ಮನೆಬಾಗಿಲಿನತ್ತ ಜನಸ್ನೇಹಿ ಸರಕಾರ , ಗ್ರಾಮಸ್ಥರಿಂದ 212 ಅರ್ಜಿಗಳ ಸಲ್ಲಿಕೆ ತಿಮ್ಮಲಾಪುರದಲ್ಲಿ ಡಿಸಿ ಗ್ರಾಮವಾಸ್ತವ್ಯ;ಜನರ ಸಮಸ್ಯೆಗಳಿಗೆ ಸ್ಪಂದನೆ

0
80

ತಿಮ್ಮಲಾಪುರ(ಹೊಸಪೇಟೆ),ಫೆ.20: ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ತಿಮ್ಮಲಾಪುರ ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿದರು.
ಜಿಲ್ಲಾಧಿಕಾರಿ ಮಾಲಪಾಟಿ ಅವರು ತಿಮ್ಮಲಾಪುರಕ್ಕೆ ಆಗಮಿಸುತ್ತಲೇ ದಾರಿಯುದ್ದಕ್ಕೂ ನೆರೆದಿದ್ದ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದ ಸ್ವಾಗತಿಸಿದರು;ಎಲ್ಲರನ್ನು ಕೈಮುಗಿದು ನಿಮ್ಮೂರಿನ ಸಮಸ್ಯೆಗಳನ್ನು ಅಹವಾಲಿಸಕ್ಕೆ ಬಂದಿದ್ದೀನಿ;ಅರಾಮವಾಗಿ ಕುಳಿತುಕೊಂಡು ಮಾತನಾಡೋಣ ಸಂಜೆಯವರೆಗೂ ಹಾಗೂ ರಾತ್ರಿಯೂ ಇಲ್ಲಿಯೇ ಇರುವೆ ಎಂದರು.
ನಂತರ ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಇದುವರೆಗೆ ಬಂದಿರುವ ಅರ್ಜಿಗಳ ಸಂಖ್ಯೆ ಮತ್ತು ಯಾವ ವಿಷಯಗಳ ಕುರಿತು ಹೆಚ್ಚಿನ ಪ್ರಮಾಣದ ಅರ್ಜಿಗಳು ಬಂದಿವೆ ಎಂಬುದನ್ನು ಚರ್ಚಿಸಿದರು. ತಿಮ್ಮಲಾಪುರ ಗ್ರಾಮದಲ್ಲಿ 212 ಅರ್ಜಿಗಳು ಬಂದಿದ್ದು,ಇವುಗಳಲ್ಲಿ ಬಹುತೇಕ ವಸತಿ ಸಂಬಂಧಿತ,ಕಂದಾಯ ಇಲಾಖೆ ಸಂಬಂಧಿತ ಹಾಗೂ 6 ಅರ್ಜಿಗಳು ಶಾಲಾ ಸಂಬಂಧಿತ ಬಂದಿರುವುದನ್ನು ಅಧಿಕಾರಿಗಳು ಡಿಸಿ ಗಮನಕ್ಕೆ ತಂದರು.
ನಂತರ ಜಿಲ್ಲಾಧಿಕಾರಿ ಮಾಲಪಾಟಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು ವಿಶೇಷವಾಗಿತ್ತು.ಇದಾದ ನಂತರ ಅವರು ಅಧಿಕಾರಿಗಳೊಂದಿಗೆ ಚಿಲಕನಟ್ಟಿ ಸಮೀಪದ ತಾಳೆಬಸಾಪುರ ಗ್ರಾಮದ ಬಳಿ ಅರಣ್ಯ ಇಲಾಖೆ ಪ್ರದೇಶದಲ್ಲಿ ನಡೆಸಲಾಗುತ್ತಿರುವ ನರೇಗಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ತಾಳೆವನದಲ್ಲಿ ನಡೆಯುತ್ತಿರುವ ಇಂಗುಗುಂಡಿ ನಿರ್ಮಾಣದ ಕಾಮಗಾರಿ ಪರಿಶೀಲಿಸಿ; ಕಾರ್ಮಿಕರಾದ ನಾಗಮ್ಮ,ಅಡಿವೆಪ್ಪ ಸೇರಿದಂತೆ ಇನ್ನೀತರ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ನರೇಗಾ ಅಡಿ ತಮಗೆ ನೀಡಲಾಗುತ್ತಿರುವ ಕೂಲಿಯೆಷ್ಟು..?,ಸರಿಯಾಗಿ ನೀಡಲಾಗುತ್ತಿದೆಯೇ..?,ಎಷ್ಟು ದಿನಗಳ ಕಾಲ ಕೆಲಸ ಮಾಡಿದ್ದೀರಿ..?,ಮಕ್ಕಳು ಏನು ಓದುತ್ತಾರೆ;ಜಮೀನು ಎಷ್ಟಿದೆ,ಏನಾದರೂ ಸಮಸ್ಯೆಗಳಿವೆಯೇ ಎಂಬುದನ್ನು ಜಿಲ್ಲಾಧಿಕಾರಿ ಮಾಲಪಾಟಿ ಅವರು ಕೇಳಿ ತಿಳಿದುಕೊಂಡರು.
ನಂತರ ಅವರು ನರೇಗಾ ಅಡಿ ಪುಷ್ಕರಣಿ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದರು ಮತ್ತು ಹೂಳೆತ್ತುವುದರಿಂದ ಪುಷ್ಕರಣಿಯಲ್ಲಿ ನೀರುಬಂದಿರುವುದನ್ನು;ಬಂದಿರುವ ನೀರನ್ನು ದೇವಸ್ಥಾನಕ್ಕೆ ಹಾಗೂ ಗ್ರಾಮದ ಜನರು ಕುಡಿಯುವುದಕ್ಕೆ ಬಳಸುವಂತೆ ಗ್ರಾಮಸ್ಥರಿಗೆ ಸೂಚಿಸಿದರು.
ಇದಾದ ನಂತರ ತಿಮ್ಮಲಾಪುರದ ಜಂಬಯ್ಯನ ಕೆರೆ ಪರಿಶೀಲಿಸಿ; ಕೆರೆ ಸಂಬಂಧಿತ ಸಮಸ್ಯೆಗಳ ಕುರಿತು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು;ಗ್ರಾಮಸ್ಥರು ಕ್ಯಾನೆಲ್‍ನಿಂದ ನೀರು ಹರಿಸುವುದರ ಮೂಲಕ ಸದಾ ಈ ಕೆರೆಯಲ್ಲಿ ನೀರು ತುಂಬಿರುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಮ್ಮ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಇದಾದ ನಂತರ ಅವರು ಹುಲಿಕುಂಟೆ ಕ್ರಾಸ್ ಹಾಗೂ ತಿಮ್ಮಲಾಪುರ ಬಳಿಯ ಗೋಪಾಲಕೃಷ್ಣ ದೇವಸ್ಥಾನ ಪರಿಶೀಲಿಸಿ;ದೇವಸ್ಥಾನದ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸರಕಾರದ ಸೂಚನೆ ಅನ್ವಯ ಇಂದು ತಿಮ್ಮಲಾಪುರ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ; ನನ್ನಂತೆ ತಹಸೀಲ್ದಾರರು ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಆಯಾ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಪ್ರಮುಖವಾಗಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಬಗೆಹರಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಮುಖವಾಗಿ ಕಂದಾಯ ಸಮಸ್ಯೆಗಳು ಪರಿಹರಿಸುವುದಕ್ಕೆ ಒತ್ತು ನೀಡಲಾಗಿದ್ದು;ಈಗಾಗಲೇ ಜನರ ಸಮಸ್ಯೆಗಳ ಪಟ್ಟಿ ನಮ್ಮ ಕೈಯಲ್ಲಿದೆ.ಅವುಗಳಲ್ಲಿ ಮನೆ,ನಿವೇಶನ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತ ಅರ್ಜಿಗಳನ್ನು ಪಡೆಯಲಾಗಿದೆ ಎಂದರು.
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಬಾರಿಗೆ ಅಟ್ಟಹಾಸ ತೋರಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಹಿಸಲಾಗಿರುವ ಕಟ್ಟೆಚ್ಚರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಡಿಸಿ ಮಾಲಪಾಟಿ ಅವರು ಬಳ್ಳಾರಿ ಜಿಲ್ಲೆ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವುದರಿಂದ ಆ ಪ್ರಮಾಣದ ಸಮಸ್ಯೆ ಇಲ್ಲ;ಆದರೂ ಎಲ್ಲ ರೀತಿಯ ಎಚ್ಚರಿಕೆ ಕ್ರಮಗಳನ್ನು ನಮ್ಮ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ ಎಂದರು.
ಎರಡನೇ ಅಲೆ ಅತ್ಯಂತ ಭಯಾನಕ ಅಲೆಯಾಗಿದ್ದು, ಇನ್ನೂ ನಮ್ಮ ದೇಶಕ್ಕೆ ಪರಿಣಾಮ ಬೀರಿಲ್ಲ;ಆದರೂ ನಾವು ಜಾಗೂರಕತೆಯಿಂದ ಇರಬೇಕು ಹಾಗೂ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸುವಿಕೆ,ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸರ್‍ನಿಂದ ಸ್ವಚ್ಛಗೊಳಿಸುವುದನ್ನು ಮಾಡಬೇಕು ಎಂದರು.
ಲಸಿಕೆ ಈಗಾಗಲೇ ಇದೆ;ಅದು ಎಲ್ಲರಿಗೂ ಸಿಗುವವರೆಗೆ ನಾವು ಅತ್ಯಂತ ಜಾಗೂರಕತೆಯಿಂದ ಇರಬೇಕು ಎಂದರು. ಪ್ರತಿ ಬಾರಿ ತಿಂಗಳ ಮೂರನೇ ಶನಿವಾರ ಗ್ರಾಮವಾಸ್ತವ್ಯ ಮಾಡುವುದರ ಮುಖಾಂತರ ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಗಮನಸೆಳೆದ ಪ್ರದರ್ಶನ;ಮೂರುದಿನಗಳಿಂದ ಗ್ರಾಮಸ್ಥರ ಆರೋಗ್ಯ ತಪಾಸಣೆ
ತಿಮ್ಮಲಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮವಾಸ್ತವ್ಯ ನಡೆಸಲಿರುವ ಹಿನ್ನೆಲೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಾಕಲಾಗಿರುವ ವೇದಿಕೆ ಬದಿ ವಿವಿಧ ಇಲಾಖೆಗಳ ಯೋಜನೆಗಳ ಸಂಬಂಧಿಸಿದ ಪ್ರದರ್ಶನ ಗಮನಸೆಳೆದವು.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮೊದಲಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಆರೋಗ್ಯ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೋಷಣ ಅಭಿಯಾನ ಸಂಬಂಧಿತ ವಸ್ತುಪ್ರದರ್ಶನ,ಪಶುಸಂಗೋಪನಾ ಇಲಾಖೆಯ ವಸ್ತುಪ್ರದರ್ಶನ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವಸ್ತುಪ್ರದರ್ಶನಗಳನ್ನು ಉದ್ಘಾಟಿಸಿ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಳೆದ ಮೂರು ದಿನಗಳಿಂದ ಈ ಗ್ರಾಮದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಗ್ರಾಮಸ್ಥರು ಭೇಟಿ ನೀಡಿ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಿದ್ದಾರೆ. ನುರಿತ ತಜ್ಞವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕಳೆದ ಮೂರುದಿನಗಳಿಂದ ಇಲ್ಲಿಯೇ ತಂಗಿದ್ದು, ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ.ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಬೇರೆಡೆ ರೆಫೆರ್ ಮಾಡುತ್ತಿರುವುದಾಗಿ ಡಿಸಿ ಮಾಲಪಾಟಿ ಆರೋಗ್ಯ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ವೈದ್ಯರು ತಿಳಿಸಿದರು.
ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು ಮತ್ತು ಉಳಿದ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ರೀತಿಯಲ್ಲಿಯೇ ತಾಲೂಕುಮಟ್ಟದಲಿಯ್ಲೂ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಸಹ ಒಂದೊಂದು ಊರುಗಳಲ್ಲಿ ಗ್ರಾಮವಾಸ್ತವ್ಯ ನಡೆಸಿ ಜನರ ಸಮಸ್ಯೆಗಳಿಗೆ ದನಿಯಾಗುವ ಕೆಲಸ ಮಾಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ತಹಸೀಲ್ದಾರ್ ವಿಶ್ವನಾಥ, ತಾಪಂ ಇಒ ವಿಶ್ವನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here