ಬಂತು ದೀಪಾವಳಿ ಬೆಳಕು

0
61

ದೀಪಾವಳಿ ಹಬ್ಬದ ಹಾರ್ದಿಕ ಶುಭ ಹಾರೈಕೆಗಳು. ಬದುಕಿನಲ್ಲಿ ದೀಪ ಪ್ರೀತಿಯ ಸಂಕೇತ. ಜ್ಞಾನದ ಸಂಕೇತ. ಪ್ರೀತಿಯನ್ನು ಹಂಚಿಕೊಂಡು ಇಡೀ ಬಾಳೆಂಬ ದೇಗುಲವನ್ನು, ವಿಶ್ವವನ್ನು, ಪರಮಾತ್ಮನಲ್ಲಿ ಒಂದಾಗಿ ಕಾಣುವ ದಿವ್ಯ ಸಂಕೇತ.

ನಾವು ದಿನ ನಿತ್ಯ ಹೇಳುವ ಪ್ರಾರ್ಥನೆ “ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವೆಂಬ ಭಯದಿಂದಾಚೆಗಿನ ಅಮರತ್ವದ, ನಿತ್ಯನೂತನ ಸಂತಸದ ಬೆಳಕೆಂಬ ಪ್ರೇಮಮಯ ಜಗತ್ತನ್ನು ಹೊಂದುವುದಕ್ಕಾಗಿಯೇ”.

ಈ ಲೋಕ ನಮ್ಮಲ್ಲಿ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ಅಪೇಕ್ಷಿಸುವುದಿಲ್ಲ. ಭಗವದ್ಗೀತೆಯಲ್ಲಿ ಪರಮಾತ್ಮನ ನುಡಿ ಇಂತಿದೆ: “ಯಾರು ನನ್ನನ್ನು ಪ್ರೀತಿಯಿಂದ ಅನುಭಾವಿಸುತ್ತಾರೋ, ಅವರಿಗೆ ನನ್ನನ್ನೇ ಹೊಂದುವ ಬುದ್ಧಿಯೋಗವನ್ನು ನೀಡುತ್ತೇನೆ. ಅವರ ಪ್ರೀತಿ ನನ್ನಲ್ಲಿ ಅವರ ಬಗ್ಗೆ ಕರುಣೆಯನ್ನು ಸ್ಪುರಿಸುತ್ತದೆ. ಆ ಕಾರುಣ್ಯ ಮಾತ್ರದಿಂದಲೇ ಅವರ ಅಜ್ಞಾನವನ್ನೆಲ್ಲ ತೊಡೆದುಹಾಕುತ್ತೇನೆ. ಆ ನನ್ನ ಭಕ್ತರು ಅಹಂ ಎಂಬ ಸಂಕುಚಿತತೆಯಿಂದ ಹೊರಬಂದು ಜ್ಞಾನದೀಪಗಳಾಗಿ ಪ್ರಕಾಶಿಸುತ್ತಾರೆ”

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಭಗವಾನರು ತಮ್ಮ ಗೆಳೆಯನಾದ ಅರ್ಜುನನು ಭಕ್ತಿ ಪ್ರೀತಿಗಳಿಂದ ಶರಣಾದಾಗ ವಿಶ್ವರೂಪ ದರ್ಶನ ನೀಡಿದರು. ಆ ವಿಶ್ವರೂಪವಾದರೋ ಎಂತಹದು. “ಅನೇಕ ಬಾಯಿ, ಅನೇಕ ನಯನಗಳ ಅದ್ಭುತ ದರ್ಶನವದು. ಅನೇಕ ದಿವ್ಯಾಭರಣ, ದಿವ್ಯ ರೀತಿಯ ಅನೇಕ ಅದ್ಭುತ ಆಯುಧಗಳು. ದಿವ್ಯಾ ಮಾಲಾಂಭರಧರ, ದಿವ್ಯ ಗಂಧಾನುಲೇಪಿತ, ಸರ್ವ ಆಶ್ಚರ್ಯಗಳ, ಅನಂತ ವಿಶ್ವವ್ಯಾಪಿ ವಿಶ್ವತೋಮುಖವಾಗಿ ಮೂಡಿ ನಿಂತ ದಿವ್ಯ ದೇವದೇವ”.

ಸಂಜಯ ಮಹಾನುಭಾವನ ಅನುಭಾವದ ವರ್ಣನೆಯೋ ಹೀಗಿದೆ. “ವಿಶ್ವದಲ್ಲೆಲ್ಲ ಸಹಸ್ರ ಸಹಸ್ರಾನು ಸಂಖ್ಯೆಯಲ್ಲಿ ಸೂರ್ಯರುಗಳು ಉದ್ಭವಿಸಿ ಬೆಳಗಿದಂತೆ ಆ ಮಹಾಮಹಿಮ ಬೆಳಗುತ್ತಿದ್ದ. ಹೀಗೆ ಎಲ್ಲವೂ ಒಂದೇ ಆಗಿ ಬೆಳಗುತ್ತಿದ್ದ ದೇವದೇವನೆಂಬ ಜಗತ್ಸರ್ವವವನ್ನೂ ಶ್ರೀಕೃಷ್ಣನಲ್ಲಿ ಪಾಂಡವ ಅರ್ಜುನನು ದರ್ಶನ ಮಾಡಿದ”.

ಹೀಗೆ ದೀಪದಲ್ಲೇ ಬೆಳಕು, ಪ್ರೀತಿ, ಪ್ರೇಮ, ಭಕ್ತಿ, ಜಗತ್ತು, ಪರಮಾತ್ಮ ಎಲ್ಲವೂ ಅಡಕವಾಗಿದೆ.

ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನ ಸಂಪದಾಃ
ಶತ್ರು ಬುದ್ಧಿ ವಿನಾಶಾಯ
ದೀಪಜ್ಯೋತಿ ನಮೋಸ್ತುತೆ

ಲೋಕಕಲ್ಯಾಣವನ್ನೂ, ಆರೋಗ್ಯ ಭಾಗ್ಯವನ್ನೂ, ಅಗತ್ಯವಾದ ಸೌಕರ್ಯ ಸಂಪದಗಳನ್ನೂ ದಯಪಾಲಿಸಿ ಶತ್ರುಬುದ್ಧಿಯನ್ನು ಹೋಗಲಾಡಿಸುವ ದೀಪಜ್ಯೋತಿಗೆ ನಾವು ನಮಿಸೋಣ.

ದೀಪಜ್ಯೋತಿ ಪರಬ್ರಹ್ಮ
ದೀಪಜ್ಯೋತಿ ಜನಾರ್ಧನ
ದೀಪೋ ಮೆ ಹರ ತು ಪಾಪಂ
ಸಂಧ್ಯಾ ದೀಪ ನಮೋಸ್ತುತೆ

ಸಮಸ್ತ ಸೃಷ್ಟಿಯನ್ನು ಪೊರೆಯುವ ಪರಬ್ರಹ್ಮ ಸ್ವರೂಪಿ ಜನಾರ್ಧನನಿಗೆ ದೀಪರೂಪದಲ್ಲಿ ನಮ್ಮ ನಮನಗಳನ್ನು ಸಲ್ಲಿಸಿ, ನಾವು ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಂದ ಉಂಟಾದ ಕ್ಲೇಶಗಳಿಂದ ನಮ್ಮನ್ನು ಮುಕ್ತರಾಗಿಸಿ, ಸರಿದಾರಿಯಲ್ಲಿ ಎಮ್ಮ ನಡೆಸಿ ಪೊರೆಯೆಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸೋಣ.

ನಮ್ಮ ಎಲ್ಲ ಬಂಧುಗಳಿಗೂ ದೀಪಾವಳಿ ಹಬ್ಬದ ಶುಭ ಹಾರೈಕೆಗಳು. ನಾವು ಜೀವತಳೆದಿರುವ ಈ ವಿಶ್ವ ಚಿರಕಾಲ ಜ್ವಾಜ್ಯಲ್ಯಮಯವಾಗಿ ಪ್ರಶಾಂತಿಯಿಂದ ಕಂಗೊಳಿಸುತ್ತಿರಲಿ ಎಂದು ಆಶಿಸೋಣ.

“ದೀಪ ದೀವಳಿಗೆ ಜೋಳಿಗೆ ತುಂಬಾ ಹೋಳಿಗೆ ತುಂಬಾ” ಎಂಬುದು ನಮ್ಮ ಹಿರಿಯರ ಮಾತು. ದೀಪವೆಂಬ ಯತೇಚ್ಚ ಜ್ಞಾನದೊಂದಿಗೆ ನಮ್ಮೆಲ್ಲರ ಬದುಕು ಸವಿ ಹೋಳಿಗೆಯಾಗಿರಲಿ.

ಕೃಪೆ: ಕನ್ನಡ ಸಂಪದ

LEAVE A REPLY

Please enter your comment!
Please enter your name here