ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಗ್ರಂಥಾಲಯ ಆರಂಭ

0
46

ಮಡಿಕೇರಿ ಅ.07 :-ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಗ್ರಂಥಾಲಯ ಮತ್ತು ಪತ್ರಾಗಾರ ವಿಭಾಗಕ್ಕೆ ಇಂದಿರಾ ದೇವಿಪ್ರಸಾದ್ ಅವರು ಶುಕ್ರವಾರ ಚಾಲನೆ ನೀಡಿದರು.
ನಗರದ ಕಾಫಿಕೃಪ ಕಟ್ಟಡದಲ್ಲಿರುವ ಅಕಾಡೆಮಿ ಕಚೇರಿಯಲ್ಲಿ ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಇಂದಿರಾ ದೇವಿಪ್ರಸಾದ್ ಅವರು ಅರೆಭಾಷೆ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದ ಎನ್.ಎಸ್.ದೇವಿಪ್ರಸಾದ್ ಅವರು ಸಂಪಾಜೆಯ ಮನೆಯಲ್ಲಿದ್ದ ಅರೆಭಾಷೆ ಹಾಗೂ ಇತರೆ ಸಂಶೋದನಾ ದಾಖಲೆ ಪುಸ್ತಕಗಳನ್ನು ಅಕಾಡೆಮಿಗೆ ನೀಡುವಂತೆ ತಿಳಿಸಿದ್ದರು. ಅದರಂತೆ ಅಕಾಡೆಮಿಗೆ 1400 ಅತ್ಯಮೂಲ್ಯ ಪುಸ್ತಕ ಭಂಡಾರವನ್ನು ದಾನವಾಗಿ ನೀಡಲಾಗಿದೆ ಎಂದು ತಿಳಿಸಿದರು.
ಅಕಾಡೆಮಿಗೆ ನೀಡಲಾಗಿರುವ ಪುಸ್ತಕಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು. ಅರೆಭಾಷೆ ಸಾಹಿತ್ಯ, ಸಂಸ್ಕøತಿ, ಕಲೆ ಹೀಗೆ ಹಲವು ರೀತಿಯ ಪುಸ್ತಕಗಳು ಇದ್ದು, ಇದರ ಮಾಹಿತಿ ಪಡೆಯುವಂತಾಗಬೇಕು ಎಂದು ಅವರು ಹೇಳಿದರು.

ಅರೆಭಾಷೆ ಅಕಾಡೆಮಿ ಮೂಲಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯವನ್ನು ಮತ್ತಷ್ಟು ಮೇಲೆ ತರಲು ಎಲ್ಲರೂ ಶ್ರಮಿಸಬೇಕು. ಎನ್.ಎಸ್.ದೇವಿ ಪ್ರಸಾದ್ ಅವರು ಸ್ಥಾಪಕ ಅಧ್ಯಕ್ಷರಾಗಿ ಭದ್ರ ಬುನಾದಿ ಹಾಕಿದ್ದಾರೆ. ಆ ನಿಟ್ಟಿನಲ್ಲಿ ಈಗಿನ ಅಧ್ಯಕ್ಷರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಮಾತನಾಡಿ ಅಕಾಡೆಮಿ ಗ್ರಂಥಾಲಯದಲ್ಲಿ 2 ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದು, ಇದನ್ನು ಸಂಶೋಧಕರು ಇತರರು ಬಳಸಿಕೊಳ್ಳುವಂತಾಗಬೇಕು ಎಂದರು.
ಅಕಾಡೆಮಿಯಲ್ಲಿ ಉತ್ತಮ ಗ್ರಂಥಾಲಯ ನಿರ್ಮಿಸಬೇಕು ಎಂದು ಬಹಳ ಹಿಂದಿನಿಂದಲೂ ಯೋಚಿಸಲಾಗಿತ್ತು. ಆ ನಿಟ್ಟಿನಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಗ್ರಂಥಾಲಯದ ಸಂಗ್ರಹಾಲಯದಲ್ಲಿ ಸಾಮಾನ್ಯ ಪುಸ್ತಕಗಳು, ಪರಾಮರ್ಶನ ವಿಭಾಗ, ಪತ್ರಾಗಾರ ವಿಭಾಗ ಎಂಬ ಮೂರು ವಿಭಾಗಗಳನ್ನು ಮಾಡಲಾಗಿದೆ. ಸಾಮಾನ್ಯ ವಿಭಾಗದಲ್ಲಿ ಜಾನಪದ, ಭೂತಾರಾದನೆ, ಪಾಡ್ದನ, ವಿವಿಧ ಬಾಷೆಗಳ ಚರಿತ್ರೆ, ನಿಘಂಟು ವ್ಯಾಕರಣಗಳು, ಯಕ್ಷಗಾನ, ನಾಟಕ, ಕವನ, ಕನ್ನಡ, ಕೊಡವ, ತುಳು, ಅರೆಭಾಷೆಯ ಚರಿತ್ರೆ ಮತ್ತು ವಿವಿಧ ವಿಭಾಗದ ಪುಸ್ತಕಗಳು, ಆತ್ಮಕಥನ, ಪ್ರವಾಸ ಕಥನ, ಅಭಿನಂದನ ಗ್ರಂಥ, ಸಮಗ್ರ ಗ್ರಂಥಗಳು, ದೇಶ ವಿದೇಶದ ಚರಿತ್ರೆ, ಭಾರತ, ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ, ವಿವಿಧ ಕ್ಷೇತ್ರಗಳ ಪುಸ್ತಕಗಳು ಗ್ರಂಥಾಯದಲ್ಲಿದೆ ಎಂದರು.

ಪರಾಮರ್ಶನ ವಿಭಾಗದಲ್ಲಿ ವಿಶ್ವಕೋಶಗಳು, ಜಾನಪದ ವಿಶ್ವಕೋಶಗಳು, ನಿಘಂಟುಗಳು, ಸಮಗ್ರ ಗ್ರಂಥಗಳು ಮುಂತಾದ ವಿಭಾಗಗಳಿದ್ದು ಪತ್ರಾಗಾರ ವಿಭಾಗದಲ್ಲಿ ಅಕಾಡೆಮಿ ಪ್ರಕಟಣೆಗಳು, ಅಕಾಡೆಮಿ ಫೆಲೋಷಿಪ್ ನೀಡಿದ ಪ್ರಬಂಧಗಳು, ನೆರಳಚ್ಚು ಮಾಡಿದ ಹಳೆ ಪುಸ್ತಕಗಳು, ಪ್ರಕಟಣೆ ಒಳಗೊಂಡ ಪುಸ್ತಕಗಳ ಮೂಲ ಪ್ರತಿಗಳು, ಸಂಘ ಸಂಸ್ಥೆಗಳ, ಧಾರ್ಮಿಕ ಕ್ಷೇತ್ರಗಳ ಸ್ಮರಣ ಸಂಚಿಕೆಗಳು, ಅಕಾಡೆಮಿ ತ್ರೈಮಾಸಿಕ ಪತ್ರಿಕೆಗಳು ಫೋಟೋಗಳು, ಸಿ.ಡಿ. ಮುಂತಾದವು ಒಳಗೊಂಡಿದೆ ಎಂದರು.

ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಕೆ.ಸಿ.ದಯಾನಂದ, ಪುರುಷೋತ್ತಮ ಕಿರ್ಲಾಯ, ಕುಸುಮಾಧರ, ಕಿರಣ್ ಕುಂಬಳಚೇರಿ, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇತರರು ಇದ್ದರು.

LEAVE A REPLY

Please enter your comment!
Please enter your name here