ಐತಿಹಾಸಿಕ ಕಮಲಾಪುರ ಕೆರೆ ನುಂಗುತ್ತಿರುವ ಜೊಂಡು/ ಆಲ್ಗೆ

0
48

ವರದಿ:ಕಾವ್ಯ,ಪಿವಿ

ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಕಮಲಾಪುರ ಕೆರೆ 450 ಎಕರೆ ವಿಸ್ತೀರ್ಣ ಹೊಂದಿದೆ‌. ಇದು ಹಂಪಿ ವಿಶ್ವ ಪಾರಂಪರಿಕ ತಾಣದ ಕೋರ್ ಜ಼ೋನ್ ನಲ್ಲಿ ಬರುವ ಒಂದು ಜೀವಂತ ಸ್ಮಾರಕವೂ ಹೌದು.
ಈಚೆಗೆ ಗಂಟೆ ಹೂವಿನ ಜೊಂಡು, ಅಂತರ ತಾವರೆ, ಅಂತರಗಂಗೆ, ಕತ್ತೆ ಕಿವಿ ಎಂದು ನಾನಾ ಹೆಸರಿನಲ್ಲಿ ಕರೆಯಲ್ಪಡುವ ‘ವಾಟರ್‌ ಹಯಸಿಂತ್‌’ ಕಳೆ ಸಸ್ಯ ಕೆರೆಯನ್ನು ನುಂಗಿ ಹಾಕುತ್ತಿದೆ.

ಐದರಿಂದ ಹದಿನೈದು ದಿನಗಳಲ್ಲಿಯೇ ದುಪ್ಪಟ್ಟಾಗಿ ಬೆಳೆಯುವ ಈ ಕಳೆಸಸ್ಯಕ್ಕೆ ಕೊಳಚೆ ನೀರು ದೊರೆತರಂತೂ ಅತಿಯಾಗಿ ಹಬ್ಬುತ್ತದೆ.
ಪಾಂಟಿಡೇರಿಯೇಸಿ’ ಕುಟುಂಬದ ಐಕಾರ್ನಿಯ ತಳಿಗೆ ಸೇರಿದ ಸಸ್ಯ ದಕ್ಷಿಣ ಅಮೆರಿಕದ ಅಮೆಜಾನ್‌ ನದಿ ಪಾತ್ರದಲ್ಲಿ ಮೊದಲು ಕಂಡಿದ್ದು, ಇಂದು ಆಸ್ಟ್ರೇಲಿಯಾ, ಪಾಕಿಸ್ತಾನ, ಜಾವಾ, ಭಾರತ ಮುಂತಾದ ದೇಶಗಳಲ್ಲಿ ಬೃಹತ್ ಕಳೆಯಾಗಿ ವ್ಯಾಪಿಸಿ ತೊಂದರೆ ನೀಡುತ್ತಿದೆ. ಕೆರೆ, ಕಾಲುವೆಗಳಲ್ಲಿ ಒತ್ತಾಗಿ ಬೆಳೆದು ಸೊಳ್ಳೆಗಳಿಗೆ ಆಶ್ರಯ ತಾಣವಾಗಿದೆ.


ಕೆರೆ ದಂಡೆಯ ಬದಿಗಳಲ್ಲಿ ಚಪ್ಪರದಂತೆ ಹರಡಿ ನೀರಿನ ಆರೋಗ್ಯಕ್ಕೆ ಕಂಟಕ ಪ್ರಾಯವಾಗುತ್ತಿದೆ.
ಇದರ ವಿಪರೀತ ಬೆಳವಣಿಗೆ ನೀರಿನ ಆಮ್ಲಜನಕ ಮಟ್ಟವನ್ನು ಕುಸಿಯುವಂತೆ ಮಾಡುವುದಲ್ಲದೇ, ಜಲಚರಗಳ ಜೀವಕ್ಕೂ ಕುತ್ತು ತರುತ್ತದೆ. ಸಹಜವಾದ ನೀರಿನ ಹರಿವಿಗೆ ತೊಂದರೆ ಉಂಟುಮಾಡಿ, ಕೆರೆಯಲ್ಲಿಯೇ ಭಿನ್ನ ವಾತಾವರಣ ಸೃಷ್ಟಿಗೆ ಕಾರಣವಾಗುತ್ತಿದೆ. ಕೊನೆಯಲ್ಲಿ ನೀರಿನ ಗುಣಮಟ್ಟವೇ ನಾಶವಾಗಿ ಕೊಳೆತು ನಾರುವಂತೆ ಮಾಡುತ್ತದೆ.
ಕೆರೆ ಪ್ರದೇಶದಲ್ಲಿ ಹಸಿರು ಪಾಚಿಯು (ಆಲ್ಗೆ) ಇನ್ನೂ ಜೀವಂತವಾಗಿದೆ. ನೀರಿನಲ್ಲಿ ಕೊಳಚೆ ಸೇರಿ ಹಠಾತ್‌ ಪೋಷಕಾಂಶಗಳು ಹೆಚ್ಚಾದರೆ ಅದು ಸಾಂಕ್ರಾಮಿಕಗೊಳ್ಳಲಿದೆ. ಇಡೀ ಕೆರೆಗೆ ಹಸಿರು ಟಾರ್ಪಲ್‌ ಹಾಸಿದಂತಾಗಿ ಜಲಚರಗಳ ಸಾವು ಮತ್ತು ದುರ್ನಾತಕ್ಕೆ ಕಾರಣವಾಗಲಿದೆ.

ಶುದ್ಧ ನೀರು ಕೆರೆಗೆ ಸೇರಿದರೆ, ಕೊಳಚೆ ನೀರು ಬರುವುದನ್ನು ತಡೆದರೆ ಮಾತ್ರ ಇಂಥ ಕಳೆ ಸಸ್ಯಗಳನ್ನು ನಿಯಂತ್ರಿಸಬಹುದು. ಮಳೆ ನೀರಿನೊಂದಿಗೆ ಬರುವ, ದನಗಳ ಮೈತೊಳೆದ ನೀರು, ವಾಹನ ಹಾಗೂ ಬಟ್ಟೆ ತೊಳೆದ ಸೋಪಿನ ನೀರು ಕೆರೆಯತ್ತ ಬರುತ್ತಿದ್ದು, ಅದರಲ್ಲಿರುವ ಪಾಸ್ಫೇಟ್‌ ಅಂಶ ಕಳೆ ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸಿದೆ.

LEAVE A REPLY

Please enter your comment!
Please enter your name here