ನ.7 ರಿಂದ ಡಿ.7 ರವರೆಗೆ 3ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ, ಜಿಲ್ಲೆಯ 1 ಲಕ್ಷ 62 ಸಾವಿರ ಜಾನುವಾರುಗಳಿಗೆ ಲಸಿಕೆಯ ಗುರಿ -ಅಪರ ಜಿಲ್ಲಾಧಿಕಾರಿ ವಿಜಯಾ ಈ ರವಿಕುಮಾರ್

0
124

ಬೆಂಗಳೂರು ಗ್ರಾಮಾಂತರ: ನ.04:
ಜಿಲ್ಲೆಯಲ್ಲಿರುವ ಸುಮಾರು 1,62,980 ಎಲ್ಲಾ ಜಾನುವಾರುಗಳಿಗೆ ನವೆಂಬರ್ 07 ರಿಂದ ಡಿಸೆಂಬರ್ 07 ರವರೆಗೆ 3ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಬಮೂಲ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಒಟ್ಟು 51 ತಂಡಗಳಲ್ಲಿ 189 ಲಸಿಕೆದಾರರು ಪ್ರತಿದಿನ ಬೆಳಿಗ್ಗೆ 6.30 ಯಿಂದ ಬೆಳಿಗ್ಗೆ 11.00 ಗಂಟೆಯವರೆಗೆ ನಿಗದಿತ ವೇಳಾಪಟ್ಟಿಯಂತೆ ಗ್ರಾಮಗಳಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಈ ರವಿಕುಮಾರ ಹೇಳಿದರು.

ಜಿಲ್ಲೆಯಲ್ಲಿ 3ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಪ್ರತಿ ಗ್ರಾಮವಾರು ಮೈಕ್ರೋಪ್ಲಾನ್ ಮಾಡಲಾಗಿದ್ದು, ಅದರನ್ವಯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು, ಈ ಕುರಿತು ರೈತರಿಗೆ ಮನವರಿಕೆ ಮಾಡಿ ಕೊಡುವ ಸಲುವಾಗಿ ಭಿತ್ತಿಪತ್ರ ಮತ್ತು ಕರಪತ್ರಗಳನ್ನು ಮುದ್ರಿಸಿ, ಜಿಲ್ಲೆಯ ಪ್ರತಿ ಪಶುವೈದ್ಯಕೀಯ ಸಂಸ್ಥೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಆವರಣದಲ್ಲಿ ಪ್ರದರ್ಶಿಸುವ ಜೊತೆಗೆ,ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 1,68,150 ಡೋಸ್ ಕಾಲುಬಾಯಿ ರೋಗ ಲಸಿಕೆ ಹಾಗೂ 1,46,000 ಸಿರಿಂಜ್‌ಗಳು ಸರಬರಾಜಾಗಿವೆ. ಬಮೂಲ್ ವತಿಯಿಂದ ಲಸಿಕಾ ಕಾರ್ಯಕ್ರಮಕ್ಕೆ ಒಟ್ಟು 36 ವಾಹನಗಳು ಹಾಗೂ 40 ಲಸಿಕೆದಾರರನ್ನು ಒದಗಿಸಲಾಗುತ್ತಿದೆ. ಪ್ರತಿ ರಾಸಿಗೆ 1 ರಂತೆ ಸಿರಿಂಜ್ ಮತ್ತು ನೀಡಲ್‌ಗಳನ್ನು ಬಳಸಿ ಲಸಿಕೆ ಹಾಕಲಾಗುವುದು. ಜಿಲ್ಲೆಯ ರೈತ ಬಾಂಧವರು ತಮ್ಮ 03 ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ.ಜಿ.ಎಂ. ನಾಗರಾಜ, ಆಡಳಿತ ಶಾಖೆಯ ಮುಖ್ಯಪಶುವೈದ್ಯಾಧಿಕಾರಿಗಳು ಡಾ. ನಾರಾಯಣಸ್ವಾಮಿ, ಡಾ.ಮಂಜುನಾಥ್ ಎಂ.ಕೆ, ಡಾ. ಸಿದ್ದಪ್ಪ ಹೆಚ್, ಡಾ.ವಿಶ್ವನಾಥ್ ಎಸ್, ಡಾ. ಅನಿಲ್ ಕುಮಾರ್, ಬಮೂಲ್‌ನ ಉಪವ್ಯವಸ್ಥಾಪಕರಾದ ಡಾ. ಗೋಪಾಲ್‌ಗೌಡ, ನಾಗರಾಜು, ರಾಜೇಶ್, ಸಂತೋಷ್ ಸೇರಿದಂತೆ ಜಿಲ್ಲೆತ ನಗರಸಭೆ ಹಾಗೂ ಪುರಸಭೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here