ಆಗಸ್ಟ್ 28, 29 ರಂದು ಸಿಇಟಿ ಪರೀಕ್ಷೆ : ಜಿಲ್ಲೆಯಲ್ಲಿ 7176 ವಿದ್ಯಾರ್ಥಿಗಳು, 17 ಪರೀಕ್ಷಾ ಕೇಂದ್ರಗಳು.

0
96

ದಾವಣಗೆರೆ, ಆ.21:ಇದೇ ಆಗಸ್ಟ್ 28 ಹಾಗೂ 29 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)-2021 ನಡೆಯಲಿದೆ. ಜಿಲ್ಲೆಯ 7176 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಎಲ್ಲ 17 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಜ್ವರ ತಪಾಸಣೆ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.
ಶನಿವಾರ ಸಾಮಾನ್ಯ ಪರೀಕ್ಷೆ-2021 (ಸಿಇಟಿ) ಪರೀಕ್ಷೆ ಪೂರ್ವ ಸಿದ್ಧತೆ ಕುರಿತಂತೆ ರಾಜ್ಯದ ಎಲ್ಲ ಜಿಲ್ಲಾ ಎಡಿಸಿ ಹಾಗೂ ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ರಮ್ಯಾ ಅವರು ವಿಡಿಯೊ ಸಂವಾದ ನಡೆಸಿದ ಬಳಿಕ, ಅಧಿಕಾರಿಗಳೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಲು ಇಚ್ಛಿಸಿದಲ್ಲಿ ಕಡ್ಡಾಯವಾಗಿ ಆಯಾ ಜಿಲ್ಲಾ ಮತ್ತು ತಾಲ್ಲೂಕು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಪಾಸಿಟಿವ್ ಬಂದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ತೆರವುಗೊಳಿಸಬಾರದು. ಪಾಸಿಟಿವ್ ಬಂದ ವಿದ್ಯಾರ್ಥಿಗಳ ಕುರಿತು ವಿಶೇಷ ಗಮನಹರಿಸಬೇಕು. ಹಾಗೂ ಇಂತಹ ವಿದ್ಯಾರ್ಥಿಗಳ ಪ್ರವೇಶ ಪತ್ರಕ್ಕೆ ಸಹಿ ಹಾಕಬಾರದು. ಓಎಂಆರ್ ಹಾಗೂ ಪ್ರಶ್ನೆ ಪತ್ರಿಕೆಯಲ್ಲಿ ಮೊದಲೇ ಸಹಿ ಹಾಕಿ ನೀಡಬೇಕು. ನಂತರ ಓಎಂಆರ್ ಪತ್ರಿಕೆಯನ್ನು ನಿಗದಿತ ಪೆಟ್ಟಿಗೆಯಲ್ಲಿ ಹಾಕಲು ಸೂಚಿಸಬೇಕು.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನ್ ಬಳಸಿ ಜ್ವರ ತಪಾಸಣೆ ನಡೆಸಬೇಕು. ಶೇ.98 ಕ್ಕಿಂತ ಹೆಚ್ಚು ತಾಪಮಾನವಿದ್ದರೆ ಅಥವಾ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಕೆಮ್ಮು, ಶೀತದಂತಹ ಲಕ್ಷಣ ಕಂಡು ಬಂದಲ್ಲಿ ಅಂತಹವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಬೇಕು. ಪರೀಕ್ಷೆ ಮುಗಿದ ಬಳಿಕ ಈ ಕೊಠಡಿಗಳನ್ನು ಸ್ವಾನಿಟೈಸ್ ಮಾಡಿ ಕನಿಷ್ಟ 24 ಗಂಟೆಗಳ ಕಾಲ ಬಳಸದಂತೆ ನೋಡಿಕೊಳ್ಳಬೇಕು. ಸಿಇಟಿ ಪರೀಕ್ಷೆಗೆಂದು ಬರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ವಿದ್ಯಾರ್ಥಿಗಳ ಪ್ರವೇಶ ಪತ್ರವೇ ಮಾನದಂಡವಾಗಿದ್ದು, ಪೊಲೀಸರು ಈ ಕುರಿತು ಹೆಚ್ಚಿನ ಗಮನಹರಿಸಬೇಕು. ಪರೀಕ್ಷೆಗೂ ಎರಡು ಗಂಟೆ ಮುಂಚಿತವಾಗಿ ಪರೀಕ್ಷೆ ಕೇಂದ್ರಕ್ಕೆ ಬರಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದ್ದು, ಗುಂಪು ಗೂಡದಂತೆ ಎಚ್ಚರವಹಿಸಬೇಕು.
ಪರೀಕ್ಷೆ ನಡೆಯುವ ಎಲ್ಲಾ ಕೊಠಡಿಗಳನ್ನು ಪರೀಕ್ಷೆಯ ಹಿಂದಿನ ದಿನದಂದು ಹಾಗೂ ಪರೀಕ್ಷೆ ನಡೆದ ನಂತರ ಸ್ಯಾನಿಟೈಸರ್ ಮಾಡಿಸಬೇಕು. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಸರ್ಜಿಕಲ್ ಮಾಸ್ಕ್ ಹಾಗೂ ಎನ್95 ಮಾಸ್ಕ್ ಸೇರಿದಂತೆ ಕೈಗವಸು ಕಡ್ಡಾಯವಾಗಿ ಧರಿಸಿರಬೇಕು. ಮತ್ತು ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಪಡೆದಿರಬೇಕು. ಪರೀಕ್ಷೆ ಬರೆಯಲು ಬೇಕಾದ ಕೊಠಡಿಗಳಿಗಿಂತ ಹೆಚ್ಚುವರಿಯಾಗಿ ಒಂದು ವಿಶೇಷ ಕೊಠಡಿಯನ್ನು ಗುರುತಿಸಿ ಕಾಯ್ದಿರಿಸಬೇಕು. ಶೌಚಾಲಯಗಳಲ್ಲಿ ಲಿಕ್ವಿಡ್ ಸೋಪ್ ಇಡಬೇಕು. ಪರೀಕ್ಷಾ ಕೇಂದ್ರಗಳಿಗೆ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಬೇಕು.
ತಲಾ 24 ವಿದ್ಯಾರ್ಥಿಗಳಿಗೆ ಒಂದು ಕೊಠಡಿ ಇರಬೇಕು. ಒಂದು ಬೆಂಚಿಗೆ ಇಬ್ಬರಂತೆ ಒಟ್ಟು 12 ಬೆಂಚ್‍ಗಳನ್ನು ಒಂದು ಕೊಠಡಿಗೆ ನೀಡಬೇಕು. ವಿದ್ಯಾರ್ಥಿಗಳು ಊಟ, ಕುಡಿಯುವ ನೀರನ್ನು ಮನೆಯಿಂದಲೇ ತರಬೇಕು. ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಕೈಗೊಳ್ಳಬೇಕು. ಪರೀಕ್ಷಾ ಮೇಲ್ವಿಚಾರಕರಿಗೂ ಗುರುತಿನ ಚೀಟಿಯನ್ನು ನೀಡಬೇಕು.
ಕೋವಿಡ್ ಪಾಸಿಟಿವ್ ಅಥವಾ ಕೋವಿಡ್ ಲೈಕ್ ಇಲ್‍ನೆಸ್ ಇರುವ ವಿದ್ಯಾರ್ಥಿಗಳು ವೆಬ್‍ಸೈಟ್ ಮೂಲಕ ಸಿಇಟಿ ಪರೀಕ್ಷೆಗೆ ರಿಜಿಸ್ಟರ್ ಮಾಡಿಸಲು ಆದೇಶ ನೀಡಲಾಗಿದ್ದು, ನೊಂದಣಿ ಮಾಡಿಸಿದ ವಿದ್ಯಾರ್ಥಿಗಳ ಮಾಹಿತಿ ಆ.26 ರಂದು ಲಭ್ಯವಾಗುತ್ತದೆ, ಅಂತಹ ವಿದ್ಯಾರ್ಥಿಗಳ ಬಗೆಗೆ ವಿಶೇಷ ಕಾಳಜಿ ವಹಿಸಬೇಕು. ಅವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಕರೆದುಕೊಂಡು ಹೋಗಲು ಒಂದು ಆಂಬ್ಯುಲೆನ್ಸ್ ನಿಯೋಜನೆ ಮಾಡಬೇಕು ಎಂದು ತಿಳಿಸಿದರು.
ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿ ಠೇವಣಿ ಮಾಡಲು ಕ್ರಮವಹಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ವೀಕ್ಷಕರ ನೇಮಕಮಾಡಿ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕು. ಪೊಲೀಸ್ ಬಂದೊಬಸ್ತ್, ವೈದ್ಯಾಧಿಕಾರಿಗಳ ನೇಮಕ ಸೇರಿದಂತೆ ಎಲ್ಲ ಪೂರ್ವ ಸಿದ್ಧತೆಗಳನ್ನು ನಡೆಸಬೇಕು. ಪರೀಕ್ಷೆಯ ವಿವಿಧ ಜವಾಬ್ದಾರಿಗಳನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವೇಳಾಪಟ್ಟಿ : ಸಾಮಾನ್ಯ ಪ್ರವೇಶ ಪರೀಕ್ಷೆ ಎರಡು ದಿನ ನಡೆಯಲಿದ್ದು, ಆಗಸ್ಟ್ 28ರ ಶನಿವಾರ ಬೆಳಿಗ್ಗೆ 10-30 ರಿಂದ 11-30 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2-30 ರಿಂದ 3-50 ರವರೆಗೆ ಗಣಿತ. ಆಗಸ್ಟ್ 29ರ ಭಾನುವಾರ ಬೆಳಿಗ್ಗೆ 10-30 ರಿಂದ 11-30 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2-30 ರಿಂದ 3-50 ರವರೆಗೆ ರಸಾಯನ ಶಾಸ್ತ್ರ ವಿಷಯಗಳ ಕುರಿತು ತಲಾ 60 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಬೀದರ್, ವಿಜಯಪುರ, ಬೆಳಗಾವಿ, ಬಳ್ಳಾರಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಯಲಿದ್ದು, ಆಗಸ್ಟ್ 30 ರ ಸೋಮವಾರ ಬೆಳಿಗ್ಗೆ 11-30 ರಿಂದ ಮಧ್ಯಾಹ್ನ 12.30 ರವರೆಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ತಲಾ 50 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಡಿಡಿಪಿಯು ಶಿವರಾಜು ಸೇರಿದಂತೆ ಪ್ರಾಂಶುಪಾಲರು, ಕೊಠಡಿ ವೀಕ್ಷಕರು ಇದ್ದರು.

LEAVE A REPLY

Please enter your comment!
Please enter your name here