ಕೊಟ್ಟೂರೇಶ್ವರ ಕಾಲೇಜ್ ನ 55 ನೇ ವರ್ಷದ ಸುವರ್ಣ ಮಹೋತ್ಸವ

0
181

ಕೊಟ್ಟೂರು: ಪಟ್ಟಣ ಮತ್ತು ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಿಂದ ಧಾವಿಸಿದ ವಿದ್ಯಾರ್ಥಿಗಳಿಗೆ ಜ್ಞಾನದ ದೀಪವನ್ನು ತುಂಬಿ ಎಲ್ಲೆಂದರಲ್ಲಿ ತನ್ನ ಹೆಸರನ್ನು ಅಚ್ಚಳಿಯಾಗಿ ಉಳಿಸಿಕೊಂಡ ಕೊಟ್ಟೂರೇಶ್ವರ ಮಹಾವಿದ್ಯಾಲಯಕ್ಕೆ 54 ವಸಂತಗಳು ಪೂರೈಸಿ 55ನೇ ವಸಂತಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ 17.01.2023 ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಕಾಲೇಜಿನ ಸ್ಥಾಪನೆ:
31/7/1967 ರಂದು ಕೊಟ್ಟೂರೇಶ್ವರ ಕಾಲೇಜ್ ವಿದ್ಯುಕ್ತವಾಗಿ ಆರಂಭವಾದ ದಿನ. ಮೈಸೂರು ರಾಜ್ಯದ ಅಂದಿನ ರಾಜ್ಯಪಾಲರಾಗಿದ್ದ ಜಿ. ಎಸ್ ಪಾಠಕ್ ಅವರ ಅಮೃತ ಹಸ್ತದಿಂದ ಕಾಲೇಜ್ ಉದ್ಘಾಟನೆಯಾಯಿತು.
ಅಂದಿನ ಸಮಯದಲ್ಲಿ ಜಿಲ್ಲೆಯ ಹಾಗೂ ತಾಲೂಕಿನಾದ್ಯಂತ ಸುಮಾರು ಆರು ಸಾವಿರ ಜನರು ಭಾಗವಹಿಸಿದ್ದರು. ಅಂದಿನ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅಲ್ಲಂ ಕರಿಬಸಪ್ಪನವರು ವಹಿಸಿದ್ದರು. ತಿಮ್ಮಣ್ಣನವರು ಸ್ವಾಗತಿಸಿದರು. ಸಮಾರಂಭದ ಸನ್ಮಾನ್ಯ ಅತಿಥಿಗಳಾಗಿ ಧಾವಿಸಿದ ಜಿ.ಎಸ್ ಪಾಠಕ್ ರವರು ಕೊಟ್ಟೂರಿನಂತಹ ಗ್ರಾಮೀಣ ಪ್ರದೇಶ ಒಂದರಲ್ಲಿ ಉನ್ನತ ಶಿಕ್ಷಣಕ್ಕಾಗಿ ಮಹಾ ವಿದ್ಯಾಲಯವೊಂದನ್ನು ಸ್ಥಾಪಿಸಿದ ಸ್ಥಳೀಯ ಮುಖಂಡರ ಹಾಗೂ ವಿವಿ ಸಂಘದ ಪದಾಧಿಕಾರಿಗಳನ್ನು ಕೊಂಡಾಡಿದ್ದರು.

ಅಂದು ಕಾಲೇಜಿನ ಸಂದರ್ಶಕರ ಪುಸ್ತಕದಲ್ಲಿ ದಾಖಲಾಗಿರುವಂತೆ ಅವರ ಮಾತಿನಲ್ಲಿ ಹೇಳುವುದಾದರೆ “ಗ್ರಾಮೀಣ ಪ್ರದೇಶಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸುವ ಸಂಘ ಹಾಗೂ ಸ್ಥಳೀಯ ಮುಖಂಡರ ದೂರದರ್ಶಿತ್ವವನ್ನು ಮನಸಾರೆ ಹೊಗಳುತ್ತೇನೆ ಹಾಗೂ ಕಾಲೇಜು ಮತ್ತು ಸಂಘಕ್ಕೆ ಉತ್ತರೋತ್ತರ ಅಭಿವೃದ್ಧಿ ಹೊಂದಲೇ ಬೇಕೆಂದು ಹಾರೈಸುತ್ತಾನೆ ಎಂದು ಶುಭ ಕೋರಿದ್ದರು.
ಅಂದಿನ ಪ್ರಾಚಾರ್ಯರು: ಕಾಲೇಜ್ ಸ್ಥಾಪನೆಯಾದ ದಿನದಲ್ಲಿ ಕಾಲೇಜಿನ ಪ್ರಾಚಾರ್ಯರಾಗಿ ಸಂಗನಬಸಯ್ಯ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ.ನಂಜಪ್ಪ ರವರನ್ನು ಆಯ್ಕೆ ಮಾಡಲಾಗಿತ್ತು.

ಕಾಲೇಜ ಸ್ಥಾಪನೆಗೆ ಶ್ರಮಿಸಿದ ವ್ಯಕ್ತಿಗಳು: ಶ್ರೀಮದ್ ಉಜ್ಜೈನಿ ಸದ್ಧರ್ಮ ಸಿಂಹಾಸನ ಚರ ಪಟ್ಟಾದ್ಯಕ್ಷರಾದ ಶ್ರೀ ಶ್ರೀ ಶ್ರೀ ಶಿವಪ್ರಕಾಶ್ ಸ್ವಾಮಿಗಳು, ಕೊಟ್ಟೂರಿನ ಗಣ್ಯರು ಹಾಗೂ ಹಿರಿಯರಾದ ಎಂ. ಎಂ. ಜೆ ಸದ್ಯೋಜಾತಪ್ಪ , ಬಿ ಎಸ್ ವೀರಭದ್ರಪ್ಪ, ನಂಜಪ್ಪ, ಗೋರ್ಲಿ ಶರಣಪ್ಪ, ಟಿ.ಎಸ್ ಶಿವ ನಾಗಪ್ಪ, ಜೆ ಎಂ ಸಿದ್ದರಾಮಯ್ಯ, ವಿ.ಜಿ ವೀರಣ್ಣ ಮುಂತಾದವರು ಕಾಲೇಜ್ ಸ್ಥಾಪನೆ ಮಾಡಬೇಕೆಂದು ಪ್ರಯತ್ನವನ್ನು ಮಾಡಿದ್ದರು.
ಕಾಲೇಜಿನ ಅಭಿವೃದ್ಧಿ: ಆಗಿನ ಕೂಡ್ಲಿಗಿ ತಾಲೂಕಿನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಟಿ. ಸಿದ್ದನಗೌಡರ ಸಹಾಯವನ್ನು ಮರೆಯಲು ಸಾಧ್ಯವಿಲ್ಲ. ಆಗಿನ ಕಾಲದಲ್ಲಿ 50,000 ಗಳ ಬೃಹತ್ ಕಾಣಿಕೆಯನ್ನು ತಾಲೂಕು ಅಭಿವೃದ್ಧಿ ಮಂಡಳಿಯಿಂದ ನೀಡಿದ್ದರು.

ಕೊಠಡಿಗಳು:
ಕಾಲೇಜ್ ಸ್ಥಾಪನೆ ಆದಾಗ ಆರಂಭದಲ್ಲಿ ನಾಲ್ಕು ಕೊಠಡಿಗಳಲ್ಲಿ ಪಾಠ ಪ್ರವಚನವನ್ನು ಆರಂಭಿಸಲಾಯಿತು. ಕಾಲೇಜು ಪಕ್ಕದಲ್ಲಿರುವ ಬಿ ಎಫ್ ಹಾಸ್ಟೆಲ್ನ ಪಕ್ಕದಲ್ಲಿ ಮೂರು ಕೊಠಡಿಗಳಲ್ಲಿ ಆಫೀಸು ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಕೊಠಡಿಗಳನ್ನಾಗಿ ಉಪಯೋಗಿಸಲಾಯಿತು. ಕಟ್ಟಡದ ನಿರ್ಮಾಣದ ಹಂತದಲ್ಲಿ ಸಂಘದ ಅಂದಿನ ಕಾರ್ಯದರ್ಶಿಗಳಾಗಿದ್ದ ತಿಪ್ಪಣ್ಣ ಅವರ ಸೇವೆ ಸ್ಮರಿಸಲೇಬೇಕು. ಇವರ ಜೊತೆಗೆ ಶ್ರೀ ಜಿ ವೀರಣ್ಣನವರು ಕಟ್ಟಡ ಕಾರ್ಯದಲ್ಲಿ ಕಂಕಣ ಬದ್ಧರಾಗಿ ನಿಂತು ಮೇಲ್ವಿಚಾರಣೆ ಮಾಡಿರುವುದನ್ನು ಮರೆಯುವಂತಿಲ್ಲ.
ವಿದ್ಯಾರ್ಥಿಗಳ ಸಂಖ್ಯೆ: ಕಾಲೇಜ್ ಪ್ರಾರಂಭವಾದ ಹಂತದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 150, ಬೋಧಕ ಮತ್ತು ಬೋಧಕೇತರು ಸೇರಿ 15 ಜನರಿದ್ದರು. ಕಾಲೇಜ್ ನ ಆರಂಭದಲ್ಲಿ ಕಲಾ, ವಿಜ್ಞಾನ ವಿಷಯಗಳನ್ನು ಮಾತ್ರ ಹೊಂದಿತ್ತು.
ಬಳ್ಳಾರಿ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ರಾಸಾಯನಿಕ ಶಾಸ್ತ್ರ ಮತ್ತು ಕನ್ನಡ ಪ್ರಧಾನ ವಿಷಯವನ್ನಾಗಿ ಬೋಧಿಸಲು ವ್ಯವಸ್ಥೆ ಮಾಡಿದ ಹಿರಿಮೆ ಈ ಮಹಾವಿದ್ಯಾಲಯಕ್ಕೆ ಇದೆ . ನಂತರ 1974ರಲ್ಲಿ ವಾಣಿಜ್ಯ ವಿಭಾಗ ಆರಂಭವಾಯಿತು

ಕಾಲೇಜ್ ವರ್ಗಾವಣೆ:
1967 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತದಲ್ಲಿ ಪ್ರಾರಂಭವಾದ ಕಾಲೇಜ್ 1980 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡಿತು. ನಂತರ 2010ರಲ್ಲಿ ಸ್ಥಾಪನೆಯಾದ ವಿಜಯನಗರ ಶ್ರೀ ಕೃಷ್ಣ ವಿಶ್ವವಿದ್ಯಾಲಯ ಬಳ್ಳಾರಿಗೆ ಸೇರಿತು.
ಸುವರ್ಣ ಮಹೋತ್ಸವ:
ಜನವರಿ 18 ಮತ್ತು 19ರಂದು ಕೊಟ್ಟೂರೇಶ್ವರ ಕಾಲೇಜಿನ ಸುವರ್ಣ ಸಂಭ್ರಮ ಆಚರಣೆಯನ್ನು ನೆರೆವೇರಿಸಲಾಗುತ್ತಿದ್ದು, ಈ ಸಂಭ್ರಮಾಚರಣೆಯ ಉದ್ಘಾಟನೆಯ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀಮದ್ ಉಜ್ಜೈನಿ ಸಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದಾರೆ. ಸಿದ್ಧಲಿಂಗ ಶಿವಾಚಾರ್ಯ ಚಾನುಕೋಟಿ ಮಠ ಇವರ ಸಮ್ಮುಖದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಬಳ್ಳಾರಿಯ ಅಧ್ಯಕ್ಷರಾದ ಎಚ್.ಎಂ ಗುರುಸಿದ್ಧಸ್ವಾಮಿಯ ಅಧ್ಯಕ್ಷತೆಯಲ್ಲಿ ಹಾಗೂ ಮುಜರಾಯಿ ಮತ್ತು ವಕ್ಫ್ ಖಾತೆಯ ಸಚಿವರು ಹಾಗೂ ವಿಜಯನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆಯವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಕಾರ್ಯಕ್ರಮಗಳು:
ಜನಪದ ತಂಡಗಳ ಕಲಾ ಪ್ರದರ್ಶನ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಕಲಾ ಸಂಭ್ರಮ, ಸಂಗೀತ ರಸ ಸಂಜೆ, ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮ, ನೃತ್ಯ ವೈಭವ ಜಾದು ಪ್ರದರ್ಶನ ಇನ್ನು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here