ಹನುಮಂತಸ್ವಾಮಿಗೆ ನಮಸ್ಕಾರ ಮಾಡಿ ಗದೆಯ ಭಾರ ಮಾತ್ರ ಹೊರಲು ಹೋಗಬೇಡಿ.

0
118

ಮೊನ್ನೆ ಇದ್ದಕ್ಕಿದ್ದಂತೆ ಆ ದೇವಸ್ಥಾನ ನೆನಪಿಗೆ ಬಂತು. ಅದು ಪತ್ತಿಗೊಂಡ ಪ್ರಾಣದೇವರು ಹನುಮಂತಸ್ವಾಮಿ ದೇವಸ್ಥಾನ.
ಯಲಹಂಕದಿಂದ ಮುಂದೆ, ಆವಲಹಳ್ಳಿಯ ಸಮೀಪದ ಈ ಹನುಮಂತಸ್ವಾಮಿ ದೇವಸ್ಥಾನಕ್ಕೆ ಎಂಟು ವರ್ಷಗಳ ಹಿಂದೆ ನಾನು, ಮೋಹನಣ್ಣ (ನಂಜನಗೂಡು ಮೋಹನ್ ಕುಮಾರ್) ಹೋಗಿದ್ದೆವು. ಅಂದ ಹಾಗೆ ಒಂದರ್ಥದಲ್ಲಿ ಮೋಹನಣ್ಣ, ನನ್ನಂತವರಿಗೆ ಕೇವಲ ಫ್ರೆಂಡ್ ಮಾತ್ರವಲ್ಲ, ಫಿಲಾಸಫರ್, ಗೈಡ್ ತರ.
ಅವತ್ತಿನ ದಿನಗಳಲ್ಲಿ ಆವಲಹಳ್ಳಿಯ ಹನುಮಂತಸ್ವಾಮಿ ದೇವಸ್ಥಾನದ ಅಕ್ಕ ಪಕ್ಕ ಜನ ಬಹಳ ವಿರಳ. 2007 ರಲ್ಲಿ ನನಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಸಿಕ್ಕಿತ್ತು. ಹೀಗಾಗಿ ನಾನು, ಮೋಹನಣ್ಣ ರಾತ್ರಿ ಕಾರಿನಲ್ಲಿ ಮಂತ್ರಾಲಯಕ್ಕೆ ಹೊರಟಿದ್ದೆವು. ಈ ಟೈಮಿನಲ್ಲಿ ಊಟ ಮಾಡಬೇಕಲ್ಲ? ಆಗ ಕಂಡಿದ್ದೇ ಹನುಮಂತಸ್ವಾಮಿಯ ದೇವಸ್ಥಾನ. ”ಅಣ್ಣ, ಹೇಗಿದ್ದರೂ ಹನುಮಂತಸ್ವಾಮಿಯ ಸನ್ನಿಧಿ. ಇಲ್ಲೇ ಒಂದು ತುತ್ತು ಊಟ ಮಾಡಿಕೊಂಡು ಹೋಗಿಬಿಡೋಣ ”ಎಂದರು ಮೋಹನಣ್ಣ.
ಹೀಗೆ ಪರಸ್ಪರರನ್ನು ನಾವು ಯಾವತ್ತೂ ಅಣ್ಣ ಅಂತ ಸಂಭೋಧಿಸಿಕೊಳ್ಳುವುದು ರೂಢಿ. ಸರಿ, ಹನುಮಂತಸ್ವಾಮಿ ದೇವಸ್ಥಾನದ ಹತ್ತಿರ ಇಳಿದೆವು. ಇಳಿದ ತಕ್ಷಣ ಸ್ವಾಮಿಗೊಂದು ಸಾಷ್ಟಾಂಗ ಹೊಡೆಯದೆ ಊಟ ಮಾಡುವುದು ಹೇಗೆ? ಹೀಗಾಗಿ ಇಬ್ಬರೂ ಒಳಗೆ ಹೋಗಿ ದೇವರಿಗೆ ನಮಸ್ಕರಿಸಿ ಹೊರಬಂದೆವು.ಹೊರಗೆ ಊಟ ಮಾಡಲು ಪ್ರಶಸ್ತವಾದ ಜಾಗ.ಸುತ್ತ ಮುತ್ತ ನಿರ್ಜನ ಪ್ರದೇಶವಾದ್ದರಿಂದ ತಂಗಾಳಿ ಮೈ ಮನಗಳನ್ನು ಆವರಿಸಿ ನೆಮ್ಮದಿಯ ಬಾವ ಮೂಡಿಸುತ್ತಿತ್ತು.
ಅವತ್ತು, ಊಟಕ್ಕೆ ಕೂತಾಗ ಮೋಹನಣ್ಣ ಒಂದು ಮಾತು ಕೇಳಿದರು: ಅಣ್ಣಾ,ಹಾಯ್ ಬೆಂಗಳೂರ್ ಪತ್ರಿಕೆ ಶುರುವಾಗಿ ಹನ್ನೆರಡು ವರ್ಷಗಳಾದವು.ನೀವು ಮತ್ತು ರವಿ ಅಣ್ಣ (ರವಿ ಬೆಳಗೆರೆ) ಯಾವತ್ತೂ ಶರಂಪರ ಜಗಳ ಮಾಡಿಕೊಂಡಿದ್ದನ್ನು ನೋಡಲಿಲ್ಲ. ಈ ವಿಶ್ವಾಸ ಒಂದೇ ಅಳತೆಯಲ್ಲಿ ಮುಂದುವರಿಯಲು ಏನು ಕಾರಣ? ಅಂದರು. ಅವರದು ಯಾವತ್ತೂ ಚಿಕಿತ್ಸಕ ದೃಷ್ಟಿ.
ನಾನು ಹೇಳಿದೆ: ”ಮೋಹನಣ್ಣ, ಈಗ ಹನುಮಂತಸ್ವಾಮಿಯ ದೇವಸ್ಥಾನಕ್ಕೆ ಬಂದಿದ್ದೇವೆ. ಸ್ವಾಮಿಗೆ ನಾವು ಕ್ಲೋಜು ಅಂತ ಅಂದುಕೊಂಡು, ಅಪ್ಪಾ,ಸ್ವಾಮಿ, ಗದೆ ಹೊತ್ತು ಹೊತ್ತು ಬೇಸರ ಬಂದುಬಿಟ್ಟಿರಬೇಕು. ಸ್ವಲ್ಪ ಆ ಗದೆಯನ್ನಿಲ್ಲಿ ಕೊಡು.ನಾನು ಹೊರುತ್ತೇನೆ ಅನ್ನಲು ಸಾಧ್ಯವೇ?ಅಪ್ಪಿ ತಪ್ಪಿಯೂ ಮಾಡಬಾರದು. ದೇವಸ್ಥಾನಕ್ಕೆ ಬಂದವನ ಕೆಲಸ ನಮಸ್ಕರಿಸಿ, ಒಳ್ಳೆಯದಾಗಲಿ ಅಂದುಕೊಳ್ಳುವುದೇ ವಿನ: ಭಾರ ಹೊರುವುದಲ್ಲ. ಅಥವಾ ಗದೆಯ ಭಾರ ಪರೀಕ್ಷೆ ಮಾಡುವುದಲ್ಲ. ಯಾಕೆಂದರೆ ಯಾರು ಯಾರು ಯಾವ ರೀತಿಯ ಭಾರ ಹೊರಬೇಕೋ? ಹೊತ್ತಿರುತ್ತಾರೆ. ಅದನ್ನರ್ಥ ಮಾಡಿಕೊಂಡು ಸುಮ್ಮನೆ ಇದ್ದು ಬಿಡಬೇಕು. ನಮ್ಮ ಕೆಲಸ ನಮಗೆ, ದೇವರ ಕೆಲಸ ದೇವರಿಗೆ, ವಿಶ್ವಾಸ ಮತ್ತು ಪ್ರೀತಿಯೂ ಅಷ್ಟೇ. ದೇವರಿದ್ದಂತೆ. ಅದನ್ನು ಗೌರವಿಸಬೇಕು. ಅದರ ಭಾರ ಹೊರಬಾರದು, ಸಾಧ್ಯವಾದರೆ ಅದರ ಸೌಂದರ್ಯ ಹೆಚ್ಚಿಸಬೇಕು ಎಂದೆ. ಮೋಹನಣ್ಣ ಜೋರಾಗಿ ನಕ್ಕರು. ಹೀಗೆ ನಗುತ್ತಲೇ ಇಬ್ಬರೂ ಕಟ್ಟಿಕೊಂಡು ಹೋಗಿದ್ದ ಊಟ ಮಾಡಿ, ಮಂತ್ರಾಲಯಕ್ಕೆ ಹೊರಟೆವು.
ಈ ಘಟನೆ ನೆನಪಿಗೆ ಬರುತ್ತಿದ್ದಂತೆಯೇ ವಾರಪತ್ರಿಕೆಯ ಸಂಪಾದಕರಾದ ಬಿ.ವಿ.ವೈಕುಂಠರಾಜು ಕಣ್ಣ ಮುಂದೆ ಬಂದರು. ಕನ್ನಡದಲ್ಲಿ ತಮ್ಮ ನಾಮಬಲದ ಮೇಲೇ ಪತ್ರಿಕೆ ನಡೆಸಿದ ಮೂರ್ನಾಲ್ಕು ಮಂದಿ ಖ್ಯಾತನಾಮರ ಪೈಕಿ ವೈಕುಂಠರಾಜು ಒಬ್ಬರು.
ನಾವು ಚಿಕ್ಕವರಿದ್ದಾಗ ವಾರಪತ್ರಿಕೆ ಎಷ್ಟು ಜನಪ್ರಿಯವಾಗಿತ್ತೆಂದರೆ, ಅದರಲ್ಲಿ ಬರುವ ರಾಜಕೀಯ ಸ್ವಾರಸ್ಯ, ಚುಚ್ಚು ಮದ್ದು ಹಾಗೂ ಸಂಪಾದಕರ ಡೈರಿ ಅಂಕಣಗಳು ಎಂದರೆ ನಮಗೆ ಪ್ರಾಣ. ಒಂದು ಸಣ್ಣ ವಿಷಯ ಸಿಕ್ಕರೂ ಸಾಕು, ವೈಕುಂಠರಾಜು ಅದನ್ನು ಎಷ್ಟು ಸುಂದರವಾಗಿ ವರ್ಣಿಸಿ ಬರೆಯುತ್ತಿದ್ದರೆಂದರೆ ಓದಿದ ಮೇಲೆ, ಇಷ್ಟು ಬೇಗ ಮುಗಿಯಿತಾ?ಅನ್ನಿಸುತ್ತಿತ್ತು.
ಇವತ್ತು ದಿ ಹಿಂದೂ ಪತ್ರಿಕೆಯಲ್ಲಿರುವ ಮುರುಳೀಧರ್ ಖಜಾನೆ ಅವತ್ತು ಶಿವಮೊಗ್ಗದ ಪಿ ಅಂಡ್ ಟಿ ಯಲ್ಲಿ ಕೆಲಸ ಮಾಡುತ್ತಲೇ ವಾರ ಪತ್ರಿಕೆಗೆ ಬರೆಯುತ್ತಿದ್ದರು. ಒಂದು ಸಲ ಶಿವಮೊಗ್ಗದ ಹೆಚ್.ಪಿ.ಸಿ.ಟಾಕೀಸಿನ ಮುಂದೆ ಅವರು ನಡೆದು ಹೋಗುತ್ತಿದ್ದಾಗ, ನಮ್ಮ ಕುಟುಂಬದ ಹಿರಿಯಣ್ಣ ಅರವಿಂದ್ ರಂಗಧೋಳ್ (ನಮ್ಮ ದೊಡ್ಡಪ್ಪ ರಾಣೋಜಿರಾವ್ ಅವರ ಮಗ) ನೋಡು ವಿಠ್ಠು, ನೀನು ತುಂಬ ಇಷ್ಟಪಡುವ ವಾರಪತ್ರಿಕೆಯ ಖಜಾನೆ ಇವರೇ ಎಂದು ಪರಿಚಯಿಸಿದಾಗ,ನನಗವರು,ಸ್ವರ್ಗ ಲೋಕದಿಂದಿಳಿದ ದೇವತೆಯಂತೆ ಕಂಡಿದ್ದರು.
ಅಂದ ಹಾಗೆ, ನಾನು ಕಂಡಂತೆ ಪಿ.ಲಂಕೇಶ್, ಬಿ.ವಿ.ವೈಕುಂಠರಾಜು ಹಾಗೂ ರವಿ ಬೆಳಗೆರೆ ತಮ್ಮ ನಾಮಬಲದ ಮೇಲೇ ತಮ್ಮ ಪತ್ರಿಕೆಯನ್ನು ಉತ್ತುಂಗಕ್ಕೇರುವಂತೆ ಮಾಡಿದವರು. ಅಂದ ಹಾಗೆ ಈ ಮೂವರೂ ಸಾಹಿತ್ಯದ ಗಂಧವನ್ನು ತೇಯ್ದು ತಮ್ಮ ಮಿದುಳಿಗೆ ಲೇಪಿಸಿಕೊಂಡವರು. ಮತ್ತು ಹೀಗೆ ಲೇಪಿತವಾದ ಗಂಧವನ್ನು ಓದುಗರ ಮನಸ್ಸಿಗಿರುವ ಮೂಗಿಗೂ ತಲುಪಿಸಿದವರು.
ಸರಿ, ಇಂತಹವರ ಪೈಕಿ ಒಬ್ಬರಾದ ವೈಕುಂಠರಾಜು ಅವರ ಪತ್ರಿಕೆಗೆ ವರದಿಗಾರನಾಗುವ ಅವಕಾಶ ನನಗೆ ಸಿಕ್ಕಿತು.(1993-95) ಅವರ ರಾಜಕೀಯ ಸ್ವಾರಸ್ಯ, ಚುಚ್ಚುಮದ್ದು ಅಂಕಣಕ್ಕೆ ಅಗತ್ಯವಾದ ರಾಜಕೀಯ ಬೆಳವಣಿಗೆಯನ್ನು ಅವರಿಗೆ ವಿವರಿಸುವುದು, ನನ್ನ ಪಾಲಿನ ಲೇಖನವನ್ನು ಕೊಡುವುದು ಅಂತ ಮಾತಾಗಿತ್ತು.
ಹಾಗೆ ನೋಡಿದರೆ ವೈಕುಂಠರಾಜು ಸ್ವಲ್ಪ ಮುಂಗೋಪಿ.ಬೇಗನೆ ಸಿಟ್ಟು ಮಾಡಿಕೊಳ್ಳುತ್ತಿದ್ದರು. ಆದರೆ ನಾನು ಒಪ್ಪಿಕೊಂಡಿದ್ದನ್ನು ನಿಗದಿತ ಟೈಮಿಗೆ ಕೊಡುತ್ತಿದ್ದುದರಿಂದ, ಲೇ, ನಿನಗೆ ಏನಾದರೂ ಬೈಯ್ಯಬೇಕು ಅಂದುಕೊಳ್ತೀನಿ. ಆದರೆ ಹೇಳಿದ ಟೈಮಿಗೆ ಸರಿಯಾಗಿ ಕೆಲಸ ಮಾಡಿರುತ್ತೀ. ಬೈಯ್ಯಲೂ ಆಗುವುದಿಲ್ಲ. ಬೈಯ್ಯದಿದ್ದರೆ ನನಗೆ ಸಮಾಧಾನ ಇರುವುದಿಲ್ಲ ಎನ್ನುತ್ತಿದ್ದರು. ನಾನು ಸುಮ್ಮನೆ ನಗುತ್ತಿದ್ದೆ.
ಆಗೆಲ್ಲ ಅವರು, ಒಳ್ಳೆ ಪಾಪಿ ಕಣೋ ನೀನು. ಎಡಿಟರ್ ಗಳತ್ರ ಬೈಸಿಕೊಳ್ಳಬೇಕು ಕಣೋ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ ಹಾಡು ಕೇಳಿಲ್ಲವೇನಲೇ?ಅನ್ನುತ್ತಿದ್ದರು. ಮತ್ತೆ ನನ್ನ ನಗು ಪುನರಪಿ ಜನನಂ, ಪುನರಪಿ ಮರಣಂ ಎಂಬಂತೆ.
ಹೀಗಿರುತ್ತಲೇ ಒಂದು ದಿನ ಅವರು, ಪ್ರೆಸ್ ಕ್ಲಬ್ಬಿಗೆ ಇದ್ದಕ್ಕಿದ್ದಂತೆ ಫೋನು ಮಾಡಿ: ”ಲೇ,ಪಾಪಿ, ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಸಿಎಂ ದೇವೇಗೌಡರ ಇಂಟರ್ ವ್ಯೂ ಫಿಕ್ಸಾಗಿದೆ. ಅವರಿರುವ ಅನುಗ್ರಹ ಬಂಗಲೆಗೆ ಸರಿಯಾಗಿ ಎಂಟು ಗಂಟೆಗೆ ರೆಡಿಯಾಗಿ ಬಂದು ಬಿಡು. ನಾನು ಮಾತ್ರ ಅಲ್ಲ, ನೀನೂ ಸಂದರ್ಶನ ಮಾಡುವವನು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಬಾ “ ಎಂದರು.
ನಾನು ದುಸುರಾ ಮಾತನಾಡಲಿಲ್ಲ. ಬದಲಿಗೆ ರಾತ್ರಿ ಬಹುಹೊತ್ತಿನ ತನಕ ಕಸರತ್ತು ಮಾಡಿ ಪ್ರಶ್ನೆಗಳನ್ನು ರೆಡಿ ಮಾಡಿಕೊಂಡೆ. ಮರುದಿನ ಬೆಳಿಗ್ಗೆ ಸ್ವಲ್ಪ ಮುಂಚಿತವಾಗಿಯೇ ದೇವೇಗೌಡರಿದ್ದ ಅನುಗ್ರಹ ಬಂಗಲೆಗೆ ಹೋದೆ. ನಾನು ಹೋದ ಐದು ನಿಮಿಷಕ್ಕೇ ವೈಕುಂಠರಾಜು ಅವರೂ ಬಂದರು.
ಹೀಗೆ ಬಂದವರು ನನ್ನನ್ನು ನೋಡಿದ್ದೇ, ”ಅಯ್ಯೋ, ನಿನ್ನ ನನಗಿಂತ ಮುಂಚೆ ಬಂದು ನಿನ್ನನ್ನು ಬೈಯ್ಯುವ ಅವಕಾಶವೇ ಇಲ್ಲದಂತೆ ಮಾಡಿದೆಯಲ್ಲೋ ಪಾಪಿ “ಎಂದರು. ಅದೇ ರೀತಿ, ಇಂಟರ್ ವ್ಯೂ ಮಾಡುವಾಗ ಮಂಗನ ತರ ಕಕಮಕ ನೋಡುತ್ತಾ ಕೂರಬೇಡ. ಪಕ್ಕದಲ್ಲಿ ಎಡಿಟರು ಇದ್ದಾರೆ. ನಾನೇಕೆ ಪ್ರಶ್ನೆ ಕೇಳುವುದು ಅಂತ? ಅದೇನು ಕೇಳಬೇಕು ಅಂತಿದ್ದೀಯೋ? ಅದು ತಪ್ಪೋ, ಸರಿಯೋ, ನೇರವಾಗಿ ಕೇಳಬೇಕು “ಎಂದರು..
ಆಯಿತು. ಇಂಟರ್ ವ್ಯೂ ಮುಗಿಯಿತು. ಎದ್ದು ಹೋಗುವಾಗ ವೈಕುಂಠರಾಜು ಹೇಳಿದರು:” ಲೇ, ಪಾಪಿ, ನೀನೂ ಇಂಟರ್ ವ್ಯೂ ಬರೀ. ನಾನೂ ಬರೆಯುತ್ತೇನೆ. ನಾಳೆ ಮಧ್ಯಾಹ್ನವೇ ಪತ್ರಿಕೆ ಪ್ರಿಂಟಿಗೆ ಹೋಗಬೇಕು“ ಎಂದರು. ನಾನು ಮನೆಗೆ ಹೋದವನೇ ದೇವೇಗೌಡರ ಬಳಿ ಮಾತನಾಡಿದ್ದನ್ನೆಲ್ಲ ಪ್ರಶ್ನೆ,ಉತ್ತರಗಳ ರೂಪದಲ್ಲಿ ರೆಡಿ ಮಾಡಿದೆ.
ಮರುದಿನ ಬೆಳಿಗ್ಗೆ ಒಂಭತ್ತು ಗಂಟೆಗೇ ಹೋಗಿ ಅವರ ಮುಂದಿಟ್ಟೆ. ತಕ್ಷಣ ಅವರು ತಮ್ಮ ಹಸ್ತಾಕ್ಷರದ ಪ್ರತಿಯನ್ನು ನನ್ನ ಮುಂದಿಟ್ಟು,ಇದೂ ದೇವೇಗೌಡರ ಇಂಟರ್ ವ್ಯೂ.ಓದಿ ನೋಡು. ನೀನು ಬರೆದಿದ್ದನ್ನು ನಾನು ಓದಿ ನೋಡುತ್ತೇನೆ ಎಂದರು. ನೋ, ಡೌಟ್, ಅವರು ಬರೆದ ಸಂದರ್ಶನವೇ ಅತ್ಯುತ್ತಮವಾಗಿತ್ತು. ಹೀಗಾಗಿ ನಾನು,”ಸಾರ್, ನೀವು ಬರೆದಿದ್ದೇ ಚೆನ್ನಾಗಿದೆ. ಅದನ್ನೇ ಪ್ರಕಟಿಸಿ ಬಿಡಿ” ಎಂದೆ.
ಹಾಗೆ ಹೇಳುತ್ತಲೇ ಒಂದು ಮಾತು ಕೇಳಿದೆ.” ಸಾರ್, ಒಂದು ಸಂದರ್ಶನಕ್ಕೆ ಇಬ್ಬರೂ ಹೋಗಿದ್ದೇವೆ. ಆದರೆ ಇಷ್ಟು ಚೆಂದ ಬರೆದಿದ್ದೀರಿ ಹೇಗೆ ಸಾಧ್ಯವಾಯಿತು ಸಾರ್?” ಅವರು ಒಂದು ಸಲ ಮುಖ ನೋಡಿ, ಕೂತುಕೋ ಬಂದೆ ಎಂದವರೇ ಒಳಗೆ ಹೋಗಿ ಕಾಫಿ ಮಾಡಿಕೊಂಡು ಬಂದರು.
ಬಂದವರೇ ಒಂದು ಗ್ಲಾಸನ್ನು ನನಗೆ ಕೊಟ್ಟು: ಯಾವನೇ ಎಡಿಟರು ಆಗಲಿ, ರಿಪೋರ್ಟರಿಗೆ ಕಾಫಿ ಮಾಡಿಕೊಡುವುದನ್ನು ನೋಡಿದ್ದೀಯೇನೋ ಎಂದರು. ಇಲ್ಲ ಸಾರ್ ಎಂದೆ. ಅದಕ್ಕವರು ನಗುತ್ತಾ, ನಿನಗೆ ಮಾವೋತ್ಸೆ ತುಂಗ್ ಗೊತ್ತೇನೋ? ಎಂದರು. ಗೊತ್ತು ಸಾರ್, ನಾಲ್ಕು ದೇಶಗಳ ದಾಸ್ಯಕ್ಕೆ ತುತ್ತಾಗಿದ್ದ ಚೀನಾ ದೇಶವನ್ನು ತನ್ನ ಲಾಂಗ್ ಮಾರ್ಚ್ ಮೂಲಕ ಬಿಡುಗಡೆಗೊಳಿಸಿದವನು ಎಂದು ವಿವರಿಸಿದೆ.
ಅಡ್ಡಿಯಿಲ್ಲ ಕಣೋ, ನೀನೂ ಹಿಸ್ಟರಿ ಓದಿದ್ದೀಯ. ಅಂದ ಹಾಗೆ ಈ ಮಾವೋತ್ಸೆ ತುಂಗ್ ಬಗ್ಗೆ ನಿನಗೇನು ಗೊತ್ತು? ಎಂದರು.ನಾನು ಮುಖ ಸಣ್ಣಗೆ ಮಾಡಿಕೊಂಡು, ಇಲ್ಲ ಸಾರ್, ನನಗೆ ಮಾವೋತ್ಸೆ ತುಂಗ್ ಬಗ್ಗೆ ಜಾಸ್ತಿ ಗೊತ್ತಿಲ್ಲ. ನಮ್ಮ ಖ್ಯಾತ ಲೇಖಕ ಚಂದ್ರಶೇಖರ ಕಂಬಾರರು,” ಮರೆತೇನಂದರ ಮರೀಲಿ ಹ್ಯಾಂಗ? ಮಾವೋತ್ಸೆ ತುಂಗ?” ಅಂತ ಒಂದು ಸಲ ಸಾಗರದ ಪುರಭವನದ ಮುಂದೆ ಕವನ ಹಾಡಿದ್ದನ್ನು ಕೇಳಿದ್ದೇನೆ. ಅದನ್ನು ಬಿಟ್ಟರೆ ಆತನ ಬಗ್ಗೆ ನನಗೇನೂ ಗೊತ್ತಿಲ್ಲ ಎಂದೆ.
ಆಗ ವೈಕುಂಠರಾಜು ನಕ್ಕರು.”ನೋಡು ಮಾವೋತ್ಸೆ ತುಂಗ್ ಒಂದು ಕಡೆ ಬರೆದುಕೊಳ್ಳುತ್ತಾನೆ. ಚಿಕ್ಕವನಿದ್ದಾಗ ಅವನಿಗಾದ ಅನುಭವ ಅದು. ಅವನ ತಾಯಿ ಒಂದು ಸುಂದರ ಕೈದೋಟವನ್ನು ಬೆಳೆಸಿರುತ್ತಾಳೆ. ಎಷ್ಟು ಚೆಂದಗೆ ಅಂದರೆ ಯಾರೇ ಆ ದಾರಿಯಲ್ಲಿ ಹೋದರೂ ಮಂದಹಾಸ ಬೀರುವ ಅಲ್ಲಿನ ಹೂವುಗಳ ಚೆಂದವನ್ನು ಗಮನಿಸಿ, ಖುಷಿಯಾಗಿ ನೋಡುತ್ತಿರುತ್ತಾರೆ.
ಒಂದು ದಿನ ತಾಯಿ ಹೇಳುತ್ತಾಳೆ, ತುಂಗ್, ನನಗೀಗ ಆಗುತ್ತಿಲ್ಲ. ಈ ಕೈದೋಟವನ್ನು ನೀನು ನೋಡಿಕೊಳ್ಳಬೇಕು. ಸರಿ, ತಾಯಿಯ ಅಣತಿಯಂತೆ ಮಾವೋತ್ಸೆ ತುಂಗ್ ಪ್ರತಿ ದಿನ ಹಗಲಿರುಳೆನ್ನದೆ ಆ ಕೈದೋಟವನ್ನು ನೋಡಿಕೊಳ್ಳುತ್ತಾನೆ. ಹದಿನೈದು ದಿನ ಬಿಟ್ಟು ತಾಯಿ ನೋಡುತ್ತಾಳೆ. ತೋಟಕ್ಕೆ ತೋಟವೇ ತಣ್ಣಗೆ ಮಲಗಿದಂತೆ, ಜೀವವೇ ಇಲ್ಲದಂತೆ ಸೊರಗಿ ಹೋಗಿದೆ. ಅರೇ, ಇದೇನಿದು ತುಂಗ್.ಹೀಗಾಗಿದೆ? ಅಂತ ತಾಯಿ ಕಣ್ಣೀರಿಡುತ್ತಾಳೆ. ಆಗ ಮಾವೋತ್ಸೆ ತುಂಗ್ ಕೂಡಾ ಕಣ್ಣೀರಿಡುತ್ತಾನೆ. ಅಮ್ಮಾ,ಹದಿನೈದು ದಿನಗಳ ಕಾಲ ಒಂದೊಂದು ಹೂವನ್ನೂ ಮಗುವಿನಂತೆ ನೋಡಿಕೊಂಡೆ, ಎಲೆಯನ್ನೂ ಪ್ರೀತಿಸಿ ನೀರು ಹಾಕಿದೆ. ಆದರೆ ಯಾಕೋ ಏನೋ? ಹೀಗಾಗಿದೆ ಎನ್ನುತ್ತಾನೆ. ಆಗ ತಾಯಿ ಇದ್ದಕ್ಕಿದ್ದಂತೆ ನಗುತ್ತಾಳೆ: ಅಯ್ಯೋ, ಹುಚ್ಚಾ, ಹೂವಿಗೆ, ಎಲೆಗೆ ನೀರು ಹಾಕಿ ನೀನು ಜೋಪಾನ ಮಾಡಬೇಡ. ಬದಲಿಗೆ ಅದರ ಬೇರಿಗೆ ನೀರು ಹಾಕಿ ತಂಪು ಮಾಡು. ಅದು ಸಾಂತ್ವನಗೊಂಡರೆ ತಾನೇ ಎಲೆ ಚಿಗುರುವುದು? ಹೂವು ಅರಳುವುದು? ಅದರ ಬಗ್ಗೆ ಏಕೆ ಚಿಂತೆ ಮಾಡುತ್ತೀಯ? ಬೇರಿನ ಕಡೆ ನೋಡು, ಅದರ ಆರೈಕೆ ಮಾಡು ಅಂತ ಹೇಳುತ್ತಾಳೆ. ಆಗ ತಾನು ಮಾಡಿದ ತಪ್ಪು ಮಾವೋತ್ಸೆ ತುಂಗ್ ಗೆ ಅರ್ಥವಾಗುತ್ತದೆ.
ಅಂದ ಹಾಗೆ ಇದರ ಅರ್ಥ ಏನು ಗೊತ್ತೇನೋ? ಅಂದರು ವೈಕುಂಠರಾಜು. ನಾನು ಕಮಕ್ಕಿಮಕ್ಕೆನ್ನಲಿಲ್ಲ. ಅವರೇ ಹೇಳುತ್ತಾ ಹೋದರು: ನೋಡು, ನೀನು ಮಾಡಿರುವ ಇಂಟರ್ ವ್ಯೂ ಚೆನ್ನಾಗಿದೆ. ನಾವು ಕೇಳಿದ ಪ್ರಶ್ನೆ, ಅದಕ್ಕೆ ಅವರು ನೀಡಿದ ಉತ್ತರ, ಏನೂ ತಪ್ಪಿಲ್ಲ. ಆದರೆ ಲೇಖನದ ಆತ್ಮ ಮಾತ್ರ ತಪ್ಪಿಸಿಕೊಂಡಿದೆ. ಯಾಕೆಂದರೆ, ದೇವೇಗೌಡರ ರಾಜಕೀಯ ಬದುಕಿನ ಬಗ್ಗೆ ನಿನಗೆ ಗೊತ್ತಿರುವುದು ಕಡಿಮೆ. ನನಗೆ ಗೊತ್ತಿರುವುದು ಜಾಸ್ತಿ ಎಂದರು.
ನಿಜ ಸಾರ್, ನಿಮ್ಮ ಇಂಟರ್ ವ್ಯೂ ಅನ್ನೇ ಹಾಕಿ ಎಂದು ಹೇಳಿ ಹೊರಬಂದೆ. ಮರುದಿನ ಪತ್ರಿಕೆ ಹೊರಬಂತು. ನೋಡಿದರೆ ವೈಕುಂಠರಾಜು ಅವರ ಸಂದರ್ಶನವೇ ಇಲ್ಲ. ಬದಲಿಗೆ ನಾನು ಬರೆದ ಸಂದರ್ಶನ ಪ್ರಕಟವಾಗಿದೆ.ನೋಡಿದ ತಕ್ಷಣ ನಾನವರಿಗೆ ಫೋನು ಮಾಡಿದೆ. ಸಾರ್, ನೀವು ಬರೆದ ಇಂಟರ್ ವ್ಯೂ ಚೆನ್ನಾಗಿತ್ತು. ಅದನ್ನೇ ಹಾಕಬೇಕಿತ್ತು ಎಂದೆ.
ಅದಕ್ಕವರು: ಅಯ್ಯೋ ಪಾಪಿ, ನೀನು ಬರೆದ ಇಂಟರ್ ವ್ಯೂ ಚೆನ್ನಾಗಿಯೇ ಇದೆ. ಆದರೆ ಯಾರದೇ ಇಂಟರ್ ವ್ಯೂ ಮಾಡುವ ಮುನ್ನ ಅವರಾಡುವ ಮಾತಿನ ಹಿಂದೆ ಕೆಲಸ ಮಾಡಿರುವ ಅನುಭವ ಏನು? ಅನ್ನುವುದನ್ನು ತಿಳಿದುಕೋ? ನೀನು ಬರೆದದ್ದಕ್ಕಿಂತ ಚೆನ್ನಾಗಿ ನಾನೇ ಬರೆದಿದ್ದೇನೆ ಅಂತ ನನಗೆ ಗೊತ್ತು. ಹಾಗಂತ ನೀನು ಬರೆಯುವುದನ್ನು ಇಂಫ್ರೂವೈಸ್ ಮಾಡಿಕೊಳ್ಳುವುದು ಹೇಗೆ? ಅಂತ ನಿನಗೆ ಗೊತ್ತಾಗುವುದು ಯಾವಾಗ? ನಮ್ಮ ಕಾಲ ಮುಗಿಯುತ್ತಾ ಬಂತು. ಬೆಳೆಯಬೇಕಾದವರು ನಿನ್ನಂತಹ ಮಕ್ಕಳು ಕಣಲೇ ಪಾಪಿ. ಅದಕ್ಕೇ ನಿನಗೆ ಮಾವೋತ್ಸೆ ತುಂಗ್ ನ ಕತೆ ಹೇಳಿದ್ದು ಅಂದವರೇ ಫೋನಿಟ್ಟರು.
ನಾನು ಮೂಕನಾಗಿ ಹೋದೆ. ದೊಡ್ಡ ದೊಡ್ಡವರು ಈ ರೀತಿ ಎಳೆದುಕೊಂಡು, ಎಳೆದುಕೊಂಡು ಬಂದು ವೇದಿಕೆಯ ಮೇಲೆ ನಿಲ್ಲಿಸದಿದ್ದರೆ ನಾನು ಪತ್ರಕರ್ತನಾಗಲು ಸಾಧ್ಯವಿತ್ತಾ? ಸುಖಾ ಸುಮ್ಮನೆ ಹನುಮಂತ ಸ್ವಾಮಿಯ ದೇವಸ್ಥಾನ ಕಂಡಲ್ಲೆಲ್ಲ ಗದೆಯ ತೂಕ ಪರೀಕ್ಷೆ ಮಾಡುತ್ತಾ ಕೂತಿದ್ದರೆ ಈ ಮಟ್ಟಕ್ಕಾದರೂ ಬರಲು ಸಾಧ್ಯವಿತ್ತಾ? ನೋ ಚಾನ್ಸ್.
ಹಾಗಂತ ಮೊನ್ನೆ ಮೋಹನಣ್ಣನ ಬಳಿ ಮಾತನಾಡಿಕೊಂಡೆ. ಅದಕ್ಕವರು, ಎಲ್ಲದರಲ್ಲಿಯೂ ಸೌಂದರ್ಯವನ್ನು ಹುಡುಕುವವರಿಗೆ ಎಲ್ಲೆಲ್ಲೂ ಸೌಂದರ್ಯವೇ ಕಾಣುತ್ತದೆ ವಿಠ್ಠಲಮೂರ್ತಿ ಎಂದು ಮಾರ್ಮಿಕವಾಗಿ ನಕ್ಕರು.

ಆರ್.ಟಿ.ವಿಠ್ಢಲಮೂರ್ತಿ
(ದೇವೇಗೌಡರ ಜತೆ ವೈಕುಂಠರಾಜು ಮತ್ತು ನಾನು)

LEAVE A REPLY

Please enter your comment!
Please enter your name here