ಪ್ರೇಮಮಯ ಮೂರ್ತಿ ವಿಪ್ರೋ ಸಂಸ್ಥೆಗಳ ಮುಖ್ಯಸ್ಥ ಅಜಿಮ್ ಪ್ರೇಮ್ಜಿ

0
64

ವಿಪ್ರೋ ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥರಾದ ಅಜಿಮ್ ಪ್ರೇಮ್ಜಿ ಹಲವಾರು ನಿಟ್ಟಿನಲ್ಲಿ ಪ್ರೇಮಮಯ ಮೂರ್ತಿ.

ಅಜಿಮ್ ಪ್ರೇಮ್ಜಿ ಅವರು 1945ರ ಜುಲೈ 24ರಂದು ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಭಾಗವಾಗಿದ್ದ ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದರು. ಅವರ ತಂದೆ ಎಂ. ಎಚ್. ಹಷಂ ಪ್ರೇಮ್ಜಿ ಅವರು ವೆಸ್ಟೆರ್ನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಸ್ಥಾಪಿಸಿ ಸಸ್ಯಗಳ ಉಪಯೋಗದ ಮುಖೇನ ಎಣ್ಣೆ ಮತ್ತು ಪೌಷ್ಟಿಕ ಉತ್ಪಾದನೆಗಳ ಕೈಗಾರಿಕೆ ನಡೆಸುತ್ತಿದ್ದರು. ಈ ಸಂಸ್ಥೆ 1945ರ ವರ್ಷದಲ್ಲೇ ಬಾಂಬೆ ಷೇರುಮಾರುಕಟ್ಟೆಯಲ್ಲಿ ಪ್ರಮುಖವಾದ ನೋಂದಾಯಿತ ಸಂಸ್ಥೆಯಾಗಿತ್ತು. ಮುಂದೆ ಇದೇ ಸಂಸ್ಥೆ ‘ವಿಪ್ರೊ’ ಎಂಬ ಸಂಸ್ಥೆಯಾಗಿ ರೂಪುಗೊಂಡಿತು. ಅಜಿಮ್ ಪ್ರೇಮ್ಜಿ ಅವರ ತಾತ ಕೂಡಾ ಪ್ರಮುಖ ಉದ್ದಿಮೆದಾರರಾಗಿದ್ದು ‘ಬರ್ಮಾದ ಅಕ್ಕಿಯ ರಾಜಾ’ ಎಂದು ಹೆಸರುವಾಸಿಯಾಗಿದ್ದರು. ಪಾಕಿಸ್ತಾನವು ಭಾರತದಿಂದ ಬೇರೆಯಾದಾಗ ಮಹಮ್ಮದ್ ಆಲಿ ಜಿನ್ನಾ ಅವರು ಹಷಂ ಪ್ರೇಮ್ಜಿ ಅವರನ್ನು ಪಾಕಿಸ್ತಾನದಲ್ಲಿ ನೆಲೆಸಬೇಕೆಂದು ಕೋರಿಕೊಂಡಾಗ ‘ಥ್ಯಾಂಕ್ಯು ವೆರಿ ಮಚ್’ ಎಂದು ಹೇಳಿ ಭಾರತದಲ್ಲೇ ಮುಂದುವರೆದರು.

ಅಜಿಮ್ ಪ್ರೇಮ್ಜಿ ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಮುಗಿಸಿ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ನಡೆಸುತ್ತಿದ್ದಾಗ ಅವರ ತಂದೆ ನಿಧನರಾದರು. ಹೀಗಾಗಿ ಇಪ್ಪತೊಂದರ ಹರೆಯದ ಅಜಿಮ್ ಪ್ರೇಮ್ಜಿ ಓದನ್ನು ಅರ್ಧಕ್ಕೆ ನಿಲ್ಲಿಸಿ ವಿಪ್ರೊ ಸಂಸ್ಥೆಗಳ ನೇತೃತ್ವ ವಹಿಸಿಕೊಂಡರು. ಹೀಗಾಗಿ ಅವರು ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದು ಇದಾದ ಮೂವತ್ತು ವರ್ಷಗಳ ನಂತರದಲ್ಲಿ ಅಂದರೆ 1999ರಲ್ಲಿ.

ಅಜಿಮ್ ಪ್ರೇಮ್ಜಿ ಅವರು ಅಧಿಕಾರ ವಹಿಸಿಕೊಂಡಾಗ ಅಂದಿನ ವಿಪ್ರೋ ಸಂಸ್ಥೆಯ ಒಟ್ಟಾರೆ ನಿವ್ವಳ ಮೌಲ್ಯ ಸುಮಾರು ಒಂದು ಮಿಲಿಯನ್ ಡಾಲರ್ ಇತ್ತು. ಇಂದು ಒಂದು ಅಂದಾಜಿನ ಪ್ರಕಾರ ಅಜಿಮ್ ಪ್ರೇಮ್ಜಿ ಅವರ ವೈಯಕ್ತಿಕ ಶ್ರೀಮಂತಿಕೆಯ ಮೌಲ್ಯವೇ ಸುಮಾರು 32.8 ಬಿಲಿಯನ್ ಅಮೇರಿಕನ್ ಡಾಲರ್ ಮೀರಿದ್ದು. ಅವರು ಲೋಕ ಕಲ್ಯಾಣಕ್ಕಾಗಿ ಸ್ಥಾಪಿಸಿರುವ ಅಜಿಮ್ ಪ್ರೇಮ್ಜಿ ಫಂಡೇಶನ್ ಕೂಡಿಸಿರುವ ಮೌಲ್ಯ 21 ಬಿಲಿಯನ್ ಅಮೇರಿಕನ್ ಡಾಲರ್ ಮೀರಿದ್ದು.

ವಿಪ್ರೋ ಸಂಸ್ಥೆಯ ನಿವ್ವಳ ಮೌಲ್ಯ ಹಲವು ಸಾವಿರ ಕೋಟಿರೂಪಾಯಿಗಳನ್ನು ಮೀರಿದ್ದು. ವಾರ್ಷಿಕ ವಹಿವಾಟು ಸುಮಾರು 64 ಸಾವಿರ ಕೋಟಿ. 175 ದೇಶಗಳಲ್ಲಿ ಈ ಸಂಸ್ಥೆಗಾಗಿ ದುಡಿಯುತ್ತಿರುವ 175,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಅವರು ತಮ್ಮ ವೈಯಕ್ತಿಕ ಶ್ರೀಮಂತಿಕೆಯ ಅರ್ಧಭಾಗವನ್ನು ಧರ್ಮಾರ್ಥದ ಕೊಡುಗೆಯಾಗಿ ಮೀಸಲಿರಿಸಿದ್ದಾರೆ. ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಅಜಿಮ್ ಪ್ರೇಮ್ಜಿ ಫೌಂಡೇಶನ್ ಒಂದು ವಿಶ್ವವಿದ್ಯಾಲಯ ತೆರೆದಿರುವುದಲ್ಲದೆ ಭಾರತದ ಎಲ್ಲೆಡೆಗಳಲ್ಲಿ ನೂರಾರು ವಿದ್ಯಾಸಂಸ್ಥೆಗಳನ್ನು ಪೋಷಿಸುತ್ತಾ ನಡೆದಿದೆ.

ಅಂದು ಸಸ್ಯಗಳ ಎಣ್ಣೆ ಉತ್ಪಾದನೆಗೆ ಸೀಮಿತವಾಗಿದ್ದ ವಿಪ್ರೋ ಸಂಸ್ಥೆ ಮುಂದೆ, ಸೋಪು, ಶಾಂಪೂ, ಶುಚಿತ್ವ ಮೂಲದ ವಸ್ತುಗಳು, ಎಂಜಿನಿಯರಿಂಗ್ ಉತ್ಪನ್ನಗಳು, ಜೆನರಲ್ ಎಲೆಕ್ಟ್ರಿಕಲ್ ಸಹಯೋಗದಲ್ಲಿ ಬಲ್ಬುಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಕಂಪ್ಯೋಟರ್ ಹಾರ್ಡ್ ವೇರ್, ಸಾಫ್ಟ್ವೇರ್ ಉತ್ಪನ್ನಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ದಾಪುಗಾಲು ಹಾಕಿ ಅನೇಕ ಸಣ್ಣಪುಟ್ಟ ಸಂಸ್ಥೆಗಳನ್ನು ಭಾರತದಲ್ಲಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ತನ್ನ ಛತ್ರಚಾಮರದ ಅಡಿಯಲ್ಲಿ ಸೇರಿಸಿಕೊಂಡು ನಿತ್ಯೋಭಿಮುಖವಾಗಿ ಶಿಖರಪ್ರಾಯ ಸಂಸ್ಥೆಯಾಗಿ ಬೆಳಗುತ್ತ ಸಾಗಿದೆ.

ಈ ಅಭಿವೃದ್ಧಿ ಪಥದಲ್ಲಿ ಅಜಿಮ್ ಪ್ರೇಮ್ಜಿ ಮತ್ತು ಅವರು ಬೆಳೆಸಿದ ಅಸಂಖ್ಯಾತ ಪ್ರತಿಭಾನ್ವಿತರ ಪರಿಶ್ರಮ ಮಹತ್ವದ್ದಾಗಿದೆ.

ಸುಬ್ರತೋ ಬಗ್ಚಿ ಅವರ ‘ಗೋ ಕಿಸ್ ದಿ ವರ್ಲ್ಡ್’ ಪುಸ್ತಕವನ್ನು ಓದುತ್ತಿದ್ದೆ. ‘ಮೈಂಡ್ ಟ್ರೀ’ ಅಂತಹ ಸಂಸ್ಥೆಯ ಸಂಸ್ಥಾಪಕರಾದ ಸುಬ್ರತೋ ಬಗ್ಚಿ. ವಿಪ್ರೋ ಸಂಸ್ಥೆಯಲ್ಲಿ ಅಜಿಮ್ ಪ್ರೇಮ್ಜಿ ಅವರಿಗೆ ನೇರ ಅಧೀನರಾದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಪ್ರೋದಲ್ಲಿ ತಮ್ಮ ಬಿಡುವಿಲ್ಲದ ಕಾರ್ಯದಲ್ಲಿ ನಿರತರಾಗಿದ್ದ ಸುಬ್ರತೋ ಬಗ್ಚಿ ಅವರ ಕಚೇರಿಗೆ ಒಂದು ದಿನ ನೇರವಾಗಿ ಆಗಮಿಸಿದ ಅಜಿಮ್ ಪ್ರೇಮ್ಜಿ, ಬಗ್ಚಿ ಅವರನ್ನು ಪ್ರಶ್ನಿಸಿದರು “ನೀನು ಎಷ್ಟರ ಮಟ್ಟಿಗೆ ಬ್ಯುಸಿ?”. ಬಗ್ಚಿ ಅವರು ತಮ್ಮ ಸಹಜ ಸ್ಥಿತಿಯನ್ನು ವರ್ಣಿಸುವಂತೆ “ನಾನು ನೂರಕ್ಕೆ ನೂರರಷ್ಟು ಬ್ಯುಸಿ” ಎಂದರು. “ನೀನೇಕೆ ಈಗಿನ ನೂರರಷ್ಟು ಬ್ಯುಸಿಯನ್ನು ನೂರಿಪ್ಪತ್ತರಷ್ಟಕ್ಕೆ ವಿಸ್ತರಿಸಿಕೊಂಡು ಸಂಸ್ಥೆಗೆ ಬರಬೇಕಿರುವ ಬಾಕಿಯ ಬಗ್ಗೆ ಜವಾಬ್ಧಾರಿ ವಹಿಸಿಕೊಳ್ಳಬಾರದು” ಎಂದು ಹೇಳಿ, ಬಗ್ಚಿ ಅವರು ಆ ಜವಾಬ್ದಾರಿಯನ್ನು ವಹಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸುವಂತೆ ಪ್ರೇರಣೆ ಕೊಟ್ಟರು. ಒಬ್ಬ ನಾಯಕ ತನ್ನ ತಂಡದ ಶಕ್ತಿಯ ವ್ಯಾಪ್ತಿಯನ್ನು ಹೇಗೆ ಉತ್ತಮಗೊಳಿಸಬಹುದೆಂಬುದಕ್ಕೆ ಇದೊಂದು ನಿದರ್ಶನ.

ಒಮ್ಮೆ ವಿಪ್ರೋ ಸಂಸ್ಥೆಯ ಒಂದು ಆಂತರಿಕ ಸಭೆಯಲ್ಲಿ ಒಬ್ಬ ಅಧಿಕಾರಿ ಅಜಿಮ್ ಪ್ರೇಮ್ಜಿ ಅವರನ್ನು ಕುರಿತು ದುಡುಕಿ ಮಾತನಾಡಿದ. ಅದನ್ನು ಅತ್ಯಂತ ತಾಳ್ಮೆಯಿಂದ ಸ್ವೀಕರಿಸಿದ ಅಜಿಮ್ ಪ್ರೇಮ್ಜಿ ಅವರನ್ನು ಈ ಕುರಿತು ಬಗ್ಚಿ ಅವರು ಕೇಳಿದಾಗ ಪ್ರೇಮ್ಜಿ ಹೇಳಿದರು “ಆತ ದುಡುಕಿ ಮಾತನಾಡುತ್ತಾನೆ ನಿಜ. ಆದರೆ ಯಾವುದೇ ಕೆಲಸ ತುರ್ತಾಗಿ ಆಗಬೇಕಾದಾಗ, ಆತನಂತೆ ಸಮರ್ಥವಾಗಿ ಕಾರ್ಯನಿರ್ವಹಿಸುವವರು ಅಪರೂಪ. ಆದ್ದರಿಂದ ಸಮರ್ಥನಾದ ಒಬ್ಬ ಕೆಲಸಗಾರ ಒಂದು ಮಾತನಾಡಿದ ಮಾತ್ರಕ್ಕೆ ನಾವು ಆತನನ್ನು ನಿಷ್ಠೂರ ಮಾಡಬೇಕಿಲ್ಲ”. ಇಂಥಹ ಒಂದು ಮನೋಪ್ರವೃತ್ತಿ ಮನೆ ಮನೆಗಳಲ್ಲಿ, ಸಂಸ್ಥೆಗಳಲ್ಲಿ, ದೇಶ ದೇಶಗಳಲ್ಲಿ ನೆಲೆ ನಿಂತರೆ ಅಲ್ಲಿ ಅದೆಷ್ಟು ಸುಂದರ ಹೂಗಳು ಅರಳುತ್ತವಲ್ಲವೇ.

ಹಲವಾರು ವರ್ಷಗಳ ಸೇವೆಯ ನಂತರದಲ್ಲಿ ಸುಬ್ರತೋ ಬಗ್ಚಿ ಅವರು ವಿಪ್ರೋ ಸಂಸ್ಥೆಯನ್ನು ಬಿಡಲು ನಿರ್ಧರಿಸಿದಾಗ ಅಜಿಮ್ ಪ್ರೇಮ್ಜಿ ಹೇಳಿದರು “ನಾವು ಒಟ್ಟಿಗೆ ಕೆಲಸವನ್ನು ಮಾಡುತ್ತಾ ಮುಂದುವರೆದಿದ್ದರೆ ಚೆನ್ನಿತ್ತು.” ಬಗ್ಚಿ ಹೇಳಿದರು “ನಾವು ವಿಭಿನ್ನ ದೃಷ್ಟಿಕೋನವುಳ್ಳವರು”. ಅದಕ್ಕೆ ಅಜಿಮ್ ಪ್ರೇಮ್ಜಿ ಮಾರ್ನುಡಿದರು “ಹೌದು, ನಾವು ವಿಭಿನ್ನ ದೃಷ್ಟಿಕೋನದವರು, ಅದಕ್ಕಾಗಿಯೇ ನಾವು ಒಟ್ಟಿಗೆ ಕೆಲಸ ಮಾಡಬೇಕು ಎಂದು ನಾನು ಬಯಸುತ್ತಿರುವುದು”. ವಿಭಿನ್ನ ದೃಷ್ಟಿಕೋನ, ವಿಭಿನ್ನ ಚಿಂತನೆಗಳು ಸಹಜ ಎಂದು ಅರ್ಥೈಸಿ ಉಳಿದ ಜೀವಿಗಳನ್ನು ಗೌರವಿಸಿ ದೋಣಿಗೆ ಹುಟ್ಟುಹಾಕುವ ಅಜಿಮ್ ಪ್ರೇಮ್ಜಿ ಅಂತಹವರೇ ನಿಜವಾದ ಅಭಿವೃದ್ಧಿಶೀಲರಲ್ಲವೇ.

ಇಷ್ಟೆಲ್ಲಾ ಸದ್ಗುಣಗಳ ಗಣಿ, ಹಲವಾರು ಬಿಲಿಯನ್ನುಗಳ ಶ್ರೀಮಂತ, ವಿಶ್ವದ ಅತ್ಯಂತ ಮಹತ್ವದ ಸಂಸ್ಥೆಗಳಲ್ಲೊಂದರ ಪ್ರಧಾನ ನಿರ್ವಾಹಕ, ಪದ್ಮವಿಭೂಷಣ, ಹಲವು ಡಾಕ್ಟರೇಟ್ ಮತ್ತು ವಿಶ್ವ ಗೌರವಗಳನ್ನು ಪಡೆದ ಅಜಿಮ್ ಪ್ರೇಮ್ಜಿ ಅವರು ವೈಯಕ್ತಿಕವಾಗಿ ಸರಳ ಜೀವನ ಪ್ರಿಯರು. ಅವರಿಗೆ ಎಕಾನಮಿ ವಿಮಾನ ಪ್ರಯಾಣವೇ ಹಿತ. ಪಂಚತಾರಾ ಹೋಟೆಲುಗಳು ಅವರನ್ನು ಆಕರ್ಷಿಸುವುದಿಲ್ಲ. ಸಾಧಾರಣವಾದ ವಿಪ್ರೋ ಅತಿಥಿಗೃಹಗಳೇ ಅವರಿಗೆ ತಂಗಲು ಹಿತ. ತಮ್ಮ ಮಗನ ಮದುವೆಯಲ್ಲಿ ತಾವೇ ಸ್ವತಃ ನಿಂತು ಪೇಪರ್ ಪ್ಲೇಟುಗಳಲ್ಲಿ ಆಹಾರ ಬಡಿಸುವಷ್ಟು ಸರಳ ಸಾಮಾನ್ಯ.

ಇಂತಹ ಮಹಾನ್ ವ್ಯಕ್ತಿತ್ವಗಳ ಸಂಗಮವಾದ ಅಜಿಮ್ ಪ್ರೇಮ್ಜಿ ಅವರು ನೂರಾರು ವರ್ಷಗಳ ಕಾಲ ವಿಪ್ರೋ ಸಂಸ್ಥೆಗೆ ಮಾತ್ರವಲ್ಲದೆ, ಸಕಲ ಮಾನವಕುಲ ಅಭಿವೃದ್ಧಿಗಳ ಪ್ರೇರಣೆಯಾಗಿ ಸಮಾಜಕ್ಕೆ ಮಾರ್ಗದರ್ಶಕರಾಗಿ ಮುಂದುವರೆಯಲಿ ಎಂದು ಆಶಿಸುತ್ತಾ ಹುಟ್ಟಿದ ಹಬ್ಬ ಆಚರಿಸುತ್ತಿರುವ ಅವರಿಗೆ ಶುಭ ಕೋರೋಣ.

ಕೃಪೆ:-‘ಕನ್ನಡ ಸಂಪದ’

LEAVE A REPLY

Please enter your comment!
Please enter your name here