ಮತ್ತೆ ಜನಿಸಿದ ಬಸವಣ್ಣ ಮತ್ತು ಬಿಜ್ಜಳ ಮಾತನಾಡಿದರು

0
173

ಬಸವಣ್ಣ ಐದು ನಿಮಿಷ ಮಾತನಾಡಲಿಲ್ಲ.
ಅವರು ತಮ್ಮದೇ ವಿಸ್ಮೃತಿಯೊಳಗೆ ಮುಳುಗಿ ಹೋದಂತಿತ್ತು.ಕೊನೆಗೊಮ್ಮೆ ಮುಖ್ಯಮಂತ್ರಿಗಳೇ,ಬಸಣ್ಣ ಏನು ಯೋಚನೆ ಮಾಡ್ತಿದ್ದೀ ಎಂದು ಎಚ್ಚರಿಸಿದರು.ಪ್ರಭು ಏನಿದೆಲ್ಲ?ಎಂದು ಬಸವಣ್ಣ ಕೇಳಿದರೆ ನಕ್ಕು ಅದೇ ಭರದಲ್ಲಿ ಮಾತನಾಡುತ್ತಾ ಹೋದರು.
ಬಸಣ್ಣ ಈ ಎಂಟು ಶತಮಾನಗಳಲ್ಲಿಏನೇನಾಗಿ ಹೋಗಿದೆ ಗೊತ್ತಾ?ನೀನು ಸನಾತನವಾದದ ಬೇರನ್ನು ಕಡಿಯಲೆಂದು,ಕಡಿದು ಸುಡಲೆಂದು ಎಲ್ಲ ಜಾತಿಯ ಜನರನ್ನು ಒಂದು ಮಾಡಿದೆ.
ಅವರೆಲ್ಲ ಶರಣರೆಂಬ ಹೆಸರಿನಲ್ಲಿ ಒಗ್ಗೂಡಿದರು.ಲಿಂಗಾಯತ ಧರ್ಮ ಎಂದರೆ ಜಾತಿ ಮೀರಿದ ಧರ್ಮ,ಮನುಷ್ಯತ್ವದ ಚೌಕಟ್ಟು ರೂಪಿಸುವ ಧರ್ಮ ಎಂಬ ನಂಬಿಕೆ ಅವರಲ್ಲಿತ್ತು.ಇದೇ ಕಾರಣಕ್ಕಾಗಿ ನೀನು ಶಿವೈಕ್ಯನಾದ ಮೇಲೂ ದುಡಿದರು.ಕಾಯಕವೇ ಕೈಲಾಸ ಎಂದುಕೊಂಡು ಶ್ರಮಿಸಿದರು.
ಭೂಮಿ ಕೊಂಡರು,ಉತ್ತರು,ಬಿತ್ತರು,ಬೆಳೆದರು.ಆರ್ಥಿಕವಾಗಿ ಗಟ್ಟಿಯಾದರು.ಆದರೆ ಯಾವಾಗ ಆರ್ಥಿಕ ಶಕ್ತಿ ಬಂತೋ?ಆನಂತರ ಕಾಲಕ್ರಮೇಣ ಜಂಗಮತ್ವದ ಕಲ್ಪನೆ ಹೋಗಿ ಸ್ಥಾವರಕ್ಕೆ ಹೆಚ್ಚು ಮಹತ್ವ ದೊರೆಯಿತು.ನೀನು ಜಾತಿ ವ್ಯವಸ್ಥೆಯನ್ನು ನಿರ್ಮೂಲ ಮಾಡಲು ಕಟ್ಟಿದ ಶರಣರ ಗುಂಪೇ ಕಾಲಕ್ರಮೇಣ ಒಂದು ಜಾತಿಯಾಯಿತು.ಬರೀ ಕಲ್ಯಾಣವಷ್ಟೇ ಅಲ್ಲ‌,ಇಡೀ ರಾಜ್ಯದ ಮೇಲೇ ಪ್ರಭಾವ ಬೀರುವಷ್ಟು ಗಟ್ಟಿಯಾಯಿತು.
ಹೀಗೆ ನೀನು ಕಟ್ಟಿದ ಧರ್ಮ ಜಾತಿಯಾಗಿ,ಪ್ರಬಲ ಶಕ್ತಿಯಾಗಿ ಮೇಲೆದ್ದು ನಿಂತರೆ, ರಾಜ್ಯದ ಮತ್ತೊಂದು ಭಾಗದಲ್ಲಿ ಒಕ್ಕಲಿಗರು ಗಟ್ಟಿಯಾಗಿ ಮೇಲೆದ್ದು ನಿಂತಿದ್ದರು.ಅವರದು ಒಕ್ಕಲುತನವೇ,ಈ ಮಧ್ಯೆ ರಾಜ್ಯ ಯಾರ್ಯಾರ ಕೈಲೋ ಆಳಿಸಿಕೊಂಡಿತು.ಕೊನೆಗೊಮ್ಮೆ ಬ್ರಿಟಿಷರ ಕೈಲೂ ಸಿಕ್ಕಿಕೊಂಡಿತು.
ಅವರಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಇಲ್ಲಿ,ಈ ರಾಜ್ಯದಲ್ಲಿ ಗಟ್ಟಿಯಾಗಿ ಉಳಿದಿದ್ದು ಒಕ್ಕಲಿಗರು ಮತ್ತು ಲಿಂಗಾಯತರು.ಸ್ವಲ್ಪ ಕಾಲ ಬೇರೆ,ಬೇರೆಯಾಗಿದ್ದರೂ ಏಕೀಕರಣದ ಹೆಸರಿನಲ್ಲಿ ಒಂದಾದರು.ಇವತ್ತು ಹೇಳುತ್ತೇನೆ.ಅವತ್ತು ನಮ್ಮ ಕಾಲದಲ್ಲಿ ಸನಾತನವಾದಿಗಳಿಗೆ ಯಾವ ಶಕ್ತಿ ಇತ್ತೋ?ಆ ಶಕ್ತಿ ಈಗಿಲ್ಲ,ಆದರೆ ಅವರ ಪ್ರಭಾವಕ್ಕೆ ದೊಡ್ಡ ದಕ್ಕೆಯೂ ಆಗಿಲ್ಲ.
ಆದರೆ ಅವೆರು ಲಿಂಗಾಯತರು ಇಲ್ಲವೇ ಒಕ್ಕಲಿಗರೊಂದಿಗೆ ಗುರುತಿಸಿಕೊಳ್ಳುತ್ತಾ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ.ಅದಿರಲಿ ಬಿಡು.ಇಂತಹ ಸ್ಥಿತಿಯಲ್ಲಿ ರಾಜ್ಯವನ್ನು ಹೆಚ್ಚು ಕಾಲ ಆಳಿದವರು ಲಿಂಗಾಯತರು.
ಅವರೇ ಹೆಚ್ಚುಅಧಿಕಾರ ಅನುಭವಿಸಿದರೆ ಒಕ್ಕಲಿಗರಲ್ಲೂ ಒಂದು ಅಸಮಾಧಾನ ಬೆಳೆಯುತ್ತದಲ್ಲ ಬಸಣ್ಣ?ಎಷ್ಟೇ ಆದರೂ ಎರಡು ಬಲಿಷ್ಟ ಜಾತಿಗಳ ನಡುವಣ ಅಹಂನ ಪ್ರಶ್ನೆ.ಕುತೂಹಲ ಏನು ಗೊತ್ತಾ?ಇಷ್ಟಾದರೂ ಈ ಎರಡೂ ಜಾತಿಗಳು ರಾಜಕೀಯವಾಗಿ ಒಂದಾಗುವ ಅನಿವಾರ್ಯತೆ ಸೃಷ್ಟಿಯಾಗಿದ್ದು.
ಈಗ ಬಸವಣ್ಣ ಮಧ್ಯೆ ಪ್ರವೇಶಿಸಿ ಯಾಕೆ ಪ್ರಭು?ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿಗಳು ಮಾತನಾಡುವ ಖದರಿನಲ್ಲಿದ್ದಂತಿತ್ತು.ಹಾಗಂತಲೇ,ಹೇಳುತ್ತೇನೆ ಬಸಣ್ಣ,ಯಾವಾಗ ರಾಜ್ಯದ ಎರಡು ಪ್ರಬಲ ಶಕ್ತಿಗಳಾಗಿ ಲಿಂಗಾಯತರು ಮತ್ತು ಒಕ್ಕಲಿಗರು ಬೆಳೆದು ನಿಂತರೋ?ಸಹಜವಾಗಿ ಆರ್ಥಿಕ ನೆಲೆಗಟ್ಟಿನ ಆಧಾರಸ್ತಂಭವಾದ ಭೂಮಿ ಬಹುತೇಕ ಅವರ ವಶದಲ್ಲೇ ಇತ್ತು.
ಶೇಕಡಾ ಇಪ್ಪತ್ತೈದರಷ್ಟು ಜನಸಂಖ್ಯೆ ಇರುವ ಎರಡು ಸಮುದಾಯಗಳ ಕೈಲಿ ಬಹುತೇಕ ಭೂಮಿ ಇದ್ದರೆ ಉಳಿದ ಜಾತಿ,ವರ್ಗದವರಲ್ಲಿ ಅಸಮಾಧಾನ ಬೆಳೆಯುತ್ತದಲ್ಲವೇ?ನಿಜ ಹೇಳಬೇಕೆಂದರೆ ಇಂತಹದೊಂದು ಅಸಮಾಧಾನವನ್ನು ತೊಡೆದು ಹಾಕಲೆಂದೇ ಸಮಾಜವಾದಿ ಚಳವಳಿ ನಡೆಯಿತು.
ಒಂದರ್ಥದಲ್ಲಿಅದು ಕೂಡಾ ಶರಣರ ಚಳವಳಿಯಂತೆ ಮಹತ್ವದ್ದು.ಶರಣರ ಚಳವಳಿ ಸಾಮಾಜಿಕ ವ್ಯವಸ್ಥೆ ಸಮಾನತೆಯ ಆಧಾರದ ಮೇಲೆ ರೂಪುಗೊಳ್ಳಬೇಕು ಎಂಬ ಕನಸು ಇರಿಸಿಕೊಂಡಿತ್ತಲ್ಲ?ಅದೇ ರೀತಿ ಸಮಾಜವಾದಿ ಚಳವಳಿ ಕೂಡಾ,ಸಾಮಾಜಿಕ ವ್ಯವಸ್ಥೆ,ಆ ಮೂಲಕ ಆರ್ಥಿಕ ವ್ಯವಸ್ಥೆ ಸಮಾನತೆಯ ಆಧಾರದ ಮೇಲೆ ರೂಪುಗೊಳ್ಳಬೇಕು ಎಂಬ ಕನಸು ಇಟ್ಟುಕೊಂಡಿತ್ತು.
ಅದು ಎಂತಹ ಕನಸು ಎನ್ನುತ್ತೀಯ ಬಸಣ್ಣ?ಲೋಹಿಯಾ,ಗೋಪಾಲಗೌಡರ ಜೊತೆ ಸೇರಿ ಅಂತಹದೊಂದು ಕನಸಿನ ಈಡೇರಿಕೆಗಾಗಿ ನಾವು ಹೋರಾಡುತ್ತಿದ್ದಾಗ ಇನ್ನೇನು ನಾವಂದುಕೊಂಡ ಕಾಲ ಹತ್ತಿರವಾಗುತ್ತಿದೆ.ಈ ನೆಲದಿಂದ ಜಾತಿ ಕಾಲು ಕೀಳುತ್ತದೆ.ಎಲ್ಲರ ಬದುಕೂ ಹಸನಾಗುತ್ತದೆ ಅಂದುಕೊಂಡಿದ್ದಿವಿ.
ಆದರೆ ಏನೂ ಆಗಲಿಲ್ಲ ಬಸಣ್ಣ,ನೀನು ಶಿವೈಕ್ತನಾದ ನಂತರ ಶರಣ ಚಳವಳಿ ಹೇಗೆ ಸ್ವಯಂಶಕ್ತಿಯ ಆವಾಹನೆಗಾಗಿ ಹೋರಾಡಿತೋ?ಲೋಹಿಯಾ,ಗೋಪಾಲಗೌಡರ ನಂತರ ಸಮಾಜವಾದಿ ಚಳವಳಿಯೂ ಅಧಿಕಾರ ದಾಹದ ವೇದಿಕೆಯಾಯಿತು.ಒಬ್ಬೊಬ್ಬರೂ ಒಂದೊಂದು ಕಡೆ ಹೋದರು.
ಆದರೆ ದೇವರಾಜ ಅರಸರು ಮುಖ್ಯಮಂತ್ರಿಯಾಗಿ ಬಂದರಲ್ಲ?ಅವರು ಒಕ್ಕಲಿಗರು,ಲಿಂಗಾಯತ ಶಕ್ತಿಯ ವಿರುದ್ದ ಉಳಿದೆಲ್ಲ ಜಾತಿಗಳ ಶಕ್ತಿಯನ್ನು ಕ್ರೋಢೀಕರಿಸಿದರು.ಹಿಂದುಳಿದವರು,ಪರಿಶಿಷ್ಟರು..ಹೀಗೆ.ಎಲ್ಲ ಶೋಷಿತರನ್ನು ಒಂದುಗೂಡಿಸುವ ಪ್ರಯತ್ನ ಮಾಡಿದರು.ಭೂಸುಧಾರಣಾ ಕಾಯ್ದೆಯನ್ನುಜಾರಿಗೊಳಿಸಿ ಒಕ್ಕಲಿಗರು,ಲಿಂಗಾಯತರ ಕೈಲಿದ್ದ ಭೂಮಿಯನ್ನು ಎಲ್ಲರಿಗೂ ಹಂಚಲು ಯತ್ನಿಸಿದರು.
ಹೀಗೆ ತಮ್ಮ ಕೈಲಿದ್ದ ಭೂಮಿಯನ್ನು ವಶಪಡಿಸಿಕೊಳ್ಳಲು ಅವರು ಮುಂದಾಗಿದ್ದೇ ತಡ,ಅಹಂನ ಪೈಪೋಟಿಯಲ್ಲಿದ್ದ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕಾಯಿತು.ಅವರಿಬ್ಬರು ಒಂದಾಗಿದ್ದರಿಂದಲೇ ಈ ಪೀಪಲ್ಸ್‌ ಪ್ರಂಟ್‌ ಸರ್ಕಾರ ಬಂದಿದ್ದು ಬಸಣ್ಣ.
ಅವತ್ತು ಪೀಪಲ್ಸ್‌ ಫ್ರಂಟ್‌ ಪಕ್ಷ ಅಧಿಕಾರಕ್ಕೆ ಬಂದಾಗ ಏನೋ ಕ್ರಾಂತಿಯಾಯಿತು ಅಂತ ನಾವು ಅಂದುಕೊಂಡಿವಿ.ಆದರೆ ಆಗಲಿಲ್ಲ.ಬದಲಿಗೆ ಜಾತಿಗಳ ನಡುವೆ,ವರ್ಗಗಳ ನಡುವೆ ಅಂತರ ಬೆಳೆಯುತ್ತಾ ಹೋಯಿತು.
ಒಂದೊಂದು ಜಾತಿಯಲ್ಲೂ ಒಂದಲ್ಲ,ಎರಡಲ್ಲ,ಹತ್ತಾರು ಒಳಜಾತಿಗಳಾದವು.ಹೇಳುತ್ತಾ ಹೋದರೆ ನಿನ್ನ ಎದೆ ಒಡೆದು ಹೋಗುತ್ತದೆ ಬಸಣ್ಣ,ಇವತ್ತು ಇಂತಹದೊಂದು ಗೋಜಲಿನಲ್ಲಿ,ಜಾತಿಗಳ ವಿಷವ್ಯೂಹದಲ್ಲಿ ಸಿಲುಕಿ ಆಡಳಿತ ನಡೆಸುವುದು ಸುಲಭವಲ್ಲ ಬಸಣ್ಣ,ಇರಲಿ ಬಿಡು,ಏನೇನಾಗುತ್ತದೋ ನೋಡೊಣ.
ಅಷ್ಟು ಹೇಳಿದ ಮುಖ್ಯಮಂತ್ರಿಗಳು ಸುಮ್ಮನಾದರು.ಒಳಗೇ ಕುಟುಕುತ್ತಿದ್ದ ಪ್ರಶ್ನೆಯನ್ನು ಮುಚ್ಚಿಡಲಾಗದೆ ಬಸವಣ್ಣ ಕೇಳಿದರು.ಇವತ್ತು ಸ್ವಾಮಿಗೌಡ್ರು ನಿಮ್ಮ ಮೇಲೆ ಬಂಡಾಯ ಹೂಡಿದ್ದಾರಲ್ಲ?ಅವರಿಂದ ಬಚಾವಾಗಿ,ಗಟ್ಟಿಯಾಗಿ ಒಂದು ಜಾತಿರಹಿತ ಸಮಾಜವನ್ನು ರೂಪಿಸಲು ಸಾಧ್ಯವೇ ಇಲ್ಲವೇ?
ಈ ಪ್ರಶ್ನೆಗೆ ಮುಖ್ಯಮಂತ್ರಿಗಳು ಹೆಚ್ಚು ಉತ್ತರಿಸುವ ಗೋಜಿಗೆ ಹೋಗಲಿಲ್ಲ.ಬದಲಿಗೆ:ಹೇಗಿದ್ದರೂ ಇರುತ್ತೀಯಲ್ಲ ಬಸಣ್ಣ,ನಿನ್ನ ಕಣ್ಣಾರೆ ಎಲ್ಲವನ್ನೂ ನೋಡು,ಕೊನೆಗೆ ನಿನಗೇ ಉತ್ತರ ದೊರೆಯುತ್ತದೆ ಎಂದರು.
ಎಂಟುನೂರು ವರ್ಷಗಳ ನಂತರವೂ ಜಾತಿಯ ಬೇರು ಇಳಿದಿರುವ ಆಳವನ್ನರಿತ ಬಸವಣ್ಣ ವಿಷಾದ ಹೊತ್ತು ಕುಳಿತರು ಅವರಿಗರಿವಿಲ್ಲದಂತೆಯೇ ಅವರ ತುಟಿಗಳು ಚಲಿಸಿದವು.
ಹೊನ್ನ ನೇಗಿಲಲುತ್ತು ಎಕ್ಕೆಯ ಬೀಜವ ಬಿತ್ತುವರೇ?
ಕರ್ಪೂರದ ಮರವ ಕಡಿದು ಕಳ್ಳಿಗೆ ಬೇಲಿಯನಿಕ್ಕುವರೇ?
ಶ್ರೀಗಂಧದ ಮರವ ಕಡಿದು ಬೇವಿಂಗೆ ಅಡೆಯನಿಕ್ಕುವರೇ?
ಎಂದು ಗುಣುಗುಣಿಸಿದ ಬಸವಣ್ಣ ಕಣ್ಣು ಬಿಡುವ ಹೊತ್ತಿಗೆ ಮುಖ್ಯಮಂತ್ರಿಗಳು ಹೊರಗೆ ನಡೆದಿದ್ದರು.

ಇದು ನನ್ನ ಹೊಕ್ಕುಳ ಸುತ್ತ ನಕ್ಷತ್ರ ಬಳ್ಳಿ ಕಥಾ ಸಂಕಲನದಲ್ಲಿರುವ ಬಸವಣ್ಣ ಮತ್ತೆ ಶಿವೈಕ್ಯರಾದರು ಕತೆಯ ಒಂದು ಭಾಗ.
ನನ್ನ ತಾರುಣ್ಯದ ದಿನಗಳಲ್ಲಿ,ಬದುಕನ್ನು ತುಂಬ ವೇಗವಾಗಿ ಗ್ರಹಿಸುವ ಕಾತರದ ಕಾಲದಲ್ಲಿ ಬರೆದ ಎಂಟು ಕತೆಗಳು ಇದರಲ್ಲಿವೆ.ಈ ಕತೆಗಳನ್ನು ಬರೆದು ಹದಿನೈದು ವರ್ಷಗಳು ಸರಿದು ಹೋದವು.ಇಷ್ಟು ವರ್ಷಗಳಲ್ಲಿ ಮತ್ತೊಂದೇ ಒಂದು ಕತೆಯನ್ನು ಬರೆಯಲು ನನಗಾಗಿಲ್ಲ.
ಈಗ ಈ ಪುಸ್ತಕವನ್ನು ಸಾಧನ ಪಬ್ಲಿಕೇಶನ್‌ನ ರವಿಚಂದ್ರ ಅವರು ಮರುಮುದ್ರಣ ಮಾಡಲು ಸಜ್ಜಾಗಿದ್ದಾರೆ.ಇಂತಹ ಸಾಹಸ ಏನೇ ಇದ್ದರೂ ನಿಮ್ಮೆದುರು ಹೇಳಿಕೊಳ್ಳುವ ಆಸೆ.ಅದಕ್ಕಾಗಿ ಈ ಮಾತು.
ಥ್ಯಾಂಕ್ಯೂ

ಆರ್.ಟಿ.ವಿಠ್ಠಲಮೂರ್ತಿ

ರಾಜಚರಿತೆ

ಪ್ರತಿಗಳಿಗಾಗಿ ಸಂಪರ್ಕಿಸಿ:-
ಸ್ವಪ್ನ ಬುಕ್ ಸ್ಟಾಲ್
ನವಕರ್ನಾಟಕ
ಅಂಕಿತ

ಸಾಧನ ಪ್ರಕಾಶನ
9480088960
8123496789

Home

LEAVE A REPLY

Please enter your comment!
Please enter your name here