ಅತ್ಯುತ್ತಮ ತಂಡದ ಜೊತೆ ಕೆಲಸ ನಿರ್ವಹಿಸಿದ ಹೆಮ್ಮೆ ಇದೆ: ಡಾ.ಹೆಚ್ ಎನ್ ಗೋಪಾಲಕೃಷ್ಣ

0
199

ಮಂಡ್ಯ ಜಿಲ್ಲೆಯಲ್ಲಿ 8 ತಿಂಗಳ ಕಾಲ ಕೆಲಸ ನಿರ್ವಹಿಸಿದ್ದು, ಉತ್ತಮವಾದ ಆಡಳಿತ ನೀಡಲು ಹಾಗೂ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ತೊಂದರೆ ಇಲ್ಲದೆ ಕೆಲಸ ನಿರ್ವಹಿಸಲು ಜಿಲ್ಲೆಯ ಅತ್ಯುತ್ತಮ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರಣ. ಜಿಲ್ಲೆಯಲ್ಲಿ ಅತ್ಯುತ್ತಮ ತಂಡದ ಜತೆಗೆ ಕೆಲಸ ನಿರ್ವಹಿಸಿದ ಹೆಮ್ಮೆ ನನಗೆ ಇದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ವತಿಯಿಂದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬಿಳ್ಕೋಡುಗೆ ಸಮಾರಂಭ ಹಾಗೂ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಎಲ್ಲಾ ಸಂದರ್ಭದಲ್ಲೂ ಸಂಪೂರ್ಣ ಸಹಕಾರ ನೀಡಿದ್ದೀರಿ. ತಾವು ನೀಡಿದ ಸಹಕಾರದಿಂದಾಗಿ ಶೋಷಿತರು, ಮಹಿಳೆಯರು, ಬಡವರ‌ ಅಭಿವೃದ್ಧಿಗಾಗಿ ಶ್ರಮಿಸಲು ಅವಕಾಶ ಮಾಡಿದ್ದೀರಿ ಇದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು‌.

ತಾಲ್ಲೂಕು ಹಾಗೂ ಕೆಳಮಟ್ಟದ ಸರ್ಕಾರಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಯನ್ನು ಕೆಳಮಟ್ಟದಲ್ಲೇ ಪರಿಹರಿಸಬೇಕು. ಇದರಿಂದ ಜಿಲ್ಲಾಧಿಕಾರಿ ಕಛೇರಿ ಹಾಗೂ ತಾಲ್ಲೂಕು ಕಛೇರಿಗೆ ಸಾರ್ವಜನಿಕರು ಅಲೆಯುವುದು ತಪ್ಪುತ್ತದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು‌.

ಯಾವುದೇ ಅಡೆತಡೆ ಇಲ್ಲದೇ ಕೆಲಸ ನಿರ್ವಹಿಸಿದ ಖುಷಿ ಇದೆ. ತಾಳ್ಮೆಯಿಂದ ವರ್ತಿಸಿದ ಜಿಲ್ಲೆಯ ಸಾರ್ವಜನಿಕರು ಹಾಗೂ ಮುಖಂಡರಿಗೆ ಅಭಿನಂದನೆ ಸಲ್ಲುಸುತ್ತೇನೆ. ನನಗೆ ಹಾಗೂ ಜಿಲ್ಲಾಧಿಕಾರಿ ಕಛೇರಿಗೆ ಬೆನ್ನೆಲುಬಾಗಿ ನಿಂತಿದ್ದ ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಸರ್ಕಾರದ ಕೆಲಸ ಅಂದರೆ ವರ್ಗಾವಣೆ ವಿಚಾರ ಮಾಮೂಲು. ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ ಆದರೆ ಯಾರೇ ಬಂದರೂ ಎಲ್ಲರಿಗೂ ಇದೇ ರೀತಿ ಸಹಕಾರ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ ಎಂದರು‌.

ಕಡಿಮೆ ಅವಧಿಯಲ್ಲಿ ಜಿಲ್ಲೆಯ ಜನರ ಹಾಗೂ ಅಧಿಕಾರಿಗಳ ಪ್ರೀತಿಗಳಿಸಿ, ಅತ್ಯುತ್ತಮ ಸೇವೆ ಸಲ್ಲಿಸಿದ ಕೀರ್ತಿ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರಿಗೆ ಸಲ್ಲುತ್ತದೆ ಎಂದು ನೂತನ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.

ಸಾರ್ವಜನಿಕ, ರೈತಾಪಿ ವರ್ಗದ ಮನಗೆದ್ದಿರುವ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರಿಂದ ಅಧಿಕಾರಿ ಹಸ್ತಾಂತರ ಮಾಡಿಕೊಂಡುರುವುದೇ ನನಗೆ ಖುಷಿ ವಿಚಾರ. ಸರಳ, ಸಜ್ಜನ, ಸೌಮ್ಯ ವ್ಯಕ್ತಿತ್ವದ ಗೋಪಾಲಕೃಷ್ಣ ಅವರ ಜೊತೆ ಈ ಹಿಂದೆ ನಾನು ಕೆಲಸ ಮಾಡಿದ್ದೇನೆ. ಜನಸಾಮಾನ್ಯರನ್ನು ಪ್ರೀತಿಸುವ ಮಾನವತಾ ಪ್ರೇಮಿ ಅವರು ಎಂದು ನುಡಿದರು.

ನಮ್ಮ ನಡವಳಿಕೆ ನಮ್ಮ ಎತ್ತರವನ್ನು ನಿರ್ಧರಿಸುತ್ತದೆ. ಆಗಾಗಿ ನಾವು ಯಾವಾಗಲೂ ಉತ್ತಮ ನಡವಳಿಕೆಯಿಂದ ನಡೆದುಕೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಸಾರ್ವಜನಿಕರು ನನಗೂ ಸಹ ಇದೇ ರೀತಿ ಸಹಕಾರ ನೀಡಿ ಈ ಮೂಲಕ ಜಿಲ್ಲೆಯನ್ನು ಅಭಿವೃದ್ಧಿ ಮಾಡೋಣ ಎಂದರು.

LEAVE A REPLY

Please enter your comment!
Please enter your name here