ಪ್ರತಿಯೊಬ್ಬರು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು -ಡಾ.ಗಿರೀಶ್ ಡಿ.ಬದೋಲೆ

0
177

ಕಲಬುರಗಿ,ಸೆ.13:- ಕ್ರೀಡೆಗಳು ಎಂದರೆ ಬರೀ ಸ್ಪರ್ಧೆಯಲ್ಲ. ದೈಹಿಕ ಆರೋಗ್ಯ, ನಾಯಕತ್ವ ಗುಣ, ಗುಂಪಾಗಿ ಕೆಲಸ ಮಾಡುವ ಗುಣವನ್ನು ಕ್ರೀಡೆ ಒದಗಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ದಿ.ಬದೋಲೆ ಹೇಳಿದರು.

ಮಂಗಳವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಲಾದ ಕಲಬುರಗಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ-2022 ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಬಂದಿದ್ದೀರಾ. ಇಲ್ಲಿ ಗೆಲ್ಲುವುದಲ್ಲದೆ ರಾಜ್ಯ ಮಟ್ಟದಲ್ಲಿ ಗೆದ್ದು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಕ್ರೀಡಾಪಟುಗಳಿಗೆ ಕರೆ ನೀಡಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಲಬುರಗಿ ತಹಶೀಲ್ದಾರ ಪ್ರಕಾಶ ಕುದರಿ ಮಾತನಾಡಿ, ಒಬ್ಬ ವ್ಯಕ್ತಿಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಬಹು ಮುಖ್ಯವಾಗಿದೆ. ಜೀವನದಲ್ಲಿ ಬರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುವಲ್ಲಿ ಕ್ರೀಡೆ ಸಹಕಾರಿಯಾಗುತ್ತದೆ. ಕ್ರೀಡಾ ಮನೋಭಾವನೆಯಿಂದ ಆಟವಾಡಬೇಕು. ಗೆಲವು-ಸೋಲಿನಿಂದ ಯಾವುದೇ ವೈಷಮ್ಯ ಇಟ್ಟುಕೊಳ್ಳಬಾರದು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿಯನ್ನು ಡಾ.ಗಿರೀಶ್ ಡಿ. ಬದೋಲೆ ಸ್ವೀಕರಿಸಿದರು. ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞೆ ಬೋಧಿಸಲಾಯಿತು.

ದೈಹಿಕ ಶಿಕ್ಷಣಾಧಿಕಾರಿ ಎಂ.ಜಿ.ಬಿರಾದಾರ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್-1 ಭೋಜನಗೌಡ ಪಾಟೀಲ್ ಮತ್ತು ಎಲ್ಲಾ ತಾಲ್ಲೂಕಿನ ದೈಹಿಕ ಶಿಕ್ಷಕರು, ತರಬೇತಿದಾರರು, ಕ್ರೀಡಾಪಟುಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಮುಜಮ್ಮಿಲ್ ಆರ್. ಕೆಂಭಾವಿ ನಿರೂಪಿಸಿ, ವಂದಿಸಿದರು. ಕ್ರೀಡಾಕೂಟದಲ್ಲಿ ಖೋ-ಖೋ, ಕಬ್ಬಡಿ, ವಾಲಿಬಾಲ್, ಥ್ರೋಬಾಲ್, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳು ಜರುಗಲಿವೆ.

LEAVE A REPLY

Please enter your comment!
Please enter your name here