“ವಸಂತ ಗಾನ” ಕೃತಿ ವಿಮರ್ಶೆ

0
112

ಕಥೆ,ಕವನ, ಸಂಶೋಧನೆ, ಪ್ರಬಂಧ, ವಿಮರ್ಶೆ ಹೀಗೆ ಯಾವುದೇ ಪ್ರಕಾರದ ಸಾಹಿತ್ಯಗಳಾಗಿದ್ದರೂ ಅವು ಜನ ಜೀವನ ಕ್ರಮವನ್ನು ಬಿಂಬಿಸುತ್ತವೆ. ಕೆಲವೊಂದು ಸಾಹಿತ್ಯ ಮನದಾಳದಲ್ಲಿ ಹುದುಗಿದ್ದ ನೋವು ನಲಿವುಗಳನ್ನು ಸುಖ ದುಃಖಗಳನ್ನು ಹೊರ ಹಾಕುವ ಪ್ರಯತ್ನ ಮಾಡಿದರೆ, ಇನ್ನೂ ಕೆಲವು ಸಾಹಿತ್ಯದ ಬರಹಗಳು ಸಮಾಜದ ಲೋಪ ದೋಷಗಳನ್ನು ತಿದ್ದುವ ಅಥವಾ ಜನರಿಗೆ ತಿಳಿ ಹೇಳುವ ಕೆಲಸವನ್ನು ಮಾಡುತ್ತವೆ. ಸಾಹಿತ್ಯ ಎನ್ನುವುದು ಮನಸ್ಸಿನ ನೆಮ್ಮದಿಗಾಗಿಯೋ, ಮನರಂಜನೆಗಾಗಿಯೋ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬುದು ಸುಳ್ಳಲ್ಲ.

ಸಾಹಿತ್ಯದ ಕುರಿತಾಗಿ ಎಲ್ಲರಿಗೂ ಸ್ವಲ್ಪ ಮಟ್ಟಿಗಾದರೂ ಆಸಕ್ತಿ ಇದ್ದೇ ಇರುತ್ತದೆ. ಸಾಹಿತ್ಯಾಸಕ್ತಿ ಇಲ್ಲದ ವ್ಯಕ್ತಿ ಕೂಡಾ ಯಾವುದೋ ಒಂದು ಹಾಡನ್ನು ಗುನುಗುತ್ತಿರುತ್ತಾನೆ. ಅಥವಾ ಯಾವುದೋ ಒಂದು ಪಾತ್ರದ ಸಂಭಾಷಣೆಯನ್ನು ಮೆಚ್ಚಿಕೊಳ್ಳುತ್ತಾನೆ. ಅಂಥಾ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ವಯಸ್ಸಿನ ಮಿತಿ ಇಲ್ಲ ಆದರೆ ಸಾಹಿತ್ಯ ರಚನೆ ಮಾತ್ರ ಎಲ್ಲರಿಗೂ ಒಲಿಯುವುದಿಲ್ಲ. ಕೆಲವರು ಬಾಲ್ಯದಿಂದಲೇ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಇನ್ನೂ ಕೆಲವರು ಮಧ್ಯ ವಯಸ್ಸಿನಲ್ಲಿ ಅಥವಾ ಮುಪ್ಪಿನಲ್ಲಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಸರು ಮಾಡಿದವರೂ ಇದ್ದಾರೆ. ವಯಸ್ಸು ಮಾಗುತ್ತಾ ಅನುಭವ ಹೆಚ್ಚಾದಂತೆ ಮನುಷ್ಯರಲ್ಲಿ ಕೋಪ ಮತ್ತು ದ್ವೇಷದ ಭಾವನೆಗಳು ಕಡಿಮೆಯಾಗುತ್ತವೆ. ಹಾಗಾಗಿ ಅಂಥವರಿಂದ ರಚನೆಯಾದ ಸಾಹಿತ್ಯ ತುಂಬಾ ಅರ್ಥಪೂರ್ಣವಾಗಿದ್ದು, ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ತರಲು ಪ್ರಯತ್ನ ಮಾಡುತ್ತವೆ ಎಂಬುದು ಹಲವರ ಅಭಿಪ್ರಾಯ.

ಲತಾಮಣಿ ಎಂ.ಕೆ.ತುರುವೇಕೆರೆ ಯವರ ಪ್ರಥಮ ಕವನ ಸಂಕಲನವಾದ ‘ವಸಂತ ಗಾನ’ ಇತ್ತೀಚಿಗೆ ಕೈ ಸೇರಿತು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಹಾಸನದ ಎಸ್.ಉಪ್ಪಾರ ಅವರ ಮುನ್ನುಡಿಯಲ್ಲಿಯೇ ಸಂಕಲನದಲ್ಲಿರುವ ಕವಿತೆಗಳ ಕುರಿತಾಗಿ ನಾಜೂಕಾದ ವಿಮರ್ಶೆಯೂ ಇದೆ. ಈ ಕೃತಿಯು ಆಕರ್ಷಕ ಮುಖಪುಟ ಹಾಗೂ ಸಾಹಿತಿಗಳಾದ ವಿದ್ಯಾ ವಾಚಸ್ಪತಿ ಡಾ.ಕವಿತಾ ಕೃಷ್ಣರವರ ಬೆನ್ನುಡಿಯೊಂದಿಗೆ ಗಮನ ಸೆಳೆಯುತ್ತದೆ.

ಲತಾಮಣಿ ಎಂ.ಕೆ ಅವರಲ್ಲಿ ವೈಚಾರಿಕ ಪ್ರಜ್ಞೆ ಹಾಗೂ ಸಾಮಾಜಿಕ ಕಾಳಜಿ ಸಹಜವಾಗಿಯೇ ಜಾಗೃತವಾಗಿವೆ ಎಂಬುದಕ್ಕೆ ಹಲವು ಕವನಗಳು ಸಾಕ್ಷಿಯಾಗಿವೆ.

ಕ್ರಾಂತಿ ಗೀತೆ ಎಂಬ ಮೊದಲನೇ ಕವನದಲ್ಲಿ
ವರದಕ್ಷಿಣಾ ಪಿಡುಗ ಒದ್ದೋಡಿಸು
ಜಾತಿಯ ಭಾವವನು ಜಾಲಾಡಿಸು
ಲಂಚವನು ಸಂಚಿನ ಸುಳಿಯಲಿ ಅಡಗಿಸು
ಭ್ರಷ್ಟತೆಯ ಭ್ರಾಂತಿಯನು ಬಡಿದೋಡಿಸು
ಎನ್ನುವಲ್ಲಿ ಸಮಾಜದ ಜಾಡ್ಯಗಳನ್ನ್ನು ತೊಲಗಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂಬ ಉದ್ದೇಶ ಹೊಂದಿರುವುದು ಕಂಡುಬರುತ್ತದೆ.

ಕರಗಳ ತುಂಬೆಲ್ಲಾ ಕರಿಮಸಿಯ ಧೂಳು
ನಾಸಿಕದ ನಾಳದಿಂದುದರಕೆ ಕೂಳು
ಆರಿಹರು ಇಲ್ಲಿ ಆಲಿಸಲವನ ಗೋಳು
ಬಳಲಿ ಬೆಂಡಾಗಿಹುದಿವನ ಭರವಸೆಯ ಬಾಳು
ಎಂಬುವಲ್ಲಿ ಕಾರ್ಮಿಕರ ದುಃಸ್ಥಿತಿಯ ಕುರಿತು ಮಾನವೀಯ ಅನುಕಂಪ ತೋರುವುದರ ಜೊತೆಗೆ ಬಡತನ ನಿವಾರಣೆ ಬಗ್ಗೆ ಧ್ವನಿ ಎತ್ತಿದ್ದಾರೆ. ಹಾಗೇ

ವಿಶ್ವ ಮಾನವ ಸಂದೇಶವಿರುವ ನಾಡಿನಲ್ಲಿ
ಕುಲದ ಬಗೆಗಿನ ಕಲಹ ಕೇಳಬಾರದಿಲ್ಲಿ ಎನ್ನುವ ಸಾಮಾಜಿಕ ಕಾಳಜಿ ಇರುವ ಕುಲದ ಕೂಗು ಎಂಬ ಕವನ ಸಾಮರಸ್ಯದ ಬದುಕಿಗಾಗಿ ಹಂಬಲಿಸುವ ಮನಸ್ಸನ್ನು ಅನಾವರಣಗೊಳಿಸುತ್ತದೆ. ರಾಜಕಾರಣಿಗಳು ಜಾತಿಯಾಧಾರಿತ ರಾಜಕಾರಣ ಮಾಡುತ್ತಾ ಜನರಲ್ಲಿ ಜಾತಿಯ ಬಗೆಗಿನ ತಾರತಮ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಅವಕಾಶ ಪಡೆದುಕೊಂಡವರೇ ಮತ್ತೆ ಮತ್ತೆ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಬಡವರನ್ನು ಕಡೆಗಾಣಿಸುತ್ತಿದ್ದಾರೆ. ಅರ್ಹತೆಗೆ ಬೆಲೆ ಇಲ್ಲ, ಜಾತಿಗೆ ಬೆಲೆಯಿದೆ ಎಂಬಂಥಾ ವಾತಾವರಣ ಸೃಷ್ಟಿಯಾಗಿದೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆಯಾಗುತ್ತಿದೆ. ಜಾತಿ ಎಂಬ ಭೂತ ಹಿಂದಿನ ಕಾಲದಲ್ಲಿ ಕೆಲವರನ್ನು ಶೋಷಿಸಿದರೆ ಈಗಿನ ಕಾಲದಲ್ಲಿ ಇನ್ಯಾರೋ ಅಮಾಯಕರನ್ನು ಶೋಷಿಸುತ್ತಿದೆ ಎಂಬುದಾಗಿ ನನ್ನ ಭಾವನೆಗಳೊಂದಿಗೆ ನಾನು ಅರ್ಥೈಸಿಕೊಂಡಂತೆ, ಇತರರೂ ತಮ್ಮ ಭಾವನೆಗೆ ತಕ್ಕಂತೆ ಅರ್ಥ ಮಾಡಿಕೊಳ್ಳಬಹುದಾದ ಕವನ ಎನ್ನುವಂತಿದೆ.

ಜೋಡಿ ಗಿಳಿ ಎಂಬ ನೀತಿ ಕಥೆಯ ಆಧಾರಿತ ಕವನ, ಹಸಿರೇ ಉಸಿರು, ನನ್ನದೊಂದು ಮನವಿ, ಮುದ್ದು ಕಂದ, ಒಮ್ಮೆ ಬಾಮ್ಮಾ, ಹಾರೈಕೆ, ಹನುಮ ನಾಮ, ಪುಟ್ಟ ನಾಯಿ, ಕಾಡಿನ ರಾಜ, ಕುರಿಗಾಹಿಗಳು, ಪಪ್ಪೀ ಆಸೆ ಮೊದಲಾದ ಅನೇಕ ಕವನಗಳು ಮಕ್ಕಳಿಗಾಗಿಯೇ ಬರೆದಂತೆ ಅನಿಸಿತು. ಪ್ರೇಮ ವಿವಾಹ, ಇನಿಯಾ, ನಿನ್ನದೇ ಬಿಂಬ, ಒಡೆಯಾ ಗೆಳೆಯಾ ಕವನಗಳು ಪ್ರೇಮ ಮತ್ತು ವಿರಹದ ತೀವ್ರತೆಯನ್ನು ವಿಶ್ಲೇಷಿಸುತ್ತವೆ.

ಕ್ಯಾ ಕರ್ ನಾ ಎಂಬುದು ಕರೋನಾದಿಂದಾದ ತೊಂದರೆಯನ್ನೂ, ನಗರೀಕರಣ, ವಾಯು ವರುಣ ಎಂಬ ಕವನಗಳು ಪರಿಸರ ಕಾಳಜಿಯನ್ನು, ಕ್ರಾಂತಿ ಗೀತೆ, ಜಾತಿಭೂತ ಮೊದಲಾದ ಕವನಗಳು ಸಾಮಾಜಿಕ ಕಾಳಜಿಯನ್ನು ಬಿಂಬಿಸುತ್ತವೆ. ಈ ಕವನ ಸಂಕಲನದಲ್ಲಿ ಸ್ತ್ರೀ ಪರವಾದ ಕೂಗು ಕೇಳಿಬರದಿದ್ದರೂ ಹೆಣ್ಣು, ಭಾರತೀಯ ನಾರಿ ಎಂಬ ಕವನಗಳು ಮಹಿಳೆಯರಿಗೆ ಆದ್ಯತೆ ನೀಡಿವೆ. ಕವಯತ್ರಿ ಹಲವು ಆಯಾಮಗಳೊಂದಿಗೆ ಸಮಾಜವನ್ನು ಕಂಡುಕೊಂಡು ಕವನಗಳ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ ಅನ್ನಿಸಿತು. ಇನ್ನೂ ಹೆಚ್ಚೆಚ್ವು ಅಧ್ಯಾಪನದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಉನ್ನತ ವಿಚಾರಗಳೊಂದಿಗೆ ಬೇರೆ ಬೇರೆ ಪ್ರಕಾರದ ಸಾಹಿತ್ಯ ಸೇವೆಯಲ್ಲಿ ಕೃಷಿ ಮಾಡುತ್ತಾ ಸಾರಸ್ವತ ಲೋಕದಲ್ಲಿ ಅವರು ಹೆಸರು ಗಳಿಸಲಿ ಎಂದು ಈ ಮೂಲಕ ಹಾರೈಸುತ್ತೇನೆ.

ವಿನೋದಾ ಕರಣಂ ಉಪನ್ಯಾಸಕರು ಬಳ್ಳಾರಿ

LEAVE A REPLY

Please enter your comment!
Please enter your name here