21ನೇ ಶತಮಾನದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್‌ ಆರಿಸಿದ ಚೋಪ್ರಾ!

0
109

ಪ್ರಸ್ತುತ 21ನೇ ಶತಮಾನದ ಅತ್ಯಂತ ಶ್ರೇಷ್ಠ ಟೆಸ್ಟ್‌ ಬ್ಯಾಟ್ಸ್‌ಮನ್‌ ಹೆಸರಿಸಿರುವ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ, ಈ ಸ್ಪರ್ಧೆಯಿಂದ ಆಧುನಿಕ ದಿಗ್ಗಜ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ, ಸ್ಟೀವನ್‌ ಸ್ಮಿತ್‌, ಕೇನ್‌ ವಿಲಿಯಮ್ಸನ್‌ ಹಾಗೂ ಜೋ ರೂಟ್‌ ಅವರನ್ನು ಕೈ ಬಿಟ್ಟಿದ್ದಾರೆ. 21ನೇ ಶತಮಾನದ ಶ್ರೇಷ್ಠ ಟೆಸ್ಟ್‌ ಬ್ಯಾಟ್ಸ್‌ಮನ್‌ ಸ್ಪರ್ಧೆಯಲ್ಲಿ ಆಕಾಶ್‌ ಚೋಪ್ರಾ ಆರು ಮಂದಿ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಮೊದಲನೇ ಆಟಗಾರನಾಗಿ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಆರಿಸಿದ್ದಾರೆ. ದ್ರಾವಿಡ್‌ 124 ಟೆಸ್ಟ್‌ ಪಂದ್ಯಗಳಲ್ಲಿ 52ರ ಸರಾಸರಿಯಲ್ಲಿ 9966 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು 28 ಶತಕಗಳನ್ನು ಸಿಡಿಸಿದ್ದಾರೆ. “ರಾಹುಲ್‌ ದ್ರಾವಿಡ್‌ ಅವರಿಂದ ನಾನು ಆರಂಭಿಸುತ್ತೇನೆ. ಇವರು ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ರಾವಲ್ಪಿಂಡಿಯಲ್ಲಿ 270, ಅಡಿಲೇಡ್‌ನಲ್ಲಿ ದ್ವಿಶತಕ ಹಾಗೂ ಈಡನ್‌ ಗಾರ್ಡನ್ಸ್‌ನಲ್ಲಿ ದ್ರಾವಿಡ್‌ ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಶ್ರೇಷ್ಠ ಪ್ರದರ್ಶನವನ್ನು ತೋರಿದ್ದಾರೆ. ಸತತ ಇನಿಂಗ್ಸ್‌ಗಳಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆ ದ್ರಾವಿಡ್‌ ಹೆಸರಿನಲ್ಲಿದ್ದು, ಇದರಲ್ಲಿ ಮೂರು ಶತಕಗಳು ಇಂಗ್ಲೆಂಡ್‌ನಲ್ಲಿ ಗಳಿಸಿರುವುದು ವಿಶೇಷ,” ಎಂದರು.

ಎರಡನೇ ಪ್ರಬಲ ಸ್ಪರ್ಧಿಯಾಗಿ ಆಕಾಶ್‌ ಚೋಪ್ರಾ ಅವರು ಜಾಕ್‌ ಕಾಲಿಸ್‌ ಅವರನ್ನು ಆಯ್ಕೆ ಮಾಡಿದ್ದಾರೆ. 123 ಟೆಸ್ಟ್ ಪಂದ್ಯಗಳಾಡಿರುವ ಕಾಲಿಸ್‌, 59ರ ಸರಾಸರಿಯಲ್ಲಿ 10660 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು 38 ಶತಕಗಳನ್ನು ಸಿಡಿಸಿದ್ದಾರೆ. “21ನೇ ಶತಮಾನದ ಶ್ರೇಷ್ಠ ಟೆಸ್ಟ್‌ ಬ್ಯಾಟ್ಸ್‌ಮನ್‌ ಸ್ಪರ್ಧೆಯಲ್ಲಿ ಜಾಕ್‌ ಕಾಲಿಸ್‌ ಕೂಡ ಇದ್ದಾರೆ. ಇವರಲ್ಲಿನ ಅತ್ಯುತ್ತಮ ಸಂಗತಿ ಏನೆಂದರೆ, ದಕ್ಷಿಣ ಆಫ್ರಿಕಾದ ಅತ್ಯಂತ ಕಠಿಣ ಪಿಚ್‌ಗಳಲ್ಲಿ ಸಾಕಷ್ಟು ರನ್‌ಗಳನ್ನು ಗಳಿಸಿದ್ದಾರೆ. ತವರು ಮಣ್ಣಿನಲ್ಲಿ 62 ಸರಾಸರಿಯಲ್ಲಿ ಹಾಗೂ ವಿದೇಶಿ ಪಿಚ್‌ಗಳಲ್ಲಿ 60ರ ಸರಾಸರಿಯಲ್ಲಿ ಅವರು ರನ್‌ ದಾಖಲಿಸಿದ್ದಾರೆ. ಸತತ ಐದು ಬಾರಿ 1000ಕ್ಕೂ ಹೆಚ್ಚಿನ ರನ್‌ಗಳನ್ನು ಕಾಲಿಸ್‌ ಸಿಡಿಸಿದ್ದಾರೆ,” ಎಂದು ಹೇಳಿದರು.

ಮೂರನೇ ಸ್ಪರ್ಧಿಯಾಗಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಇದ್ದು, ಅವರು 130 ಪಂದ್ಯಗಳಲ್ಲಿ 10968 ರನ್‌ ಗಳಿಸಿದ್ದಾರೆ. ಇದರಲ್ಲಿ 34 ಶತಕಗಳು ಸಿಡಿಸಿದ್ದಾರೆ. “21ನೇ ಶತಮಾನದಲ್ಲಿ ಅತಿ ಹೆಚ್ಚು ಟೆಸ್ಟ್ ರನ್‌ ಗಳಿಸಿದ ಮೂರನೇ ಬ್ಯಾಟ್ಸ್‌ಮನ್‌ ಪಾಂಟಿಂಗ್. ತವರಿನಲ್ಲಿ 60ರ ಸರಾಸರಿಯಲ್ಲಿ 19 ಶತಕಗಳನ್ನು ಗಳಿಸಿದ್ದಾರೆ. ವರ್ಷಕ್ಕೆ 1000ಕ್ಕೂ ಹೆಚ್ಚಿನ ರನ್‌ಗಳನ್ನು ಅವರು ಐದು ಬಾರಿ ಗಳಿಸಿದ್ದಾರೆ. ಆದರೆ, ಏಷ್ಯಾದಲ್ಲಿ ಅವರು 40ರ ಸರಾಸರಿ ಮತ್ತು ಭಾರತದಲ್ಲಿ 29ರ ಸರಾಸರಿಯಲ್ಲಿ ರನ್‌ ಗಳಿಸಿರುವುದು ಬೇಸರದ ಸಂಗತಿ,” ಎಂದು ಚೋಪ್ರಾ ಉಲ್ಲೇಖಿಸಿದ್ದಾರೆ.

ನಾಲ್ಕನೇ ಸ್ಪರ್ಧಿಯಾಗಿ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರನ್ನು ಚೋಪ್ರಾ ಆರಿಸಿದ್ದಾರೆ. ಸಂಗಕ್ಕಾರ 130 ಟೆಸ್ಟ್‌ ಪಂದ್ಯಗಳಿಂದ 58ರ ಸರಾಸರಿಯಲ್ಲಿ 12226 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು 38 ಶತಕಗಳು ಗಳಿಸಿದ್ದಾರೆ.

“ಕುಮಾರ ಸಂಗಕ್ಕಾರ ಅತ್ಯಂತ ಶ್ರೇಷ್ಠ ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದಾರೆ. 21ನೇ ಶತಮಾನದಲ್ಲಿ ಅತಿ ಹೆಚ್ಚು ಟೆಸ್ಟ್ ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅವರು ಎಸ್‌ಇಎನ್‌ಎ (ದ.ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ) ರಾಷ್ಟ್ರಗಳಲ್ಲಿ 49ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಇನ್ನು ತವರು ನೆಲದಲ್ಲಿ 62.5ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದಾರೆ. ಇವರು ಕೂಡ ಐದು ಬಾರಿ ವರ್ಷಕ್ಕೆ 1000ಕ್ಕೂ ಹೆಚ್ಚಿನ ರನ್‌ಗಳನ್ನು ಗಳಿಸಿದ್ದಾರೆ,” ಎಂದರು.
ಇನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು 21ನೇ ಶತಮಾನದಲ್ಲಿ 121 ಪಂದ್ಯಗಳನ್ನು ಆಡಿದ್ದು, 51ರ ಸರಾಸರಿಯಲ್ಲಿ 9505 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು 27 ಶತಕಗಳನ್ನು ಸಿಡಿಸಿದ್ದಾರೆ.

“ಸಚಿನ್‌ ತೆಂಡೂಲ್ಕರ್ ಆಸ್ಟ್ರೇಲಿಯಾದಲ್ಲಿ 58ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ, ದಕ್ಷಿಣ ಆಫ್ರಿಕಾದಲ್ಲಿ 55ರ ಸರಾಸರಿ ಹಾಗೂ ಇಂಗ್ಲೆಂಡ್‌ನಲ್ಲಿ 45ರ ಸರಾಸರಿಯಲ್ಲಿ ರನ್‌ ದಾಖಲಿಸಿದ್ದಾರೆ. ಇದರಲ್ಲಿ ಬಹುತೇಕ ರನ್‌ಗಳನ್ನು ಅವರು ತವರು ನೆಲದಲ್ಲಿಯೇ ಗಳಿಸಿದ್ದಾರೆ. ದೀರ್ಘ ಕಾಲ ಭಾರತ ತಂಡದಲ್ಲಿ ಆಡಿರುವ ಸಚಿನ್‌, 21ನೇ ಶತಮಾನದಲ್ಲಿ ಭಾರತೀಯ ಕ್ರಿಕೆಟ್‌ಗೆ ಬದಲಾವಣೆಯನ್ನು ತಂದುಕೊಟ್ಟಿದ್ದಾರೆ,” ಎಂದರು.

ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಅಲ್‌ಸ್ಟೈರ್‌ ಕುಕ್‌ ಅವರನ್ನು ಕೊನೆಯ ಸ್ಪರ್ಧಿಯಾಗಿ ಆಕಾಶ್‌ ಚೋಪ್ರಾ ಆರಿಸಿದ್ದಾರೆ. ಅವರು 45ರ ಸರಾಸರಿಯಲ್ಲಿ 12472 ರನ್‌ ಗಳಿಸಿದ್ದು, 3 ಶತಕಗಳನ್ನು ಸಿಡಿಸಿದ್ದಾರೆ.

“ಈ ಸ್ಪರ್ಧೆಗೆ ಆರನೇ ಬ್ಯಾಟ್ಸ್‌ಮನ್‌ ಆಗಿ ಅಲ್‌ಸ್ಟೈರ್ ಕುಕ್‌ ಅವರನ್ನು ಆಯ್ಕೆ ಮಾಡಿದ್ದೇನೆ. ಇವರು 21ನೇ ಶತಮಾನದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಆಸ್ಟ್ರೇಲಿಯಾದಲ್ಲಿ 48ರ ಸರಾಸರಿ, ಭಾರತದಲ್ಲಿ 51ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದಾರೆ. ಅಲ್ಲದೆ, ವರ್ಷಕ್ಕೆ 1000ಕ್ಕೂ ಹೆಚ್ಚಿನ ರನ್‌ಗಳನ್ನು ಅವರು ಐದು ಬಾರಿ ಗಳಿಸಿದ್ದಾರೆ,” ಎಂದರು ಆಕಾಶ್‌ ಚೋಪ್ರಾ ತಿಳಿಸಿದರು.

ಈ ಮೇಲಿನ ಆರು ಬ್ಯಾಟ್ಸ್‌ಮನ್‌ಗಳ ಅಂಕಿಅಂಶಗಳನ್ನು ತಾಳೆ ಮಾಡಿದ ಆಕಾಶ್‌ ಚೋಪ್ರಾ, ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್‌ 21ನೇ ಶತಮಾನದ ಅತ್ಯಂತ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್‌ ಎಂದು ಹೇಳುವ ಮೂಲಕ ಮಾತು ಮುಗಿಸಿದರು.

LEAVE A REPLY

Please enter your comment!
Please enter your name here