ತಾಯಂದಿರಿಗೆ 1000 ದಿನದ ಅರಿವು ಬಹು ಮುಖ್ಯ: ಜಿಲ್ಲಾಧಿಕಾರಿ ಆರ್.ಲತಾ

0
85

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 02 : ತಾಯಿ ಗರ್ಭದರಿಸಿದಾಗಿನಿಂದ ಮಗುವಿಗೆ ಎರಡು ವರ್ಷ ಪೂರ್ಣವಾಗುವವರೆಗೂ 1000 ದಿನಗಳ ಮಹತ್ವದ ಕುರಿತು ಎಲ್ಲಾ ತಾಯಂದಿರಿಗೆ ಜನಜಾಗೃತಿ ಮೂಡಿಸುವುದು ಬಹು ಮುಖ್ಯವಾದದ್ದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಷ್‌ ಇಲಾಖೆ, ಹಾಗೂ ಸ್ವಿರುಲಿನಾ ಫೌಂಡೇಶನ್ ಸಂಸ್ಥೆ ಇವರುಗಳ ಸಹಯೋಗದಲ್ಲಿ ದೇವನಹಳ್ಳಿಯ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿಂದು “ಪೋಷಣೆ ಮಾಸಾಚರಣೆ”ಮತ್ತು”1000 ದಿನದ ಅರಿವು” ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಣ್ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ತಾಯಿ ಗರ್ಭಧರಿಸಿದಾಗಿನಿಂದ ಅವಶ್ಯವಿರುವ ಸೌಲಭ್ಯಗಳು ಸಾಂಪ್ರದಾಯಿಕ ಮತ್ತು ಪೌಷ್ಟಿಕಾಂಶವುಳ್ಳ ಆಹಾರ ಪದ್ಧತಿ ಮತ್ತು ಜೀವನಶೈಲಿ, ಮಹಿಳೆಯರ ಸ್ವಾಸ್ಥ್ಯ, ಲಿಂಗತ್ವ ಕುರಿತು ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪೂರಕವಾಗುವಂತಹ ಸರ್ಕಾರಿ ಯೋಜನೆಗಳ ಪರಿಪೂರ್ಣ ಮಾಹಿತಿಯನ್ನು ಎಲ್ಲಾ ತಾಯಂದಿರಿಗೆ ಜಿಲ್ಲೆಯ ಅಂಗನವಾಡಿ ಶಿಕ್ಷಕಿಯರು ಮತ್ತು ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಪೋಷಣೆ ಮಾಸಾಚರಣೆ ಮಹತ್ವ ಮತ್ತು ಪೌಷ್ಟಿಕ ಆಹಾರ ಪದ್ಧತಿಯನ್ನು ತಿಳಿಸಬೇಕು ಎಂದು ಹೇಳಿದರು.

ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ವೈದ್ಯಕೀಯ ಸೇವೆ ಒದಗಿಸುವ ಜೊತೆಗೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು ಹಾಗೂ ಆರೋಗ್ಯವಂತ ಮಹಿಳೆ ಮಾತ್ರ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಬಲ್ಲಳು. ಗರ್ಭಿಣಿಯರು ಯಾವುದೇ ರೀತಿಯ ತಪ್ಪು ಕಲ್ಪನೆಗಳನ್ನು ನಂಬದೇ ಉತ್ತಮ ಆರೋಗ್ಯ ಜೀವನ ಶೈಲಿ ರೂಪಿಸಿಕೊಂಡು ಶಿಶುವಿನ ಜನನದ ನಂತರ ಎದೆಹಾಲು ಮತ್ತು ಪೌಷ್ಟಿಕ ಆಹಾರಗಳನ್ನು ಸಮರ್ಪಕವಾಗಿ ಪೂರೈಸಿದರೇ ಮಾತ್ರ ಮಗು ಹಲವಾರು ರೋಗ ರುಜಿನಗಳಿಂದ ಮುಕ್ತವಾಗಿ ಸದೃಢ ಆರೋಗ್ಯ ಪಡೆಯಲು ಸಾಧ್ಯ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ ಅವರು ಮಾತನಾಡಿ ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಅಂಗನವಾಡಿ ಶಿಕ್ಷಕಿಯರು ಮತ್ತು ಶಾಲಾ-ಕಾಲೇಜಿನ ಶಿಕ್ಷಕರ ಪಾತ್ರ ಅಗತ್ಯವಾದದ್ದು. ಪೌಷ್ಟಿಕ ಆಹಾರಗಳು ಮತ್ತು ಸೇವನೆಯಿಂದಾಗುವ ಉಪಯೋಗಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಮನೆಗಳಲ್ಲಿ ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯದೊಂದಿಗೆ ಉನ್ನತ ವಿದ್ಯಾಭ್ಯಾಸ ಮಾಡಿ ಭಾರತದ ಆರೋಗ್ಯಯುತ ಸತ್ಪ್ರಜೆಗಳಾಗಬೇಕು ಎಂದು ಹೇಳಿದರು.
ಸ್ವಿರುಲಿನಾ ಫೌಂಡೇಶನ್ ಅಧ್ಯಕ್ಷರಾದ ಮಹೇಶ್ ಅವರು ಮಾತನಾಡಿ ಸಾವಿರ ದಿನಗಳ ಮಹತ್ವದ ಕುರಿತು ಮೂರು ವರ್ಷದೊಳಗಿನ ಮಕ್ಕಳಲ್ಲಿ ಆಗುವಂತಹ ಮೆದುಳಿನ ಬೆಳವಣಿಗೆಯ ಕಾಲಘಟ್ಟ ಅತಿ ಸೂಕ್ಷ್ಮವಾದದ್ದು. ಆದ್ದರಿಂದ ಕಡ್ಡಾಯವಾಗಿ ಎಲ್ಲಾ ತಾಯಂದಿರು ಮಗುವಿನ ಮೆದುಳಿನ ಬೆಳವಣಿಗೆಗೆ ಪೂರಕವಾಗುವಂತಹ ಆಹಾರ ಪದ್ಧತಿ ಮತ್ತು ಉತ್ತಮ ಆರೋಗ್ಯದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಕಂಠಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್, ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಶಿವರಾಜ್, ತಾಲ್ಲೂಕು ವೈದ್ಯಾಧಿಕಾರಿ ಸೀಮಾ, ತಾಲ್ಲೂಕು ಶಿಕ್ಷಣಾಧಿಕಾರಿ ಬಸವರಾಜುಗೌಡ, ದೇವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರು ಸುರೇಖಾ ಕತ್ತಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here