ರೈತರ ಸಮಸ್ಯೆಗಳನ್ನು ಕಡೆಗಣಿಸದೆ, ಗಂಭೀರವಾಗಿ ಪರಿಗಣಿಸಬೇಕು: ಜಿಲ್ಲಾಧಿಕಾರಿ

0
87

ಮಂಡ್ಯ ಜು.31:- ಕಬ್ಬು ಕಟಾವಿಗೆ ಸಂಬಂಧಿಸಿದಂತೆ ರೈತರಿಂದ ನಿಗದಿತ ಕಟಾವು ವೆಚ್ಚಕ್ಕಿಂತ ಹೆಚ್ಚುವರಿಯಾಗಿ ಪಡೆಯುತ್ತಿದ್ದು, ಇದು ನೇರವಾಗಿ ರೈತರಿಗೆ ನಷ್ಟವನ್ನುಂಟು ಮಾಡುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರೈತರಿಂದ ಈ ರೀತಿಯ ದೂರುಗಳು ಬರದಂತೆ ನೋಡಿಕೊಳ್ಳಲು ಹಾಗೂ ರೈತರ ಯಾವ ಸಮಸ್ಯೆಗಳನ್ನು ಕಡೆಗಣಿಸದೆ, ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ಎಸ್ ಅಶ್ವಥಿ ಹೇಳಿದರು.

ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ 2021-22 ನೇ ಸಾಲಿನ ಹಂಗಾಮಿನ ಕಬ್ಬು ನುರಿಸುವ ಸಂಬಂಧ ಸಕ್ಕರೆ ಕಾರ್ಖಾನೆಯವರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಖಾನೆಯ ಫೀಲ್ಡ್ ಅಧಿಕಾರಿಗಳು ತಮ್ಮ ಕಟಾವು ಲೇಬರ್‌ಗಳ ಗ್ಯಾಂಗ್‌ಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದು, ರೈತರಿಗೆ ಅನುಕೂಲವಾಗುವಂತೆ ಕಟಾವು ವೆಚ್ಚ ಹೆಚ್ಚಿಸದಂತೆ ಅಧಿಕಾರಿಗಳು ಗಮನಹರಿಸಬೇಕೆಂದು ಸೂಚಿಸಿದರು.

ಸಾಗಾಣಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕರು ಹೆಚ್ಚುವರಿಯಾಗಿ ಬ್ಯಾಟ ನೀಡುವಂತೆ ರೈತರಿಗೆ ಒತ್ತಡ ತರುವುದನ್ನು ನಿಲ್ಲಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

12 ರಿಂದ 14 ತಿಂಗಳ ಆದ್ಯತೆ ಮೇರೆಗೆ ಕಟಾವು ಮಾಡುವಂತೆ, ಕಟಾವು ಮಾಡಿದ 14 ದಿನಗಳೊಳಗೆ ಎಫ್.ಆರ್.ಪಿ ಹಣ ಪಾವತಿಸಲು ಸೂಚಿಸಲಾಯಿತು.

ಅನಧಿಕೃತ ಚಟುವಟಿಕೆಗಳನ್ನು ತಕ್ಷಣದಿಂದಲೇ ಸಂಪೂರ್ಣವಾಗಿ ಅಂತ್ಯಗೊಳಿಸಿ, ತಮ್ಮ ಮೀಸಲು ಪ್ರದೇಶದಲ್ಲಿ ಲಭ್ಯವಿರುವ ಕಬ್ಬನ್ನು ಸಕಾಲದಲ್ಲಿ ಸಾಗಾಣಿಕೆ ಮಾಡಲು ಕ್ರಮವಹಿಸುವಂತೆ ಸೂಚಿಸಿದರು.

ರೈತರು ನೋಂದಣಿ ಮಾಡಿಸಿಕೊಂಡಿರುವ ಮಾಹಿತಿಯನ್ನು ಆಧರಿಸಿ ಕಬ್ಬು ಕಟಾವಿಗೆ ಮುಂದಾಗುವಂತೆ ಜಂಟಿ ನಿರ್ದೇಶಕರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಖಾನೆಧಿಕಾರಿಗಳು ಈಗಾಗಲೇ ಇದನ್ನು ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ರೈತಸಂಪರ್ಕ ಕೇಂದ್ರ , ಗ್ರಾಮ‌ ಪಂಚಾಯತಿ, ಡೈರಿಗಳಲ್ಲಿ, ವಿಭಾಗೀಯ ಕಚೇರಿಗಳಲ್ಲಿ ಪ್ರತಿ ತಿಂಗಳ ವಿವರ ಪಟ್ಟಿಯನ್ನು ಪ್ರದರ್ಶಿಸುವಂತೆ ಹೇಳಿದರು.

ಸಭೆಯಲ್ಲಿ ಜಿಲ್ಲಾ ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಶಿವಣ್ಣ , ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಎಸ್. ಚಂದ್ರಶೇಖರ್ ಹಾಗೂ ಜಿಲ್ಲೆಯ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here