ್ನುವ ಕಿವಿಮಾತು ಎಲ್ಲರೂ ಗಮನಿಸಲೇ ಬೇಕು.

‘ ಕಾವ್ಯ ಸಿದ್ಧಿಗೆ ಭಾವ ಸಿದ್ಧಿಗೆ ಮುತ್ತು ಕೋದಿದೆ ಈ ನೆಲ ‘ ಸುರಪುರ ತಾಲೂಕಿನ ರಂಗಂಪೇಠನ ಹಿರಿಯ ಕವಿ ಶ್ರೀ ಬಸವೇಶ್ವರನಾಥ ಸುಗೂರುಮಠ ಇವರ ಕವನದ ಸಾಲುಗಳು ಶ್ರೀ.ಅಕ್ಕಿಯವರ ಮತ್ತೊಂದು ಲೇಖನದ ತಲೆ ಬರಹವಾಗಿದ್ದು ತನ್ನ ಸುತ್ತಲಿನ, ಪೂರ್ವದ, ಸಮಕಾಲೀನ ಲೇಖಕರ ಕವಿಗಳ ಬರೆಹಗಳನ್ನು ಬದುಕನ್ನು ಸೂಕ್ತ ಅಧ್ಯಯನ ಕೈಗೊಂಡ ಲೇಖಕರು ಲಕ್ಷ್ಮೀಶನ ” ಜೈಮಿನಿ ಭಾರತ ” ” ದಾಸಸಾಹಿತ್ಯ ” ” ವಚನ ಸಾಹಿತ್ಯಗಳಂತಹ ” ಸಾಹಿತ್ಯಿಕ ಕೊಡುಗೆಗಳನ್ನು ಕ್ಷಾತ್ರ ತೇಜಸ್ಸಿನ ಅನೇಕ ಅರಸರು ಸಾಮಂತರು ಮಾಂಡಲಿಕರು ಈ ಭಾಗದಲ್ಲಿ ಆಳ್ವಿಕೆ ಮಾಡಿ ಕಲೆ ವಾಸ್ತುಶಿಲ್ಪ ಸಂಗೀತ ಮುಂತಾದ ಕ್ಷೇತ್ರಗಳಿಗೆ ನೀಡಿದ ಪ್ರೋತ್ಸಾಹದಿಂದ ಇಲ್ಲಿ ಬೆಳೆದುಕೊಂಡು ಬಂದ ಸಾಂಸ್ಕೃತಿಕ ವೈವಿಧ್ಯಮಯ ಬೆಳವಣಿಗೆಗಳನ್ನು ಉಲ್ಲೇಖಿಸಿ ಇಲ್ಲಿನ ಇತಿಹಾಸವನ್ನು ತೆರೆದಿಡುವಲ್ಲಿ ಯಶಸ್ಸು ಕಂಡಿರುವರು.

ತಮ್ಮ ಬಾಲ್ಯದ ಸಮಯದಲ್ಲಿ ಹರೆಯದ ಕಾಲದಲ್ಲಿ ಇದ್ದ ಜನರ ಜೀವನ ಕ್ರಮ ಅರಿತು ಜನರಲ್ಲಿ ಇದ್ದ ಪರಸ್ಪರ ಸಹಕಾರ ಮನೋಭಾವನೆ ನಿತ್ಯ ದುಡಿಮೆಯ ಪ್ರವೃತ್ತಿಯಿಂದ ಹೇಗೆ ಒಬ್ಬರು ಇನ್ನೊಬ್ಬರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು ಎನ್ನುವ ವಿಚಾರಗಳು ಜನ ಮಾನಸದ ಮಿಡಿತಗಳು ಹೇಗೆ ಲೇಖಕರ ಬದುಕಿನೊಂದಿಗೆ ತಳುಕು ಹಾಕಿಕೊಂಡಿದ್ದವು ಎನ್ನುವುದನ್ನು ಇಲ್ಲಿ ಕಾಣಬಹುದು. ತಮ್ಮ ತಲೆಮಾರಿನ ಜನರಲ್ಲಿಯೆ ಬಹಳಷ್ಟು ಹೃದಯವಂತ ಜನರನ್ನು, ಸಾಹಿತಿಗಳನ್ನು ಲೇಖಕರನ್ನು ಹೊರತು ಪಡಿಸಿ ದುಡಿಯದೇ ಸಂಬಳಕ್ಕಾಗಿ, ಯೋಗ್ಯತೆಯಿಲ್ಲದೇ ಪ್ರಶಸ್ತಿಪುರಸ್ಕಾರಕ್ಕಾಗಿ, ಹಪಹಪಿಸುತ್ತಿರುವ ಅನೇಕರ ಲಾಲಸೆಗಳನ್ನ, ಮನೋ ದೌರ್ಬಲ್ಯಗಳನ್ನು ತೆರೆದಿಡುತ್ತಾ ಹಳಿಯುತ್ತಾರೆ ಒಂದು ಸಂದರ್ಭದಲ್ಲಿ ಇಂದಿನಂತೆ ಹೆಚ್ಚು ಡಿಗ್ರಿ ಗಳನ್ನ ಪಡೆಯದ ಹಿಂದಿನ ಕಾಲದ ಜನ ತಮಗೆ ಒಲಿದ ಗರಿಷ್ಟ ಸ್ಥಾನಮಾನಗಳನ್ನು, ಪ್ರಶಸ್ತಿ ಪುರಸ್ಕಾರಗಳನ್ನು, ಅಧ್ಯಕ್ಷ ಪದವಿಗಳನ್ನು ತಾವು ಇನ್ನೂ ಕಿರಿಯರು, ಅನನುಭವಿಗಳು ಎಂದು ನಯವಾಗಿ ತಿರಸ್ಕರಿಸಿ ತಮಗಿಂತಲೂ ಯೋಗ್ಯರನ್ನು ಸೂಚಿಸುವ ಹಿರಿತನ ಹೊಂದಿದ್ದ ವ್ಯೆಕ್ತಿಗಳನ್ನು ಕಂಡ ಲೇಖಕರು ಇಂದಿನ ಡಿಗ್ರಿ ವೀರರ ತದ್ವಿರುದ್ದ ನಡೆಗಳನ್ನ, ಸಣ್ಣತನದ ವರ್ತನೆಗಳನ್ನು ಮತ್ಸರದ ಗುಣ ಪ್ರದರ್ಶನವನ್ನು ಕಂಡು ಛೇಡಿಸಿದ್ದು, ಜಾಡಿಸಿದ್ದು ಇಲ್ಲಿದೆ.

ಅನ್ಯೋನ್ಯತೆ ಬದುಕಿಗೆ ತುಂಬಾ ಅಗತ್ಯವಾದದ್ದು ಇದು ನಮ್ಮೆಲ್ಲರ ಬದುಕಿಗೆ ಅಷ್ಟೇ ಅಲ್ಲದೆ ನಾಡಿನ, ದೇಶದ ಘನತೆಗು ಕೂಡ ಅವಶ್ಯ.
ಎತ್ತಣ ಮಾಮರ ಎತ್ತಣ ಕೋಗಿಲೆ ಎಂದ ಅಲ್ಲಮಪ್ರಭುವಿನ ವಚನ ಉದಾಹರಿಸುತ್ತಾ ಬೆಟ್ಟದಲ್ಲಿರುವ ನೆಲ್ಲಿಕಾಯಿಗೆ ಉಪ್ಪು ಬೆರೆತರೆ ಹೇಗೆ ಅದು ಬುಂಜಿಸಲು ತಕ್ಕುದಾಗಿ, ರುಚಿಯನ್ನು ಹೊಂದುವುದೋ ಹಾಗೆಯೇ ನಾವು ನಮ್ಮ ಸುತ್ತಲಿನ ಜನರೊಂದಿಗೆ ಜಾತಿ, ಮತ,ಕುಲ ಬೇಧಗಳನ್ನು ಮರೆತು ಮನುಷ್ಯ ಪ್ರೇಮವೇ ಬಹುಮುಖ್ಯ ಎನ್ನುವ ನಿಟ್ಟಿನಲ್ಲಿ ಬದುಕಬೇಕಾದ ಅಗತ್ಯತೆಯನ್ನು ಒತ್ತಿ ಹೇಳುತ್ತಾ ಪರಸ್ಪರ ಅವಲಂಬನವೇ ಮಧುರ ಬದುಕಿನ ಆಡುಂಬೊಲ ಎನ್ನುತ್ತಾರೆ.

ನಮ್ಮ ಪೂರ್ವಿಕರಲ್ಲಿ ಇದ್ದ ಪ್ರೋತ್ಸಾಹಕ ಗುಣಗಳು, ಯೋಗ್ಯರ ಬೆನ್ತಟ್ಟುವಿಕೆ, ಏಳಿಗೆಯ ಸೈರೈಕೆ ಮಾಯವಾಗಿ ಪರಸ್ಪರ ಅನಾರೋಗ್ಯಕರ ಪೈಪೋಟಿ, ತೆಗಳಿಕೆ, ಪ್ರಶಸ್ತಿ ಬಡ್ತಿ ಮುಂತಾದವುಗಳಿಗಾಗಿ ಮೌಲ್ಯಗಳ ಅಪಮೌಲಿಕರಣ, ಜಾತಿ ತುಷ್ಟೀಕರಣ ಮುಂತಾದ ಅಪ್ರಸ್ತುತ ವಿಚಾರಗಳೇ ಮುನ್ನೆಲೆಗೆ ಬಂದು ಸತ್ಯ,ಸಹಜ, ಸರಳತೆಯ ನಡುವಳಿಕೆಗಳು ಹಿಂದೆ ಸರಿಯುತ್ತಾ ಅನಾಗರಿಕ ಜೀವನಕ್ಕೆ ಈಡಾಗುತ್ತ ಅಧಃಪತನಕ್ಕೆ ಗುರಿಯಾಗುತ್ತಿರುವ ರೀತಿಯನ್ನು ವಿವರಿಸಿದ್ದಾರೆ.

” ಕನ್ನಡದ ಕಟ್ಟಾಳು ” ಲೇಖನದಲ್ಲಿ ಜಿ ಕೃಷ್ಣಪ್ಪ ನವರು ಶ್ರೀಯುತ ದ.ರಾ. ಬೇಂದ್ರೆ ಮತ್ತು ಕುವೆಂಪು ರವರ ಸಾಹಿತ್ಯವನ್ನು ಆಳವಾಗಿ ಅಭ್ಯಾಸಿಸಿ ಅವರ ವಿಚಾರಧಾರೆಗಳನ್ನು ವಿಮರ್ಶಿಸಿದವರಲ್ಲಿ ಪ್ರಮುಖರು, ಬೇಂದ್ರೆ ಕಾವ್ಯವನ್ನು ನಾಡಿನ ಮೂಲೆಮೂಲೆಗೂ ತಲುಪಿಸುವ ಇವರ ಅದಮ್ಯ ಬಯಕೆ ಮತ್ತು ಆ ನಿಟ್ಟಿನಲ್ಲಿನ ನಿರಂತರ ಪ್ರಯತ್ನ ಇವರನ್ನು ಕನ್ನಡ ಕಟ್ಟಾಳು ಎಂದು ಕರೆಯುವದರಲ್ಲಿ ಉತ್ಪ್ರೇಕ್ಷೆಯಲ್ಲ ಎಂದೆನಿಸುತ್ತದೆ. ಲೇಖಕರು ತಮ್ಮ ಮತ್ತು ಜಿ ಕೃಷ್ಣಪ್ಪ ನವರ ಪರಿಚಯ ಮತ್ತು ಒಡನಾಟ ಸಾಹಿತ್ಯದ ಅಭಿರುಚಿಯ ಕಾರಣವಾಗಿ ಅದರಲ್ಲಿ ಮಾನ್ಯ ಡಿ ವಿ ಗುಂಡಪ್ಪನವರ ” ಭಗವದ್ಗೀತಾ ತಾತ್ಪರ್ಯ ” ಕೃತಿ ಕೇಳಿಕೊಂಡು ಪುಸ್ತಕದಂಗಡಿಗೆ ಕೃಷ್ಣಪ್ಪ ನವರು ಬಂದಾಗ ಅವರ ನಡುವೆ ನಡೆದ ಸಂಭಾಷಣೆ ತಮ್ಮ ಆತ್ಮೀಯ ಒಡನಾಟಕ್ಕೆ ಮೊದಲಾಗಿ , ಕೃಷ್ಣಪ್ಪನವರ ಅಪೇಕ್ಷೆಯಂತೆ ಬೇಂದ್ರೆ ಗೀತ ಗಾಯನ ಸ್ಪರ್ಧೆಯನ್ನು ಮುಖ್ಯ ಉಪಾಧ್ಯಾಯರ ಒಪ್ಪಿಗೆಯ ಮೂಲಕ ಲೇಖಕರ ಶಾಲೆಯಲ್ಲಿ ಜರುಗಿಸಿ ಅಲ್ಲಿನ ಅನೇಕ ವಿಧ್ಯಾರ್ಥಿಗಳಿಗೆ ಬೇಂದ್ರೆ ಅವರ ಪುಸ್ತಕಗಳು ಬಹುಮಾನವಾಗಿ ದೊರಕಿಸಿದ ಪ್ರಸಂಗವನ್ನು ವಿವರಿಸುತ್ತಾ ಬೇಂದ್ರೆ ಕಾವ್ಯ ಕಬ್ಬಿಣದ ಕಡಲೆಯಾದ ಸಂದರ್ಭಗಳಲ್ಲಿ ಕೃಷ್ಣಪ್ಪನವರ ವ್ಯಾಖ್ಯಾನಗಳು ಎಲ್ಲರ ಅರಿವಿನ ಅಳವಿಗೆ ನಿಲುಕುವಂತೆ ಮಾಡಿದವು ಎನ್ನುತ್ತಾರೆ. ಅಲ್ಲದೆ ಇಂತಹ ನುಡಿದಾಯ ಸೇವಕರಿಂದಲೇ ಕನ್ನಡ ತೇರು ಪಾಜಾಕಟ್ಟೆ ಮುಟ್ಟಲು ಸಾಧ್ಯ, ನಾಲ್ಕು ದಿಕ್ಕನು ತಲುಪಲು ಸಾಧ್ಯ ಎನ್ನುವ ಮಾತು ಸತ್ಯವಾದದ್ದು.

ಇಂದಿನ ದಿನಗಳಲ್ಲಿ ರಾಷ್ಟೀಯ ಹಬ್ಬಗಳು, ದಿನಾಚರಣೆಗಳು ಮೊದಲಿನ ಮುದವನ್ನು ಸಂಭ್ರಮವನ್ನು ಒಳಗೊಂಡಿಲ್ಲ ಎನ್ನುವ ಖೇದವ್ಯಕ್ತಪಡಿಸುತ್ತಾ ಹಿಂದಿನವರ ತ್ಯಾಗ ಬಲಿದಾನಗಳ ಹೋರಾಟವನ್ನು ನೆನೆಯಲು ಅವರನ್ನು ಸ್ಮರಿಸಲು ಇರುವ ಆಚರಣೆಗಳನ್ನು ಕಾಟಾಚಾರಕ್ಕೆ , ಮಾಡಿ ಮುಗಿಸುವ ಕಾರ್ಯಕ್ರಮಗಳಾಗಿ ಬದಲಾಗುತ್ತಿವೆ ಎನ್ನುವ ಬೇಸರ ವ್ಯಕ್ತಪಡಿಸಿ ಅದನ್ನು ಸರಿಪಡಿಸಿಕೊಳ್ಳಲು ಸೂಚಿಸುವ ಮಾರ್ಗದರ್ಶಿ ಮಾತುಗಳಿವೆ ಅಲ್ಲದೆ ಗೌರವಾನ್ವಿತ ರಾಷ್ಟಪತಿಗಳ ಮರಣವಾದರೆ ಆ ದಿನದ ಸರಕಾರಿ ರಜೆಯನ್ನು ಸಂಭ್ರಮಿಸುವ ಅಧ್ಯಾಪಕನನ್ನು ಅವನದೇ ಶೈಲಿಯ ಉತ್ತರ ನೀಡಿ ಅರಿವು ಮೂಡಿಸುವ ಕೆಲಸಕ್ಕೆ ಹಿಂಜರಿಯದ ಲೇಖಕನ ಮನುಜ ಪ್ರೇಮ, ಆತ್ಮ ನಿಷ್ಟೆ, ವೃತ್ತಿ ಪ್ರೀತಿ ಅಮೋಘವಾದುದು.

‘ ಮನದಿಂದ ಮೂಡಿ ಬರಬೇಕಾದ ಕನ್ನಡ ಪ್ರಜ್ಞೆ ‘

ಸಾಯುತಿದೆ ನಿಮ್ಮ ನುಡಿ ಓ… ಕನ್ನಡದ ಕಂದರಿರಾ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ !
ರಾಜನುಡಿಯದೊಂದು,
ರಾಷ್ಟ್ರ ನುಡಿಯದೊಂದು ದೇವನುಡಿಯದೊಂದು
ಹತ್ತಿ ಜಗ್ಗಿ ನಿರಿನಿಟಿಲು ನಿಟಿಲೆಂದ ಮುದಿಮೂಳೆ
ಮುರಿಯುತಿದೆ, ಕನ್ನಡಮ್ಮನ ಬೆನ್ನು ಬಳುಕಿ ಬಗ್ಗೀ
ಕೂಗಿಕೊಳ್ಳಲು ಕೂಡ ಬಲವಿಲ್ಲ ಮಕ್ಕಳೇ ಬಾಯ್ಮುಚ್ಚಿ ಹಿಡಿದಿಹರು ಕೆಲವರು ನುಗ್ಗಿ
__ ಕುವೆಂಪು.

ಕುವೆಂಪು ಅವರಂತೆ ಕನ್ನಡ ಭಾಷೆಯ ಸ್ಥಿತಿ ಗತಿ, ಕಳಕಳಿ ಕನ್ನಡವನ್ನು ಕಟ್ಟುವ, ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವ ಪ್ರಜ್ಞೆ ಅದು ಮನದಿಂದ ಮೂಡಿಬರಬೇಕು ಎನ್ನುವುದು ಲೇಖಕರ ಆಶಯ ಇಂದಿನ ದಿನಗಳಲ್ಲಿ ಕಾಣುವ ಅನ್ಯ ಭಾಷಾಪ್ರೇಮ ಸ್ವಭಾಷೆಯ ಮೇಲಿನ ತಾತ್ಸಾರ, ತಪ್ಪು ತಪ್ಪಾದ ಉಚ್ಚಾರಣೆ, ದೋಷಗಳಿಂದ ಕೂಡಿದ ಬರೆಹ ವಿಧಾನ ಎಲ್ಲವೂ ಭಾಷಾ ಬೆಳವಣಿಗೆಗೆ ಕಂಟಕಪ್ರಾಯವಾಗಿವೆ . ಭಾಷೆಯನ್ನು ಸರಿಯಾಗಿ ಓದದ, ಆಳ ಅರಿಯದ, ಭಾಷಾ ಪ್ರೀತಿಯಿರದ ವ್ಯಕ್ತಿಗಳು ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತು ಮಾಡುತ್ತಿರುವ ಅವಾಂತರಗಳನ್ನು ಅಲ್ಲಗಳೆಯುತ್ತಾ ಸರಿಯಾಗಿ ಅಭ್ಯಾಸ ಮಾಡದ ಒಬ್ಬ ಎಂಜಿನಿಯರ್ ಸಾವಿರಾರು ಮನೆಗಳ ನಿರ್ಮಾಣದಲ್ಲಿ ಎಡವಿದರೆ, ಒಬ್ಬ ವೈದ್ಯ ಹಲವಾರು ರೋಗಿಗಳ ಸಾವಿಗೆ ಕಾರಣನಾದರೆ, ಸರಿಯಾಗಿ ಕಲಿಯದ ವೃತ್ತಿ ಪ್ರೇಮವಿರದ ಶಿಕ್ಷಕ ಪಡೆ ಒಂದಿಡೀ ಪೀಳಿಗೆಯನ್ನೆ ನಿರುಪಯುಕ್ತತೆಗೆ ದೂಡಿ ಒಂದು ಸದೃಢ ಸಮಾಜವನ್ನೇ ನೆಲಸಮಗೊಳಿಸಲು ಶ್ರೀಕಾರ ಬರೆಯುತ್ತದೆ ಎನ್ನುವುದು ಲೇಖಕನ ಆಪ್ತ ಕಳಕಳಿ. ಅನ್ಯ ಭಾಷೆಗಳ ಮೇಲಿನ ಒಲವು, ಅನ್ಯ ಭಾಷೆಗಳು ಅನ್ನದ ಭಾಷೆಯಾಗಿ ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ತಾಯಿ ನಾಡಿನಲ್ಲಿ ತಾಯಿ ಭಾಷೆಯನ್ನು ಅಭಿವೃದ್ಧಿಪಡಿಸಲು ಭಾಷಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತಾದದ್ದು ಕೂಡ ವಿಪರ್ಯಾಸ ಎನ್ನುವ ಅರ್ಥ ವಿವರಿಸುತ್ತದೆ ಅವರ ಪ್ರಶ್ನಾರ್ಥಕ ಚಿನ್ಹೆ.

ನಮ್ಮ ಸುತ್ತಲಿನ ಜಗಕ್ಕೆ ಫಲಾಪೇಕ್ಷೆಯಿಲ್ಲದೆ ಪ್ರೇಮ ಸ್ನೇಹಗಳನ್ನು ತೋರಿದರೆ ಮುಂದೆ ಅವರ ಅಂತರಂಗದಲ್ಲೂ ಸ್ನೇಹ ಪ್ರೇಮಗಳ ಜ್ಯೋತಿ ಬೆಳಗಲು ಸಾಧ್ಯ ಇದು ಒಂದು ಪರಂಪರೆಯಂತೆ ಮುಂದುವರೆಯಲಿ ಎನ್ನುವುದು ಲೇಖಕರ ಆಶಯ ನಾವು ಪಡೆಯುವ ಪ್ರೀತಿ ಆದರಣೆಗಳು ಫಲವಾಗಿಯೇ ನಮ್ಮ ಅಂತಃಕ್ಕರಣಗಳು ಪರರ ಹಾರೈಕೆ ಪರಸಹಿಷ್ಣುತೆ ಯಂತ ಉದಾತ್ತಗುಣಗಳಿಂದ ತುಂಬಲು ಸಾಧ್ಯ ಎನ್ನುವುದು ಲೇಖಕರ ಅಂಬೋಣ .ತಮ್ಮ ನೌಕರಿಯಲ್ಲಿ ಬದುಕಿನಲ್ಲಿ ನಿಷ್ಟೆ ಪ್ರಾಮಾಣಿಕತೆ ಸತ್ಯನಿಷ್ಠುರತೆ, ಸಮಯ ಪ್ರಜ್ಞೆ ಬೆಳೆಸಿಕೊಳ್ಳಲು ನನಗೆ ಸಿಕ್ಕ ವ್ಯಕ್ತಿಗಳ ವ್ಯಕ್ತಿತ್ವ ಪ್ರಭಾವವೇ ಕಾರಣ ಎಂದು ನಿರ್ವಂಚನೆಯಿಂದ ಒಪ್ಪಿಕೊಳ್ಳುತ್ತಾ ಇಂದಿನ ಧಾವಂತದ ಬದುಕಿನಲ್ಲಿ ಮೌಲ್ಯಗಳ ಕುಸಿತದ ಬದುಕು ಎತ್ತ ಸಾಗುತ್ತಿದೆ ಪ್ರಗತಿ ಹಂತಕೋ ಪ್ರಳಯ ದುರಂತಕೋ ಎನ್ನುವುದು ಅವರ ಅಭಿಪ್ರಾಯ.

“ವಿದ್ಯೆಯ ಜೊತೆ ವಿನಯವು ಇರಲಿ” ಎನ್ನುವ ಲೇಖನದಲ್ಲಿ ತಾವು ಕಂಡ ಎರಡು ಪಸಂಗಗಳನ್ನು ಹೀಗೆ ವಿವರಿಸುತ್ತಾರೆ ಅವಸರದಲ್ಲಿ ಧಾವಿಸುತ್ತ ಬರುತ್ತಿದ್ದ ಹಿರಿಯ ಗುರುಗಳು ಶಾಲೆಯ ಅಂಗಳದಲ್ಲಿ ಕಾಲಿಡುವ ಮೊದಲೇ ಶಾಲೆಯ ಗಂಟೆ ಬಾರಿಸಿ ಬೆಳಗಿನ ಪ್ರಾರ್ಥನೆ ಶುರುವಾಗಿ ಹೋಯ್ತು ತಮ್ಮ ವಿಳಂಬಕ್ಕೆ ಸಬೂಬು ಕೊಟ್ಟುಕೊಳ್ಳಲು ಹೋಗದ ಹಿರಿಯ ಶಿಕ್ಷಕರು ಅವತ್ತು ಶಾಲೆಗೆ ರಜಾ ವಿನಂತಿ ಬರೆದು ಅವತ್ತು ಇಡೀ ದಿನ ಶಾಲೆಯಲ್ಲಿದ್ದು ಎಂದಿನಂತೆ ಪಾಠ ಮಾಡಿದ ಹಿರಿಯರನ್ನು ಅವರ ಆದರ್ಶ ಶಿಕ್ಷಕ ಪ್ರವೃತ್ತಿಯು ತಮ್ಮ ಮನದಲ್ಲಿ ತುಂಬಿದ ವೃತ್ತಿ ಪ್ರೇಮವನ್ನು ಹೇಳುತ್ತಾ ಮತ್ತೊಂದು ಪ್ರಸಂಗದ ವಿವರಣೆ ಹೀಗಿದೆ ಮಧ್ಯಾನದ ಊಟದ ಬಿಡುವಿನಲ್ಲಿ ಸುಮಾರು ಹನ್ನೆರಡು ಕಿ.ಲೋ. ಮೀಟರ್ ಸಂಚರಿಸಿ ತಾಲೂಕಾ ಕೇಂದ್ರಕ್ಕೆ ತಿಂಗಳ ಸಂಬಳ ತರಲು ಹೋದ ಶಿಕ್ಷಕರು ವಾಹನ ವೆತ್ಯಯವಾಗಲು ಶಾಲೆಯ ಸಮಯಕ್ಕೆ ಸರಿಯಾಗಿ ಹಾಜರಾಗಲು ಬಿರು ಬಿಸಿಲಲ್ಲಿ ಓಡೋಡಿ ಬಂದು ಸಮಯಕ್ಕೆ ಸರಿಯಾಗಿ ಹಾಜರಾದ ಆತ್ಮಸಾಕ್ಷಿಯ ಮುಖ್ಯ ಉಪಾಧ್ಯಾಯನಿಗೆ ಮೋಸಮಾಡಲು ಇಚ್ಛಿಸದ ನಿಷ್ಟರಾಗಿದ್ದ ಅಪರೂಪದ ಶಿಕ್ಷಕರನ್ನೂ ಅಲ್ಲದೆ ಜವಾಬ್ದಾರಿ ಇರದ ಮೈಗಳ್ಳ ಅನಾಗರಿಕ ತಾನು ಕೆಟ್ಟು ವನವನ್ನು ಹಾಳು ಮಾಡುವ ಕಪಿಯಂತಹ ಸಹ ಶಿಕ್ಷಕರನ್ನು ಕಂಡ ಲೇಖಕರು ನಮಗೆ ಎಂತಹ ಶಿಕ್ಷಕರ ಅಗತ್ಯವಿದೆ ಎನ್ನುವುದನ್ನು ಈ ಲೇಖನದಲ್ಲಿ ಮನಗಾಣಿಸಿದ್ದಾರೆ.

ಡಾಕ್ಟರ ಸರ್ವಪ್ಪಲ್ಲಿ ರಾಧಾಕೃಷ್ಣನ್ ಮತ್ತು ಎ ಪಿ ಜೆ ಅಬ್ದುಲ್ ಕಲಾಂ ಅವರಂತಹ ಶ್ರಮಜೀವಿ ಶೀಲವಂತ ಶಿಕ್ಷಕರ ಅಗತ್ಯ ಇಂದು ಎಂದಿಗಿಂತಲೂ ಅಧಿಕವಾಗಿದೆ ಮರೆಯಾಗುತ್ತಿರುವ ಮೌಲ್ಯಗಳು ಸತ್ಯದ ಆಚರಣೆ ನಿಸ್ವಾರ್ಥ ಮತ್ತು ಸಹಜ ಜೀವನಕ್ಕೆ ಮಾರ್ಗದರ್ಶನ ನೀಡುವಂತಹ ಉತ್ತಮ ಗುರುಗಳಿಂದ ಉತ್ತಮ ವಿಧ್ಯಾರ್ಥಿ ಪಡೆಯ ನಿರ್ಮಾಣ ಸಾಧ್ಯ ಎನ್ನುವುದು ಅವರ ಕಳಕಳಿ.

ಬುದ್ಧಿಯೊಂದೇ ಸಾಲದು ಅದರೊಡನೆ ಸಂಸ್ಕೃತಿಯು ಬೇಕು ಎನ್ನುವ ಲೇಖನದಲ್ಲಿ ಭರತ ಮತ್ತು ಬಾಹುಬಲಿಯ ನಡುವಿನ ಯುದ್ಧ ಪ್ರಸಂಗವನ್ನು ವಿವರಿಸುತ್ತ ಬುದ್ಧಿಬಲ ಹೊಂದಿದ್ದ ವಜ್ರ ದೇಹಿಗಳಾಗಿದ್ದ ಜೈನ ಧರ್ಮದ ವೃಷಭ ನಾಥರ ಮಕ್ಕಳ ನಡುವಿನ ಸಾಮ್ರಾಜ್ಯ ಅಧಿಪತ್ಯ ಮತ್ತು ವಿಸ್ತರಣೆಯಲ್ಲಿ ನಡೆದ ಯುದ್ಧಪ್ರಸಂಗವೊಂದು ಬಾಹುಬಲಿಯಲ್ಲಿ ವೈರಾಗ್ಯವನ್ನು ಜಾಗೃತಗೊಳಿಸಿ ಅವನನ್ನು ಅಜರಾಮರವಾಗಿಸಿದ ಪ್ರಸಂಗವೊಂದರ ವಿವರಣೆ ನೀಡಿರುವರು. ಇಲ್ಲಿ ಸ್ವಾರ್ಥ ಸಾಧನೆಗಿಂತಲು ಮೋಕ್ಷದ ತುಡಿತ ಜೀವನ್ ವಿರಕ್ತಿಗಳೆ ಶ್ರೇಷ್ಟವಾಗಿ ಕಾಣುವುದನ್ನು ನೋಡಬಹುದು ಅಲ್ಲದೆ ತ್ಯಾಗ ಜೀವನ ಆಯ್ದುಕೊಂಡವರು ಅಜರಾಮರರಾಗಿ ನುರಾರುಕಾಲ ಉಳಿಯುವ ಚರಿತ್ರೆಯನ್ನು ವಾಸ್ತವಕ್ಕೆ ಎದುರಿಟ್ಟು ಸಾಕ್ಷಿಕರಿಸಿ ಹೇಳುತ್ತಾ ಮನುಕುಲದ ವಾರಸುದಾರರು ಸಾಗಬೇಕಾದ ದಿಶೆಯ ಸೂಚನೆಯಿದೆ. ಗೊಮ್ಮಟನ ಅಪ್ರತಿಮ ಏಕಶಿಲಾ ಮೂರ್ತಿಯನ್ನು ಭಾರತೀಯ ಶಿಲ್ಫಿಯ ಕೈಚಳಕ ಎಂದು ಉಲ್ಲೇಖಿಸಿದ ಲೇಖಕನ ಮನೋಧರ್ಮ ಶಿಲ್ಪಿಯ ಪ್ರತಿಭೆಯನ್ನು ಒಂದು ಧರ್ಮ, ಕುಲ ರಾಜ್ಯ, ಯಾವುದಕ್ಕೂ ಸೀಮಿತಗೊಳಿಸದ ವಿಶಾಲ ಭಾವ ಬಂಧುರ ಗುಣ ಕಾಣಬಹುದು. ಬಾಹುಬಲಿಯ ಸುಂದರ ಮಂದಸ್ಮಿತ ವದನ ಮತ್ತು ಲಿಯೊನಾರ್ಡ್ ಡಾ ವಿಂಚಿಯ ಮೊನಾಲಿಸಾ ವರ್ಣ ಚಿತ್ರ ಮಾತ್ರ ಸುಂದರ ಮುಗುಳುನಗೆಯನ್ನು ಅಷ್ಟೇ ಸಹಜವಾಗಿ ಸುಂದರವಾಗಿ ಸೆರೆಹಿಡಿದ ಜಗತ್ತಿನ ಅಪರೂಪದ ಕಲಾಕೃತಿಗಳು ಎಂದು ಲೇಖಕರು ಹೇಳಿದ ಮಾತಿನಲ್ಲಿ ಉತ್ಪ್ರೇಕ್ಷೆಯೇ ಇಲ್ಲ ಎನ್ನಲೇಬೇಕು.ಮತ್ತು ಇಂಥ ಅಪರೂಪದ ಕಲಾಕೃತಿಗಳ ರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಇದರ ಮಹತ್ವ ಮತ್ತು ಹಿಂದಿನ ಕಥೆಯ ತಿರುಳನ್ನು ಹಂಚುವುದು ಕೂಡಾ ಅವಶ್ಯ ಎನ್ನುವುದು ಅವರ ಮನದಾಳದ ಮಾತು.

” ಮಗುವಿನ ಸರ್ವತೋಮುಖ ವಿಕಾಸವೇ ನಿಜವಾದ ಶಿಕ್ಷಣ “
__ ಮಹಾತ್ಮಾ ಗಾಂಧೀಜಿ.

ಮಗುವಿನ ಸಮಗ್ರ ದೃಷ್ಟಿಕೋನದ ಬೆಳವಣಿಗೆಯೇ ನಿಜವಾದ ಶಿಕ್ಷಣದ ಉದ್ಧೇಶ ಎನ್ನುತ್ತಾರೆ ಎಂ ಕೆ ಗಾಂಧಿ ಅಂತೆಯೇ ಲೇಖಕರಲ್ಲಿ ಕೂಡ ಈ ನಿಟ್ಟಿನ ಪ್ರಯತ್ನಗಳು ಚಡಪಡಪಡಿಕೆಗಳನ್ನು ಕಾಣಬಹುದು
ಇಂದಿನ ಜ್ಞಾನ ಮಂದಿರಗಳಾದ ಶಾಲೆಗಳಲ್ಲಿ ಜಾರಿಮಾಡಬೇಕಾದ ಬದಲಾವಣೆಗಳನ್ನು ಬದಲಾಯಿಸಬೇಕಾದ ಧೋರಣೆಗಳ ಪಟ್ಟಿ ಮಾಡಿ ಅಗತ್ಯ ವಿವರಣೆಗಳನ್ನು ನೀಡುತ್ತಾ ಹೆಚ್ಚಿದ ಖಾಸಗಿ ಶಾಲಾ ವ್ಯಾಮೋಹ ಸರಕಾರಿ ಶಾಲೆಗಳ ದುಸ್ಥಿತಿ ಇವೆರಡಕ್ಕೂ ಕಾರಣವಾದ ವಸ್ತುನಿಷ್ಟ ಕಾರಣ ಮತ್ತು ಸುಧಾರಣೆಗೆ ಅಮೂಲ್ಯ ಸಲಹೆಗಳನ್ನು ನೀಡುವುದರ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಕಂಡ ಕಲಿತ ತಿಳಿವನ್ನು
ಜ್ಞಾನ ಮಂದಿರಗಳು ದೇವ ಮಂದಿರಗಳಾಗಬೇಕು ಎನ್ನುವ ಆಶಯದಲ್ಲಿ ಹಂಚಿರುವರು.

” ಆತ್ಮ ಸಾಕ್ಷಾತ್ಕಾರವೇ ಶಿಕ್ಷಣ ” ಎನ್ನುವ ಶಂಕರ ಭಗವತ್ಪಾದರ ಚಿಂತನೆಯಂತೆ ಬದುಕಿನ ಶಾಲೆಯಲ್ಲಿ ಕಲಿತು ತಮ್ಮ ವಿಧ್ಯಾರ್ಥಿ ಬಳಗಕ್ಕೂ ಬೋಧಿಸುತ್ತ ತಮ್ಮ ಸುಧೀರ್ಘ ಶಿಕ್ಷಕ ವೃತ್ತಿ ಜೀವನದ ಅನುಭವಗಳ ಜೊತೆಗೆ ವಿಧ್ಯಾಕ್ಷೇತ್ರದಲ್ಲಿ ಶಾಲಾ ಶಿಕ್ಷಕರಲ್ಲಿ ಜನಸಾಮಾನ್ಯರ ಜೀವನ ವಿಧಾನದಲ್ಲಿ ಉಂಟಾದ ಪಲ್ಲಟಗಳನ್ನು ಬಹು ಆಸ್ಥೆಯಿಂದ ಅರುಹಿ ಅವುಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಾಣಿಸಿ ಮುಂದಿನ ನವ ಶಿಕ್ಷಕರು ಪಾಲಕರು ಮತ್ತು ವಿದ್ಯಾರ್ಥಿಗಳು ಸಾಗಬೇಕಾದ ಹಾದಿಯ ಜಾಡನ್ನು ತಿಳಿಸಿರುವರು. ಸರಕಾರಿ ಶಾಲೆಗಳ ಬಗ್ಗೆ ಇಂದಿನ ಪಾಲಕರಿಗೆ ಇರುವ ಪೂರ್ವಾಗ್ರಹಗಳ ನಿವಾರಿಸುವಲ್ಲಿ ಇವರ ಕಳಕಳಿ ಮೆಚ್ಚುವಂತಹದ್ದಾಗಿದೆ. ಸಂಶೋಧಕ ಕವಿ, ಲೇಖಕರು ಆಗಿರುವ ಇವರಲ್ಲಿನ ವೃತ್ತಿ ಬಗೆಗಿನ ಅನನ್ಯ ಅಭಿಮಾನ ಕಾಳಜಿಯನ್ನು ಪ್ರತಿ ಲೇಖನಗಳು ಸಾರಿ ಹೇಳುತ್ತವೆ.ಇವರ ಶ್ರಮ ಮತ್ತು ಕಾರ್ಯ ಕಾರ್ಯನಿರ್ವಹಣಾ ವೈಖರಿಯನ್ನು ಗುರುತಿಸಿ ಸಂಘ ಸಂಸ್ಥೆಗಳು, ಸರಕಾರಿ ಸಂಸ್ಥೆಗಳು ನೀಡಿದ ಗೌರವಗಳು ಪ್ರಶಸ್ತಿ ಪುರಸ್ಕಾರಗಳ ಮೌಲ್ಯ ಇವರಿಂದ ಇಂಥವರಿಂದ ಹೆಚ್ಚುತ್ತವೆ ಎನ್ನುವಲ್ಲಿ ಎರಡು ಮಾತಿಲ್ಲ. ಇವರ ಶಿಷ್ಯ ಬಳಗ ಮತ್ತು ಆತ್ಮೀಯ ವೃಂದ ಇವರನ್ನು ” ‘ ಧವಳ ‘ ಹೆಸರಿನ ಅಭಿನಂದನಾ ಗ್ರಂಥ ಸಮರ್ಪಿಸುವುದರ ಮೂಲಕ ತಮ್ಮ ಗೌರವವನ್ನು ಅರ್ಪಿಸಿದ್ದು ಇವರ ಮೇಲಿನ ಅಭಿಮಾನ ಅಕ್ಕರೆಗಳನ್ನು ಕಾಣಿಸುತ್ತದೆ.

ಸೋಲು ನೋವನು ನುಂಗಿ ಕಲ್ಲೆದೆಯ ಮಿದುಗೈದು
ಸಹನೆ ಕರುಣೆಗಳಮೃತವೆರೆಯುತಿರಬೇಕು ಬೆಳಕು ನೆರಳುಗಳಂತೆ ಏಳ್ಗೆ ಬೀಳೆನ್ನುತ
ಮಾನವ ಸಮತೆಗೆ ಹೂಡಿ ನಲಿಯುತಿರಬೇಕು
ತಾಳಿಕೊಳ್ಳಲು ಬೇಕು ಏನೆಲ್ಲವನು ಮಗುವೇ
ತಿರುಳ ಬಲಿಸಲು ಬೇಕು ಹಿರಿಬಾಳ ನೆಳಸುವದು. __
ಎನ್ನುವ ಕವಿವಾಣಿಯಂತೆ
ನಿವೃತ್ತಿ ಜೀವನ ನಡೆಸುತ್ತಿರುವ ಇಂತಹ ಅಪರೂಪದ ಆದರ್ಶ ಶಿಕ್ಷಕರ ಲೇಖನಿಯಿಂದ ಇಂತಹ ಇನ್ನೂ ಅನೇಕ ಅನುಭವ ಅಮೃತ ಧಾರೆಗಳು ಹರಿದು ಬರಲಿ ಎಂದು ಕೇಳಿಕೊಳ್ಳುವೆ.

ಧನ್ಯವಾದ ,

ಜ್ಯೋತಿ ಬಿ ದೇವಣಗಾವ್.

LEAVE A REPLY

Please enter your comment!
Please enter your name here